ಕನ್ನಡ ವಿಶ್ವವಿದ್ಯಾಲಯಕ್ಕೆ ನಿಮಗೆ ಆತ್ಮೀಯ ಸುಸ್ವಾಗತ

home

ವಿದ್ಯಾರಣ್ಯ” ಕನ್ನಡ ವಿಶ್ವವಿದ್ಯಾಲಯಕ್ಕೆ ಇಟ್ಟ ಸಾರ್ಥಕನಾಮ. ಪ್ರಾಕೃತಿಕವಾಗಿ ಮೋಹಕವಾಗಿದ್ದು ತನ್ನ ತಗ್ಗು ದಿಣ್ಣೆಗಳಿಂದ ಕಣ್ಮನ ಸೆಳೆಯುವ ಸುಮಾರು 700 ಎಕರೆಗಳ ವಿಸ್ತಾರವಾದ ಆವರಣವಿದು. ಇಲ್ಲಿಯ ಕಟ್ಟಡಗಳು ವಿಜಯನಗರ ಕಾಲದ ಮಂಟಪಗಳ ವಿಶಿಷ್ಟತೆಯಲ್ಲಿ ರೂಪುಗೊಂಡಿದೆ. ವಿಶ್ವವಿದ್ಯಾಲಯದ ಮುಂಭಾಗಗಳಲ್ಲಿರುವ ‘ಅಕ್ಷರ’ದಲ್ಲಿ ಗ್ರಂಥಾಲಯ ಮತ್ತು ವಸ್ತುಸಂಗ್ರಹಾಲಯಗಳಿವೆ. “ಕ್ರಿಯಾಶಕ್ತಿ” ಆಡಳಿತದ ಕೇಂದ್ರ. ಸಾಂಸ್ಕೃತಿಕ ಚಟುವಟಿಕೆಗಳ ತಾಣ. ‘ಭುವನ ವಿಜಯ’. ವಿವಿಧ ನಿಕಾಯಗಳ ವಿವಿಧ ವಿಭಾಗಗಳು ‘ತ್ರಿಪದಿ’, ‘ಕೂಡಲಸಂಗಮ’, ‘ತುಂಗಭದ್ರ’, ‘ಘಟಿಕಾಲಯ’, ‘ಕೇಶೀರಾಜ’, ‘ಹರಿಹರ’, ‘ನಾಗವರ್ಮ’, ‘ಅಕ್ಕ’, ‘ಅಲ್ಲಮ’, ‘ನಾದಲೀಲೆ’, ‘ಕಂಠಪತ್ರ’, ‘ಜಕ್ಕಣ ಮಂಟಪ’ ಮುಂತಾದ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಪಂಪ ಸಭಾಂಗಣ ಸಾಹಿತ್ಯ ಚಟುವಟಿಕೆಗಳ ತಾಣ. “ಸಿರಿಗನ್ನಡ” ಸಂಶೋಧನಾ ಗ್ರಂಥಾಲಯ “ಸರ್ವಜ್ಞ” ಕಟ್ಟಡದಲ್ಲಿ ಆವರಣದ ಹೃದಯಭಾಗದಲ್ಲಿ ತಲೆಯೆತ್ತಿ ನಿಂತಿದೆ. ಬುಡಕಟ್ಟು ಮತ್ತು ಜಾನಪದ ಅಧ್ಯಯನದ ನೆಲೆಯಾಗಿ ಗ್ರಾಮೀಣ ವಾಸ್ತು ಶೈಲಿಯಲ್ಲಿರುವುದು ‘ಗಿರಿಸೀಮೆ’. ಗ್ರೀಕ್ ರಂಗಭೂಮಿಯ ವಿನ್ಯಾಸದಲ್ಲಿ ರೂಪುಗೊಂಡ ‘ನವರಂಗ’ ಬಯಲು ರಂಗಭೂಮಿ ಕೆರೆಯ ತಟದಲ್ಲಿ ಸುಂದರವಾಗಿ ಮೈದೆಳೆದು ನಿಂತಿದೆ. ಪ್ರಸಾರಾಂಗ ಸೇರಿದಂತೆ ವಿಶ್ವವಿದ್ಯಾಲಯದ ಇಡೀ ಆವರಣ ವಿಶಿಷ್ಟ ರೀತಿಯಲ್ಲಿ ರೂಪುಗೊಂಡಿದ್ದು ಬಸವಣ್ಣನವರ ‘ಅಂತರಂಗ-ಬಹಿರಂಗ’ ಸೌಂದರ್ಯದ ಸಮನ್ವಯ ಇಲ್ಲಿ ನಡೆದಿದೆ. ವಿಶ್ವವಿದ್ಯಾಲಯದ ಉದ್ದೇಶ ಸಾಧಿಸಲು ಆಡಳಿತ ವಿನ್ಯಾಸ, ಶಿಕ್ಷಣ ವಿನ್ಯಾಸ ಮತ್ತು ಪೂರಕ ವಿನ್ಯಾಸಗಳೆಂಬ ತ್ರಿಮುಖ ವಿನ್ಯಾಸಗಳನ್ನು ರೂಪಿಸಲಾಗಿದೆ.

ಕನ್ನಡಿಗರೆಲ್ಲರ ನಡಿಗೆ ಕನ್ನಡ ವಿಶ್ವವಿದ್ಯಾಯದ ಕಡೆಗೆ ಎನ್ನುವಂತೆಯೆ ಕನ್ನಡ ವಿಶ್ವವಿದ್ಯಾಲಯ ಎಲ್ಲರೆಡೆಗೆ ಹೋಗುವ  ಹಾದಿಗಳನ್ನು ಹುಡುಕಿಕೊಂಡಿದೆ. ಕನ್ನಡ ವಿಶ್ವವಿದ್ಯಾಲಯಕ್ಕೆ ಗಡಿ ಸೀಮೆಯ ಹಂಗಿಲ್ಲ. ಕನ್ನಡಿಗರು ಎಲ್ಲಿ ಇರುವರೋ ಅಲ್ಲೆಲ್ಲ ಕನ್ನಡ ವಿಶ್ವವಿದ್ಯಾಲಯ ಚಾಚಿಕೊಳ್ಳುವುದು. ಮಧ್ಯಕರ್ನಾಟಕದ ವಿಜಯನಗರ ಸಾಮ್ರಾಜ್ಯದ ನೆಲೆಯಲ್ಲಿ ತಲೆ ಎತ್ತಿ ನಿಂತ ವಿಶ್ವವಿದ್ಯಾಲಯ ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ತನ್ನ ವಿಸ್ತರಣಾ ಕೇಂದ್ರಗಳನ್ನು ಪ್ರಾರಂಭಿಸಿದೆ. ಉತ್ತರ ಕರ್ನಾಟಕದ ಕೂಡಲಸಂಗಮದಲ್ಲಿ ಅಂತರಾಷ್ಟ್ರೀಯ ವಚನ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸುವುದರ ಮೂಲಕ ಆ ಭಾಗದ ಸಂಶೋಧಕರಿಗೆ ಸಾಹಿತ್ಯ, ಸಂಸ್ಕೃತಿ, ವಿಜ್ಞಾನ, ಜಾಗತಿಕ ಮಟ್ಟದ ಎಲ್ಲ ಮಹನಿಯರ ಕುರಿತ ಹಾಗೇ ಸಂಶೋಧನೆಗಾಗಿ ಸ್ಥಾಪಿತಗೊಂಡ ಈ ಕೇಂದ್ರ ಈಗಾಗಲೇ ಅಂತರಾಷ್ಟ್ರೀಯ ಮಟ್ಟದ ಸಂಶೋಧಕರೊಂದಿಗೆ ಅಧ್ಯಯನ ನಡೆಸುತ್ತಿದೆ. ಮುಂದಿನ ಹತ್ತು ವರ್ಷಗಳಲ್ಲಿ ಈ ಕೇಂದ್ರ ಚರಿತ್ರೆ, ಇತಿಹಾಸ, ಪುರಾತತ್ವ, ಶಾಸನ, ಮಾಧ್ಯಮ, ಪ್ರವಾಸೋದ್ಯಮ, ಸಾಹಿತ್ಯ, ಸಾಂಸ್ಕೃತಿಕ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರಗಳಂತಹ ವಿಷಯಗಳ ಸಂಲಗ್ನ ತರಗತಿಗಳನ್ನು ಪ್ರಾರಂಭಿಸುವುದರ ಮೂಲಕ ಉತ್ತರಕರ್ನಾಟಕದ ಬಡ ವಿದ್ಯಾರ್ಥಿಗಳಿಗೆ ಉನ್ನತಶಿಕ್ಷಣ ಪಡೆಯುವ ಕನಸನ್ನು ಸಾಕಾರಗೊಳಿಸುವ ನೀಲನಕ್ಷೆಯನ್ನು ಸಿದ್ಧಪಡಿಸಿ ಕಾರ್ಯೋನ್ಮುಖವಾಗಿದೆ.

ದೇಶಿಜ್ಞಾನ ಪರಂಪರೆಗಳು ಆಧುನಿಕತೆಯ ಹೊಡೆತಕ್ಕೆ ಸಿಲುಕಿ ತತ್ತರಗೊಂಡಿವೆ. ಅವಜ್ಞತೆಗೆ, ಒಳಗಾಗಿ ಅಳವಿನಂಚಿನಲ್ಲಿರುವ ಬುಡಕಟ್ಟು ಸಮುದಾಯಗಳ ಸಸ್ಯ, ನೆಲ, ಜಲ, ಜೀವ ಸಂಕುಲದ ಕುರಿತು ಹೊಂದಿರುವ ನಿಸರ್ಗ ಜ್ಞಾನವನ್ನು ಸಂಗ್ರಹಿಸುವ,  ಶೋಧಿಸುವ ಕಾರ‍್ಯಕ್ಕಾಗಿ ಕನ್ನಡ ವಿಶ್ವವಿದ್ಯಾಲಯ ಚಾಮರಾಜನಗರ ಜಿಲ್ಲಯೆ ಕುರುಬನಕಟ್ಟೆಯಲ್ಲಿ ದೇಶಿಜ್ಞಾನ ಪರಂಪರೆಯ ಸಂಸ್ಕೃತಿ ವಿಸ್ತರಣಾ ಕೇಂದ್ರವನ್ನು ಪ್ರಾರಂಭಿಸಿದೆ. ನಗರೀಕರಣದ ಪ್ರಭಾವಕ್ಕೆ ಒಳಗಾಗಿ ಸಂಕಷ್ಟದಲ್ಲಿರುವ ಬುಡಕಟ್ಟು ಸಮುದಾಯಗಳ ನಡುವೆ ಕೆಲಸ ಮಾಡುತ್ತಿರುವ ಈ ಕೇಂದ್ರ ಈಗಾಗಲೇ ಹಲವಾರು ಬುಡಕಟ್ಟು ಸಮುದಾಯಗಳ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ನೆಲೆಯ ಜ್ಞಾನ ಶೋಧ ಮತ್ತು ಸಂಗ್ರಹ, ಸಂರಕ್ಷಣೆಯ ಅರ್ಥಪೂರ್ಣವಾದ ಕಾರ‍್ಯ ಮಾಡಿದೆ. ಮುಂದಿನ ದಿನಗಳಲ್ಲಿ ನಿಸರ್ಗದೆಡೆಗೆ ಮುಖ ಮಾಡಿರುವ ಮನುಷ್ಯನಿಗೆ ನಿಸರ್ಗ ಪ್ರೀತಿ ಮತ್ತು ಸಂರಕ್ಷಣೆಯ ಹೊಣೆಗಾರಿಕೆಯನ್ನು ಅರ್ಥ ಮಾಡಿಸುವ ಅಧ್ಯಯನಗಳು ನಡೆಯಬೇಕಾಗಿವೆ. ಬುಡಕಟ್ಟು ಅಧ್ಯಯನ ಕೇಂದ್ರ, ಬುಡಕಟ್ಟು ಜ್ಞಾನಪರಂಪರೆಯ ದಾಖಲೆ, ಕಲೆ, ಸಾಹಿತ್ಯ ಕುರಿತು ಅಧ್ಯಯನದ ಯೋಜನೆಗಳನ್ನು ಹಾಕಿಕೊಂಡು ವಿಭಾಗಗಳನ್ನು ಪ್ರಾರಂಭಿಸಲಾಗಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ವಿಶ್ವಮಾನವ ಸಂದೇಶ ಸಾರಿದ ಕುವೆಂಪುರವರ ಹೆಸರಿನಲ್ಲಿ ಶಿವಮೊಗ್ಗ ಜಿಲ್ಲೆಯ ಕುಪ್ಪಳಿಯಲ್ಲಿ “ಕುವೆಂಪು ಅಧ್ಯಯನ ಸಂಶೋಧನ ವಿಸ್ತರಣಾ ಕೇಂದ್ರ”ವನ್ನು ಪ್ರಾರಂಭಿಸಲಾಗಿದೆ. ಮಲೆನಾಡಿನ ವಿದ್ಯಾರ್ಥಿಗಳಿಗೆ ಸಂಶೋಧನೆಯ ಕಾರ‍್ಯ ನಿಲುಕಬೇಕು ಎಂಬ ಹಂಬಲದೊಂದಿಗೆ ಪ್ರಾರಂಭವಾದ ಈ ಕೇಂದ್ರದಲ್ಲಿ ಸಾಹಿತ್ಯ, ಪರಿಸರ, ಜೀವವೈವಿಧ್ಯ ಕುರಿತ ಹಾಗೆ ಸಂಶೋಧನೆ, ಬೋಧನೆಯ ಕಾರ‍್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಎಂ.ಎ,ಪಿಎಚ್.ಡಿ ಕೋರ್ಸ್‌ಗಳನ್ನು ಪ್ರಾರಂಭಿಸಿ ಈ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹೊರೆಯಾಗದಂತೆ ನೋಡಿಕೊಳ್ಳುವ ಬದ್ಧತೆಯೊಂದಿಗೆ ಈಗಾಗಲೇ ಕಾರ‍್ಯ ಮಾಡುತ್ತಿದೆ.

ಚಾಲುಕ್ಯರ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾದ ಬಾದಾಮಿಯಲ್ಲಿ ಶಿಲ್ಪಶಾಸ್ತ್ರ ವಿಸ್ತರಣಾ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಕಲ್ಲು, ಕಟ್ಟಿಗೆ, ಮರಳು, ಲೋಹ, ಆಧುನಿಕ ಪರಿಕರಗಳ ಮೂಲಕ ಪ್ರತಿಭಾವಂತ ಯುವಕರು ಇಂದಿಗೂ ಅದ್ಭುತವಾದ ಕಲಾಕೃತಿಗಳನ್ನು ರಚಿಸುತ್ತಿದ್ದಾರೆ. ಶಾಸ್ತ್ರೀಯ ಚೌಕಟ್ಟಿನ ಮೂಲಕ ಅವರ ಸಹಜ ಜ್ಞಾನವನ್ನು ಮೇಳೈಸಿ ಅವರಲ್ಲಿಡಗಿದ ಅದ್ಭುತ ಕಲಾಕಾರನನ್ನು  ಜಗತ್ತಿಗೆ ಪರಿಚಯಿಸುವುದಷ್ಟೇ ಅಲ್ಲ, ಕುಲಕಸುಬುಗಳೊಂದಿಗೆ ಬದುಕು ಕಟ್ಟಿಕೊಡುವ ವಿಧಾನವನ್ನು ಹೇಳಿಕೊಡುವ ಗಂಭೀರ ಆಶಯದೊಂದಿಗೆ ಬಾದಾಮಿಯಲ್ಲಿ ಶಿಲ್ಪಶಾಸ್ತ್ರ ವಿಸ್ತರಣಾ ಕೇಂದ್ರ ಕಾರ‍್ಯ ಮಾಡುತ್ತಿದೆ. ಕನ್ನಡ ವಿಶ್ವವಿದ್ಯಾಲಯ ಕನ್ನಡ ಬದುಕಿನ ಎಲ್ಲ ಆಯಾಮಗಳನ್ನು ಒಳಗೊಂಡಿರುವುದರಿಂದ ವಿಶ್ವವಿದ್ಯಾಲಯದ ಅಡಿಯಲ್ಲಿ ರಾಜ್ಯದ ಚಿತ್ರಕಲಾ ಕಾಲೇಜುಗಳು ಕಾರ‍್ಯ ಮಾಡುತ್ತಿವೆ. ಮುಂದಿನ ದಿನಗಳಲ್ಲಿ ಬಾದಾಮಿಯಲ್ಲಿ ಕಲಾ ಗ್ಯಾಲರಿ ನಿರ್ಮಿಸುವುದರ ಮೂಲಕ ಜಗತ್ತಿನ ಗಮನ ಸೆಳೆಯುವ ಮಟ್ಟಕ್ಕೆ ಬೆಳೆಯುವ ಕನಸನ್ನು ಕಾಣುತ್ತಿದೆ.

ಅತ್ಯಂತ ಹಿಂದುಳಿದ ಪ್ರದೇಶವಾದ ಹೈದ್ರಾಬಾದ್ ಕರ್ನಾಟಕದ ಸಾಹಿತ್ಯ, ಕಲೆ, ಸಂಸ್ಕೃತಿಯ ಸಂರಕ್ಷಣೆಯ ಮತ್ತು ನಿರ್ಮಾಣದ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗಿದೆ. ಉನ್ನತ ಶಿಕ್ಷಣದ ಪ್ರಮಾಣ ಈ ಭಾಗದಲ್ಲಿ ಗಣನೀಯವಾಗಿ ಕಡಿಮೆಯಿದೆ. ಇದರ ಸಾಮಾಜಿಕ, ಆರ್ಥಿಕ ಅಧ್ಯಯನದೊಂದಿಗೆ ಸಾಂಸ್ಕೃತಿಕ ಸಂರಕ್ಷಣೆ ಮಾಡುವ ಅಗತ್ಯವಿದೆ. ಪಾರಂಪರಿಕ ಜ್ಞಾನ ಪರಂಪರೆಯನ್ನು ಪ್ರೋತ್ಸಾಹಿಸಿ ಆಧುನಿಕತೆಯನ್ನು ರೂಢಿಸಿಕೊಳ್ಳುವ ವಿಧಾನಕ್ಕೆ ನಮ್ಮ ಯುವಕರನ್ನು ಸಿದ್ಧಗೊಳಿಸಬೇಕಾಗಿದೆ. ಬಡತನ ಕಾರಣದಿಂದ ವಲಸೆ ಹೋಗುವ ಯುವಕರಿಗೆ ವಿಶೇಷವಾದ ನೆರವು ನೀಡಿ ಅವರಿಗೆ ಗುಣಾತ್ಮಕ ಉನ್ನತ ಶಿಕ್ಷಣ ನೀಡಿ ಆರ್ಥಿಕ ಚೈತನ್ಯ ಪಡೆಯುವ ಶಕ್ತಿಯನ್ನು ತುಂಬುವ ಕಾರಣದಿಂದ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ಬೌದ್ಧ ಸಂಶೋಧನ ಅಧ್ಯಯನ ವಿಸ್ತರಣಾ ಕೇಂದ್ರವನ್ನು ಈ ಶೈಕ್ಷಣಿಕ ಸಾಲಿನಿಂದ ಪ್ರಾರಂಭಿಸಲಾಗಿದೆ. ಅಲ್ಲಿಯು ಐವತ್ಮೂರು ಎಕರೆ ಭೂಮಿಯನ್ನು ನೀಡಲು ಜಿಲ್ಲಾಡಳಿತ ಒಪ್ಪಿಕೊಂಡಿದೆ.