ಮಾನ್ಯ ಕುಲಪತಿಗಳ ಮಾತು

ಮಾನ್ಯ ಕುಲಪತಿಗಳ ಮಾತು

hampiyaji (448) (1)
ಪ್ರಪಂಚದಲ್ಲಿ ಭಾಷೆಗಾಗಿಯೇ ಇರುವ ಏಕೈಕ ವಿಶ್ವವಿದ್ಯಾಲಯವೆಂಬ ಹೆಮ್ಮೆಯೊಂದಿಗೆ ಹುಟ್ಟಿಕೊಂಡ ಕನ್ನಡ ವಿಶ್ವವಿದ್ಯಾಲಯ ಬೆಳ್ಳಿಹಬ್ಬದ ಸಂಭ್ರಮದ ಹೊಸ್ತಿಲಲ್ಲಿದೆ. ಕನ್ನಡ ವಿಶ್ವವಿದ್ಯಾಲಯ ಕನ್ನಡದ ಬದುಕಿನ ವಿವೇಕದಂತೆ ಕೆಲಸಮಾಡಿದೆ. ಕರ್ನಾಟಕ ಸರಕಾರ ಕೊಡಮಾಡಿದ ಸುಮಾರು ಏಳುನೂರು ಎಕರೆಯಷ್ಟು ವಿಸ್ತಾರದಲ್ಲಿ ತ್ರಿಪದಿ, ಕೂಡಲಸಂಗಮ, ಕವಿರಾಜಮಾರ್ಗ, ಕ್ರಿಯಾಶಕ್ತಿ, ಭುವನವಿಜಯ, ತುಂಗಭದ್ರಾ, ಅನನ್ಯ, ಅಸ್ಮಿತ ಅಕ್ಷರ ಗ್ರಂಥಾಲಯದಂಥ ಭವ್ಯ ಕಟ್ಟಡಗಳಿವೆ. ಮರೆತು ಹೋಗಬಹುದಾಗಿದ್ದ ನಮ್ಮ ದೇಸಿ ಮಾರ್ಗದ ಹೆಸರುಗಳನ್ನು ಕಟ್ಟಡಗಳಿಗೆ ಇಟ್ಟು ಯುವಕರ ಭಾವಕೋಶದಲ್ಲಿ ಉಳಿಯುವಂತೆ ಮಾಡಿದೆ. ಕನ್ನಡ ವಿಶ್ವವಿದ್ಯಾಲಯಕ್ಕೆ ಭೌತಿಕವಾಗಿ ಭದ್ರ ಬುನಾದಿಯನ್ನು ಹಾಕಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರು ಕನ್ನಡ ವಿಶ್ವವಿದ್ಯಾಲಯ ಕೇವಲ ವಿದ್ಯೆಯನ್ನು ನೀಡುವುದಕ್ಕೆ ಸೀಮಿತವಲ್ಲ ವಿದ್ಯೆಯನ್ನು ಸೃಷ್ಟಿಸುವ ಕೇಂದ್ರವೆಂದು ಕರೆಯುತ್ತ ವಿಶ್ವವಿದ್ಯಾಲಯದ ಆಶಯ ಸ್ವರೂಪವನ್ನು ನಿರ್ಧರಿಸಿ ಅದಕ್ಕೆ ಅನುಗುಣವಾಗಿಯೇ ಬುನಾದಿ ಹಾಕಿರುವರು. ಹಿಂದೆ ವಿದ್ಯಾನಗರವಾಗಿದ್ದ ಈ ಪ್ರದೇಶ ನಂತರ ಸಾಮಾಜ್ರ್ಯ ವಿಸ್ತಾರದಿಂದ ವಿಜಯನಗರವಾಗಿ ಈಗ ವಿದ್ಯಾರಣ್ಯವಾಗಿದೆ ಎಂಬ ಮಾತು ಚರಿತ್ರೆಯನ್ನು ನೆನಪಿಸುತ್ತದೆ. ಕನ್ನಡಿಗರ ನೂರಾರು ಕನಸುಗಳನ್ನು ಸಾಕಾರಗೊಳಿಸಲೆಂದು ಹುಟ್ಟಿದ ವಿಶ್ವವಿದ್ಯಾಲಯ ಕನ್ನಡದ ಕೆಲಸವನ್ನು ಕಾಲ ಬಯಸಿದಂತೆ ಮಾಡುತ್ತ ಬಂದಿದೆ. ಕನ್ನಡ ವಿಶ್ವವಿದ್ಯಾಲಯವನ್ನು ಭೌತಿಕವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರು ಕಟ್ಟಿದರೆ ಬೌದ್ಧಿಕವಾಗಿ ಪ್ರೊ.ಎಂ.ಎಂ.ಕಲಬುರ್ಗಿಯವರು ಸಮರ್ಥವಾಗಿ ಕಟ್ಟಿದರು. ಅದನ್ನು ಮುಂದುವರಿಸಿಕೊಂಡು ವಿಶ್ವವಿದ್ಯಾಲಯದ ಆಶಯಕ್ಕೆ ಧಕ್ಕೆಯಾಗದಂತೆ ಡಾ. ಎಚ್.ಜೆ.ಲಕ್ಕಪ್ಪಗೌಡ, ಡಾ. ಬಿ.ಎ.ವಿವೇಕ ರೈ, ಡಾ. ಎ.ಮುರಿಗೆಪ್ಪ, ಡಾ. ಹಿ.ಚಿ.ಬೋರಲಿಂಗಯ್ಯ ಇವರೆಲ್ಲರೂ ಕುಲಪತಿಗಳಾಗಿ ದುಡಿದಿರುವರು. ಎಲ್ಲರೂ ಕೂಡಿ ದುಡಿದ ಫಲವಾಗಿ ಕನ್ನಡ ವಿಶ್ವವಿದ್ಯಾಲಯ ಕನ್ನಡಿಗರ ಅಭಿಮಾನಕ್ಕೆ ಹೆಮ್ಮೆಗೆ ಪಾತ್ರವಾಗಿದೆ. ಕನ್ನಡ-ಕನ್ನಡದ ಬದುಕು-ಕರ್ನಾಟಕ ಸಂಸ್ಕೃತಿಯ ಕಲ್ಪನೆಯೊಂದಿಗೆ ಮೈದಳೆದ ಕನ್ನಡ ವಿಶ್ವವಿದ್ಯಾಲಯ ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಆಧರಿಸಿ ವಿದ್ಯೆಯ ಶೋಧನೆಗೆ ತೊಡಗುತ್ತಲೆ ಸಮಾಜಮುಖಿ ಚಿಂತನೆಗಳಿಗೆ ಬದ್ಧವಾಗಿ ಬದುಕಿನ ಸಂಕೀರ್ಣತೆಗಳಿಗೆ ಮುಖಾಮುಖಿಯಾಗಿ ಕಾರ್ಯ ಮಾಡುತ್ತಿದೆ. ಕನ್ನಡಪ್ರಜ್ಞೆ ವಿಶ್ವಪ್ರಜ್ಞೆಯಾಗಬೇಕೆಂಬುದು ಕೇವಲ ಆಶಯವಲ್ಲ; ಅದು ವಾಸ್ತವವಾಗುವುದರ ಕಡೆ ಕನ್ನಡ ವಿಶ್ವವಿದ್ಯಾಲಯದ ನಡೆಯಿದೆ. ವಿಶ್ವಜ್ಞಾನವನ್ನು ಕನ್ನಡದ ಮೂಲಕ ಪಡೆಯುವ ಕನ್ನಡದ ಜ್ಞಾನವನ್ನು ವಿಶ್ವಭಾಷೆಗಳ ಮೂಲಕ ವಿಶ್ವಕ್ಕೆ ನೀಡುವ ಕಾರ್ಯದಲ್ಲಿ ಮಡಿವಂತಿಕೆಗೆ ಒಳಗಾಗಿಲ್ಲ. ಜಾಗತೀಕರಣದ ಸವಾಲುಗಳಿಗೆ ದೇಸಿ ಜ್ಞಾನಪರಂಪರೆಯ ಮೂಲಕ ಉತ್ತರಿಸುವ ನೈತಿಕ ಹೊಣೆಗಾರಿಕೆಯನ್ನು ಬಹು ಎಚ್ಚರದಿಂದ ವಿಶ್ವವಿದ್ಯಾಲಯ ಉಳಿಸಿಕೊಂಡಿದೆ. ನಾಲ್ಕು ನಿಕಾಯಗಳಿಂದ ಪ್ರಾರಂಭವಾದ ವಿಶ್ವವಿದ್ಯಾಲಯ ಅಧ್ಯಯನಕ್ಕೆ ಪೂರಕವಾಗಿ ಇಪ್ಪತ್ತು ವಿಭಾಗಗಳನ್ನು ಪ್ರಾರಂಭಿಸಿದೆ. ಸಂಶೋಧನೆ-ಬೋಧನಾ ಕಾರ್ಯವನ್ನು ಸಾಂಪ್ರದಾಯಿಕ ವಿಶ್ವವಿದ್ಯಾಲಯದಂತೆ ಮಾಡದೆ ಭಿನ್ನವಾದ ರೀತಿಯಲ್ಲಿ ಪ್ರಾರಂಭಿಸಿ ಮುಂದುವರಿಸಿದೆ. ವಿಶ್ವವಿದ್ಯಾಲಯದ ಆತ್ಮದಂತಿರುವ ‘ಪ್ರಸಾರಾಂಗ’ ಸುಮಾರು ಒಂದು ಸಾವಿರದ ಎರಡುನೂರು ಪುಸ್ತಕಗಳನ್ನು ಪ್ರಕಟಿಸುವುದರ ಮೂಲಕ ಜ್ಞಾನ ಪ್ರಸಾರವನ್ನು ಅರ್ಥಪೂರ್ಣವಾಗಿ ಮಾಡುತ್ತಿದೆ. ವಿಶ್ವವಿದ್ಯಾಲಯದ ಒಳಗಡೆಯ ಮತ್ತು ವಿಶ್ವವಿದ್ಯಾಲಯದ ಹೊರಗಿರುವ ನಾಡಿನ ಹೆಸರಾಂತ ವಿದ್ವಾಂಸರು, ಚಿಂತಕರ ಮೂಲಕ ಮೌಲಿಕವಾದ ಗ್ರಂಥಗಳನ್ನು ಪ್ರಕಟಿಸುತ್ತ ತನ್ನ ಬಹುತ್ವದ ನೆಲೆಯನ್ನು ಗಟ್ಟಿಗೊಳಿಸಿಕೊಂಡಿದೆ.
ಭೌತಿಕವಾಗಿ
ಕನ್ನಡ ವಿಶ್ವವಿದ್ಯಾಲಯ ಆರಂಭವಾದಾಗಿನಿಂದ ಭೌತಿಕವಾಗಿ ಮತ್ತು ಬೌದ್ಧಿಕವಾಗಿ ಬೃಹತ್ ಪ್ರಮಾಣದಲ್ಲಿ ಬೆಳೆದು ನಿಂತಿದೆ. ಯಾವ ಅನುಕೂಲಗಳೂ ಇಲ್ಲದಿದ್ದ ಏಳುನೂರು ಎಕರೆಯ ಹಂಪಿ ಪರಿಸರದಲ್ಲಿರುವ ಕನ್ನಡ ವಿಶ್ವವಿದ್ಯಾಲಯ ಪರಿಸರಕ್ಕೆ ಸರಿಹೊಂದುವ, ಹಂಪಿ ಪರಂಪರೆಯನ್ನು ಬಿಂಬಿಸುವ ಅನೇಕ ಕಟ್ಟಡಗಳನ್ನು ಆಧುನಿಕ ಮಾದರಿಯಲ್ಲಿ ನಿರ್ಮಾಣ ಮಾಡುವುದರ ಮೂಲಕ ಎಲ್ಲರ ಗಮನ ಸೆಳೆದಿದೆ. ಕ್ರಿಯಾಶಕ್ತಿ, ತ್ರಿಪದಿ, ಭುವನವಿಜಯ ಸಭಾಂಗಣ, ನವರಂಗ ಬಯಲು ರಂಗಮಂದಿರ, ಕೂಡಲಸಂಗಮ, ತುಂಗಭದ್ರ, ಕಾಯಕದ ಮನೆ, ಅಕ್ಷರ ಗ್ರಂಥಾಲಯ, ಸಿರಿಗನ್ನಡ ಕಟ್ಟಡ, ಶ್ರೀಶೈಲ ಅತಿಥಿಗೃಹ ಮುಂತಾದ ಕಟ್ಟಡಗಳು ಚಾರಿತ್ರಿಕ, ಪಾರಂಪರಿಕ ಮತ್ತು ಪ್ರಾದೇಶಿಕ ಸೊಗಡನ್ನು ಮೈಗೂಡಿಸಿಕೊಂಡಿವೆ. ಮಂಟಪ ಸಭಾಂಗಣ, ದೃಶ್ಯಕಲಾ ವಿಭಾಗ, ಸಿರಿಗನ್ನಡ ಮುಂತಾದ ಕಟ್ಟಡಗಳು ಆಧುನಿಕ ಮತ್ತು ಪಾರಂಪರಿಕ ಶೈಲಿಯಲ್ಲಿ ರೂಪುಗೊಂಡಿವೆ. ಸಹಜ ಕಲ್ಲು ಬಂಡೆಗಳನ್ನು ಬಳಸಿಕೊಂಡು ಶಿಲ್ಪವನವನ್ನು ನಿರ್ಮಿಸಲಾಗಿದೆ. ಆದರೆ ಭೌತಿಕವಾಗಿ ಯಾವುದೇ ವಿಶ್ವವಿದ್ಯಾಲಯವನ್ನು ಅನುಕರಿಸದೇ ಸ್ವಂತಿಕೆಯನ್ನು ಮೆರೆಯಬಲ್ಲ ಸಾಂಸ್ಕೃತಿಕ, ಚಾರಿತ್ರಿಕ, ಸಾಹಿತ್ಯ ಮತ್ತು ಪಾರಂಪರಿಕ ಮಹತ್ವವನ್ನು ಇಲ್ಲಿನ ಕಟ್ಟಡಗಳು ಪಡೆದಿವೆ ಎನ್ನುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಕಟ್ಟಡವೊಂದು ಕೇವಲ ಕಟ್ಟಡವಲ್ಲ; ಅದೊಂದು ಮಹಾಕಾವ್ಯ. ಅದರ ಪ್ರತಿಯೊಂದು ಕಲ್ಲುಗಳು ಮಾತನಾಡುತ್ತವೆ. ಮಾತನಾಡಿಸುವ ಜಾಣ್ಮೆ ಕಟ್ಟಡವನ್ನು ಕಟ್ಟುವ ಮತ್ತು ಕಟ್ಟಿಸುವವರಲ್ಲಿರಬೇಕು. ಈ ವಿವೇಕದೊಂದಿಗೆ ಇಲ್ಲಿಯ ಕಲ್ಲುಗಳು ಅರಳಿ ಹೂವಾಗಿ ನಿಂತ ಕಟ್ಟಡಗಳು ವಾಸ್ತುಶಿಲ್ಪದ ಅಧ್ಯಯನಕ್ಕೆ ಆಕರದಂತಿವೆ.
ಶೈಕ್ಷಣಿಕ
ಕನ್ನಡ ವಿಶ್ವವಿದ್ಯಾಲಯದಲ್ಲಿ ಮುಖ್ಯವಾದ ಮೂರು ಅಂಗಗಳಿವೆ. ೧. ಅಧ್ಯಯನಾಂಗ, ೨. ಪ್ರಸಾರಾಂಗ. ೩. ಆಡಳಿತಾಂಗ. ಕನ್ನಡ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳು ಹೇಳುವಂತೆ ಕನ್ನಡ ವಿಶ್ವವಿದ್ಯಾಲಯದಲ್ಲಿ ಮೊದಲ ಆದ್ಯತೆ ಅಧ್ಯಯನಾಂಗಕ್ಕೆ. ಎರಡನೇ ಆದ್ಯತೆ ಕನ್ನಡ ವಿಶ್ವವಿದ್ಯಾಲಯ ನಡೆಸಿದ ಸಂಶೋಧನಾತ್ಮಕ ಬರಹಗಳನ್ನು ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಸಾರ ಮಾಡುವುದು. ಮೂರನೇ ಆದ್ಯತೆ ಆಡಳಿತಕ್ಕೆ ಎನ್ನುವುದು ಅವರ ಧ್ಯೇಯವಾಗಿತ್ತು. ಅದರ ಮೇಲೆ ಕನ್ನಡ ವಿಶ್ವವಿದ್ಯಾಲಯ ತನ್ನ ಇಪ್ಪತ್ತೈದು ವರ್ಷಗಳ ಸಾಧನೆಯೊಂದಿಗೆ ಬೆಳೆದು ನಿಂತಿದೆ. ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಯ ಉದ್ದೇಶ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಜ್ಞಾನವನ್ನು ವೃದ್ಧಿಪಡಿಸಲು, ಸಂಶೋಧನೆಯನ್ನು ಮುಂದುವರಿಸಲು ಮತ್ತು ಸಾಂಸ್ಕೃತಿಕ ಅವಶ್ಯಕತೆಗಳನ್ನು ಪೂರೈಸಲು ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ಅದಕ್ಕೆ ಅನುಗುಣವಾಗಿ ಕನ್ನಡ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳು ಹೇಳುವಂತೆ ಕನ್ನಡ ವಿಶ್ವವಿದ್ಯಾಲಯ ವಿದ್ಯೆಯನ್ನು ಸೃಷ್ಟಿಸುವ ವಿಶ್ವವಿದ್ಯಾಲಯ. ವಿದ್ಯೆಯನ್ನು ಕಲಿಸುವ ವಿಶ್ವವಿದ್ಯಾಲಯ ಅಲ್ಲ ಎನ್ನುವ ಮಾತಿನೊಂದಿಗೆ ತನ್ನ ಅಧಿನಿಯಮ ಮತ್ತು ಪರಿನಿಯಮದಲ್ಲಿ ಸೂಚಿಸಿರುವ ಉದ್ದೇಶಗಳಿಗನುಗುಣವಾಗಿ ಹತ್ತಾರು ಬಗೆಯ ಸಂಶೋಧನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಂಡು ಬೋಧನೆಯನ್ನು ಜೊತೆಯಾಗಿ ತೆಗೆದುಕೊಂಡು ನಡೆದಿದೆ. ಕನ್ನಡ, ಕನ್ನಡಿಗ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದಂತೆ ಎಲ್ಲ ಆಯಾಮಗಳಲ್ಲಿ ವಿಶ್ವವಿದ್ಯಾಲಯದ ಒಳಗಿನ ಮತ್ತು ಹೊರಗಿನ ವಿದ್ವಾಂಸರನ್ನು ಬಳಸಿಕೊಂಡು ಸಂಶೋಧನೆಯನ್ನು ಕೈಗೊಂಡ ಕನ್ನಡ ವಿಶ್ವವಿದ್ಯಾಲಯ ಅನೇಕ ಮಾಲೆಗಳಲ್ಲಿ ಅವುಗಳನ್ನು ಪ್ರಕಟಿಸಿದೆ. ಉದಾಹರಣೆಗೆ ವಿಶ್ವಕೋಶಗಳು ಸಮಗ್ರ ವಿಶ್ವಜ್ಞಾನವನ್ನು ಒಂದೆಡೆ ಸಂಗ್ರಹಿಸಿ ಓದುಗರಿಗೆ ದೊರಕಿಸುವ ಉದ್ದೇಶದಿಂದ ಜಗತ್ತಿನ ಮುಂದುವರಿದ ಭಾಷೆಗಳಲ್ಲಿರುವ ವಿಶ್ವಕೋಶಗಳನ್ನು ಮಾದರಿಯಾಗಿಟ್ಟುಕೊಂಡು ಸರ್ವಜ್ಞಾನವನ್ನು ಸ್ಥೂಲವಾಗಿ ಒದಗಿಸಿಕೊಡುವ ಮೂಲಕ ೯ ವಿಷಯಾಧಾರಿತ ವಿಶ್ವಕೋಶಗಳನ್ನು ಪ್ರಕಟಿಸಲಾಗಿದೆ. ಕರ್ನಾಟಕ ರಾಜ್ಯಕೋಶ ಮಾಲೆಯಲ್ಲಿ ೩ ಕೃತಿಗಳು ಪ್ರಕಟವಾಗಿವೆ. ಕರ್ನಾಟಕ ಚರಿತ್ರೆ ಸಂಪುಟಗಳು: ಕರ್ನಾಟಕದ ಸಮಗ್ರ ಚರಿತ್ರೆಯನ್ನು ತಿಳಿದುಕೊಳ್ಳಲು ಅನುಕೂಲವಾಗುವಂತೆ ಏಳು ಸಂಪುಟಗಳಲ್ಲಿ ಕರ್ನಾಟಕ ಚರಿತ್ರೆ ಸಂಪುಟಗಳನ್ನು ಪ್ರಕಟಿಸಲಾಗಿದೆ. ಕನ್ನಡ ವಿಶ್ವವಿದ್ಯಾಲಯ ಚರಿತ್ರೆ ಮಾಲೆಯಲ್ಲಿ ೮ ಸಂಪುಟಗಳನ್ನು ಪ್ರಕಟಿಸಲಾಗಿದೆ. ಶಾಸನ ಸಂಪುಟಗಳು: ಶಾಸನಗಳು ಸಾಂಸ್ಕೃತಿಕ ದಾಖಲೆಗಳು. ಇವುಗಳನ್ನು ಪತ್ತೆ ಹಚ್ಚಿ ಪ್ರಕಟಿಸದೇ ಹೋದರೆ ಈ ದಾಖಲೆಗಳು ಮರೆಯಾಗುತ್ತವೆ. ಈ ಹಿನ್ನೆಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಕರ್ನಾಟಕದ ಒಳಗಿನ ಮತ್ತು ಹೊರನಾಡಿನ ವ್ಯಾಪಕ ಕ್ಷೇತ್ರಕಾರ್ಯದ ಮೂಲಕ ಸಂಗ್ರಹ ಮಾಡಿ ಸುಮಾರು ೧೭ ಸಂಪುಟಗಳನ್ನು ಹೊರತರಲಾಗಿದೆ. ಮಂಟಪ ಮಾಲೆ : ಕನ್ನಡದ ಮಹತ್ವದ ಲೇಖಕರನ್ನು, ಕಲಾವಿದರನ್ನು, ವಿಜ್ಞಾನಿಗಳನ್ನು ಹಾಗೂ ಸಾಹಿತ್ಯ ಮತ್ತು ಸಾಹಿತ್ಯೇತರವಾದ ಪ್ರಮುಖ ವಿಷಯಗಳನ್ನು ಕುರಿತು ಸಾಮಾನ್ಯ ಜನರಿಗೆ ತಿಳುವಳಿಕೆ ನೀಡಲು ಪ್ರಚಾರೋಪನ್ಯಾಸಗಳನ್ನು ಮಾಡಿಸುವ ಯೋಜನೆಗಳನ್ನು ರೂಪಿಸಿಕೊಂಡು ಯೋಜನೆಗಳನ್ನು ರೂಪಿಸುತ್ತಿವೆ. ಅತ್ಯಂತ ಸರಳವಾಗಿ ಈ ವಿಷಯಗಳನ್ನು ಕುರಿತು ಪರಿಚಯ ಮಾಡಿಕೊಡುವ ಉಪನ್ಯಾಸಗಳನ್ನು ಈ ಯೋಜನೆಯಡಿಯಲ್ಲಿ ಪ್ರಕಟಿಸಲಾಗಿದೆ(೨೮೩ ಪುಸ್ತಕಗಳು ಈ ಯೋಜನೆಯಡಿಯಲ್ಲಿ ಪ್ರಕಟಗೊಂಡಿವೆ). ಕನ್ನಡ ಭಾಷಾಭಿವೃದ್ಧಿ ಯೋಜನೆಯಲ್ಲಿ(ಶಾಸ್ತ್ರೀಯ ಭಾಷಾ ಯೋಜನೆ) ೧೫ ಕೃತಿಗಳನ್ನು ಪ್ರಕಟಿಸಲಾಗಿದೆ. ಸಮಗ್ರ ಜೈನ ಸಾಹಿತ್ಯ ಮಾಲೆಯಲ್ಲಿ ೧೯ ಕೃತಿಗಳನ್ನು ಪ್ರಕಟಿಸಲಾಗಿದೆ. ವಿಜ್ಞಾನಕ್ಕೆ ಸಂಬಂಧಿಸಿದ ೮ ಕೃತಿಗಳನ್ನು ಏಕಪ್ರಕರಣ ಗ್ರಂಥಮಾಲೆಯಲ್ಲಿ ಪ್ರಕಟಿಸಲಾಗಿದೆ. ಬುಡಕಟ್ಟು ಮಹಾಕಾವ್ಯ ಮಾಲೆ: ಕನ್ನಡ ಸಂಸ್ಕೃತಿಯನ್ನು ಬುಡಕಟ್ಟು ಮಹಾಕಾವ್ಯಗಳ ಮೂಲಕ ಶೋಧಿಸುವ ಮಹತ್ವದ ಪ್ರಯತ್ನವನ್ನು ಈ ಮಾಲೆಯಲ್ಲಿ ಮಾಡಲಾಗಿದೆ(೧೦ ಬುಡಕಟ್ಟು ಮಹಾಕಾವ್ಯಗಳನ್ನು ಪ್ರಕಟಿಸಲಾಗಿದೆ). ಬುಡಕಟ್ಟು ಅಧ್ಯಯನ ಮಾಲೆಯಲ್ಲಿ ೧೦ ಕೃತಿಗಳನ್ನು ಪ್ರಕಟಿಸಲಾಗಿದೆ. ಶತಮಾನದ ಚಿಂತನ ಮಾಲೆ: ಕಳೆದ ಶತಮಾನವು ಈ ನೆಲದಲ್ಲಿ ಹಲವಾರು ಚಿಂತನೆಗಳನ್ನು ಬಿತ್ತಿದೆ, ಬೆಳೆಸಿದೆ, ಬದಲಿಸಿದೆ. ಮುಖಾಮುಖಿಯಾಗಿಸಿದೆ. ಇಂಥ ವಿಚಾರ ಮಂಥನದ ಹೆಗ್ಗುರುತುಗಳನ್ನು ಕನ್ನಡ ಓದುಗರ ಅರಿವಿನ ಪರಿಧಿಯೊಳಗೆ ತರುವ ಉದ್ದೇಶದಿಂದ ಈ ಮಾಲೆಯಲ್ಲಿ ಆರು ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಹೊನ್ನಾರು ಮಾಲೆ: ಕನ್ನಡ ನಾಡು ಏಕೀಕರಣಗೊಂಡು ಐವತ್ತು ವರ್ಷ ತುಂಬಿದ ಚಿನ್ನದ ಹಬ್ಬದ ಸಂದರ್ಭದಲ್ಲಿ ಕನ್ನಡವನ್ನು ಕಟ್ಟಿದ ಹಿರಿಯರ ೨೯ ಶ್ರೇಷ್ಠ ಸಾಹಿತ್ಯ ವಿಮರ್ಶಾ ಕೃತಿಗಳನ್ನು ಈ ಮಾಲೆಯಲ್ಲಿ ಪ್ರಕಟಿಸಲಾಗಿದೆ. ಕರ್ನಾಟಕ ಜನಪದ ಕಾವ್ಯಮಾಲೆ: ದೇಸಿ ಅಧ್ಯಯನ ಹೆಚ್ಚು ಸೃಜನಾತ್ಮಕವಾಗಿ ಮತ್ತು ವ್ಯಾಪಕವಾಗಿ ಬೆಳೆಸಲು ಸಾಧ್ಯವಾಗುವಂತೆ ಕ್ಷೇತ್ರಕಾರ್ಯ ಮತ್ತು ದಾಖಲೀಕರಣದ ಮೂಲಕ ಸಂಗ್ರಹಿಸಿ ಈ ಮಾಲೆಯಲ್ಲಿ ೩ ಕೃತಿಗಳನ್ನು ಪ್ರಕಟಿಸಲಾಗಿದೆ. ನಮ್ಮವರು ಮಾಲೆ: ಕನ್ನಡ ನಾಡಿನ ಸರ್ವತೋಮುಖ ಬೆಳವಣಿಗೆಗೆ ಕಾರಣರಾದ ಮಹತ್ವದ ವ್ಯಕ್ತಿಗಳ ಜೀವನ ಮತ್ತು ಸಾಧನೆಯನ್ನು ಕಿರಿಯರಿಗೆ ತಿಳಿಸುವ ಸದುದ್ದೇಶದಿಂದ ಈ ಯೋಜನೆಯನ್ನು ಹಮ್ಮಿಕೊಂಡು ಕೆಲಸ ನಿರ್ವಹಿಸಲಾಗಿದೆ(೨೩ ಕೃತಿಗಳು ಪ್ರಕಟವಾಗಿವೆ). ನವಸಾಕ್ಷರ ಮಾಲೆ: ಅಕ್ಷರ ಸಂಸ್ಕೃತಿಯ ಆಂದೋಲನದಲ್ಲಿ ಕಲಿತವರಿಗೆ ಮತ್ತು ಕಲಿಯುವವರಿಗೆ ಮತ್ತು ಕಲಿತವರು ಮರೆಯದಂತೆ, ಕಲಿಕೆಯನ್ನು ಮುಂದುವರಿಸುವಂತೆ ಮಾಡಲು ಈ ಯೋಜನೆ ರೂಪಿಸಲಾಗಿದೆ(ಈ ಮಾಲೆಯಲ್ಲಿ ೧೧೦ ಪುಸ್ತಕಗಳು ಪ್ರಕಟವಾಗಿವೆ). ಸಂಶೋಧನೆಯ ಕೆಲಸಗಳ ಜೊತೆಗೆ ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ಮಟ್ಟದ ವಿಚಾರ ಸಂಕಿರಣಗಳನ್ನು, ಕಾರ್ಯಾಗಾರಗಳನ್ನು ವಿಶ್ವವಿದ್ಯಾಲಯ ನಿರಂತರವಾಗಿ ಹಮ್ಮಿಕೊಳ್ಳುವ ಮೂಲಕ ನಾಡಿನ ಒಳಗಿನ ಮತ್ತು ಹೊರಗಿನ ಹಿರಿಯ ಕಿರಿಯ ವಿದ್ವಾಂಸರ ಜೊತೆಗೆ ಸಂವಾದ ನಡೆಸುತ್ತ ಬಂದಿದೆ. ಈ ಸಂವಾದವನ್ನು ದಾಖಲಿಸಿ ಪ್ರಕಟಣೆ ಮಾಡುತ್ತ ಬರಲಾಗಿದೆ.