ನುಡಿಹಬ್ಬ ೭ – ೪ನೇ ಜನವರಿ ೧೯೯೯

ನಾಡೋಜರ ಪರಿಚಯ

 

೦೧. ಡಾ. ದೇ. ಜವರೇಗೌಡ ಅವರು

Image result for dejagow   nudihabba 7 (14)n

ದೇಜಗೌ ಎಂದೇ ಹೆಸರಾಗಿರುವ ಶ್ರೀ ದೇ. ಜವರೇಗೌಡ ಅವರು ಈ ಶತಮಾನದ ಕನ್ನಡ ಸಾಹಿತ್ಯ ಸಾಧಕರಲ್ಲೊಬ್ಬರು. ಅಧ್ಯಾಪಕರಾಗಿ ಆಡಳಿತಾತ್ಮಕ ಹೊಣೆಗಾರಿಕೆಯನ್ನೂ ಯಶಸ್ವಿಯಾಗಿ ನಿರ್ವಹಿಸಿದವರು. ಮೈಸೂರು ವಿಶ್ವವಿದ್ಯಾಲಯದ ಕನ್ನಡದ ಕೆಲಸಗಳಿಗಾಗಿ ಕನ್ನಡ ಅಧ್ಯಯನ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಶ್ರೀಯುತರು, ಅದೇ ವಿಶ್ವವಿದ್ಯಾಲಯದ ಕುಲಪತಿಯಾಗಿ ಕನ್ನಡ ಅಧ್ಯಯನಗಳಿಗೆ ಅವಕಾಶ ಮತ್ತು  ಹಿರಿಮೆ ಒದಗಿಸಿಕೊಟ್ಟರು. ತಮ್ಮ ಗುರುಗಳಾದ ಕುವೆಂಪು ಅವರ ದೂರದರ್ಶಿತ್ವದ ಫಲವಾಗಿ ಅನೇಕ  ದೊಡ್ಡ ಯೋಜನೆಗಳನ್ನು  ಕನ್ನಡಕ್ಕಾಗಿ  ರೂಪಿಸಿ ಯಶಸ್ಸು ಪಡೆದರು. ಜಾನಪದವನ್ನು  ಸ್ನಾತಕೋತ್ತರ ಅಧ್ಯಯನ ವ್ಯಾಪ್ತಿಗೆ ತರುವಲ್ಲಿ, ಅದಕ್ಕೊಂದು ಭದ್ರ ನೆಲೆಗಟ್ಟು ಕೊಡುವಲ್ಲಿ ದೇಜಗೌ ಅವರ ಸಾಧನೆ ಗಣನೀಯವಾದುದು.

ಬಿಡುವಿಲ್ಲದ ಬರಹಗಾರರಾಗಿ ಶ್ರೀಯುತರು ಸೃಷ್ಟಿಸಿದ ಅಗಾಧ ಪ್ರಮಾಣದ ಸಾಹಿತ್ಯದಲ್ಲಿ ಆಧುನಿಕ ಗದ್ಯಶೈಲಿಯೊಂದು ನಿರ್ಮಾಣಗೊಂಡಿತು. ವಿಶಿಷ್ಟ ರೀತಿಯ ಪದಸಂಯೋಜನೆ ಹಾಗೂ ವಾಕ್ಯವಿನ್ಯಾಸಗಳ ಗದ್ಯಶೈಲಿಯಲ್ಲಿ ನಾಡಿನ ಮಹನೀಯರ ಜೀವನ ಚರಿತ್ರೆಗಳ ಬಹುದೊಡ್ಡ ಸರಣಿಯನ್ನು ಇವರು ನಿರ್ಮಿಸಿದರು.

ದೇಜಗೌ ಅವರಿಗೆ ಗರಿಮೆ ತಂದಿತ್ತ ಇನ್ನೊಂದು ಕ್ಷೇತ್ರ ಅನುವಾದ. ಇದರಿಂದ ಆಧುನಿಕ  ಕನ್ನಡ ಸಾಹಿತ್ಯವು ವಿಷಯ ಬಾಹುಳ್ಯವನ್ನು, ಅನುಭವ ಶ್ರೀಮಂತಿಕೆಯನ್ನು  ಮೈಗೂಡಿಸಿಕೊಂಡಿತು. ದೇಜಗೌ ಅನೇಕ ಸಾಹಿತ್ಯ ಕೃತಿಗಳನ್ನು  ಸಂಪಾದಿಸಿಕೊಟ್ಟಿದ್ದಾರೆ. ಪ್ರವಾಸ  ಕಥನಗಳನ್ನು  ರಚಿಸಿದ್ದಾರೆ. ಕುವೆಂಪು ಸಾಹಿತ್ಯ ಅಧ್ಯಯನಕ್ಕೆ ಅನುವು ಮಾಡಿಕೊಡುವ ಸಂಸ್ಥೆಯೊಂದನ್ನು ಕಟ್ಟಿದ್ದಾರೆ. ಭಾರತೀಯ ಸ್ಥಳನಾಮ ಅಧ್ಯಯನ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ, ಕನ್ನಡ ಸಂಸ್ಕೃತಿಯ ಅಧ್ಯಯನಕ್ಕೆ ಬೇಕಾದ ನೆಲೆಯನ್ನು ಒದಗಿಸಿದ್ದಾರೆ. ಕನ್ನಡ ಅಬಿsಮಾನವು ಬೇರುಗಳನ್ನು  ಊರಲು ಬೇಕಾದ ಅನೇಕ ಕೆಲಸಗಳನ್ನು  ಮಾಡಿದ್ದಾರೆ.

ಇವರಿಗೆ ನಾಡು ಅನೇಕ ಗೌರವಗಳನ್ನಿತ್ತು ಮನ್ನಿಸಿದೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ (೧೯೭೨), ಗೌರವ ಡಾಕ್ಟರೇಟ್(೧೯೭೫), ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ, ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ಇತ್ಯಾದಿಗಳನ್ನು ಪಡೆದಿರುವ  ದೇಜಗೌ ಪಂಪ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರ ಈ ಸಾಧನೆಗಳನ್ನು  ಗಮನಿಸಿ, ಕನ್ನಡ ವಿಶ್ವವಿದ್ಯಾಲಯವು ನಾಡೋಜ ಗೌರವ ಪದವಿಯನ್ನು ನೀಡಿ ಗೌರವಿಸಿದೆ.

 

೦೨. ಡಾ. ಆರ್.ಸಿ.ಹಿರೇಮಠ ಅವರು

R. C. Hiremath wwwdkprintworldcomuploadedfilesAuthorsopk88w

ತಮ್ಮ ಅಪಾರ ಶಿಷ್ಯ ಸಮುದಾಯದಲ್ಲಿ ಆರ್.ಸಿ ಎಂದು ಹೆಸರಾಗಿರುವ ಡಾ.ರುದ್ರಯ್ಯ ಚಂದ್ರಯ್ಯ ಹಿರೇಮಠ ಅವರು  ಪ್ರಾಧ್ಯಾಪಕರಾಗಿ ಆಡಳಿತಗಾರರಾಗಿ ಕನ್ನಡದ ಕೆಲಸಗಳನ್ನು ಮಾಡಿದವರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ (ಕನ್ನಡ ಅಧ್ಯಯನ ಪೀಠ)ವನ್ನು ಸ್ಥಾಪಿಸಿ, ಅದರ ಅಧ್ಯಕ್ಷರಾಗಿ ಅವರು ಹಮ್ಮಿಕೊಂಡ ಯೋಜನೆಗಳು ತುಂಬ ಗಣ್ಯವಾಗಿದೆ. ವಿದ್ವಾಂಸರಾಗಿ ಪ್ರಾಚೀನ ಗ್ರಂಥಗಳ ಸಂಪಾದನೆ ಮಾಡಿದ ಇವರಿಗೆ ಶ್ರೀ ಫ.ಗು. ಹಳಕಟ್ಟಿಯವರೂ ಶಿ.ಶಿ. ಬಸವನಾಳರೂ ಆರಂಬಿsಸಿದ ವಚನಸಾಹಿತ್ಯ ಶೋಧ ಮತ್ತು ಸಂಪಾದನೆಗಳ ಕೆಲಸವನ್ನು ಮುಂದುವರೆಸಿದ ಶ್ರೇಯಸ್ಸು ಸಲ್ಲುತ್ತದೆ.

ಭಾಷಾಶಾಸ್ತ್ರಜ್ಞರಾಗಿದ್ದ ಆರ್.ಸಿ. ಯವರು ಅಮೆರಿಕೆಯಲ್ಲಿ ಭಾಷಾಶಾಸ್ತ್ರದ ಅಧ್ಯಯನ ಮಾಡಿಬಂದರು. ಅಲ್ಲಿಯ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಪಕರಾಗಿಯೂ ದುಡಿದರು. ಅಂತಾರಾಷ್ಟ್ರಿಯ ದ್ರಾವಿಡ ಭಾಷಾ ಸಂಸ್ಥೆಯ ನಿರ್ದೇಶಕರಾಗಿದ್ದ ಶ್ರೀಯುತರು ಅಖಿಲಭಾರತ ದ್ರಾವಿಡ ಭಾಷಾ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಜಾನಪದ ಅಧ್ಯಯನಗಳಿಗೆ ಶೈಕ್ಷಣಿಕ ಆಯಾಮವನ್ನು ಒದಗಿಸಿ, ಇವರು ಆರಂಬಿsಸಿದ ಜಾನಪದ ಸಮ್ಮೇಳನಗಳನ್ನು ಹಾಗೂ ಅವುಗಳ ಫಲಶ್ರುತಿಯಾದ ಜಾನಪದ ಸಾಹಿತ್ಯ ದರ್ಶನ ಮಾಲಿಕೆಯನ್ನು ಇಲ್ಲಿ ನೆನೆಯಬೇಕು. ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಮೇಲೆ ಇಂಥ ಸಾಂಸ್ಥಿಕ ಕೆಲಸಗಳಿಗೆ ಮತ್ತಷ್ಟು ಶಕ್ತಿ ತುಂಬಿದರು.

ಕನ್ನಡನಾಡು ಇವರ ಸಾಧನೆಯನ್ನು ಮನ್ನಿಸಿ ಹುಬ್ಬಳ್ಳಿಯಲ್ಲಿ  ಜರುಗಿದ ೬೩ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ(೧೯೯೨) ಅಧ್ಯಕ್ಷತೆಯನ್ನು ನೀಡಿ ಗೌರವಿಸಿತು.

ಬಡಕುಟುಂಬದಲ್ಲಿ ಹುಟ್ಟಿ ಬೆಳೆದ ಆರ್.ಸಿ.ಯವರು, ತುಂಬ ಶ್ರಮಪಟ್ಟು ತಮ್ಮ ವೈಯಕ್ತಿಕ ಬದುಕನ್ನು ಕಟ್ಟಿಕೊಂಡವರು. ಈ ಹಿನ್ನೆಲೆ ಅವರನ್ನು ಕನ್ನಡದ  ಕೆಲಸಗಳಿಗಾಗಿ  ದುಡಿಯುವಂತೆ ಮಾಡಿತು. ಅವರ ಹೋರಾಟದ ಬದುಕಿನ ಚಿತ್ರಗಳು ಉರಿಬರಲಿ ಸಿರಿಬರಲಿ ಎಂಬ ಆತ್ಮಕಥೆಯಲ್ಲವೆ.

ಹೀಗೆ ಆರ್.ಸಿ.ಯವರು ವಿದ್ವಾಂಸರಾಗಿ, ಆಡಳಿತಗಾರರಾಗಿ, ಕನ್ನಡಕ್ಕೆ ನೀಡಿರುವ ಕೊಡುಗೆಯನ್ನು ಮನ್ನಿಸಿ, ಕನ್ನಡ ವಿಶ್ವವಿದ್ಯಾಲಯ, ಅವರಿಗೆ ನಾಡೋಜ ಪದವಿಯನ್ನಿತ್ತು ಗೌರವಿಸಿದೆ.

೦೩. ಡಾ. ರಾಜ್‌ಕುಮಾರ್ ಅವರು

Image result for rajkumar     nudihabba 7 (11)-1

ಕರ್ನಾಟಕದ ಜನಸಮುದಾಯ ರೂಪಿಸಿಕೊಂಡ ನಾಯಕರಲ್ಲಿ ಡಾ. ರಾಜ್‌ಕುಮಾರ್ ಒಬ್ಬರು. ಅರ್ಧಶತಮಾನದಷ್ಟು ಕಾಲದಿಂದ ಕನ್ನಡ ಚಲನಚಿತ್ರಗಳಲ್ಲಿ ನಾಯಕ ನಟರಾಗಿ ಅಪಾರವಾದ ಜನಪ್ರಿಯತೆಯನ್ನು  ಪಡೆದಿರುವ  ಡಾ. ರಾಜ್ ಅವರ ವೃತ್ತಿಜೀವನ ಕನ್ನಡ ಚಲನಚಿತ್ರರಂಗದ ಚರಿತ್ರೆಯೇ ಆಗಿಹೋಗಿದೆ.  ಈ ಹೊತ್ತು ಲPಂತರ ಜನರಿಗೆ ಉದ್ಯೋಗ ನೀಡುವ ಒಂದು ದೊಡ್ಡ ಉದ್ಯಮವಾಗಿ ಬೆಳೆದಿರುವ  ಕನ್ನಡ ಚಲನಚಿತ್ರರಂಗವು, ಬೇರೆ ಭಾಷೆಗಳ ಚಲನಚಿತ್ರರಂಗಗಳ ಅಬ್ಬರಗಳ ಮುಂದೆ ಕುಸಿಯದಂತೆ  ಯಾವತ್ತೂ ಒಳಬಲವನ್ನು ಅವರು  ಒದಗಿಸಿದ್ದಾರೆ. ಏಕೀಕರಣಕ್ಕೆ ಮೊದಲು ಕರ್ನಾಟಕವನ್ನು  ಆವರಿಸಿಕೊಂಡಿದ್ದ ಅನೇಕ  ಸಾಂಸ್ಕೃತಿಕ ಸಂಗತಿಗಳಲ್ಲಿ  ಕನ್ನಡ  ಚಲನಚಿತ್ರವೂ ಒಂದು. ಇದರಲ್ಲಿ  ಡಾ. ರಾಜ್ ಅವರ ನಟನಾವ್ಯಕ್ತಿತ್ವದ ಪ್ರಭಾವ ಬಹುಮುಖ್ಯವಾದುದು.

ಆಡಳಿತ ಮತ್ತು ಶಿಕ್ಷಣ ಮಾಧ್ಯಮಗಳಲ್ಲಿ ಕನ್ನಡ ಭಾಷೇ ತನ್ನ ಸ್ಥಾನವನ್ನು  ಪಡೆಯಲು  ಕಷ್ಟಪಡುತ್ತಿದ್ದ ಕಾಲದಲ್ಲಿ ಇವರ ಪ್ರವೇಶ ಕನ್ನಡ ಚಳುವಳಿಗೆ ಸಂಜೀವಿನಿಯಂತೆ ಕೆಲಸಮಾಡಿದೆ. ಕರ್ನಾಟಕದ ಅನೇಕ ತಲೆಮಾರುಗಳ ಅಪಾರ ಪ್ರೀತಿಯನ್ನು, ಅಬಿsಮಾನವನ್ನು ಗಳಿಸಿಕೊಂಡಿರುವ ರಾಜ್‌ಕುಮಾರ್, ಸಮುದಾಯಗಳ ಮನಸ್ಸಿನ ನಾಯಕರೇ ಆಗಿದ್ದಾರೆ. ಕರ್ನಾಟಕ ಸಮಾಜವು ತನ್ನ ಬದಲಾವಣೆಯ ಸಂದರ್ಭಗಳಲ್ಲಿ  ಕಂಡ ಅನೇಕ  ಸಂಕಟ, ಸಂತೋಷಗಳನ್ನು ಇವರು ತಮ್ಮ ಪಾತ್ರಗಳಲ್ಲಿ ಪ್ರತಿಬಿಂಬಿಸುತ್ತ ಬಂದಿರುವುದೇ ಇದಕ್ಕೆ ಕಾರಣ. ಕನ್ನಡದ  ಗಣ್ಯ ಗಾಯಕರಾಗಿ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ.  ಕನ್ನಡಿಗರು ಅವರಿಗೆ ಅನೇಕ ಬಿರುದುಗಳನ್ನು ಕೊಟ್ಟು ತಮ್ಮ ಪ್ರೀತಿಯನ್ನು  ತೋರಿಸಿದ್ದಾರೆ. ಸರ್ಕಾರ ಹಾಗೂ ಸಂಸ್ಥೆಗಳು ಅವರ ಸಾಧನೆಯನ್ನು ಕಂಡು ಮನ್ನಣೆ ನೀಡಿವೆ.  ಪದ್ಮಭೂಷಣ,  ಗೌರವ ಡಾಕ್ಟರೇಟ್ ಪದವಿ,  ಕಲಾಕೌಸ್ತುಭ ಪ್ರಶಸ್ತಿ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಇವು ಕೆಲವು . ಇವುಗಳಿಗಿಂತ ಕರ್ನಾಟಕದ ಜನರ ಹೃದಯಗಳಲ್ಲಿ ಅವರು ಪಡೆದಿರುವ  ಬೆಚ್ಚನೆಯ ಪ್ರೀತಿ ಇನ್ನೂ  ಮಿಗಿಲಾದುದು. ಅವರ ಈ ಎಲ್ಲಾ ಸಾಧನೆಗಳನ್ನು ಮನ್ನಿಸಿ ಡಾ. ರಾಜಕುಮಾರ ಅವರಿಗೆ ಕನ್ನಡ ವಿಶ್ವವಿದ್ಯಾಲಯವು ನಾಡೋಜ ಗೌರವ ಪದವಿಯನ್ನು ನೀಡಿ ಗೌರವಿಸಿದೆ.

೦೪. ಡಾ. ಜಾರ್ಜ್ ಮಿಶಲ್ ಅವರು

nudihabba 7 (3)-new

ಕರ್ನಾಟಕ ಮತ್ತು ಭಾರತೀಯ ಸಾಂಸ್ಕೃತಿಕ ಪುನಾರಚನೆಗೆ ಅವಶ್ಯವಾದ ಶೋಧಗಳಲ್ಲಿ  ತೊಡಗಿಸಿಕೊಂಡ ಗಣ್ಯ ವಿದೇಶಿ ವಿದ್ವಾಂಸರಲ್ಲಿ  ಡಾ.ಜಾರ್ಜ್ ಮಿಶಲ್ ಅವರೂ ಒಬ್ಬರು. ಕಳೆದ ೧೮ ವರ್ಷಗಳಿಂದ  ನಿರಂತರವಾಗಿ  ವಿಜಯನಗರಕ್ಕೆ  ಸಂಬಂಧಸಿದ  ಅಧ್ಯಯನ ಯೋಜನೆಗಳಲ್ಲಿ  ನಿರತರಾಗಿರುವ  ಶ್ರೀಯುತರು ಹಂಪಿಯ ಪರಿಸರದಲ್ಲಿ ಆಪ್ತರಾಗಿದ್ದಾರೆ.

ಆಸ್ಟ್ರೇಲಿಯದ ಯೂನಿವರ್ಸಿಟಿ ಆಫ್ ಮೆಲ್ಟರ್ನ್‌ನಲ್ಲಿ  ವಾಸ್ತು ಶಿಲ್ಪಶಾಸ್ತ್ರದಲ್ಲಿ  ಪದವಿ,ಅನಂತರ  ಯೂನಿವರ್ಸಿಟಿ ಆಫ್ ಲಂಡನ್‌ನಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದರು. ತಮ್ಮ ಪಿ.ಎಚ್.ಡಿ ಗೆ ಅವರು  ಆಯ್ದುಕೊಂಡ ವಿಷಯ ಬಾದಾಮಿ ಚಾಲುಕ್ಯರ ಪ್ರಾಚೀನತಮ ದೇವಾಲಯಗಳ ವಾಸ್ತುಶಿಲ್ಪ. ಇದಕ್ಕಾಗಿ ಅವರು ಬಾದಾಮಿ ಪರಿಸರದ  ದೇವಾಲಯಗಳ  ವಾಸ್ತುವನ್ನು  ಆಳವಾಗಿ ಅಧ್ಯಯನ ಮಾಡಿದ್ದಾರೆ. ಭಾರತದ ಗುಜರಾತ್, ಬಂಗಾಲ,ದಕ್ಷಿಣ ಭಾರತ ಪ್ರದೇಶಗಳ ಸ್ಮಾರಕಗಳ  ವಾಸ್ತುಶಿಲ್ಪ ಅಧ್ಯಯನಗಳನ್ನು  ನಡೆಸಿ, ೧೯೮೦ರಿಂದ ಈಚೆಗೆ  ವಿಜಯನಗರಕ್ಕೆ ತಮ್ಮ ಗಮನವನ್ನು  ಕೇಂದ್ರೀಕರಿಸಿದ್ದಾರೆ. ಅವರ ಶೋಧಗಳು, ಪ್ರಕಟಗೊಂಡಿರುವ  ಪ್ರಮುಖ ಕೃತಿಗಳು. where kings and gods meet, the Royal Centre at vijayanagar, (ಜಾನ್ ಎಂ.ಫ್ರಿಡ್ಜ್ ಮತ್ತು ಎಂ.ಎಸ್. ನಾಗರಾಜ ರಾವ್ ಅವರೊಡನೆ) Vijayangar: The Medieval Hindu Capital of Southerner India (ಜಾನ್‌ಗೋಲಿಂಗ್ಸ್ ಮತ್ತು ಜಾನ್ ಎಂ.ಫ್ರಿಡ್ಜ್ ಅವರೊಡನೆ) The Vijayangar Country Style.

ವಿಜಯನಗರದ ಈಚಿನ ಅನ್ವೇಷಣೆಯಲ್ಲಿ ಭಾಗಿಯಾಗಿರುವ ಶ್ರೀಯುತರು ಹಲವಾರು ರ್ವಾಕ  ವರದಿಗಳನ್ನು, ತಮ್ಮ ಶೋಧಗಳನ್ನು ಸಿದ್ಧಪಡಿಸಿದ್ದಾರೆ. ವಿಜಯನಗರದ ಶ್ರೀಮತರ ಕೇರಿಯ ವಾಸ್ತುವಿನ್ಯಾಸ, ದೇವಾಲಯಗಳ  ಸ್ವರೂಪ, ಸ್ಮಾರಕಗಳು ಇತ್ಯಾದಿಗಳನ್ನು ವಿಶ್ಲೇಸುವ ಯತ್ನವನ್ನು ಮಾಡಿದ್ದಾರೆ. ಅವರು ನಡೆಸಿದ ಶೋಧಗಳು  ಹೊಸ ಸಂಗತಿಗಳನ್ನು ನಮಗೆ ತಿಳಿಸಿವೆಯಲ್ಲದೆ, ಈ ಬಗೆಯ ಅಧ್ಯಯನಗಳಿಗೆ ಅವಶ್ಯವಾದ  ಆಧುನಿಕ ತಂತ್ರಗಳನ್ನು, ವಿಧಾನಗಳನ್ನು  ಪರಿಚಯಿಸಿವೆ.

ಕರ್ನಾಟಕ ಚರಿತ್ರೆಯ ಮಹತ್ವದ ತ್ರಿಜ್ಯವೊಂದನ್ನು ಅರಿತು ಕೊಳ್ಳಲು ನೆರವಾಗಿರುವ  ಜಾರ್ಜ್‌ಮಿಶಲ್ ಅವರ ಅಧ್ಯಯನಗಳ ಗಹನತೆಯನ್ನು ಗೌರವಿಸಿ, ಕನ್ನಡ ವಿಶ್ವವಿದ್ಯಾಲಯವು ಅವರಿಗೆ ನಾಡೋಜ ಗೌರವ ಪದವಿಯನ್ನು ನೀಡಿ ಗೌರವಿಸಿದೆ.