ನುಡಿಹಬ್ಬ ೪ – ೧೦ನೇ ಮಾರ್ಚ್ ೧೯೯೫

ನಾಡೋಜರ ಪರಿಚಯ 

1. ಶ್ರೀ ಪು.ತಿ. ನರಸಿಂಹಾಚಾರ್ ಅವರು

ಕನ್ನಡ ವಿಶ್ವವಿದ್ಯಾಲಯದಿಂದ ೧೯೯೬ ರ ನಾಡೋಜ ಗೌರವ ಪದವಿಯನ್ನು ಪಡೆಯುತ್ತಿರುವ ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಅವರು ಕನ್ನಡದ ಹಿರಿಯ ಸಾಹಿತಿ. ಕನ್ನಡ ಜನ ಮಾನಸದ ಗೌರವಕ್ಕೆ ಪಾತ್ರರಾಗಿ ಪುತಿನ ಎಂದೇ ಪ್ರಸಿದ್ಧರಾಗಿರುವ ಶ್ರೀಯುತರು ಕವಿಯಾಗಿ, ನಾಟಕಕಾರರಾಗಿ, ಕಾವ್ಯ ಮೀಮಾಂಸಕರಾಗಿ, ಗದ್ಯ ಲೇಖಕರಾಗಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.

ಮೇಲುಕೋಟಿಯಳ್ಳಿ ೧೯೦೫ ರಲ್ಲಿ ಜನಿಸಿದ ಪುತಿನ ಸಂಪ್ರದಾಯ ನಿಷ್ಠರಾದರೂ ಸಂಕುಚಿತ ಮತೀಯ ಭಾವನೆಯ ಲವಲೇಶವೂ ಇಲ್ಲದ ಮಾನವೀಯ ಅಂತಃಕರಣದ ಚೇತನವಾಗಿದ್ದಾರೆ. ಅವರ ಬಾಲ್ಯಕಾಲದ ಪರಿಸರ ಪುತಿನ ಅವರಲ್ಲಿ ಜಿಜ್ಞಾಸು ಮನೋಧರ್ಮವನ್ನೂ ಚಿಂತನಶೀಲತೆಯನ್ನೂ ಬೆಳೆಸಿತು. ಮೈಸೂರು ವಿಶ್ವವಿದ್ಯಾಲಯದಲ್ಲಿ  ಅವರಿಗೆ ದೊರೆತ ಶೈಕ್ಷಣಿಕ ಪರಿಸರ ಮತ್ತು ಮಿತ್ರವೃಂದ ಅವರ ಬೌದ್ಧಿಕ ಜಗತ್ತಿನ ವಿಸ್ತಾರಕ್ಕೆ ಕಾರಣವಾಯಿತು. ಸೈನಿಕ ಇಲಾಖೆಯ ಉದ್ಯೋಗ ಬದುಕಿನ ಬೇರೆ ಬೇರೆ ಮುಖಗಳ  ಪರಿಚಯವನ್ನು ಒದಗಿಸಿಕೊಟ್ಟಿತು.

ಅರ್ಥದಲ್ಲಿ, ರಮಿಸಿ, ಆದರೆ ವಿರಮಿಸದೆ ಆನಂದದ ಅನುಭವವನ್ನು ಕವಿಯೂ ಓದುಗರೂ ಪಡೆಯುವಂಥ ಕಾವ್ಯವನ್ನು ರಚಿಸಬೇಕೆಂದು  ಕವಿಯಾಗಿ ಪುತಿನ ಅವರ ಆಕಾಂಕ್ಷೆ, ಆನಂದವನ್ನು ಉದ್ದೀಪಿಸುವ ಹಲವು ಭಾವಗಳನ್ನು ತಮ್ಮ ಕವನಗಳಲ್ಲಿ ಅಭಿವ್ಯಕ್ತಿಸುತ್ತಿರುವಾಗಲೇ ಅನುಭವದ ಸ್ವರೂಪವನ್ನು ಕುರಿತ ಚಿಂತನಶೀಲತೆಯನ್ನೂ ವ್ಯಕ್ತಪಡಿಸುವುದು ಪುತಿನ ಅವರ ಕಾವ್ಯದ ವೈಶಿಷ್ಟ್ಯ. ೧೯೩೩ ರಲ್ಲಿ ಪ್ರಕಟವಾದ ಹಣತೆಯಿಂದ ಹಿಡಿದು ೧೯೮೮ರಲ್ಲಿ ಸಂಕಲನಗಳನ್ನೂ ಪ್ರಕಟಸಿದ್ದಾರೆ. ಇಂದೂ ಅವರ ಕಾವ್ಯ ಗಂಭೀರ ಚಿಂತನೆಯ ಚರ್ಚೆಗಳನ್ನು ಪ್ರಚೋದಿಸುತ್ತಿದೆ.

ಅಹಲ್ಯೆ, ಗೋಕುಲ ನಿರ್ಗಮನ, ಸತ್ಯಾಯನ ಹರಿಶ್ಚಂದ್ರ ಇವು ಕನ್ನಡ ಹೆಮ್ಮೆ ಪಡುವ ನಾಟಕಗಳು. ಪುತಿನ ಅವರ ನಾಟಕಗಳಲ್ಲಿ ಪುರಾಣದ ವ್ಯಕ್ತಿಗಳ ಕಥೆ ಸಮಕಾಲೀನ ಬದುಕಿನ ಸಮಸ್ಯೆಗಳಿಗೆ ಹಿಡಿದ ಕನ್ನಡಿಯಾಗುತ್ತದೆ. ಅವರ ಗೀತನಾಟಕಗಳು ಸಾಹಿತ್ಯಕ್ಕೆ ಹೇಗೋ ಹಾಗೆ ಸಂಗೀತ ಕ್ಷೇತ್ರಕ್ಕೂ ಮಹತ್ವದ ಕಾಣಿಕೆಗಳು. ಪುತಿನ ಅವರ ರಸಪ್ರಜ್ಞೆ  ಮತ್ತು  ಕಾವ್ಯ ಕುತೂಹಲಗಳು ಕಾವ್ಯ ಮೀಮಾಂಸೆಗೆ ಸಂಬಂಧಿಸಿದ ಅನೇಕ ಹೊಸ ಚಿಂತನೆಗಳೆಗೆ  ಕಾರಣವಾಗಿದೆ.

ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿರುವ ಶ್ರೀ ಪು.ತಿ.ನರಸಿಂಹಾಚಾರ್ ಅವರಿಗೆ ಕನ್ನಡ ವಿಶ್ವವಿದ್ಯಾಲಯವು ನಾಡೋಜ ಗೌರವ ಪದವಿಯನ್ನು ಪ್ರದಾನ ಮಾಡಿದೆ.

2. ಶ್ರೀ ಪಾಟೀಲ ಪುಟ್ಟಪ್ಪ ಅವರು

patil_puttappa

ಕನ್ನಡ ವಿಶ್ವವಿದ್ಯಾಲಯದಿಂದ ೧೯೯೬ರ ನಾಡೋಜ ಗೌರವ ಪದವಿಯನ್ನು ಪಡೆಯುತ್ತಿರುವ ಶ್ರೀ ಪಾಟೀಲ ಪುಟ್ಟಪ್ಪನವರು ಸ್ವಾತಂತ್ರ್ಯ ಹೋರಾಟಗಾರರಾಗಿ, ಪತ್ರಿಕೋದ್ಯಮಿಯಾಗಿ, ಬರಹಗಾರರಾಗಿ ರಾಜ್ಯಸಭೆಯ ಸದಸ್ಯರಾಗಿ, ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಕನ್ನಡ ಸಾರ್ವಜನಿಕ ಬದುಕಿನ ಗಣ್ಯ ವ್ಯಕ್ತಿಯಾಗಿದ್ದಾರೆ.

೧೯೨೧ರ ಜನವರಿ ೧೪ ರಂದು ಧಾರವಾಡ ಹಾವೇರಿ ತಾಲ್ಲೂಕಿನ ಕುರುಬಗೊಂಡ ಹಳ್ಳಿಯಲ್ಲಿ ಜನಿಸಿದ ಪಾಟೀಲ ಪುಟ್ಟಪ್ಪನವರು ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡರು. ಈ ಕಾರಣದಿಂದ ಅವರ ಓದಿಗೆ ಆಡಚಣೆಯಾದರೂ ಬೆಳಗಾವಿಯಲ್ಲಿ ಕಾನೂನು ಪದವಿಯನ್ನೂ ಕ್ಯಾಲಿಫೋರ್ನಿಯಾದಲ್ಲಿ, ಪತ್ರಿಕೋದ್ಯಮ ಪದವಿಯನ್ನೂ ಪಡೆದುಕೊಂಡರು.

೧೯೫೪ರಲ್ಲಿ ಆರಂಭವಾಗಿ ಇಂದಿಗೂ ಪ್ರಕಟವಾಗುತ್ತಿರುವ ಪ್ರಪಂಚ ವಾರಪತ್ರಿಕೆಯೊಂದಿಗೆ ಪಾಟೀಲ ಪುಟ್ಟಪ್ಪನವರ ಹೆಸರು ಬಿಡಿಸಲಾರದಂತೆ ಸೇರಿಹೋಗಿದೆ. ವಿಶಾಲ ಕರ್ನಾಟಕ, ನವಯುಗ ಸಂಗಮ, ವಿಶ್ವವಾಣಿ, ಮನೋರಮ, ಸ್ತ್ರೀ ಎಂಬ ಹಲವಾರು ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ, ಮಾಸಿಕ, ದ್ವೈಮಾಸಿಕ, ಸಿನಿಮಾಪತ್ರಿಕೆಗಳ ಸ್ಥಾಪಕ, ಸಂಪಾದಕ, ಪ್ರಕಾಶಕರಾಗಿ ಪಾಟೀಲ ಪುಟ್ಟಪ್ಪನವರು ಕನ್ನಡ ಪತ್ರಿಕೋದ್ಯಮದ ಶ್ರೀಮಂತಿಕೆಗೆ ಕಾರಣರಾಗಿದ್ದಾರೆ. ಖಚಿತವಾದ ದೃಷ್ಟಿಕೋನ, ಖಡಾಖಂಡಿತವಾದ ಮಾತು, ತನ್ನ ನಿಲವನ್ನು ದೃಢವಾಗಿ ಉಳಿಸಿಕೊಳ್ಳುವ ಛಲ ಇವೆಲ್ಲ ಪಾಟೀಲ ಪುಟ್ಟಪ್ಪನವರ ಪತ್ರಿಕಾ ಬರಹದಲ್ಲಿ ಎದ್ದುಕಾಣುವ ಗುಣಗಳಾಗಿವೆ. ಅರ್ಥ ಸ್ಪಷ್ಟತೆಗೆ ಎಂದೂ ಕುಂದುಬಾರದ ಭಾಷೆಯನ್ನು ಬಳಸುವ ಲೇಖಕರಲ್ಲಿ ಪಾಟೀಲ ಪುಟ್ಟಪ್ಪನವರು ಅಗ್ರಗಣ್ಯರು.

ಲೇಖಕರಾಗಿ ಪಾಟೀಲ ಪುಟ್ಟಪ್ಪನವರು ಸಮಾಜ ವಿಮರ್ಶೆಯ ಜೊತೆ ಜೊತೆಗೆ ಸುಂದರ ಭವಿಷ್ಯದ ಆದರ್ಶಮಯ ಕನಸುಗಳನ್ನೂ ಕಟ್ಟಿಕೊಟ್ಟಿದ್ದಾರೆ. ಇದುವರೆಗೆ ಪ್ರಕಟವಾಗಿರುವ ಅವರ ಇಪ್ಪತೈದಕ್ಕೂ ಹೆಚ್ಚಿನ ಕೃತಿಗಳಲ್ಲಿ ಕನ್ನಡನಾಡು, ಭಾಷೆ, ಭಾರತದ ಸಮಕಾಲೀನ ಪರಿಸ್ಥಿತಿಗಳನ್ನು ಕುರಿತ ಚಿಂತನೆಗಳು ವ್ಯಕ್ತವಾಗಿದೆ. ಹೊಸದನ್ನು ಕಟ್ಟೋಣ ನಾವು ನನ್ನದು ಈ ನಾಡು ನಮ್ಮದು ಈ ಭಾರತ ಭೂಮಿ  ಎಂಬ ಅವರ ಕೃತಿಗಳ ಶಿರ್ಷಿಕೆಗಳೇ ಪಾಟೀಲ ಪುಟ್ಟಪ್ಪನವರ ಆಶಾವಾದ, ಹೆಮ್ಮೆ, ನಾಡು ಮತ್ತು ದೇಶಗಳ ಪರಸ್ಪರ ಸಂಬಂಧದ ಬಗೆಗಿನ ದೃಷ್ಠಿಕೋನಗಳನ್ನು  ಸ್ಪಷ್ಟಪಡಿಸುತ್ತದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಗಳು ಸದೃಢವಾಗಿ, ಸತ್ವಯುತವಾಗಿ, ವಿಕಾಸ ಹೊಂದಬೇಕೆಂಬ ಅವರ ಹಂಬಲ ಕರ್ನಾಟಕದ ಕಥೆ ಮತ್ತು ಕನ್ನಡ ಕೃತಿಗಳಲ್ಲಿ ಕಾಣುತ್ತದೆ.

ಪಾಟೀಲ ಪುಟ್ಟಪ್ಪನವರು ಕನ್ನಡದ ಬಗ್ಗೆ ಕೇವಲ ಬರೆದು ತೃಪ್ತರಾದವರಲ್ಲ. ಅವರು ಕನ್ನಡ ಕಾವಲು ಸಮಿತಿ, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ, ಅಖಿಲ ಕರ್ನಾಟಕ ಕನ್ನಡ ಕೇಂದ್ರ ಕ್ರಿಯಾಸಮಿತಿ, ಅಖಿಲ ಕರ್ನಾಟಕ ಕನ್ನಡ ಹೋರಾಟ ಸಂಘಗಳ ಒಕ್ಕೂಟ ಇವುಗಳ ಅಧ್ಯಕ್ಷರಾಗಿ ಕನ್ನಡ ಪರ ಹೋರಾಟಗಳ ಮುಂಚೂಣಿಯಲ್ಲಿದ್ದಾರೆ.

ಕನ್ನಡ ಪತ್ರಿಕೋದ್ಯಮ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಶ್ರೀ ಪಾಟೀಲ ಪುಟ್ಟಪ್ಪನವರಿಗೆ ಕನ್ನಡ ವಿಶ್ವವಿದ್ಯಾಲಯವು ನಾಡೋಜ ಗೌರವ ಪದವಿಯನ್ನು ಪ್ರದಾನ ಮಾಡಿದೆ.