ಪ್ರಸ್ತಾವನೆ

ವಿಶ್ವವಿದ್ಯಾಲಯ ಹಾಗೂ ಮಾನ್ಯತಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧ್ಯಾಪಕರ ನೇಮಕಾತಿ ಹಾಗೂ ಮುಂಬಡ್ತಿಗೆ ಅಗತ್ಯವಿರುವ ಕನಿಷ್ಠ ಶೈಕ್ಷಣಿಕ ಅರ್ಹತೆಗಳನ್ನು ಯು.ಜಿ.ಸಿ. (ವಿಶ್ವವಿದ್ಯಾಲಯ ಧನಸಹಾಯಗಳ ಆಯೋಗ) ಪರಿಗಣಿಸಿ ಅನುಮೋದನೆ ನೀಡಿದೆ. ಇದಕ್ಕೆ ಸಂಬಂಧಿಸಿದ (ಮೂರನೆಯ ತಿದ್ದುಪಡಿ) ನಿಯಮಗಳು ೨೦೦೯ ಹಾಗೂ ಯು.ಜಿ.ಸಿ.ಯು ಎಂ.ಫಿಲ್/ಪಿಎಚ್.ಡಿ. ಪದವಿಗಾಗಿ ನಿರ್ಬಂಧಿಸಿರುವ ಕನಿಷ್ಠ ಗುಣಮಟ್ಟ ಹಾಗೂ ಪ್ರಕ್ರಿಯೆಗಳ ನಿಯಮಗಳು ೨೦೦೯ ಇವೆರಡನ್ನು ದಿನಾಂಕ: ೧೧.೦೭.೨೦೦೯ರಂದು ಭಾರತದ ಗೆಜೆಟ್‌ನಲ್ಲಿ ಅಧಿಸೂಚನೆ ಮೂಲಕ ಪ್ರಕಟಿಸಲಾಗಿದೆ. ಹಾಗೂ ಪತ್ರ ಸಂ. ಎಫ್.ಸಂ ೧-೧ (೨೦೦೨)(ಪಿಎಸ್) ಪಿಟಿ ಫೈಲ್ III, ದಿನಾಂಕ: ೨೦.೦೮.೨೦೦೯ ಮೂಲಕ ಸದ್ಯ ಚಾಲ್ತಿಯಲ್ಲಿರುವ ನಿಯಮಗಳಿಗೆ ಅಗತ್ಯ ತಿದ್ದುಪಡಿ ತಂದು ಅದಕ್ಕೆ ಅನುಗುಣವಾಗಿ ಕ್ರಮವಹಿಸಬೇಕೆಂದು ಎಲ್ಲ ವಿಶ್ವವಿದ್ಯಾಲಯಗಳಿಗೂ ಯು.ಜಿ.ಸಿ. ನಿರ್ದೇಶಿಸಿದೆ.

ಅಧ್ಯಾಪಕರ ನೇಮಕಾತಿಗೆ (ಮೂರನೆಯ ತಿದ್ದುಪಡಿ) ಅಗತ್ಯವಿರುವ ಕನಿಷ್ಠ ವಿದ್ಯಾರ್ಹತೆಯ ನಿಯಮಗಳ ಪ್ರಕಾರ ವಿಶ್ವವಿದ್ಯಾಲಯಗಳು/ಕಾಲೇಜುಗಳು/ಶೈಕ್ಷಣಿಕ ಸಂಸ್ಥೆಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿ ಹೊಂದಲು ಎನ್.ಇ.ಟಿ/ಎಸ್.ಎಲ್.ಇ.ಟಿ.ಯಲ್ಲಿ ಉತ್ತೀರ್ಣರಾಗಿರಬೇಕೆಂಬ ಕನಿಷ್ಠ ಅರ್ಹತೆಯ ಷರತ್ತು ಹಾಗೆಯೇ ಮುಂದುವರಿದಿದೆ. ಆದರೂ ವಿಶ್ವವಿದ್ಯಾಲಯ ಧನಸಹಾಯಗಳ ಆಯೋಗ (ಪಿಎಚ್.ಡಿ. ಪದವಿಯ ಕನಿಷ್ಠ ಗುಣಮಟ್ಟ ಹಾಗೂ ಪ್ರಕ್ರಿಯೆ) ನಿಯಮಗಳು, ೨೦೦೯ (University Grants Commission (Minimum Standards and Procedure for Award of Ph.D. Degree) Regulation ೨೦೦೯)ಕ್ಕೆ ಅನುಗುಣವಾಗಿ ಪಿಎಚ್.ಡಿ. ಅಧ್ಯಯನ ಕೈಗೊಂಡು ಪದವಿಯನ್ನು ಹೊಂದಿದ ವಿದ್ಯಾರ್ಥಿಗಳಿಗೆ ವಿವಿಧ ವಿಶ್ವವಿದ್ಯಾಲಯಗಳಲ್ಲಿ/ಕಾಲೇಜುಗಳಲ್ಲಿ/ಶೈಕ್ಷಣಿಕ ಸಂಸ್ಥೆಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಅಥವಾ ತತ್ಸಮಾನ ಹುದ್ದೆಗೆ ನೇಮಕಾತಿ ಹೊಂದಲು ಎನ್.ಇ.ಟಿ/ಎಸ್.ಎಲ್.ಇ.ಟಿ. ಕನಿಷ್ಠ ಅರ್ಹತೆಯನ್ನು ಹೊಂದಿರಬೇಕೆಂಬ ಷರತ್ತಿನಿಂದ ವಿನಾಯಿತಿ ನೀಡಲಾಗಿದೆ.

ಈ ಮಧ್ಯೆ ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಪರಿಷತ್ತು ದಿನಾಂಕ: ೦೭.೧೨.೨೦೧೦ರಂದು ಅಧಿಸೂಚನೆ ಸಂಖ್ಯೆ: ಕೆ.ಎಸ್.ಎಚ್.ಇ.ಸಿ/ಕಮಿಟಿ/೨೦೧೦-೧೧/೩೬೯, ಮೂಲಕ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಟಿ.ಸಿ. ಶಿವಶಂಕರಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯಗಳ ಡಾಕ್ಟರಲ್ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ನಿಯಮಗಳನ್ನು ರೂಪಿಸಲು ಒಂದು ಸಮಿತಿಯನ್ನು ರಚಿಸಿತ್ತು.

ಸದರಿ ಸಮಿತಿಯು ಪಿಎಚ್.ಡಿ. ಪದವಿಗೆ ಸಂಬಂಧಿಸಿದ ಕನಿಷ್ಠ ಗುಣಮಟ್ಟ ಹಾಗೂ ಪ್ರಕ್ರಿಯೆ ನಿಯಮಗಳು, ೨೦೦೯ (Minimum Standards and procedure for Award of Ph.D. Degree Regulation 2009)ರಲ್ಲಿ ನಿರ್ದಿಷ್ಟಪಡಿಸಿದ ಷರತ್ತುಗಳನ್ನು/ಪ್ರಕ್ರಿಯೆಗಳನ್ನು ಒಳಗೊಂಡಂತೆ ಪಿಎಚ್.ಡಿ. ಪದವಿಯನ್ನು ನಿರ್ಬಂಧಿಸುವ ಸಾಮಾನ್ಯ ನಿಯಮಗಳನ್ನು ರೂಪಿಸಿದೆ. ಈ ಸಮಿತಿಯು ರೂಪಿಸಿದ ನಿಯಮಾವಳಿಗಳನ್ನು ಪರಿಶೀಲಿಸಿ ಅಂತಿಮಗೊಳಿಸಲು ಕನ್ನಡ ವಿಶ್ವವಿದ್ಯಾಲಯವು ಕುಲಪತಿ ಅವರ ಅಧ್ಯಕ್ಷತೆಯಲ್ಲಿ ವಿವಿಧ ನಿಕಾಯಗಳ ಡೀನ್‌ರು ಹಾಗೂ ಮುಖ್ಯಸ್ಥರನ್ನೊಳಗೊಂಡಂತೆ ಒಂದು ಸಮಿತಿಯನ್ನು ರಚಿಸಲಾಗಿತ್ತು. ಸದರಿ ಸಮಿತಿಯು ರೂಪಿಸಿದ ನಿಯಮಾವಳಿಗಳನ್ನು ಜಾರಿಗೊಳಿಸಲು ಏಪ್ರಿಲ್ ೨೩, ೨೦೧೨ರಂದು ನಡೆದ ಕಾರ‍್ಯಕಾರಿ ಸಮಿತಿಯ ೧೪೩ನೆಯ ಸಭೆಯು ಅನುಮೋದನೆ ನೀಡಿದೆ.

ಪ್ರಮುಖ ಅಂಶಗಳು

       ೧. ಪ್ರವೇಶಾವಕಾಶವನ್ನು ಪ್ರವೇಶ ಪರೀಕ್ಷೆಯ ಮೂಲಕ (ಲಿಖಿತ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆ) ಕಲ್ಪಿಸಲಾಗುವುದು. ರಾಜ್ಯ ಸರ್ಕಾರದ ಅರ್ಹತೆ ಹಾಗೂ ಮೀಸಲಾತಿ ನಿಯಮಗಳಿಗೆ ಅನುಗುಣವಾಗಿ ಈ

ಪ್ರಕ್ರಿಯೆಯನ್ನು ನಡೆಸಲಾಗುತ್ತದೆ.

       ೨. ಲಭ್ಯವಿರುವ ಮಾರ್ಗದರ್ಶಕರಲ್ಲಿ ಲಭ್ಯವಿರುವ ರಿಕ್ತ ಸ್ಥಾನಗಳಿಗೆ ಅನುಗುಣವಾಗಿ ಮಾತ್ರ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ಕಲ್ಪಿಸಲಾಗುವುದು.

       ೩. ಆಯ್ಕೆಯಾದ ವಿದ್ಯಾರ್ಥಿಯು ಕೋರ್ಸ್‌ವರ್ಕ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಅದನ್ನು ಪಿಎಚ್.ಡಿ. ಅಧ್ಯಯನಕ್ಕೆ ಪೂರ್ವ ಸಿದ್ಧತೆ ಎಂದು ಪರಿಗಣಿಸಲಾಗುವುದು.

       ೪. ಸಂಶೋಧನೆಯನ್ನು ಪೂರ್ಣಕಾಲಿಕ (ಆಂತರಿಕ) ವಿದ್ಯಾರ್ಥಿಯಾಗಿ ಅಥವಾ ಅರೆಕಾಲಿಕ (ಬಾಹ್ಯ) ವಿದ್ಯಾರ್ಥಿಯಾಗಿ ಕೈಗೊಳ್ಳಬಹುದು.

೧. ಶೀರ್ಷಿಕೆ ಮತ್ತು ಆರಂಭ

ಈ ನಿಯಮಗಳನ್ನು ’ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ೨೦೧೧ರ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ.) ಪದವಿಗಳನ್ನು ನಿರ್ಬಂಧಿಸುವ ಸಾಮಾನ್ಯ ನಿಯಮಗಳು’ ಎಂದು ಕರೆಯತಕ್ಕದ್ದು.

ಈ ನಿಯಮಗಳು ಕುಲಾಧಿಪತಿಗಳ ಅಂಕಿತ ದೊರೆತ ದಿನಾಂಕದಿಂದ ಜಾರಿ ಪ್ರಕ್ರಿಯೆ ನಡೆಯುತ್ತದೆ.

೨. ಪರಿಭಾಷೆಗಳ ವ್ಯಾಖ್ಯಾನ – ವಿವರಣೆ

ಈ ನಿಯಮಗಳನ್ನು ಕೆಳಗಿನಂತೆ ನಿರ್ದಿಷ್ಟವಾಗಿ ವ್ಯಾಖ್ಯಾನಿಸಲಾಗಿದೆ.

’ವಿಶ್ವವಿದ್ಯಾಲಯ’ ಎಂದರೆ ಕನ್ನಡ ವಿಶ್ವವಿದ್ಯಾಲಯದ ೧೯೯೧ರ ಅಧಿನಿಯಮ ಸಂಖ್ಯೆ ೨೩ರ ಪ್ರಕರಣದಡಿ ಸ್ಥಾಪಿತವಾದ ವಿಶ್ವವಿದ್ಯಾಲಯ.

’ಪದವಿ’ ಎಂದರೆ ಡಾಕ್ಟರ್ ಆಫ್ ಫಿಲಾಸಪಿ ಪದವಿ (ಸಂಕ್ಷಿಪ್ತವಾಗಿ ಪಿಎಚ್.ಡಿ.)

’ಶುಲ್ಕ’ ಎಂದರೆ ಪಿಎಚ್.ಡಿ. ಅಧ್ಯಯನಕ್ಕಾಗಿ ವಿಶ್ವವಿದ್ಯಾಲಯ ನಿಗದಿಪಡಿಸಿದ ಶುಲ್ಕ

’ಪ್ರವೇಶ ಪರೀಕ್ಷೆ’ ಎಂದರೆ ಪಿಎಚ್.ಡಿ. ಅಧ್ಯಯನಕ್ಕಾಗಿ ನೋಂದಣಿ ಪಡೆಯಲು ಅರ್ಹರಾಗುವುದಕ್ಕೆ ವಿದ್ಯಾರ್ಥಿಗಳು ತೆಗೆದುಕೊಳ್ಳುವ ಪರೀಕ್ಷೆ

’ನೋಂದಣಿ ಪೂರ್ವ ಸಂವಾದ’ ಎಂದರೆ ಸಂಶೋಧನೆ ಕೈಗೊಳ್ಳಲು ಸಿದ್ಧತೆ ಮಾಡಿಕೊಂಡಿದ್ದೇನೆ ಎಂದು ಸಾಬೀತುಪಡಿಸಲು ವಿದ್ಯಾರ್ಥಿ ಡಾಕ್ಟರಲ್/ತಜ್ಞರ ಸಮಿತಿಯ ಮುಂದೆ ತನ್ನ ಪಿಎಚ್.ಡಿ. ಪ್ರಸ್ತಾವದ                     ರೂಪುರೇಷೆಗಳನ್ನು ಮಂಡಿಸಲು ನಡೆಸುವ ಸಂವಾದ.

 ’ಕೋರ್ಸ್‌ವರ್ಕ್’ (ನೋಂದಣಿಪೂರ್ವ ಕಮ್ಮಟ) ಎಂದರೆ ಪಿಎಚ್.ಡಿ. ಕಾರ್ಯಕ್ರಮದ ಭಾಗವಾಗಿ ನಿರ್ದಿಷ್ಟಪಡಿಸಲಾದ ಅಧ್ಯಯನ ಕಮ್ಮಟ. ಇದನ್ನು ಪ್ರವೇಶ ಪಡೆದ ಮೊದಲ ವರ್ಷದಲ್ಲಿ ವಿದ್ಯಾರ್ಥಿಯು ಯಶಸ್ವಿಯಾಗಿ      ಪೂರ್ಣಗೊಳಿಸುವುದು ಕಡ್ಡಾಯ.

’ಮಾರ್ಗದರ್ಶಕರು’ ಎಂದರೆ ವಿದ್ಯಾರ್ಥಿಗಳ ಪಿಎಚ್.ಡಿ. ಅಧ್ಯಯನಕ್ಕೆ ಮಾರ್ಗದರ್ಶನ ನೀಡುವವರು. ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು ಮತ್ತು     ವಿಶ್ವವಿದ್ಯಾಲಯದಿಂದ   ಮಾನ್ಯತೆ ಪಡೆದ ಅರ್ಹ ಅಧ್ಯಾಪಕರು.

’ಸಹ ಮಾರ್ಗದರ್ಶಕರು’ ಎಂದರೆ ಅಂತರ್‌ಶಿಸ್ತೀಯ ಅಧ್ಯಯನದ ಸಂದರ್ಭಗಳಲ್ಲಿ ಮಾರ್ಗದರ್ಶಕರ ಜೊತೆಗೆ ಎರಡನೆಯ ಮಾರ್ಗದರ್ಶಕರಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವವರು. ಇವರು    ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಸಂಶೋಧನ ಮಾರ್ಗದರ್ಶಕರು.

’ವಿಭಾಗದ ಸಮಿತಿ’ ಎಂದರೆ ವಿಶ್ವವಿದ್ಯಾಲಯದ ನಿಗದಿತ ವಿಭಾಗದ ಪಿಎಚ್.ಡಿ. ಪದವಿ ಹೊಂದಿದ ಅಧ್ಯಾಪಕರನ್ನು ಒಳಗೊಂಡ ಸಮಿತಿ.

’ಪಿಎಚ್.ಡಿ. ಸಮಿತಿ’ (ರಿಸರ್ಚ್ ಎಡ್ವೈಸರಿ ಕಮಿಟಿ) ಎಂದರೆ ವಿಶ್ವವಿದ್ಯಾಲಯವು ರಚಿಸಿದ ಸಮಿತಿಯಾಗಿದ್ದು ವಿದ್ಯಾರ್ಥಿಗಳಿಂದ ಸಲ್ಲಿಕೆಯಾದ ಪ್ರಸ್ತಾವಗಳನ್ನು ಪರಿಶೀಲಿಸಿ ಅರ್ಹವೆಂದು ಪರಿಗಣಿಸಿದ ಅರ್ಜಿ      ಪ್ರಸ್ತಾವಗಳನ್ನು ನೋಂದಣಿಗಾಗಿ ಅಧ್ಯಯನಾಂಗಕ್ಕೆ ಶಿಫಾರಸ್ಸು ಮಾಡುವುದು, ಮಹಾಪ್ರಬಂಧ ಸಲ್ಲಿಕೆಯ ಪೂರ್ವ ಸಂವಾದ ಗೋಷ್ಠಿಯಲ್ಲಿ (ಕಲೋಕಿಯಂನಲ್ಲಿ) ಮಂಡಿಸಿದ ಅಂತಿಮ ಸಾರಲೇಖವನ್ನು ಸಮಗ್ರವಾಗಿ ಪರಿಶೀಲಿಸಿ ಮಹಾಪ್ರಬಂಧವನ್ನು ಅಧ್ಯಯನಾಂಗಕ್ಕೆ ಸಲ್ಲಿಸಲು ಅನುಮತಿ ನೀಡುವುದು. ಈ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸಲು ರಚನೆಗೊಂಡ ಸಮಿತಿ ಇದಾಗಿದೆ.

’ಅಧ್ಯಯನ ಮಂಡಳಿ’ ಎಂದರೆ ಆಯಾ ವಿಭಾಗ ಅಧ್ಯಯನ ಶಿಸ್ತು/ವಿಷಯಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕ ಉಸ್ತುವಾರಿ ಹೊಂದಿದ ಬಾಹ್ಯ ತಜ್ಞರನ್ನೊಳಗೊಂಡ ಸಮಿತಿ.

’ಸಂಶೋಧನ ಪ್ರಸ್ತಾವ’ ಎಂದರೆ ಪಿಎಚ್.ಡಿ. ಅಧ್ಯಯನದ ತಾತ್ಕಾಲಿಕ ನೋಂದಣಿಗಾಗಿ ಅರ್ಜಿಯೊಂದಿಗೆ ವಿದ್ಯಾರ್ಥಿಯು ಉದ್ದೇಶಿತ ಸಂಶೋಧನೆಯ ವಿಷಯವನ್ನು ಕುರಿತು ಸಿದ್ಧಪಡಿಸುವ ಕ್ರಮಾಗತ ವಿವರ ಅಥವಾ    ಸಂಶೋಧನೆಯ ಉದ್ದೇಶ, ವಿಧಾನ, ಯೋಜನಾಕ್ರಮ ಇತ್ಯಾದಿಗಳನ್ನು ಒಳಗೊಂಡ ಅಧ್ಯಯನದ ರೂಪುರೇಷೆ.

ಸಾರಲೇಖ’ ಎಂದರೆ ಸಂಶೋಧನೆ ಪೂರ್ಣಗೊಂಡ ನಂತರ ವಿದ್ಯಾರ್ಥಿಯು ಸಲ್ಲಿಸುವ ಮಹಾಪ್ರಬಂಧದ ಸಾರರೂಪದ ಸಂಕ್ಷಿಪ್ತ ಬರವಣಿಗೆ.

’ಪ್ರಾಯೋಜಿತ ವಿದ್ಯಾರ್ಥಿ’ ಎಂದರೆ ಕನ್ನಡ ವಿಶ್ವವಿದ್ಯಾಲಯವನ್ನು ಹೊರತುಪಡಿಸಿ ಇತರೆ ಶೈಕ್ಷಣಿಕ ಸಂಸ್ಥೆ ಅಥವಾ ಸಂಶೋಧನ ಸಂಸ್ಥೆ ಮತ್ತು ಸರ್ಕಾರಿ, ಖಾಸಗಿ ಸಂಘಟನೆಗಳಲ್ಲಿ ಖಾಯಂ ಆಗಿ ಸೇವೆ ಸಲ್ಲಿಸುತ್ತಿರುವ ನೌಕರರು, ಎಫ್.ಐ.ಪಿ/ಕ್ಯೂ.ಐ.ಪಿ. ಅಡಿ ಅಧ್ಯಯನ ಮಾಡುವ ಅಧ್ಯಾಪಕರನ್ನು ಒಳಗೊಂಡಂತೆ ಪಿಎಚ್.ಡಿ. ಅಧ್ಯಯನಕ್ಕಾಗಿ ಪ್ರತಿನಿಯೋಜನೆಗೊಂಡವರು.

’ವಿದೇಶಿ ವಿದ್ಯಾರ್ಥಿಗಳು’ ಎಂದರೆ ಸ್ನಾತಕೋತ್ತರ ಪದವಿ ಅಥವಾ ಯು.ಜಿ.ಸಿ.ಯಿಂದ ಮಾನ್ಯತೆ ಪಡೆದ ತತ್ಸಮಾನ ಪದವಿ ಪಡೆದ ಅಥವಾ ವಿದೇಶಿ ವಿಶ್ವವಿದ್ಯಾಲಯ/ಶೈಕ್ಷಣಿಕ ಸಂಸ್ಥೆಗಳಿಂದ ಮಾನ್ಯತೆ ಪಡೆದ ಸ್ನಾತಕೋತ್ತರ ಪದವಿಯನ್ನು ಹೊಂದಿದ ವಿದೇಶಿ ನಾಗರಿಕರಾಗಿರುವ ವಿದ್ಯಾರ್ಥಿಗಳು.

’ಅಧ್ಯಯನ ಮಂಡಳಿ’ ಎಂದರೆ ಕನ್ನಡ ವಿಶ್ವವಿದ್ಯಾಲಯದ ೧೯೯೧ರ ಅಧಿನಿಯಮ ಸಂಖ್ಯೆ ೨೭ರ ಪ್ರಕರಣದಡಿಯಲ್ಲಿ ರಚನೆಗೊಂಡ ಶೈಕ್ಷಣಿಕ ಮಂಡಳಿ.

’ರೆಫರೀಡ್ ನಿಯತಕಾಲಿಕೆ’ ಎಂದರೆ ಆಯ್ದ ಕ್ಷೇತ್ರದ ತಜ್ಞರ ಸಮಿತಿಯಿಂದ ಪರಿಶೀಲನೆಗೊಳಪಟ್ಟು ಆಯ್ಕೆಗೊಂಡ ಲೇಖನ, ಸಂಶೋಧನ ಬರಹಗಳನ್ನು ಪ್ರಕಟಿಸುವ ವೃತ್ತಿಪರ ಅಥವಾ ಶೈಕ್ಷಣಿಕ ಪತ್ರಿಕೆ ಅಥವಾ ಪ್ರಕಟಣೆ.

೩. ವಿಷಯ/ಸಂಶೋಧನೆಯ ಶೀರ್ಷಿಕೆ ಹಾಗೂ ಸಂಶೋಧನ ಕಾರ್ಯಕ್ರಮಗಳ ಸ್ವರೂಪ

ಸಂಶೋಧನ ವಿಷಯ ಸಾಮಾನ್ಯವಾಗಿ ಸ್ನಾತಕೋತ್ತರ ಅಧ್ಯಯನದಲ್ಲಿ ವಿದ್ಯಾರ್ಥಿಯು ಆಯ್ಕೆ ಮಾಡಿಕೊಂಡಿದ್ದ ಪ್ರಧಾನ ಜ್ಞಾನ ಶಾಖೆಗೆ ಸಂಬಂಧಿಸಿದ್ದಾಗಿರಬೇಕು.

ಅಂತರ್‌ಶಿಸ್ತೀಯ ಸಂಶೋಧನ ಅಧ್ಯಯನ ಆದರೆ ಸ್ನಾತಕೋತ್ತರ ಪದವಿಯಲ್ಲಿ ಆಯ್ಕೆ ಮಾಡಿಕೊಂಡಿದ್ದ ವಿಷಯಕ್ಕಿಂತ ಬೇರೆಯಾದ ಮತ್ತೊಂದು ವಿಷಯವನ್ನು ಸಂಶೋಧನ ವಿಷಯವಾಗಿ ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಯು ಬಯಸಿದಲ್ಲಿ ಅಥವಾ ಅಂತರ್‌ಶಿಸ್ತೀಯ ಸ್ವರೂಪವುಳ್ಳ ವಿಷಯವಾಗಿದ್ದಲ್ಲಿ ಈ ಕೆಳಕಂಡಂತೆ ನೋಂದಣಿ ಪಡೆಯಲು ಅರ್ಹರಾಗಿರುತ್ತಾರೆ.

ಪಿಎಚ್.ಡಿ. ಪದವಿಗಾಗಿ ಅಧ್ಯಯನ ಮಾಡುವ ವಿಭಾಗದ ಶಿಸ್ತಿಗೆ/ವಿಷಯಕ್ಕೆ ಸಂಬಂಧಿಸಿದ ಅಧ್ಯಯನ ಮಂಡಳಿಯಿಂದ ಅನುಮೋದನೆಗೊಂಡ ಹಾಗೂ ಪಿಎಚ್.ಡಿ. ಸಮಿತಿ (ಡಾಕ್ಟರಲ್ ಕಮಿಟಿ)ಯು ಶಿಫಾರಸ್ಸು ಮಾಡಿದ ಸಂಶೋಧನ ವಿಷಯವನ್ನು ಒಳಗೊಂಡ ಪ್ರಸ್ತಾವನೆಯ ಆಧಾರದ ಮೇಲೆ ಪಿಎಚ್.ಡಿ. ಅಧ್ಯಯನಕ್ಕೆ ನೋಂದಣಿ ನೀಡಲಾಗುವುದು. ಇಂತಹ ಪ್ರಕರಣಗಳಲ್ಲಿ ಪಿಎಚ್.ಡಿ. ಅಧ್ಯಯನಕ್ಕೆ ನೋಂದಾಯಿಸಿಕೊಂಡ ವಿಷಯ/ಶಿಸ್ತಿಗೆ ಅನುಗುಣವಾಗಿಯೇ ಪದವಿಯನ್ನು ಪ್ರಧಾನ ಮಾಡಲಾಗುತ್ತದೆ. ಮುಂದುವರಿದು ಮಾರ್ಗದರ್ಶಕರಿಗೆ ಮತ್ತೊಂದು ವಿಷಯ/ಶಿಸ್ತು ಕುರಿತಂತೆ (ಅಂದರೆ, ಸ್ನಾತಕೋತ್ತರ ಪದವಿಯಲ್ಲಿ ವಿದ್ಯಾರ್ಥಿ ಆಯ್ಕೆ ಮಾಡಿಕೊಂಡಿದ್ದ ವಿಷಯ) ಮಾರ್ಗದರ್ಶನ ಮಾಡಲು ಸಹಮಾರ್ಗದರ್ಶಕರನ್ನು ಆಯ್ಕೆಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ.

ವಿದ್ಯಾರ್ಥಿಯು ತಾನು ಸ್ನಾತಕೋತ್ತರ ಪದವಿಯಲ್ಲಿ ಅಭ್ಯಾಸ ಮಾಡಿದ ವಿಷಯ/ಶಿಸ್ತಿಗಿಂತಲೂ ಬೇರೆಯೇ ಆದ ಸಹವರ್ತಿ ವಿಷಯದಲ್ಲಿ ಪಿಎಚ್.ಡಿ. ಅಧ್ಯಯನ ಮಾಡಬಯಸಿದ ಸಂದರ್ಭದಲ್ಲಿ ಅಧ್ಯಯನ ಮಂಡಳಿಯ ಅಧ್ಯಕ್ಷರನ್ನು ಒಳಗೊಂಡ ವಿಶೇಷ ಸಮಿತಿಯು ವಿದ್ಯಾರ್ಥಿಯ ಸಂಶೋಧನ ಪ್ರಸ್ತಾವವನ್ನು ಆಮೂಲಾಗ್ರವಾಗಿ ಪರಿಶೀಲಿಸಿ ಮುಂದಿನ ಪ್ರಕ್ರಿಯೆಗಾಗಿ ವಿಭಾಗಕ್ಕೆ ಕಳುಹಿಸಬೇಕು. ಒಮ್ಮೆ ವಿಶೇಷ ಸಮಿತಿಯು ವಿದ್ಯಾರ್ಥಿಯ ಅರ್ಜಿಯನ್ನು ಸಂಬಂಧಿಸಿದ ವಿಭಾಗಕ್ಕೆ ಕಳುಹಿಸಿದರೆ ಆ ವಿಭಾಗದ ಸಂಶೋಧನ ಮಾರ್ಗದರ್ಶಕರ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸಬೇಕು. ವಿದ್ಯಾರ್ಥಿಯು ಅರ್ಜಿ ಸಲ್ಲಿಸಿದ ವಿಭಾಗದ ಹೆಸರಿನಲ್ಲಿ ಪದವಿ ಪ್ರದಾನವನ್ನು ಮಾಡಲಾಗುವುದು.

ಪೂರ್ಣಕಾಲಿಕ ಹಾಗೂ ಅರೆಕಾಲಿಕ ಎಂಬ ಎರಡು ವಿಧದ ಸಂಶೋಧನ ವಿದ್ಯಾರ್ಥಿಗಳಿರುತ್ತಾರೆ. ಸಾಮಾನ್ಯವಾಗಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದಲ್ಲಿ ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ಸಂಯೋಜಿತ ಕಾಲೇಜುಗಳಲ್ಲಿ, ಭಾರತದ ಯಾವುದೇ ವಿಶ್ವವಿದ್ಯಾಲಯ/ಸಂಶೋಧನ ಸಂಸ್ಥೆಗಳಲ್ಲಿ ಹಾಗೂ ಗ್ರಂಥಪಾಲಕರಾಗಿ/ದೈಹಿಕ ಶಿಕ್ಷಣದ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿರುವ ಅಧ್ಯಾಪಕರ ಅನುಕೂಲಕ್ಕಾಗಿ ಅರೆಕಾಲಿಕ ಪಿಎಚ್.ಡಿ. ಕಾರ‍್ಯಕ್ರಮವನ್ನು ರೂಪಿಸಲಾಗಿದೆ. ಆದಾಗ್ಯೂ, ಶೈಕ್ಷಣಿಕವಾಗಿ ಅರ್ಹರಾದ ಬೇರೆಯವರು ಕೂಡ ಅರೆಕಾಲಿಕ ಸಂಶೋಧಕರಾಗಿ ಪಿಎಚ್.ಡಿ. ಅಧ್ಯಯನ ಮಾಡಲು ಯಾವುದೇ ನಿರ್ಬಂಧ ಇರುವುದಿಲ್ಲ.

ಪೂರ್ಣಕಾಲಿಕವಾಗಿ ಪಿಎಚ್.ಡಿ. ಅಧ್ಯಯನ ಮಾಡಲು ಬಯಸುವಂತಹ ನೌಕರರು ತಾವು ಉದ್ಯೋಗ ಮಾಡುತ್ತಿರುವ ಸಂಸ್ಥೆಯಿಂದ ಅಧ್ಯಯನ ರಜೆ ಮಂಜೂರಾತಿ ಪಡೆದ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಪೂರ್ಣಕಾಲಿಕವಾಗಿ ಪಿಎಚ್.ಡಿ. ಅಧ್ಯಯನ ಮಾಡಬಯಸುವ ಇತರೆ ವಿದ್ಯಾರ್ಥಿಗಳು ಸಂಶೋಧನ ಅವಧಿಯಲ್ಲಿ ಯಾವುದೇ ಉದ್ಯೋಗ ಮಾಡುವುದಿಲ್ಲ ಎಂಬ ಮುಚ್ಚಳಿಕೆ ಪತ್ರವನ್ನು ಸಲ್ಲಿಸಬೇಕು.

ಒಬ್ಬ ವಿದ್ಯಾರ್ಥಿ ಪೂರ್ಣಕಾಲಿಕ ಅಧ್ಯಯನಕ್ಕೆ ಪ್ರವೇಶ ಪಡೆದಿದ್ದು, ಒಂದು ವೇಳೆ ಅರೆಕಾಲಿಕ ವಿದ್ಯಾರ್ಥಿಯಾಗಿ ಪರಿವರ್ತಿತರಾಗಲು ಇಚ್ಛಿಸಿದಲ್ಲಿ ಸಂಬಂಧಿಸಿದ ವಿಭಾಗದ ಸಮಿತಿಯ ಶಿಫಾರಸ್ಸು ಪರಿಗಣಿಸಿ ಬದಲಾವಣೆಗೆ ಅವಕಾಶವಿದೆ. ಆದರೆ ಅರೆಕಾಲಿಕ(ಬಾಹ್ಯ)ವಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಆಂತರಿಕ/ಪೂರ್ಣಕಾಲಿಕ ವಿದ್ಯಾರ್ಥಿಯಾಗಿ ಖಾಯಂ ನೋಂದಣಿಯ ನಂತರ ಪ್ರವೇಶ ಪಡೆಯಲು ಸಾಧ್ಯವಿರುವುದಿಲ್ಲ. ಒಂದು ವೇಳೆ ಯು.ಜಿ.ಸಿ/ ಐ.ಸಿ.ಎಚ್.ಆರ್/ ಇತರೆ ಶಿಷ್ಯವೇತನ ಪಡೆದ ವಿದ್ಯಾರ್ಥಿಗಳು ಇಂತಹ ಬದಲಾವಣೆ ಬಯಸಿದಲ್ಲಿ ಅವರು ಎಂದಿನಿಂದ ಅಂತಹ ಅರ್ಹತೆ ಪಡೆದು ವಿಶ್ವವಿದ್ಯಾಲಯದ ವಿಭಾಗಕ್ಕೆ ನಿಯಮಾನುಸಾರ ಹಾಜರಾಗುವರೋ ಅಂದಿನಿಂದ ಮಾತ್ರ ಶಿಷ್ಯವೇತನ ಪಡೆಯಲು ಅರ್ಹರಾಗುತ್ತಾರೆ. ಹಾಜರಿಯಿಲ್ಲದ ಕಾರಣ ಶಿಷ್ಯವೇತನವನ್ನು ಪೂರ್ವಾನ್ವಯಗೊಳಿಸಲು ಸಾಧ್ಯವಿರುವುದಿಲ್ಲ. ಇವರಿಗೆ ಪೂರ್ಣಕಾಲಿಕ ವಿದ್ಯಾರ್ಥಿಗಳಿಗೆ ಅನ್ವಯವಾಗುವ ನಿಯಮಗಳೇ (ಹಾಜರಿ, ಶುಲ್ಕ ಇತ್ಯಾದಿ) ಅನ್ವಯವಾಗುತ್ತವೆ.

೪. ಪಿಎಚ್.ಡಿ. ಅಧ್ಯಯನಕ್ಕೆ ಪ್ರವೇಶ ಪಡೆಯುವ ಸಂಬಂಧ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು

ವಿದೇಶಿ ವಿದ್ಯಾರ್ಥಿಗಳು (ಸಂಬಂಧಿಸಿದ ರಾಯಭಾರಿ ಕಛೇರಿಯಿಂದ ಪ್ರಾಯೋಜಿತ) ಮತ್ತು ಪ್ರಾಯೋಜಿತ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಅಂಗೀಕೃತ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ. ೫೫ ಅಂಕ ಪಡೆದ ವಿದ್ಯಾರ್ಥಿಗಳು ಪಿಎಚ್.ಡಿ. ಅಧ್ಯಯನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-೧/ಅಂಗವಿಕಲ ವಿದ್ಯಾರ್ಥಿಗಳು ಮತ್ತು ಮಾರ್ಚ್ ೩೧, ೧೯೯೨ರ ಪೂರ್ವದಲ್ಲಿ ಖಾಯಂ ಆಗಿ ನಿಯಮಾನುಸಾರ ನೇಮಕಗೊಂಡು ಪದವಿ ಕಾಲೇಜು ಹಾಗೂ ವಿಶ್ವವಿದ್ಯಾಲಯದ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧ್ಯಾಪಕರು, ಗ್ರಂಥಪಾಲಕರು ಹಾಗೂ ದೈಹಿಕ ಶಿಕ್ಷಣ ಸಿಬ್ಬಂದಿ ಕನಿಷ್ಠ ೫೦ ಅಂಕಗಳನ್ನು ಸ್ನಾತಕೋತ್ತರ ಪದವಿಯಲ್ಲಿ ಪಡೆದಿದ್ದರೆ ಪಿಎಚ್.ಡಿ. ಅಧ್ಯಯನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆದರೆ ಅರ್ಜಿ ಸಲ್ಲಿಸುವಂತಹ ನೌಕರರು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸೇವೆಯಲ್ಲಿರುವುದು ಕಡ್ಡಾಯ.

ಸ್ನಾತಕೋತ್ತರ ಪದವಿಯ ಫಲಿತಾಂಶವನ್ನು ವಿದ್ಯಾರ್ಥಿಯ ಅಂಕಪಟ್ಟಿಯಲ್ಲಿ ಗ್ರೇಡ್/ಕ್ರೆಡಿಟ್ಸ್/ಸಂಗ್ರಹಿತ ಬಿಂದುಗಳ ರೂಪದ ಮೂಲಕ ಘೋಷಣೆ ಮಾಡಿದ್ದರೆ ಅದನ್ನು ಶೇಕಡಾವಾರು ಅಂಕಕ್ಕೆ ಪರಿವರ್ತಿಸಿಕೊಂಡು ನಿಯಮ ೪.೧ ಮತ್ತು ೪.೨ ರನ್ವಯ ಪ್ರವೇಶದ ಅರ್ಹತೆಯನ್ನು ನಿರ್ಧರಿಸಬೇಕು.

ಯು.ಜಿ.ಸಿ/ಎಫ್.ಐ.ಪಿ/ರಾಜೀವ್‌ಗಾಂಧಿ ಶಿಷ್ಯವೇತನ ಯೋಜನೆಯಡಿಯಲ್ಲಿ ಪಿಎಚ್.ಡಿ. ಅಧ್ಯಯನಕ್ಕೆ ಅರ್ಜಿ ಸಲ್ಲಿಸುವವರು ವಿಶ್ವವಿದ್ಯಾಲಯದ ಕುಲಸಚಿವರ ಮುಖಾಂತರ ಸಲ್ಲಿಸುವುದು. ಯು.ಜಿ.ಸಿ.ಯಿಂದ ಪರವಾನಿಗೆ ಬಂದ ನಂತರ ಕುಲಸಚಿವರಲ್ಲಿ ವರದಿ ಮಾಡಿಕೊಂಡು ಸಂಬಂಧಿಸಿದ ವಿಭಾಗದಲ್ಲಿ ಅಧ್ಯಯನ ಮುಂದುವರಿಸುವುದು. ಯಥಾಸ್ಥಿತಿ ಉಳಿದ ವಿದ್ಯಾರ್ಥಿಗಳಂತೆ ಪ್ರಗತಿ ಪರಿಶೀಲನೆಯಂತಹ ಶೈಕ್ಷಣಿಕ ನಿಯಮಗಳು ಅನ್ವಯಿಸುತ್ತವೆ.

೫. ಪ್ರವೇಶ ಮಿತಿ

ಒಬ್ಬ ಸಂಶೋಧನ ಮಾರ್ಗದರ್ಶಕ ಬೇರೆ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಅಧ್ಯಯನಕ್ಕೆ ನೋಂದಾಯಿಸಿಕೊಂಡ ಗರಿಷ್ಠ ಇಬ್ಬರು ವಿದ್ಯಾರ್ಥಿಗಳನ್ನೂ ಒಳಗೊಂಡಂತೆ ಒಟ್ಟು ಎಂಟು ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ಮಾರ್ಗದರ್ಶನ ಮಾಡಬಹುದು. ಬೇರೆ ವಿಶ್ವವಿದ್ಯಾಲಯಗಳಲ್ಲಿ ಮಾರ್ಗದರ್ಶನ ಮಾಡಲು ವಿಶ್ವವಿದ್ಯಾಲಯದ ಆಡಳಿತಾತ್ಮಕ ಪೂರ್ವಾನುಮತಿ ಪಡೆಯುವುದು ಅಗತ್ಯ. ಅದರಲ್ಲಿ ಪ.ಜಾ, ಪ.ಪಂ/ಪ್ರವರ್ಗ-೧, ಮಹಿಳೆ ಹಾಗೂ ಹಿಂದುಳಿದ ವರ್ಗಗಳಿಗೆ ತಲಾ ಒಬ್ಬರು ವಿದ್ಯಾರ್ಥಿಗೆ ಮೀಸಲಾತಿ ಅವಕಾಶ ಕಲ್ಪಿಸಬೇಕು. ಭಾಷಾ ನಿಕಾಯದ ಮಾರ್ಗದರ್ಶಕರು ಕನಿಷ್ಠ ಎರಡು ಸ್ಥಾನಗಳನ್ನು ಎಂ.ಎ.ಪಿಎಚ್.ಡಿ. ಸಂಯೋಜಿತ ಪದವಿಯ ವಿದ್ಯಾರ್ಥಿಗಳಿಗೆ ಮೀಸಲಿಡಬೇಕು. ಮಾರ್ಗದರ್ಶಕರಿಗೆ ವಿಷಯ ಹಾಗೂ ವಿದ್ಯಾರ್ಥಿಗಳ ಆಯ್ಕೆಯಲ್ಲಿ ಸ್ವಾತಂತ್ರ್ಯವಿರುತ್ತದೆ.

ಮಾರ್ಗದರ್ಶಕರು ನಿವೃತ್ತಿಪೂರ್ವ ಮೂರು ಶೈಕ್ಷಣಿಕ ವರ್ಷಗಳಲ್ಲಿ ವಿದ್ಯಾರ್ಥಿಗಳನ್ನು ತೆಗೆದುಕೊಳ್ಳುವಂತಿಲ್ಲ. ನಿವೃತ್ತಿಯ ಸಂದರ್ಭದಲ್ಲಿ ಪಿಎಚ್.ಡಿ. ಮಾಡುತ್ತಿರುವ ವಿದ್ಯಾರ್ಥಿಗಳು ಇದ್ದಲ್ಲಿ ಅವರ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುವ ಜವಾಬ್ದಾರಿಯನ್ನು ಆಯಾ ಮಾರ್ಗದರ್ಶಕರೇ ವಹಿಸಿಕೊಳ್ಳಬೇಕು.

ಯು.ಜಿ.ಸಿ. ಪತ್ರ ಸಂಖ್ಯೆ: F.91-7/2016 (GS) ದಿನಾಂಕ: ೦೫.೦೪.೨೦೧೬ರ ರೀತ್ಯಾ Transgender (Third Gender) ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಸ್ವಾಯತ್ತ/ಸಂಯೋಜಿತ ಕಾಲೇಜುಗಳಲ್ಲಿ ಪ್ರವೇಶಾತಿ ಬಯಸಿದಲ್ಲಿ, ಅಂತಹ ವಿದ್ಯಾರ್ಥಿಗಳನ್ನು ತೃತೀಯ ಲಿಂಗ ಎಂದು ಪರಿಗಣಿಸಿ ಪ್ರವೇಶಾತಿಯನ್ನು ಕಲ್ಪಿಸಲು, ಆದ್ಯತೆ ನೀಡಲು ಹಾಗೂ ಇಂತಹ ವಿದ್ಯಾರ್ಥಿಗಳ ಪ್ರವೇಶಾತಿ ಅನುಮೋದನಾ ಪಟ್ಟಿಯನ್ನು ಸಲ್ಲಿಸುವಾಗ ಪ್ರತ್ಯೇಕವಾಗಿ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸಲು ಅವಕಾಶ ಇರುತ್ತದೆ.

ಪ.ಜಾ, ಪ.ಪಂ/ಪ್ರವರ್ಗ-೧ಕ್ಕೆ ಮೀಸಲಿಟ್ಟ ಸ್ಥಾನಗಳನ್ನು ವಿಶೇಷ ಸಂದರ್ಭದಲ್ಲಿ ಕುಲಪತಿಗಳ ಅನುಮತಿ ಪಡೆದು ಅದಲುಬದಲು ಮಾಡಬಹುದು. ಅಂದರೆ ಆಯಾ ಸ್ಥಾನಕ್ಕೆ ಅರ್ಹ ವಿದ್ಯಾರ್ಥಿ ದೊರೆಯದಿದ್ದ ಪಕ್ಷದಲ್ಲಿ ಪ.ಜಾತಿಗೆ ಮೀಸಲಾದ ಸ್ಥಾನಕ್ಕೆ ಪ.ಪಂ. ವಿದ್ಯಾರ್ಥಿಗೆ, ಪ.ಪಂ. ಸ್ಥಾನಕ್ಕೆ ಮೀಸಲಾದ ಸ್ಥಾನಕ್ಕೆ ಪ.ಜಾತಿಯ ವಿದ್ಯಾರ್ಥಿಗೆ ಅವಕಾಶ ಕಲ್ಪಿಸಬಹುದಾಗಿದೆ. ಆದರೆ, ಸದರಿ ಮೀಸಲು ಸ್ಥಾನಗಳನ್ನು ಸಾಮಾನ್ಯ ವರ್ಗಕ್ಕೆ ಪರಿವರ್ತಿಸುವಂತಿಲ್ಲ.

ಮೀಸಲಾತಿ ದೃಷ್ಟಿಯಿಂದ ಅಧ್ಯಯನ ವಿಭಾಗವನ್ನು ಒಂದು ಘಟಕವಾಗಿ ಪರಿಗಣಿಸಬೇಕು. ಪ್ರತಿಯೊಬ್ಬ ಮಾರ್ಗದರ್ಶಕರಿಗೂ ಒಬ್ಬರು ಪ.ಜಾ., ಪ.ಪಂ/ಪ್ರವರ್ಗ-೧, ಮಹಿಳೆ, ಹಿಂದುಳಿದ ವರ್ಗದ ವಿದ್ಯಾರ್ಥಿಗಳನ್ನು ಮಾರ್ಗದರ್ಶನಕ್ಕೆ ಹಂಚಿಕೆ ಮಾಡಬೇಕು.

ಮೀಸಲಾತಿ ಪರಿಶೀಲನಾ ಸಮಿತಿ ಸಭೆಯ ಅನುಮೋದನೆ ಪಡೆದ ಬಳಿಕ ವಿದ್ಯಾರ್ಥಿಗಳ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು. ಮೀಸಲಾತಿ ಪರಿಶೀಲನೆ ಸಮಿತಿಯನ್ನು ಕುಲಪತಿಗಳು ರಚಿಸುತ್ತಾರೆ.

೬. ರಿಕ್ತ ಸ್ಥಾನಗಳಿಗೆ ಸಂಬಂಧಿಸಿದ ಪ್ರಕಟಣೆ

ಪಿಎಚ್.ಡಿ. ಅಧ್ಯಯನಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಬೇಕು. ವಿಶ್ವವಿದ್ಯಾಲಯ ಈ ಸಂಬಂಧ ಪ್ರತಿ ವಿಷಯದಲ್ಲೂ ಲಭ್ಯವಿರುವ ರಿಕ್ತ ಸ್ಥಾನಗಳನ್ನು ಉಲ್ಲೇಖಿಸಿ (೫.೧ರನ್ವಯ) ಅಧಿಕೃತ ಪ್ರಕಟಣೆ ಹೊರಡಿಸಬೇಕು. ಸದರಿ ಪ್ರಕಟಣೆಯನ್ನು ಪ್ರಚಲಿತ ರಾಜ್ಯಮಟ್ಟದ ದಿನಪತ್ರಿಕೆಯಲ್ಲಿ ಹಾಗೂ ವಿಶ್ವವಿದ್ಯಾಲಯದ ಅಂತರ್ಜಾಲದಲ್ಲಿ ಪ್ರಕಟಿಸಬೇಕು. ಪ್ರತಿ ವರ್ಷ ಸದರಿ ಪ್ರಕಟಣೆಯನ್ನು ಸಾಧ್ಯವಾದಷ್ಟು ಜುಲೈ ತಿಂಗಳಲ್ಲಿ ನೀಡಬೇಕು.

೭. ಅರ್ಜಿ ಸಲ್ಲಿಸುವಿಕೆ ಹಾಗೂ ಅದರ ನಂತರದ ಪ್ರಕ್ರಿಯೆ

ಅಧ್ಯಯನಾಂಗವು ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳಿಂದ ಸ್ವೀಕರಿಸಿದ ಅರ್ಜಿಗಳನ್ನು ಈ ಮುಂದಿನ ರೀತಿಯಲ್ಲಿ ಕ್ರಮವಹಿಸಬೇಕು.

ಭರ್ತಿ ಮಾಡಿದ ಅರ್ಜಿಗಳನ್ನು ಸ್ವೀಕರಿಸಿದ ನಂತರ ಅಧ್ಯಯನಾಂಗವು ಸಂಬಂಧಿಸಿದ ಸ್ನಾತಕೋತ್ತರ/ಅಧ್ಯಯನ ವಿಭಾಗದ ಮುಖ್ಯಸ್ಥರಿಗೆ ಪರಿಶೀಲನೆಗಾಗಿ ಕಳುಹಿಸಬೇಕು. (ಅರ್ಜಿ ನಮೂನೆ-ಎ ಎಂದು ಸದರಿ ಅರ್ಜಿಗೆ ಸಂಕೇತ ನೀಡಲಾಗಿದೆ)

ವಿಭಾಗದ ಮುಖ್ಯಸ್ಥರು ವಿಭಾಗ ಸಮಿತಿಯ ನೆರವು ಪಡೆದು ಈ ಮುಂದಿನ ಪ್ರಕ್ರಿಯೆಗೆ ವ್ಯವಸ್ಥೆ ಮಾಡುವುದು.

ಶೈಕ್ಷಣಿಕ ಅರ್ಹತೆಯನ್ನು ಅರ್ಜಿಯಲ್ಲಿ ಲಗತ್ತಿಸಿರುವ ದಾಖಲೆಗಳ ಆಧಾರದ ಮೇಲೆ ಪರಿಶೀಲಿಸುವುದು ಹಾಗೂ ಪ್ರವೇಶ ಪರೀಕ್ಷೆಯಿಂದ ವಿನಾಯಿತಿ ಕೋರಿದ ವಿದ್ಯಾರ್ಥಿಗಳನ್ನು ಹಾಗೂ ಪ್ರವೇಶ ಪರೀಕ್ಷೆಗೆ ಅರ್ಹರಾದ ವಿದ್ಯಾರ್ಥಿಗಳನ್ನು ಪಟ್ಟಿಮಾಡಿ ವರ್ಗೀಕರಿಸಿ ಅಧ್ಯಯನಾಂಗಕ್ಕೆ ಕಳುಹಿಸುವುದು.

ಅಧ್ಯಯನಾಂಗವು ವಿಭಾಗ ಸಮಿತಿಯು ರಚಿಸಿದ ಪ್ರಶ್ನೆಪತ್ರಿಕೆಗಳನ್ನು ನೀಡಿ ಪರೀಕ್ಷೆ ನಡೆಸುವುದು, ವಿಭಾಗ ಸಮಿತಿಯಿಂದ ಸದರಿ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿಸುವುದು.

ಅಧ್ಯಯನಾಂಗವು ವಿದ್ಯಾರ್ಥಿಗಳ ಕ್ರೋಡೀಕೃತ ಪಟ್ಟಿಯನ್ನು ಸಿದ್ಧಪಡಿಸುವುದು.

ಅಧ್ಯಯನಾಂಗವು ನೋಂದಣಿ ಪೂರ್ವ ಕಾರ್ಯಾಗಾರ/ಕಮ್ಮಟ (ಕೋರ್ಸ್‌ವರ್ಕ್) ವನ್ನು ಆಯೋಜಿಸುವುದು.

ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಪ್ರಾಥಮಿಕ ಸಂಶೋಧನ ಪ್ರಸ್ತಾವದೊಂದಿಗೆ ನಿಗದಿತ ಶುಲ್ಕವನ್ನು ವಿಶ್ವವಿದ್ಯಾಲಯಕ್ಕೆ ಸಂದಾಯಿಸಿದ ಬಗೆಗಿನ ಚಲನ್ ಅನ್ನು ಲಗತ್ತಿಸಿ ಪಿಎಚ್.ಡಿ. ಅಧ್ಯಯನದ ತಾತ್ಕಾಲಿಕ ನೋಂದಣಿಗಾಗಿ ಸಂಬಂಧಿಸಿದ ಅಧ್ಯಯನ ವಿಭಾಗದ ಮುಖ್ಯಸ್ಥರಿಗೆ ’ಅರ್ಜಿ ನಮೂನೆ-ಬಿ’ ಮೂಲಕ ಸಲ್ಲಿಸಬೇಕು.

ವಿಭಾಗದ ಮುಖ್ಯಸ್ಥರು ಅರ್ಜಿಗಳನ್ನು ಪಿಎಚ್.ಡಿ. ಸಮಿತಿಯ (ಡಾಕ್ಟರಲ್ ಕಮಿಟಿ) ಶಿಫಾರಸ್ಸಿನೊಂದಿಗೆ ಅಧ್ಯಯನ ಮಂಡಳಿಯ ಅಧ್ಯಕ್ಷರಿಗೆ ಅನುಮೋದನೆಗಾಗಿ ಕಳುಹಿಸಬೇಕು. ಅಧ್ಯಯನ ಮಂಡಳಿಯ ಅಧ್ಯಕ್ಷರು ಸದರಿ ಅರ್ಜಿಗಳನ್ನು ಪರಿಶೀಲಿಸಿ ಅನುಮೋದಿಸಿ ವಿಭಾಗದ ಮುಖ್ಯಸ್ಥರಿಗೆ ಹಿಂತಿರುಗಿಸಬೇಕು. ವಿಭಾಗದ ಮುಖ್ಯಸ್ಥರು ತಾತ್ಕಾಲಿಕ ನೋಂದಣಿಗಾಗಿ ಅಗತ್ಯ ಶಿಫಾರಸ್ಸುಗಳೊಂದಿಗೆ ನಿರ್ದೇಶಕರು, ಅಧ್ಯಯನಾಂಗ ಇವರಿಗೆ ರವಾನಿಸಬೇಕು.

ಕೋರ್ಸ್‌ವರ್ಕ್‌ನ್ನು ಪೂರೈಸಿ (ನೋಂದಣಿಪೂರ್ವ ಕಮ್ಮಟ) ಲಿಖಿತ  ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಖಾಯಂ ನೋಂದಣಿಗಾಗಿ ಅರ್ಜಿಯನ್ನು ಅರ್ಜಿ ನಮೂನೆ-ಸಿ ಮೂಲಕ ವಿಭಾಗದ ಮುಖ್ಯಸ್ಥರಿಗೆ ಸಲ್ಲಿಸಬೇಕು. ವಿಭಾಗದ ಮುಖ್ಯಸ್ಥರು ಸದರಿ ಅರ್ಜಿಗಳನ್ನು ಪರಿಶೀಲಿಸಿ ನೋಂದಣಿಪೂರ್ವ ಸಂವಾದಗೋಷ್ಠಿಯನ್ನು (ಕಲೋಕ್ವಿಯಂ) ಏರ್ಪಡಿಸಿ ಪಿಎಚ್.ಡಿ. ಅಧ್ಯಯನದ ಖಾಯಂ ನೋಂದಣಿಗೆ ಅಗತ್ಯ ಶಿಫಾರಸ್ಸುಗಳೊಂದಿಗೆ ನಿರ್ದೇಶಕರು, ಅಧ್ಯಯನಾಂಗ ಇವರಿಗೆ ಕಳುಹಿಸಬೇಕು.

೮. ಪ್ರವೇಶ ಪರೀಕ್ಷೆ:

ನಿಯಮ ೪.೧ ರಿಂದ ೪.೩ ರಲ್ಲಿ ನಿರ್ದಿಷ್ಟಪಡಿಸಿರುವಂತೆ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇಕಡವಾರು ಅಂಕ ಪಡೆದ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ.

ಆದಾಗ್ಯೂ (ಅ) ವಿದೇಶಿ ಹಾಗೂ ಪ್ರಾಯೋಜಿತ ವಿದ್ಯಾರ್ಥಿ, (ಆ) ಎಫ್.ಐ.ಪಿ/ಕ್ಯೂ.ಐ.ಪಿ. ಯೋಜನೆಯಡಿ ಅಧ್ಯಯನ ಮಾಡಬಯಸುವ ಅಧ್ಯಾಪಕರು (ಇ), ಯು.ಜಿ.ಸಿ./ಸಿ.ಎಸ್.ಐ.ಆರ್, ಜೆ.ಆರ್.ಎಫ್ ಪರೀಕ್ಷೆ/ಎನ್.ಇ.ಟಿ/ಗೇಟ್/ಜಿ.ಆರ್.ಇ. ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ಪ್ರವೇಶ ಪರೀಕ್ಷೆಯನ್ನು ಬರೆಯುವುದರಿಂದ ಅಪೇಕ್ಷಿಸಿದಲ್ಲಿ ವಿನಾಯಿತಿ ಪಡೆಯಬಹುದು. ವಿನಾಯಿತಿ ಬಯಸಿದ ವಿದ್ಯಾರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಅರ್ಹತೆಯ ಕನಿಷ್ಠ ಅಂಕಗಳನ್ನು ಮಾತ್ರ ಪಡೆಯುತ್ತಾರೆ. ಆದರೆ ಅಂತಹ ವಿದ್ಯಾರ್ಥಿಗಳು ಮೌಖಿಕ ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗಬೇಕು. ಒಂದು ವೇಳೆ ಇವರು ಲಿಖಿತ ಪರೀಕ್ಷೆಗೆ ಹಾಜರಾದಲ್ಲಿ ಉಳಿದ ವಿದ್ಯಾರ್ಥಿಗಳಂತೆ ಪರಿಗಣಿಸಲಾಗುವುದು.

ಪ್ರವೇಶ ಪರೀಕ್ಷೆಯ ಪಠ್ಯಕ್ರಮ ಹಾಗೂ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದ ಇತರೆ ವಿವರಗಳನ್ನು ವಿಭಾಗ ಸಮಿತಿಯೇ ರೂಪಿಸಿ, ಅಂತಿಮಗೊಳಿಸಬೇಕು.

ಪ್ರವೇಶ ಪರೀಕ್ಷೆಗೆ ಈ ಕೆಳಕಂಡ ಅಂಶಗಳನ್ನು ಎಲ್ಲ ಅಧ್ಯಯನ ವಿಭಾಗಗಳು ಪರಿಗಣಿಸಬೇಕು.

ಪ್ರವೇಶ ಪರೀಕ್ಷೆ ಗರಿಷ್ಠ ಅಂಕಗಳು-೧೦೦ (ಲಿಖಿತ-೮೦, ಮೌಖಿಕ-೨೦ ಅಂಕಗಳು)

ಲಿಖಿತ ಪ್ರಶ್ನೆಪತ್ರಿಕೆಯ ಮಾದರಿ :

೧. ಬಹು ಆಯ್ಕೆಯ ಪ್ರಶ್ನೆಗಳು                ೧೦ X ೧ = ೧೦

೨. ದೀರ್ಘ ಪ್ರಬಂಧ ರೂಪದ ಪ್ರಶ್ನೆಗಳು    ೧ X ೨೦ = ೨೦

೩. ಪ್ರಬಂಧ ರೂಪದ ಪ್ರಶ್ನೆಗಳು             ೩ X ೧೦ = ೩೦

೪. ಟಿಪ್ಪಣಿ ರೂಪದ ಪ್ರಶ್ನೆಗಳು               ೪ X ೫ = ೨೦

ಪ್ರವೇಶ ಪರೀಕ್ಷೆಯ ಪಠ್ಯಕ್ರಮ-ಸಂಶೋಧನ ವಿಧಿವಿಧಾನ ಮತ್ತು ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ವಿಭಾಗದ ಅಧ್ಯಯನ/ಶಿಸ್ತಿನ ವಿಷಯ ಅಥವಾ ಪೂರಕ ವಿಷಯವನ್ನು         ಪ್ರವೇಶ ಪರೀಕ್ಷೆ ಒಳಗೊಂಡಿರುತ್ತದೆ.

ಸುಮಾರು ಶೇ. ೪೦ರಷ್ಟು ಪ್ರಶ್ನೆಗಳು ಸಂಶೋಧನ ವಿಧಿವಿಧಾನಕ್ಕೆ ಸಂಬಂಧಿಸಿರಬೇಕು. ಹಾಗೂ ಉಳಿದ ಶೇ. ೬೦ರಷ್ಟು ಪ್ರಶ್ನೆಗಳು ಆಯಾ ವಿಷಯ/ಪೂರಕ ವಿಷಯಕ್ಕೆ ಸಂಬಂಧಿಸಿರಬೇಕು.

ಪ್ರವೇಶ ಪರೀಕ್ಷೆ ಅವಧಿ : ೧೫೦ ನಿಮಿಷಗಳು.

೯. ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಜೇಷ್ಠತಾ ಪಟ್ಟಿ

ಪ್ರವೇಶ ಪರೀಕ್ಷೆ ಮುಗಿದ ಮೇಲೆ ಪ್ರವೇಶ ಪರೀಕ್ಷೆ ಅರ್ಹತಾ ಹಾಗೂ ಸ್ನಾತಕೋತ್ತರ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ೫೦ : ೫೦ರ ಅನುಪಾತದಲ್ಲಿ ಹಾಗೂ ಮೀಸಲಾತಿಗೆ ಅನುಗುಣವಾಗಿ ಕ್ರೋಡೀಕೃತ ಪಟ್ಟಿಯನ್ನು (ಲಿಖಿತ ಪ್ರವೇಶ ಪರೀಕ್ಷೆಯಿಂದ ವಿನಾಯಿತಿ ಪಡೆದ ವಿದ್ಯಾರ್ಥಿಗಳನ್ನೊಳಗೊಂಡಂತೆ) ಸಿದ್ಧಪಡಿಸಬೇಕು.

ಯು.ಜಿ.ಸಿ/ಸಿ.ಎಸ್.ಐ.ಆರ್, ಜೆ.ಆರ್.ಎಫ್ ಪರೀಕ್ಷೆ/ಎನ್.ಇ.ಟಿ/ಗೇಟ್/ಜಿ.ಆರ್.ಇ. ಪರೀಕ್ಷೆ ಮತ್ತು ಎಫ್.ಐ.ಪಿ./ ಕ್ಯೂ.ಐ.ಪಿ. ಅಡಿ ಪ್ರವೇಶ ಬಯಸಿದ ವಿದ್ಯಾರ್ಥಿಗಳು (ಲಿಖಿತ ಮತ್ತು ಮೌಖಿಕ) ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳು ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪಡೆದ ಅಂಕಗಳನ್ನು ೫೦ : ೫೦ ಅನುಪಾತದಲ್ಲಿ ಲೆಕ್ಕ ಹಾಕಿ ಜೇಷ್ಠತಾ ಪಟ್ಟಿ ಸಿದ್ಧಪಡಿಸಬೇಕು.

ಕ್ರೋಡೀಕೃತ ಜೇಷ್ಠತಾ ಪಟ್ಟಿಯಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳನ್ನು ಮಾತ್ರ ರಿಕ್ತ ಸ್ಥಾನಗಳಿಗಾಗಿ ಪರಿಗಣಿಸಬೇಕು. ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದವರೆಲ್ಲರೂ ಪಿಎಚ್.ಡಿ. ಸ್ಥಾನ ಪಡೆಯಲು ಹಕ್ಕುಳ್ಳವರೆಂದು ಪರಿಗಣಿಸುವಂತಿಲ್ಲ.

ಪಿಎಚ್.ಡಿ. ಅಧ್ಯಯನಕ್ಕೆ ಪ್ರವೇಶ ದೊರೆತ ವಿದ್ಯಾರ್ಥಿಗಳು ಮಾರ್ಗದರ್ಶಕರೊಡನೆ ಚರ್ಚಿಸಿ, ವಿಷಯದ ಶೀರ್ಷಿಕೆಯನ್ನು ಅಂತಿಮಗೊಳಿಸಿ ಸಂಶೋಧನ ಪ್ರಸ್ತಾವವನ್ನು  ಸಿದ್ಧಪಡಿಸಿ ವಿಭಾಗಕ್ಕೆ ಸಲ್ಲಿಸಬೇಕು. ವಿಭಾಗದ ಮುಖ್ಯಸ್ಥರು ಅರ್ಜಿ ನಮೂನೆ ಬಿ ಯಂತೆ ಕ್ರಮವಹಿಸಿ ಅಧ್ಯಯನಾಂಗಕ್ಕೆ ತಾತ್ಕಾಲಿಕ ನೋಂದಣಿಗೆ ಕಡತ ಕಳುಹಿಸಬೇಕು.

೧೦. ಮಾರ್ಗದರ್ಶಕರೆಂದು ಮಾನ್ಯತೆ ನೀಡುವಲ್ಲಿನ ಪ್ರಕ್ರಿಯೆ

ಕನ್ನಡ ವಿಶ್ವವಿದ್ಯಾಲಯದ ಅಧ್ಯಯನ ವಿಭಾಗಗಳಲ್ಲಿ ಖಾಯಂ ಆಗಿ ಸೇವೆ ಸಲ್ಲಿಸುತ್ತಿರುವ, ಪಿಎಚ್.ಡಿ. ಪದವಿಯನ್ನು ಹೊಂದಿರುವ ಎಲ್ಲ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಪಿಎಚ್.ಡಿ. ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಲು ಅರ್ಹರಾಗಿರುತ್ತಾರೆ.

ಸಂಬಂಧಿಸಿದ ವಿಷಯದಲ್ಲಿ ಪಿಎಚ್.ಡಿ. ಪದವಿಯನ್ನು ಹೊಂದಿದ ಹಾಗೂ ಪಿಎಚ್.ಡಿ. ಪದವಿ ಪಡೆದ ಮೇಲೆ ಕನಿಷ್ಠ ಮೂರು ವರ್ಷಗಳು ಸ್ವತಂತ್ರ ಸಂಶೋಧನೆ ನಡೆಸಿದ ಮತ್ತು ಅದಕ್ಕೆ ಸಮರ್ಥನೆಯಾಗಿ ಹೆಸರಾಂತ ಪತ್ರಿಕೆಗಳಲ್ಲಿ ಲೇಖನ/ಬರಹಗಳನ್ನು ಪ್ರಕಟಿಸಿದ ಕನ್ನಡ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರು ಸಂಶೋಧನ ಮಾರ್ಗದರ್ಶಕರಾಗಲು ಅರ್ಹರೆಂದು ಪರಿಗಣಿಸಬಹುದಾಗಿದೆ. ಆದಾಗ್ಯೂ ಕನಿಷ್ಠ ಮೂರು ವರ್ಷಗಳ ಬೋಧನೆ/ ಸಂಶೋಧನ ಅನುಭವ ಹಾಗೂ ಕನಿಷ್ಠ ಐದು ಮೌಲಿಕ ಕೃತಿ/ಬರಹ/ಲೇಖನಗಳನ್ನು ಪ್ರಕಟಿಸಿರಬೇಕಾದ್ದು ಕಡ್ಡಾಯ.

ಕನ್ನಡ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಸಂಶೋಧನ ಕೇಂದ್ರಗಳಲ್ಲಿ ಮಾರ್ಗದರ್ಶಕರಾಗಲು ಬಯಸುವವರು ಯು.ಜಿ.ಸಿ.ಯಿಂದ ಮಾನ್ಯತೆ ಪಡೆದ ಪದವಿ ಕಾಲೇಜು/ಸ್ನಾತಕೋತ್ತರ ಕೇಂದ್ರ/ವಿಶ್ವವಿದ್ಯಾಲಯಗಳಲ್ಲಿ ಬೋಧಕರಾಗಿ ಖಾಯಂ ಸೇವೆ ಸಲ್ಲಿಸುತ್ತಿರಬೇಕು. ಇವರು ಸಂಬಂಧಿಸಿದ ವಿಷಯದಲ್ಲಿ ಪಿಎಚ್.ಡಿ. ಪದವಿಯನ್ನು ಹೊಂದಿರಬೇಕು ಹಾಗೂ ಪಿಎಚ್.ಡಿ. ಪದವಿಯನ್ನು ಹೊಂದಿದ ಮೇಲೆ ಕನಿಷ್ಠ ಮೂರು ವರ್ಷಗಳ ಸ್ವತಂತ್ರ ಸಂಶೋಧನ ಅನುಭವವನ್ನು ಹೊಂದಿರಬೇಕು. ಮತ್ತು ಕನಿಷ್ಠ ಐದು ಮೌಲಿಕ ಕೃತಿ/ಸಂಶೋಧನಾ ಲೇಖನಗಳನ್ನು ರೆಫರೀಡ್ ನಿಯತಕಾಲಿಕೆಗಳಲ್ಲಿ ಪ್ರಕಟಿಸಿರಬೇಕು. ಮಾರ್ಗದರ್ಶಕರ ಅಂತಿಮ ಆಯ್ಕೆ ಕನ್ನಡ ವಿಶ್ವವಿದ್ಯಾಲಯದ್ದಾಗಿರುತ್ತದೆ.

ಉಲ್ಲೇಖಿತ ಎಲ್ಲ ಪ್ರಕರಣಗಳಲ್ಲಿ (ನಿಯಮ ೧೦.೧ ರಿಂದ ೧೦.೩ ರವರೆಗೆ) ಮಾರ್ಗದರ್ಶಕರಾಗಲು ಬಯಸುವವರ ಪಿಎಚ್.ಡಿ. ಅಧ್ಯಯನದ ನಂತರದಲ್ಲಿ ಕೈಗೊಂಡ ಸ್ವತಂತ್ರ ಸಂಶೋಧನೆ ಹಾಗೂ ಪ್ರಕಟಣೆಗಳ ಬಗ್ಗೆ ಸಂಬಂಧಿಸಿದ ವಿಭಾಗದ ಅಧ್ಯಯನ ಮಂಡಳಿಯು ತೃಪ್ತಿಕರವಾದ ಅಭಿಪ್ರಾಯವನ್ನು ನೀಡಬೇಕು.

ಹೀಗೆ ಮಾರ್ಗದರ್ಶಕರಾಗಿ ಆಯ್ಕೆಗೊಂಡ ವಿಶ್ವವಿದ್ಯಾಲಯದ ಹೊರಗಿನ ವಿದ್ವಾಂಸರೊಬ್ಬರು ಇಬ್ಬರಿಗೆ ಮಾರ್ಗದರ್ಶಕರಾಗಿ ಮೂರು ಜನರಿಗೆ ಮಾತ್ರ ಸಹ ಮಾರ್ಗದರ್ಶಕರಾಗಬಹುದು.

ಅಂತರ್‌ಶಿಸ್ತೀಯ ವಿಷಯಗಳನ್ನು ಅಧ್ಯಯನ ಮಾಡಬೇಕಾದ ಸಂದರ್ಭಗಳಲ್ಲಿ ವಿದ್ಯಾರ್ಥಿಗೆ ಇಬ್ಬರು ಮಾರ್ಗದರ್ಶಕರಿರುತ್ತಾರೆ. ಅದರಲ್ಲಿ ಒಬ್ಬರು ಮಾರ್ಗದರ್ಶಕರು, ಮತ್ತೊಬ್ಬರು ಸಹ ಮಾರ್ಗದರ್ಶಕರು. ಆದರೆ ಸಂಶೋಧನ ಮಾರ್ಗದರ್ಶಕರು ವಿಶ್ವವಿದ್ಯಾಲಯದ ಅಧ್ಯಯನ ವಿಭಾಗದವರೇ ಆಗಿರಬೇಕು. ಸಹಸಂಬಂಧಿ/ಸಹವರ್ತಿ ವಿಷಯ (Cognate Subject)ಗಳನ್ನು ವಿಭಾಗವೇ ಖಚಿತಪಡಿಸಿಕೊಳ್ಳುವುದು. ಸಹ ಮಾರ್ಗದರ್ಶಕ(Co-guide)ರ ನಿಗದೀಕರಣವನ್ನು ಖಾಯಂ ನೋಂದಣಿ ಪೂರ್ವದಲ್ಲಿ ಪಿಎಚ್.ಡಿ. ಸಮಿತಿಯು ನಿರ್ಧರಿಸುತ್ತದೆ. (ಸಹ ಮಾರ್ಗದರ್ಶಕರೆಂದರೆ ಅನ್ಯಶಿಸ್ತೀಯ ವಿಷಯಕ್ಕೆ ಸಂಬಂಧಿಸಿದವರಾಗಿರುತ್ತಾರೆ.)

೧೧. ಸಂಶೋಧನ ಮಾರ್ಗದರ್ಶಕರ ಹಂಚಿಕೆ/ಆಯ್ಕೆ.

ಕ್ರೋಡೀಕೃತ ಅರ್ಹತಾ ಪಟ್ಟಿಯನ್ನು ಅಂತಿಮಗೊಳಿಸಿದ ಮೇಲೆ ಸಂಶೋಧನ ಮಾರ್ಗದರ್ಶಕರಿಗೆ ರಿಕ್ತ ಸ್ಥಾನಗಳಿಗೆ ಜೇಷ್ಠತಾನುಸಾರ ವಿದ್ಯಾರ್ಥಿಗಳನ್ನು ಹಂಚಿಕೆ ಮಾಡಲು ವಿಭಾಗ ಸಮಿತಿ ಸಭೆಯನ್ನು ಮುಖ್ಯಸ್ಥರು ಕರೆಯಬೇಕು. ಮಾರ್ಗದರ್ಶಕರ ಹಾಗೂ ವಿದ್ಯಾರ್ಥಿಯ ವಿಷಯದ ಆಸಕ್ತಿಗೆ ಅನುಗುಣವಾಗಿ ಪರಸ್ಪರ ಸಹಮತದ ಆಧಾರದ ಮೇಲೆ ಹಂಚಿಕೆ ಮಾಡಬೇಕು.

ಮಾರ್ಗದರ್ಶಕರು ದೊರೆತ ಮೇಲೆ ವಿದ್ಯಾರ್ಥಿಯು ಅವರ ಮಾರ್ಗದರ್ಶನದಲ್ಲಿ ಸಂಶೋಧನೆಯ ವಿಷಯವನ್ನು ನಿರ್ಧರಿಸಿ ಅಂತಿಮಗೊಳಿಸಿಕೊಳ್ಳಬೇಕು. ಪಿಎಚ್.ಡಿ. ಸಮಿತಿಯ ಮುಂದೆ ಮಂಡಿಸಲು ಸಶಕ್ತವಾದ ಸಂಶೋಧನ ಪ್ರಸ್ತಾಪವನ್ನು ಮಾರ್ಗದರ್ಶಕರ ಸಲಹೆಯಂತೆ ಸಿದ್ಧಪಡಿಸಬೇಕು.

೧೨. ಸಂಶೋಧನ ಮಾರ್ಗದರ್ಶಕರ ಬದಲಾವಣೆ

ಸಾಧಾರಣವಾಗಿ ಸಂಶೋಧನ ಮಾರ್ಗದರ್ಶಕರ ಬದಲಾವಣೆಗೆ ಅವಕಾಶ ಇರುವುದಿಲ್ಲ.

ಮಾರ್ಗದರ್ಶಕರು ಮರಣ ಹೊಂದಿದಲ್ಲಿ ಅಥವಾ ಅನಾರೋಗ್ಯದಿಂದ ವಿಕಲಚೇತನರಾದಲ್ಲಿ ಅಥವಾ ಬೇರೆ ಸ್ಥಳಕ್ಕೆ ವರ್ಗಾವಣೆಗೊಂಡಾಗ ಅಸಾಧಾರಣ ಪ್ರಸಂಗ ಎಂದು ಪರಿಗಣಿಸಿ ವಿದ್ಯಾರ್ಥಿಯ ಮನವಿಯ ಆಧಾರದ ಮೇಲೆ ಮಾರ್ಗದರ್ಶಕರನ್ನು ಬದಲಾಯಿಸಲು ಅನುಮತಿ ನೀಡಲಾಗುತ್ತದೆ. ಇದಕ್ಕೆ ವಿಭಾಗದ ಪಿಎಚ್.ಡಿ. ಸಮಿತಿಯ ಶಿಫಾರಸ್ಸು ಅಗತ್ಯ.

ಮಾರ್ಗದರ್ಶಕರು ಹಾಗೂ ವಿದ್ಯಾರ್ಥಿಯ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಯಾದಲ್ಲಿ ವಿಭಾಗದ ಮುಖ್ಯಸ್ಥರು ಮಾರ್ಗದರ್ಶಕರಿಂದ ಅಥವಾ ವಿದ್ಯಾರ್ಥಿಯಿಂದ ಅಥವಾ ಇಬ್ಬರಿಂದಲೂ ಮನವಿ ಪತ್ರ ಪಡೆದು ಇತ್ಯರ್ಥಪಡಿಸಲು ಪಿಎಚ್.ಡಿ. ಸಮಿತಿಯ ಮುಂದೆ ಮಂಡಿಸಬೇಕು. ಪಿಎಚ್.ಡಿ. ಸಮಿತಿಯು ಸದರಿ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ ಸಲ್ಲಿಸಿದ ವರದಿಯನ್ನು ವಿಭಾಗದ ಮುಖ್ಯಸ್ಥರು ಅಗತ್ಯ ಕ್ರಮಕ್ಕಾಗಿ ಅಧ್ಯಯನಾಂಗದ ನಿರ್ದೇಶಕರಿಗೆ ಕಳುಹಿಸಬೇಕು. ಅಧ್ಯಯನಾಂಗದ ನಿರ್ದೇಶಕರು ಸೂಕ್ತ ವಿವರಣೆಯೊಂದಿಗೆ ಮಾನ್ಯ ಕುಲಪತಿಗಳಿಗೆ ಕಡತದ ಮೂಲಕ ಮಂಡಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಮಾನ್ಯ ಕುಲಪತಿಯವರ ತೀರ್ಮಾನವೇ ಅಂತಿಮ.

೧೩. ಪಿಎಚ್.ಡಿ. ಸಮಿತಿ (ರಿಸರ್ಚ್ ಎಡ್ವೈಸರಿ ಕಮಿಟಿ)

ಪಿಎಚ್.ಡಿ. ಶೈಕ್ಷಣಿಕ ಕಾರ್ಯಕ್ರಮವನ್ನು ಸುಗಮವಾಗಿ ನಡೆಸಲು ವಿಭಾಗ/ವಿಷಯವಾರು ಪಿಎಚ್.ಡಿ. ಸಮಿತಿ (ರಿಸರ್ಚ್ ಎಡ್ವೈಸರಿ ಕಮಿಟಿ)ಯನ್ನು ವಿಶ್ವವಿದ್ಯಾಲಯ ರಚಿಸಬೇಕು. ಸದರಿ ಸಮಿತಿಯು ಈ ಕೆಳಕಂಡ ಸದಸ್ಯರನ್ನು ಒಳಗೊಂಡಿರಬೇಕು.

  1. ಆಯಾ ನಿಕಾಯದ ಡೀನರು               ಅಧ್ಯಕ್ಷರು
  2. ಅಧ್ಯಕ್ಷರು, ಅಧ್ಯಯನ ಮಂಡಳಿ          ಸದಸ್ಯರು

(ಇವರು ಹಾಜರಿಲ್ಲದ ಸಂದರ್ಭದಲ್ಲಿ ವಿಭಾಗದ ಹಿರಿಯ ಪ್ರಾಧ್ಯಾಪಕರು ಸದಸ್ಯರಾಗಿರುತ್ತಾರೆ)

  1. ಸಂಬಂಧಪಟ್ಟ ಮಾರ್ಗದರ್ಶಕರು               ಸದಸ್ಯರು
  2. ಒಬ್ಬರು ಆಂತರಿಕ ವಿಷಯ ತಜ್ಞರು (ಮಾನ್ಯ ಕುಲಪತಿಗಳಿಂದ ನಾಮ ನಿರ್ದೇಶಿತರು) ಸದಸ್ಯರು
  3. ಆಯಾ ವಿಭಾಗದ ಮುಖ್ಯಸ್ಥರು                  ಸದಸ್ಯ ಸಂಚಾಲಕರು

ನಿಕಾಯದ ಡೀನರಿಗೆ ಕಾರಣಾಂತರಗಳಿಂದ ಸಭೆಯ ಅಧ್ಯಕ್ಷತೆಯನ್ನು ವಹಿಸಲು ಸಾಧ್ಯವಾಗದಿದ್ದಾಗ, ಡೀನ್ ಅವರ ಅನುಮತಿ ಪಡೆದು ವಿಭಾಗದ ಹಿರಿಯ ಪ್ರಾಧ್ಯಾಪಕರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಡೀನ್‌ರಿಗೆ ವರದಿ ಸಲ್ಲಿಸಬೇಕು. ಡೀನ್ ಶಿಫಾರಸ್ಸಿನ ಬಳಿಕ ಮಾನ್ಯ ಕುಲಪತಿಗಳಿಗೆ ಕಳುಹಿಸುವುದು.

ಪಿಎಚ್.ಡಿ. ಸಮಿತಿಯು ವರ್ಷದಲ್ಲಿ ಕನಿಷ್ಠ ಎರಡು ಬಾರಿ ಸಭೆ ಸೇರಬೇಕು.

೧೪. ಪಿಎಚ್.ಡಿ. ಸಮಿತಿಯ ಕರ್ತವ್ಯ ಹಾಗೂ ಜವಾಬ್ದಾರಿಗಳು

ನೋಂದಣಿ ಪೂರ್ವ ಕಮ್ಮಟ(ಕೋರ್ಸ್‌ವರ್ಕ್)ವನ್ನು ಆಯೋಜಿಸುವುದು ಹಾಗೂ ನೋಂದಣಿ ಸ್ಥಿರೀಕರಣಕ್ಕೆ ಅಧ್ಯಯನ ಮಂಡಳಿ ಅನುಮೋದನೆಗೆ ಶಿಫಾರಸ್ಸು ಮಾಡುವುದು.

ಪಿಎಚ್.ಡಿ. ಅಧ್ಯಯನ ಪ್ರಗತಿ, ನೋಂದಣಿ ರದ್ಧತಿ, ಇತ್ಯಾದಿ ಸಂದರ್ಭದಲ್ಲಿ ನಿಕಾಯದ ಡೀನ್‌ರ ಅನುಮತಿ ಪಡೆಯಬೇಕು. ಮಾರ್ಗದರ್ಶಕರು ಹಾಗೂ ಅಧ್ಯಯನ ವಿಭಾಗದ ಮುಖ್ಯಸ್ಥರು ಶಿಫಾರಸ್ಸು ಮಾಡಿದ ಪಿಎಚ್.ಡಿ. ನೋಂದಣಿ ಪಡೆದುಕೊಂಡ ವಿದ್ಯಾರ್ಥಿಯ ಅರ್ಧವಾರ್ಷಿಕ ಪ್ರಗತಿ ವರದಿಯನ್ನು ಅನುಮೋದಿಸುವುದು.

ಡೀನ್ ಅವರ ಅಧ್ಯಕ್ಷತೆಯಲ್ಲಿ ಖಾಯಂ ನೋಂದಣಿ ಪೂರ್ವ ಮತ್ತು ಮಹಾಪ್ರಬಂಧ ಸಲ್ಲಿಕೆ ಪೂರ್ವದಲ್ಲಿ ಸಂವಾದ ಗೋಷ್ಠಿಗಳನ್ನು (ಕಲೋಕಿಯಂ) ಏರ್ಪಡಿಸುವುದು ಹಾಗೂ ಮಹಾಪ್ರಬಂಧ ಸಲ್ಲಿಸಲು ಅನುಮತಿ ನೀಡುವುದು.

ವಿದ್ಯಾರ್ಥಿಯು ಕೋರಿಕೊಂಡರೆ ಮಾರ್ಗದರ್ಶಕರ ಶಿಫಾರಸ್ಸಿನ ಆಧಾರದ ಮೇಲೆ ಮಹಾಪ್ರಬಂಧದ ಶೀರ್ಷಿಕೆ ಬದಲಾವಣೆಗೆ ಅಗತ್ಯ ಶಿಫಾರಸ್ಸು ಮಾಡುವುದು.

ಪಿಎಚ್.ಡಿ. ಸಮಿತಿಯು ಸಂಶೋಧನ ಕಾರ್ಯಕ್ಕೆ ವಿದ್ಯಾರ್ಥಿಯು ಅಣಿಗೊಂಡಿರುವುದನ್ನು ಪರಿಶೀಲಿಸಿ ಅಗತ್ಯ ಶಿಫಾರಸ್ಸು ಮಾಡುವುದು. ಆದಾಗ್ಯೂ ಮಾರ್ಗದರ್ಶಕರೊಂದಿಗೆ ಸಮಾಲೋಚಿಸಿ ಅಧ್ಯಯನದ ಶೀರ್ಷಿಕೆ, ವ್ಯಾಪ್ತಿ, ಉದ್ದೇಶಿತ ಸಂಶೋಧನೆಯ ವಿಧಿವಿಧಾನ, ರೂಪುರೇಷೆಯನ್ನು ಬದಲಾಯಿಸಲು ಸಲಹೆ ನೀಡುವುದು.

ಪಿಎಚ್.ಡಿ. ಅಧ್ಯಯನದ ಕಾರ‍್ಯಕ್ರಮಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯವು ಕಾಲಕಾಲಕ್ಕೆ ನಿರ್ದೇಶಿಸುವಂತಹ ಇತರೆ ಕರ್ತವ್ಯಗಳನ್ನು ನಿರ್ವಹಿಸುವುದು.

 ೧೫. ಕೋರ್ಸ್‌ವರ್ಕ್

ತಾತ್ಕಾಲಿಕ ನೋಂದಣಿ ಪಡೆದ ಎಲ್ಲ ವಿದ್ಯಾರ್ಥಿಗಳು ಗರಿಷ್ಠ ಆರು ತಿಂಗಳ ಅವಧಿಯ ಕೋರ್ಸ್‌ವರ್ಕ್ ಅನ್ನು ತೆಗೆದುಕೊಳ್ಳಬೇಕು. ಇದು ಆಂತರಿಕ ಹಾಗೂ ಬಾಹ್ಯ ವಿದ್ಯಾರ್ಥಿಗಳಿಬ್ಬರಿಗೂ ಕಡ್ಡಾಯ.

ಪಿಎಚ್.ಡಿ. ಅಧ್ಯಯನದ ಕೋರ್ಸ್‌ವರ್ಕ್ ೧೦೦ ಅಂಕಗಳ ಮೂರು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಕೋರ್ಸ್-೧ ಸಂಶೋಧನ ವಿಧಿವಿಧಾನ, ಕೋರ್ಸ್-೨ ಪ್ರಧಾನ ಪೂರಕ ವಿಷಯಗಳು, ಕೋರ್ಸ್-೩ ವಿಶೇಷ ಪರಿಣತಿ ಕ್ಷೇತ್ರ. ಇದಲ್ಲದೇ ೫೦ ಅಂಕಗಳ ಮೌಖಿಕ ಪರೀಕ್ಷೆ ಇರುತ್ತದೆ. ಆದಾಗ್ಯೂ, ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಕೋರ್ಸ್‌ಗಳಾದ ೧ ಹಾಗೂ ೨ ನಿರ್ದಿಷ್ಟ ವಿಭಾಗ/ವಿಷಯ/ಶಿಸ್ತಿನ ಎಲ್ಲ ವಿದ್ಯಾರ್ಥಿಗಳಿಗೆ ಒಂದೇ ರೀತಿಯಲ್ಲಿರುತ್ತದೆ.

ಪ್ರತಿ ಕೋರ್ಸ್ ಆರು ತಿಂಗಳ ೪೮ ಗಂಟೆಗಳ ಸಂಪರ್ಕ ತರಗತಿಯನ್ನು ಹೊಂದಿರುತ್ತದೆ. ಕೋರ್ಸ್-೧ ಹಾಗೂ ೨ರ ಬೋಧನಾ ತರಗತಿಗಳನ್ನು ವಿಭಾಗದ ಮುಖ್ಯಸ್ಥರು ಆಯೋಜಿಸಬೇಕು. ಕೋರ್ಸ್-೩ರ ಕಾರ‍್ಯಕ್ರಮವನ್ನು ಸಂಬಂಧಿಸಿದ ಮಾರ್ಗದರ್ಶಕರು ಆಯೋಜಿಸಬೇಕು. ಬಾಹ್ಯ ಹಾಗೂ ಆಂತರಿಕ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲು ಅರ್ಹರಾಗಬೇಕಾದರೆ ಕೋರ್ಸ್‌ನ ಒಟ್ಟು ಅವಧಿಯ ಕನಿಷ್ಠ ಶೇ. ೭೫ ಹಾಜರಾತಿಯನ್ನು ಹೊಂದಿರಬೇಕು.

ಕನಿಷ್ಠ ಶೇ. ೭೫ರಷ್ಟು ಹಾಜರಾತಿಯನ್ನು ಕೋರ್ಸ್‌ನಲ್ಲಿ ಪಡೆಯುವಲ್ಲಿ ವಿಫಲರಾದರೆ ಅಂಥವರು ಪರೀಕ್ಷೆ ತೆಗೆದುಕೊಳ್ಳಲು ಹಾಗೂ ಪಿಎಚ್.ಡಿ. ಅಧ್ಯಯನದ ನೋಂದಣಿಯ ಸ್ಥಿರೀಕರಣ ಪಡೆಯಲು ಅರ್ಹರಾಗುವುದಿಲ್ಲ. ಅವರು ಮುಂದಿನ ಸಾಲಿನಲ್ಲಿ ನಡೆಯುವ ಕೋರ್ಸ್‌ವರ್ಕ್ ತರಗತಿಗಳಿಗೆ ಹಾಜರಾಗಬೇಕು.

ಪಿಎಚ್.ಡಿ. ಅಧ್ಯಯನದ ಕೋರ್ಸ್‌ವರ್ಕ್‌ನ ರೂಪುರೇಷೆ ಈ ಕೆಳಕಂಡಂತಿರುತ್ತದೆ: (ಕೋರ್ಸ್‌ವರ್ಕ್‌ನ ಆಂತರಿಕ ಸ್ವರೂಪವನ್ನು ಅಗತ್ಯಕ್ಕನುಗುಣವಾಗಿ ಪರಿವರ್ತಿಸಿಕೊಳ್ಳುವ ಅಧಿಕಾರ ವಿಶ್ವವಿದ್ಯಾಲಯಕ್ಕಿರುತ್ತದೆ)

 

ಕ್ರ. ಸಂ.  ಕೋರ್ಸ್‌ನ ಹೆಸರು  ವಾರದ ಸಂಪರ್ಕ  ತರಗತಿಯ  ಗಂಟೆಗಳು ಗರಿಷ್ಠ ಅಂಕಗಳು ಒಟ್ಟು  ಪರೀಕ್ಷೆಯ ಒಟ್ಟು ಗಂಟೆಗಳು
ನಿರಂತರ ಮೇಲ್ವಿಚಾರಣೆಯ ಮೌಲ್ಯಮಾಪನ ಕೋರ್ಸ್‌ನ ಅಂತ್ಯದ ಪರೀಕ್ಷೆ
೧. ಕೋರ್ಸ್-೧ ಸಂಶೋಧನ ವಿಧಿ ವಿಧಾನಗಳು ೦೩ ೨೫ ೭೫ ೧೦೦ ೦೩
೨. ಕೋರ್ಸ್-೨   ಪ್ರದಾನ ಪೂರಕ ವಿಷಯ ೦೩ ೨೫ ೭೫ ೧೦೦ ೦೩
೩. ಕೋರ್ಸ್-೩ ವಿಶೇಷ ಪರಿಣಿತಿಯ ಕ್ಷೇತ್ರ ೦೩ ೨೫ ೭೫ ೧೦೦ ೦೩
ಒಟ್ಟು ೭೫ ೨೨೫ ೩೦೦
ಸಂದರ್ಶನ ೫೦

 

ಕೋರ್ಸ್‌ವರ್ಕ್‌ನ ನಿರಂತರ ಮೇಲ್ವಿಚಾರಣೆಯ ಅಂಕಗಳನ್ನು ಕೋರ್ಸ್‌ನ ಅಧ್ಯಾಪಕರು ಈ ಕೆಳಕಂಡ ಅಂಶಗಳ ಆಧಾರದ ಮೇಲೆ ನೀಡಬೇಕು.

ಅ)   ಸಂಪ್ರಬಂಧ ರಚನೆ                 –               ೧೦      ಅಂಕಗಳು.

ಆ)   ಈವರೆಗಿನ ಅಧ್ಯಯನಗಳ ಸಮೀಕ್ಷೆ    –          ೧೦      ಅಂಕಗಳು

ಇ)   ಪ್ರಬಂಧ ಮಂಡನೆ               –                   ೦೫    ಅಂಕಗಳು

ಸಂಬಂಧಿಸಿದ ವಿಭಾಗದ ಅಧ್ಯಯನ ಮಂಡಳಿ ಮೂರು ಕೋರ್ಸ್‌ಗಳ ರೂಪುರೇಷೆ ಸಿದ್ಧಪಡಿಸಿ ಅಂತಿಮವಾಗಿ ಅವುಗಳನ್ನು ಅನುಮೋದಿಸಬೇಕು.

 ೧೬. ಕೋರ್ಸ್‌ವರ್ಕ್‌ನ ಸ್ಥಳ

ತಾತ್ಕಾಲಿಕ ನೋಂದಣಿ ಪಡೆದ ಎಲ್ಲ ವಿದ್ಯಾರ್ಥಿಗಳು ಕನ್ನಡ ವಿಶ್ವವಿದ್ಯಾಲಯದ ಕೇಂದ್ರ ಸ್ಥಾನದಲ್ಲಿ (ವಿದ್ಯಾರಣ್ಯ ಆವರಣ) ಸಂಬಂಧಪಟ್ಟ ಅಧ್ಯಯನ ವಿಭಾಗಗಳಲ್ಲಿ ಕೋರ್ಸ್‌ವರ್ಕ್‌ನ್ನು ಪೂರೈಸಬೇಕು. ಪೂರ್ಣಕಾಲಿಕ/ ಆಂತರಿಕ, ಅರೆಕಾಲಿಕ/ಬಾಹ್ಯ, ಪ್ರಾಯೋಜಿತ, ವಿದೇಶಿ ಹಾಗೂ ಜೆ.ಆರ್.ಎಫ್. ವಿದ್ಯಾರ್ಥಿಗಳೆಲ್ಲರಿಗೂ ಇದು ಅನ್ವಯವಾಗುತ್ತದೆ.

೧೭. ಪರೀಕ್ಷೆ ಹಾಗೂ ಉತ್ತರ ಪತ್ರಿಕೆಗಳ ಮೌಲ್ಯಮಾಪನ.

ಸಂಬಂಧಿಸಿದ ವಿಭಾಗದ ಅಧ್ಯಯನ ಮಂಡಳಿಯು ಅನುಮೋದಿಸಿದ ತಜ್ಞ ಮೌಲ್ಯಮಾಪಕರ ಪಟ್ಟಿಯನ್ನು ಆಧರಿಸಿ ಪರೀಕ್ಷಾ ಮಂಡಳಿಯನ್ನು ರಚಿಸಬೇಕು. ಈ ಮೌಲ್ಯಮಾಪಕರ ಪಟ್ಟಿಗೆ ಅಧ್ಯಯನಾಂಗದ ನಿರ್ದೇಶಕರು ಮಾನ್ಯ ಕುಲಪತಿಗಳಿಂದ ಅನುಮತಿ ಪಡೆಯಬೇಕು.

ಪರೀಕ್ಷಾ ಮಂಡಳಿಯಿಂದ ಅನುಮೋದನೆಯನ್ನು ಪಡೆದು ಪರೀಕ್ಷಾ ಮಂಡಳಿಯ ಅಧ್ಯಕ್ಷರು ನಿರ್ದಿಷ್ಟ ಸಂಖ್ಯೆಯ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ ನಿರ್ದೇಶಕರು, ಅಧ್ಯಯನಾಂಗ ಇವರಿಗೆ ಕಳುಹಿಸಿಕೊಡಬೇಕು. ನಂತರ ಸದರಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ವ್ಯವಸ್ಥೆ ಮಾಡಬೇಕು. ಅಧ್ಯಯನ ವಿಭಾಗದ ಮುಖ್ಯಸ್ಥರು ಎಲ್ಲ ವಿದ್ಯಾರ್ಥಿಗಳಿಗೂ (ಬೇರೆ ಸಂಸ್ಥೆಗಳಲ್ಲಿ ಪಿಎಚ್.ಡಿ.ಗಾಗಿ ಕೆಲಸ ಮಾಡುತ್ತಿರುವುದನ್ನು ಒಳಗೊಂಡಂತೆ) ಪರೀಕ್ಷೆಯನ್ನು ವಿಭಾಗದಲ್ಲಿ ನಡೆಸಬೇಕು.

ಮೂರು ಗಂಟೆಗಳ ಅವಧಿಯ(ಪ್ರತಿ ಕೋರ್ಸ್‌ಗೆ ೭೫ ಅಂಕಗಳಂತೆ) ಪರೀಕ್ಷೆಯನ್ನು ಕೋರ್ಸ್‌ನ ಅಂತ್ಯದಲ್ಲಿ ನಡೆಸಬೇಕು. ಈ ಪರೀಕ್ಷೆ ಪ್ರತಿಯೊಂದು ಉತ್ತರ ಪತ್ರಿಕೆಯನ್ನು ಸಂಕೇತೀಕರಿಸಿರಬೇಕು. ವಿಭಾಗದ ಮುಖ್ಯಸ್ಥರ ಸೂಚನೆಯನ್ವಯ ವಿಭಾಗದ ಸದಸ್ಯರೇ ಆ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಬೇಕು.

೧೮. ತೇರ್ಗಡೆಯ ಕನಿಷ್ಠ ಅಂಕಗಳು ಮತ್ತು ಅಂಕ ಸುಧಾರಣೆಯ ಪರೀಕ್ಷೆ

ಕೋರ್ಸ್‌ವರ್ಕ್‌ನಲ್ಲಿ ಪಾಸಾಗಲು ಲಿಖಿತ ಪರೀಕ್ಷೆ, ಮೌಖಿಕ ಪರೀಕ್ಷೆ ಹಾಗೂ ನಿರಂತರ ಉಸ್ತುವಾರಿಯನ್ನು ಒಳಗೊಂಡಂತೆ ಪ್ರತಿಯೊಂದರಲ್ಲೂ ಶೇ. ೫೦ ಅಂಕಗಳನ್ನು ಪಡೆಯಬೇಕು. ಫಲಿತಾಂಶವನ್ನು ಒಟ್ಟು ಮೂರು ಕೋರ್ಸ್‌ಗಳ ಆಧಾರದ ಮೇಲೆ ಪ್ರಕಟಿಸಲಾಗುತ್ತದೆ.

ಲಿಖಿತ ಪ್ರಶ್ನೆ ಪತ್ರಿಕೆಯ ಮಾದರಿ :

೧. ದೀರ್ಘ ಪ್ರಬಂಧ ರೂಪದ ಪ್ರಶ್ನೆಗಳು     ೧ x ೨೦ = ೨೦

೨. ಪ್ರಬಂಧ ರೂಪದ ಪ್ರಶ್ನೆಗಳು              ೩ x ೧೦ = ೩೦

೩. ಟಿಪ್ಪಣಿ ರೂಪದ ಪ್ರಶ್ನೆಗಳು                 ೫ x ೫  = ೨೫

ಅನುತ್ತೀರ್ಣ ಹಾಗೂ ಗೈರು ಹಾಜರಾದ ವಿದ್ಯಾರ್ಥಿಗಳಿಗೆ ಮೊದಲ ಪರೀಕ್ಷೆ ನಡೆದ ಮೂರು ತಿಂಗಳ ಒಳಗೆ ಒಮ್ಮೆ ಮಾತ್ರ ಮರು ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿರುತ್ತದೆ. ಒಂದು ವೇಳೆ ಈ ಮರು ಪರೀಕ್ಷೆಯಲ್ಲೂ ಅನುತ್ತೀರ್ಣರಾದರೆ ಅಂತಹ ವಿದ್ಯಾರ್ಥಿಗಳ ತಾತ್ಕಾಲಿಕ ನೋಂದಣಿಯನ್ನು ರದ್ದುಗೊಳಿಸಲಾಗುತ್ತದೆ.

ಯಾವುದಾದರೂ ಒಂದು ವಿಷಯದಲ್ಲಿ ಅಥವಾ ಎರಡು ವಿಷಯದಲ್ಲಿ ಅನುತ್ತೀರ್ಣನಾಗಿ ಮರುಪರೀಕ್ಷೆಯಲ್ಲಿ ಉತ್ತೀರ್ಣನಾದರೆ ವಿದ್ಯಾರ್ಥಿಯ ಕೋರಿಕೆಯ ಮೇರೆಗೆ ನಿಗದಿತ ಶುಲ್ಕ ಪಾವತಿಸಿ ಕ್ರೋಡೀಕೃತ ಅಂಕಪಟ್ಟಿ ಪಡೆಯಲು ಅವಕಾಶವಿರುತ್ತದೆ.

 ೧೯. ಸಂಶೋಧನ ಪ್ರಸ್ತಾವ

ತಾತ್ಕಾಲಿಕ ನೋಂದಣಿಯನ್ನು ಪಡೆದ ಎಲ್ಲ ವಿದ್ಯಾರ್ಥಿಗಳು ಕೋರ್ಸ್‌ವರ್ಕ್‌ನ್ನು ಯಶಸ್ವಿಯಾಗಿ ಪೂರೈಸಬೇಕು. ಬಳಿಕ ವಿದ್ಯಾರ್ಥಿಯು ಸಂಶೋಧನ ಪ್ರಸ್ತಾವವನ್ನು ಅಧ್ಯಯನ ವಿಭಾಗದ ಮುಖ್ಯಸ್ಥರಿಗೆ ಸಲ್ಲಿಸಬೇಕು. ಅಧ್ಯಯನ ವಿಭಾಗದ ಮುಖ್ಯಸ್ಥರು ಪಿಎಚ್.ಡಿ. ಸಮಿತಿಯ ಸಭೆಯನ್ನು ಆಯೋಜಿಸಿ ಸದರಿ ಸಮಿತಿಯ ಮುಂದೆ ಸಂಶೋಧನ ಪ್ರಸ್ತಾವಗಳನ್ನು ಮಂಡಿಸಬೇಕು.

ಸಂಶೋಧನೆಯ ಉದ್ದೇಶ, ವಿಧಿವಿಧಾನ, ಸದರಿ ವಿಷಯ ಕುರಿತು ಈವರೆಗೆ ನಡೆದಿರುವ ಅಧ್ಯಯನಗಳು, ಅಧ್ಯಯನದ ಯೋಜನೆ ಹಾಗೂ ಅಧ್ಯಯನದ ಪ್ರಸ್ತುತತೆಯನ್ನು ಒಳಗೊಂಡ ಸವಿವರವಾದ ಅಧ್ಯಯನದ ಸಂಶೋಧನ ಪ್ರಸ್ತಾವವನ್ನು ಸಿದ್ಧಪಡಿಸಿ ನೋಂದಣಿ ಪೂರ್ವ ಸಂವಾದ ಗೋಷ್ಠಿಯಲ್ಲಿ ಪಿಎಚ್.ಡಿ. ಸಮಿತಿ ಮುಂದೆ ಮಂಡಿಸಬೇಕು.

ವಿದ್ಯಾರ್ಥಿಯ ವಿಷಯ ಮಂಡನೆ/ಸಿದ್ಧತೆ ತೃಪ್ತಿಕರವಾಗಿಲ್ಲದಿದ್ದರೆ ಪಿಎಚ್.ಡಿ. ಸಮಿತಿಯು ವಿದ್ಯಾರ್ಥಿಯ ಪ್ರಸ್ತಾವ ಮಂಡನೆಗೆ ಮತ್ತೊಂದು ಅವಕಾಶವನ್ನು ನೀಡಬಹುದು. ಮೊದಲ ಪ್ರಸ್ತಾವ ಮಂಡನೆ ಸಭೆಯಲ್ಲಿ ನಡೆದ ಮೂರು ತಿಂಗಳ ಒಳಗೆ ಪರಿಷ್ಕೃತ ಸಂಶೋಧನ ಪ್ರಸ್ತಾವವನ್ನು ಸಂಬಂಧಿಸಿದ ವಿದ್ಯಾರ್ಥಿ ಮಂಡಿಸಬೇಕು. ಎರಡನೆಯ ಪ್ರಯತ್ನದಲ್ಲೂ ವಿದ್ಯಾರ್ಥಿ ವಿಷಯ ಮಂಡಿಸುವುದರಲ್ಲಿ ವಿಫಲವಾದರೆ ಖಾಯಂ ನೋಂದಣಿ ಪಡೆಯಲು ಅರ್ಹರಾಗುವುದಿಲ್ಲ.

ಎಲ್ಲ ಅರ್ಹತೆಗಳನ್ನು ಹೊಂದಿದ ಹಾಗೂ ಪಿಎಚ್.ಡಿ. ಸಮಿತಿಯು ಶಿಫಾರಸ್ಸು ಮಾಡಿದ ಅರ್ಜಿಗಳನ್ನು ವಿಭಾಗದ ಮುಖ್ಯಸ್ಥರು ಅಧ್ಯಯನ ಮಂಡಳಿಗೆ ಅನುಮೋದನೆಗಾಗಿ ಕಳುಹಿಸಬೇಕು. ಆಯಾ ವಿಭಾಗದ ಪಿಎಚ್.ಡಿ. ಸಮಿತಿಯು ಆಯಾ ವಿದ್ಯಾರ್ಥಿಯ ಅಧ್ಯಯನ ಶಿಸ್ತನ್ನು ನಿರ್ಧರಿಸಬೇಕು. ಮಹಾಪ್ರಬಂಧದ ಶೀರ್ಷಿಕೆಯು ಯಾವ ಶಿಸ್ತಿಗೆ ಒಳಪಡುತ್ತಿದೆಂಬುದನ್ನು ಖಾಯಂ ನೋಂದಣಿ ಪೂರ್ವದಲ್ಲಿಯೇ ನಿರ್ಧರಿಸಬೇಕು.

ಸಂಬಂಧಿಸಿದ ಅಧ್ಯಯನ ಮಂಡಳಿಯು ಸಂಶೋಧನ ಪ್ರಸ್ತಾವಗಳನ್ನು ಸಮಗ್ರವಾಗಿ ಪರಿಶೀಲಿಸಿ ನಂತರ ಸದರಿ ಪ್ರಸ್ತಾವಗಳಿಗೆ ಅನುಮೋದನೆ ನೀಡುತ್ತದೆ. ಒಂದು ವೇಳೆ ಸಂಶೋಧನ ಪ್ರಸ್ತಾವದ ಶೀರ್ಷಿಕೆಯು ಮಂಡಳಿಗೆ ತೃಪ್ತಿಕರವಾಗಿಲ್ಲದಿದ್ದಲ್ಲಿ ಅಗತ್ಯ ಸಲಹೆಗಳೊಂದಿಗೆ ಸಂಶೋಧನ ಪ್ರಸ್ತಾವಗಳನ್ನು ಹಿಂತಿರುಗಿಸಬಹುದು. ಅಧ್ಯಯನ ಮಂಡಳಿಯಿಂದ ಸಲಹೆಗಳೊಂದಿಗೆ ಹಿಂತಿರುಗಿ ಬಂದ ಸಂಶೋಧನ ಪ್ರಸ್ತಾವಗಳನ್ನು ವಿದ್ಯಾರ್ಥಿಯು ಸಂಶೋಧನ ಮಾರ್ಗದರ್ಶಕರೊಂದಿಗೆ ಸಮಾಲೋಚಿಸಿ ಮಂಡಳಿಯ ಸಲಹೆಗಳನ್ವಯ ಅಗತ್ಯ ಮಾರ್ಪಾಡುಗಳನ್ನು ಮಾಡಿ ಅಧ್ಯಯನ ವಿಭಾಗದ ಮುಖ್ಯಸ್ಥರಿಗೆ ಮರು ಸಲ್ಲಿಸಬೇಕು. ವಿಭಾಗದ ಮುಖ್ಯಸ್ಥರು ಅನುಮೋದನೆ ನೀಡಿದ ಸಂಶೋಧನಾ ಪ್ರಸ್ತಾವಗಳನ್ನು ಖಾಯಂ ನೋಂದಣಿಗಾಗಿ ಅಗತ್ಯ ಕ್ರಮವಹಿಸಬೇಕು.

೨೦. ನೋಂದಣಿ ಸ್ಥಿರೀಕರಣ

ನೋಂದಣಿಪೂರ್ವ ಸಂವಾದ ಗೋಷ್ಠಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ನಿಗದಿತ ಸಮಯದಲ್ಲಿ ಅರ್ಜಿ ನಮೂನೆ-ಸಿ ಅನ್ನು ಭರ್ತಿಮಾಡಿ ಮುಂದಿನ ಕ್ರಮಕ್ಕಾಗಿ ಅಧ್ಯಯನ ವಿಭಾಗದ ಮುಖ್ಯಸ್ಥರಿಗೆ ಸಲ್ಲಿಸಬೇಕು. ವಿಭಾಗದ ಮುಖ್ಯಸ್ಥರು ಖಾಯಂ ನೋಂದಣಿಗಾಗಿ/ನೋಂದಣಿ ಸ್ಥಿರೀಕರಣದ ಅಧಿಸೂಚನೆ ಹೊರಡಿಸುವ ಸಲುವಾಗಿ ಸದರಿ ಅರ್ಜಿಯನ್ನು ನಿಗದಿತ ಸಮಯದಲ್ಲಿ ನಿರ್ದೇಶಕರು, ಅಧ್ಯಯನಾಂಗ ಇವರಿಗೆ ರವಾನಿಸಬೇಕು.

ನೋಂದಣಿ ಸ್ಥಿರೀಕರಣಕ್ಕಾಗಿ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸಿ ೧೫ ದಿನಗಳ ಒಳಗಾಗಿ ಅಗತ್ಯ ಅಧಿಸೂಚನೆಯನ್ನು ಅಧ್ಯಯನಾಂಗದ ನಿರ್ದೇಶಕರು  ಹೊರಡಿಸಬೇಕು. ಸದರಿ ಅಧಿಸೂಚನಾ ಪತ್ರವು ಸಂಶೋಧನೆ ಕೈಗೊಳ್ಳಲು ಅನುವು ಮಾಡಿಕೊಡುವ ಪತ್ರದಂತಿರಬೇಕು.

 ೨೧. ಪ್ರಗತಿ ವರದಿ

ನೋಂದಣಿ ಸ್ಥಿರೀಕರಣಗೊಂಡ ಬಳಿಕ ವಿದ್ಯಾರ್ಥಿಯು ನಿರಂತರವಾಗಿ ಆರು ತಿಂಗಳಿಗೊಮ್ಮೆ ವಿಭಾಗದ ಸಮಿತಿ ಮುಂದೆ ಹತ್ತು ಪುಟಗಳಿಗೆ ಕಡಿಮೆಯಿಲ್ಲದ ಪ್ರಗತಿ ವರದಿಯನ್ನು ಮಂಡಿಸಬೇಕು. ಹೀಗೆ ಮಂಡಿಸಿದ ಅಧ್ಯಯನ ವರದಿಯನ್ನು ಸಂಶೋಧನ ಮಾರ್ಗದರ್ಶಕರ ಮೂಲಕ ಅಧ್ಯಯನ ವಿಭಾಗದ ಮುಖ್ಯಸ್ಥರಿಗೆ ಸಲ್ಲಿಸಬೇಕು. ವಿಶ್ವವಿದ್ಯಾಲಯದ ವಿಸ್ತರಣಾ ಕೇಂದ್ರಗಳು, ಮಾನ್ಯತಾ ಸಂಸ್ಥೆಗಳು ವಿಶ್ವವಿದ್ಯಾಲಯದ ನಿರ್ದೇಶನದಂತೆ ಕ್ರಮವಹಿಸಬೇಕು. ಸದರಿ ಅರ್ಧವಾರ್ಷಿಕ ವರದಿಯು ಸಂಬಂಧಿಸಿದ ಕ್ಷೇತ್ರದಲ್ಲಿ ನಡೆದಿರುವ ಅಧ್ಯಯನಗಳ ಸಮೀಕ್ಷೆ, ಹೊಸ ಮಾಹಿತಿಗಳ ಸಂಗ್ರಹ, ಅಭಿವೃದ್ಧಿಪಡಿಸಿಕೊಂಡಿರುವ ವಿಧಾನಗಳು, ಸಂಶೋಧನೆಯ ಪ್ರಗತಿ, ಕಂಡುಕೊಂಡ ಹೊಸ ಶೋಧನೆಗಳನ್ನು ಸಮರ್ಥಿಸುವಂತಹ ಅರ್ಥಪೂರ್ಣ ಚರ್ಚೆಗಳನ್ನು ಒಳಗೊಂಡಿರಬೇಕು.

ವಿದ್ಯಾರ್ಥಿಯು ಪ್ರತಿ ವರ್ಷ ಫೆಬ್ರವರಿ ಮತ್ತು ಆಗಸ್ಟ್ ತಿಂಗಳಲ್ಲಿ ನಡೆಯುವ ಪಿಎಚ್.ಡಿ. ಸಮಿತಿಯ ಮುಂದೆ ಅಧ್ಯಯನ ಪ್ರಗತಿಯನ್ನು ಮಂಡಿಸುವುದರ ಜೊತೆಗೆ ಮುಂದಿನ ಆರು ತಿಂಗಳಲ್ಲಿ ಕೈಗೊಳ್ಳಬಹುದಾದ ಅಧ್ಯಯನದ ಯೋಜನೆಯ ವಿವರಗಳನ್ನು ಪ್ರಸ್ತುತಪಡಿಸಬೇಕು. ಪ್ರಗತಿ ವರದಿಯ ಜೊತೆಗೆ ಅರ್ಧವಾರ್ಷಿಕ ಶುಲ್ಕವನ್ನು ಫೆಬ್ರವರಿ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಕಡ್ಡಾಯವಾಗಿ ಪಾವತಿಸಬೇಕು.

ವಿದ್ಯಾರ್ಥಿಯು ಒಂದು ವರ್ಷದ ಅಂತರದಲ್ಲಿ ಸಕಾಲಕ್ಕೆ ಎರಡು ಅರ್ಧವಾರ್ಷಿಕ ವರದಿಯನ್ನು ಸಲ್ಲಿಸುವಲ್ಲಿ ವಿಫಲವಾದರೆ ಅಥವಾ ಎರಡು ಅರ್ಧವಾರ್ಷಿಕ ವರದಿಗಳು ತೃಪ್ತಿಕರವಾಗಿಲ್ಲದಿದ್ದರೆ ಪಿಎಚ್.ಡಿ. ಸಮಿತಿಯು ಸಂಬಂಧಿಸಿದ ಮಾರ್ಗದರ್ಶಕರೊಂದಿಗೆ ಸಮಾಲೋಚಿಸಿ ಅಂತಹ ವಿದ್ಯಾರ್ಥಿಯ ನೋಂದಣಿಯನ್ನು ರದ್ದುಪಡಿಸಲು ನಿರ್ದೇಶಕರು, ಅಧ್ಯಯನಾಂಗ ಇವರಿಗೆ ಶಿಫಾರಸ್ಸು ಮಾಡಬೇಕು.

೨೨. ನೋಂದಣಿಯ ಅವಧಿ

ಪ್ರತಿ ಪೂರ್ಣಕಾಲಿಕ/ಆಂತರಿಕ ವಿದ್ಯಾರ್ಥಿಯು ತಾತ್ಕಾಲಿಕ ನೋಂದಣಿ ಪಡೆದ ದಿನಾಂಕದಿಂದ ಕೋರ್ಸ್‌ವರ್ಕ್‌ನ್ನು ಒಳಗೊಂಡಂತೆ ಕನಿಷ್ಠ ಮೂರು ವರ್ಷಗಳು ಹಾಗೂ ಗರಿಷ್ಠ ಐದು ವರ್ಷಗಳ ಅವಧಿಯಲ್ಲಿ ಅಧ್ಯಯನ ಪೂರ್ಣಗೊಳಿಸಬೇಕು. ಹಾಗೆಯೇ ಅರೆಕಾಲಿಕ/ಬಾಹ್ಯ ವಿದ್ಯಾರ್ಥಿಯು ಕೋರ್ಸ್‌ವರ್ಕ್‌ನ್ನು ಒಳಗೊಂಡಂತೆ ಕನಿಷ್ಠ ಮೂರು ವರ್ಷಗಳು ಹಾಗೂ ಗರಿಷ್ಠ ಆರು ವರ್ಷಗಳ ಅವಧಿಯಲ್ಲಿ ಅಧ್ಯಯನ ಪೂರ್ಣಗೊಳಿಸಬೇಕು. ಇಲ್ಲದ್ದಿದಲ್ಲಿ ಪಿಎಚ್.ಡಿ. ನೋಂದಣಿ ತನ್ನಷ್ಟಕ್ಕೆ ರದ್ದಾಗುತ್ತದೆ. ಪಿಎಚ್.ಡಿ. ಅಧ್ಯಯನದ ಅವಧಿಯಲ್ಲಿ ಗರ್ಭಿಣಿ/ಹೆರಿಗೆಯಾದ ಮಹಿಳೆಯರಿಗೆ ಅಧ್ಯಯನದ ಅವಧಿಯಲ್ಲಿ ಒಮ್ಮೆ ಮಾತ್ರ ಎಂಟು ತಿಂಗಳ ಹೆಚ್ಚುವರಿ ಅವಧಿ ವಿಸ್ತರಣೆ ಪಡೆದುಕೊಳ್ಳಲು ಅವಕಾಶವಿದೆ. ಇದನ್ನು ವಿದ್ಯಾರ್ಥಿಗಳು ಆಯಾ ಸಂದರ್ಭದಲ್ಲಿ ಲಿಖಿತರೂಪದ ಕೋರಿಕೆಯೊಡನೆ ದಾಖಲೆಗಳನ್ನು ಸಲ್ಲಿಸಿ ಪಡೆಯಬೇಕು.

ಅನಿವಾರ್ಯವಾದ ವಿಶೇಷ ಪ್ರಕರಣಗಳಲ್ಲಿ ಮಾರ್ಗದರ್ಶಕರು ಹಾಗೂ ಪಿಎಚ್.ಡಿ. ಸಮಿತಿಯು ನೀಡಿದ ಸಮರ್ಥನೀಯ ಕಾರಣಗಳನ್ನು ಉಲ್ಲೇಖಿಸಿ ಅಗತ್ಯ ಶಿಫಾರಸ್ಸು ಮಾಡಿದಲ್ಲಿ ಕುಲಪತಿಗಳು ಅವಧಿಯನ್ನು ಗರಿಷ್ಠ ಆರು ತಿಂಗಳು ವಿಸ್ತರಿಸಬಹುದಾಗಿದೆ. ವಿದ್ಯಾರ್ಥಿಯು ನಿಗದಿತ ಶುಲ್ಕ ಪಾವತಿಸಿ ಈ ಹಿಂದಿನ ಅವಧಿ ಪೂರ್ಣಗೊಳ್ಳುವ ಮೊದಲೇ ವಿಸ್ತರಣೆಗಾಗಿ ಮನವಿ ಸಲ್ಲಿಸುವುದು ಕಡ್ಡಾಯ.

ಅಸಾಧಾರಣ ಸಂದರ್ಭಗಳಲ್ಲಿ ವಿದ್ಯಾರ್ಥಿಗೆ ಮಹಾಪ್ರಬಂಧ ಸಲ್ಲಿಸಲು ಅನನುಕೂಲವುಂಟಾಗುವಂತಿದ್ದರೆ, ಒಂದು ಅವಧಿಯ ವಿಸ್ತರಣೆಯ ನಂತರವು ಹೆಚ್ಚಿನ ಅವಧಿ ವಿಸ್ತರಣೆ ತುಂಬಾ ಅಗತ್ಯ ಎಂದು ಕಂಡುಬಂದರೆ ಅಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಯು ತಮ್ಮ ಮಾರ್ಗದರ್ಶಕರ ಮೂಲಕ ಅಧ್ಯಯನ ವಿಭಾಗದ ಮುಖ್ಯಸ್ಥರಿಗೆ ಮನವಿಯನ್ನು ಸಲ್ಲಿಸಬೇಕು. ಸಂಬಂಧಿಸಿದ ಅಧ್ಯಯನ ವಿಭಾಗದ ಮುಖ್ಯಸ್ಥರು ಸದರಿ ಮನವಿಯ ಪರಿಗಣನೆಗೆ ಪಿಎಚ್.ಡಿ. ಸಮಿತಿ ಮುಂದೆ ಮಂಡಿಸಬೇಕು. ಪಿಎಚ್.ಡಿ. ಸಮಿತಿಯ ಶಿಫಾರಸ್ಸನ್ನು ವಿಭಾಗದ ಮುಖ್ಯಸ್ಥರು ಅಧ್ಯಯನಾಂಗದ ನಿರ್ದೇಶಕರ ಮೂಲಕ ಮಾನ್ಯ ಕುಲಪತಿಗಳಿಗೆ ಮಂಡಿಸಬೇಕು. ಈ ಸಂಬಂಧ ಮಾನ್ಯ ಕುಲಪತಿಗಳು ಕೈಗೊಳ್ಳುವ ತೀರ್ಮಾನವೇ ಅಂತಿಮವಾಗಿರುತ್ತದೆ. ಇಂಥ ಸಂದರ್ಭದಲ್ಲಿ ವಿಶ್ವವಿದ್ಯಾಲಯ ನಿಗದಿಪಡಿಸಿದ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಹಾಗೆಯೇ ಈ ವಿಸ್ತರಣೆಗೆ ಅವಧಿ ಕೇವಲ ಆರು ತಿಂಗಳದ್ದಾಗಿರುತ್ತದೆ.

ವಿದ್ಯಾರ್ಥಿಯು ಈ ಅಂತಿಮ ವಿಸ್ತರಣೆಯ ಅವಧಿಯೊಳಗೂ ಮಹಾಪ್ರಬಂಧವನ್ನು ಮಂಡಿಸುವಲ್ಲಿ ವಿಫಲವಾದರೆ ನೋಂದಣಿ ರದ್ದಾಗುತ್ತದೆ ಅಥವಾ ಮರುನೋಂದಣಿ ಪಡೆದು ಅಧ್ಯಯನವನ್ನು ಮುಂದುವರಿಸಬಹುದು. ಮರುನೋಂದಣಿಯ ಸಂದರ್ಭದಲ್ಲಿ ವಿದ್ಯಾರ್ಥಿಯು ಪ್ರವೇಶ ಪರೀಕ್ಷೆ, ಕೋರ್ಸ್‌ವರ್ಕ್‌ಗಳಿಂದ ವಿನಾಯಿತಿ ನೀಡಬಹುದು. ಆದರೆ ಪಿಎಚ್.ಡಿ. ಅಧ್ಯಯನ ಮುಂದುವರೆಸಲು ಮಾರ್ಗದರ್ಶಕ ಹಾಗೂ ಪಿಎಚ್.ಡಿ. ಸಮಿತಿಯ ಒಪ್ಪಿಗೆ ಅಗತ್ಯ. ಅಧ್ಯಯನ, ಪ್ರಗತಿ ವರದಿ, ಪಿಎಚ್.ಡಿ. ಮಹಾಪ್ರಬಂಧ ಸಲ್ಲಿಸಲು ಇರುವ ಪ್ರಸ್ತುತ ನಿಯಮಗಳು ಮರುನೋಂದಣಿ ಪಡೆದವರಿಗೂ ಅನ್ವಯವಾಗುತ್ತದೆ.

ಅರೆಕಾಲಿಕ/ಬಾಹ್ಯ ವಿದ್ಯಾರ್ಥಿಯು ಕೂಡ ಸೂಕ್ತ ಕಾರಣಗಳಿದ್ದರೆ ಪೂರ್ಣಕಾಲಿಕ/ಆಂತರಿಕ ವಿದ್ಯಾರ್ಥಿಯಾಗಿ ಅಧ್ಯಯನ ಮಾಡಲು ಅನುಮತಿ ನೀಡಬಹುದು. ಅಂತಹ ನೋಂದಣಿಗಳ ಅವಧಿ ನೋಂದಣಿ ವಿಧಾನ ಬದಲಾದ ಅವಧಿಯಿಂದ ಮೂರು ವರ್ಷಗಳದ್ದಾಗಿರುತ್ತದೆ ಅಥವಾ ಮರು ನೋಂದಣಿಯಾದ ದಿನಾಂಕದಿಂದ ನಾಲ್ಕು ವರ್ಷಗಳದ್ದಾಗಿರುತ್ತದೆ. ಈ ಅವಧಿಗಳಲ್ಲಿ ಯಾವುದು ಮೊದಲೊ ಅದು ಅನ್ವಯವಾಗುತ್ತದೆ. ಪೂರ್ಣಕಾಲಿಕ/ ಆಂತರಿಕ ವಿದ್ಯಾರ್ಥಿಯು ಕೂಡ ಬಾಹ್ಯ/ಅರೆಕಾಲಿಕ  ವಿದ್ಯಾರ್ಥಿಯಾಗಿ ಅಧ್ಯಯನ ಮಾಡಬಹುದು. ಆದರೆ ಅಂತಹ ವಿದ್ಯಾರ್ಥಿಗಳ ಅಧ್ಯಯನ ಅವಧಿ ಖಾಯಂ ನೋಂದಣಿ ಪಡೆದ ದಿನಾಂಕದಿಂದ ನಾಲ್ಕು  ವರ್ಷಗಳದ್ದಾಗಿರುತ್ತದೆ. ಪೂರ್ಣಕಾಲಿಕ/ಆಂತರಿಕ ವಿದ್ಯಾರ್ಥಿಯಾಗಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿ ಅರೆಕಾಲಿಕ/ಬಾಹ್ಯ ವಿದ್ಯಾರ್ಥಿಯಾಗಿ ಪರಿವರ್ತನೆಯಾದರೆ ನಿಯಮಾನುಸಾರ ಅಂತಹವರು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ನಿಗದಿತ ನಿಯಮಗಳಿಗೆ ಒಳಗಾಗುತ್ತಾರೆ.

ವಿದ್ಯಾರ್ಥಿಯು ನೋಂದಣಿ ಪಡೆದ ಒಂದು ವರ್ಷದ ಅವಧಿಯವರೆಗೆ ತಮ್ಮ ಮಹಾಪ್ರಬಂಧದ ಶೀರ್ಷಿಕೆಯನ್ನು ಬದಲಾಯಿಸಿಕೊಳ್ಳುವುದು ಅನಿವಾರ್ಯವೆಂದು ಸಕಾರಣ ನೀಡಿ ಮಾರ್ಗದರ್ಶಕರ ದೃಢೀಕರಣ ಪತ್ರದ ಸಹಿತ ಪಿಎಚ್.ಡಿ. ಸಮಿತಿಯ ಶಿಫಾರಸ್ಸಿಗೆ ಒಳಪಟ್ಟು ಅನುಮತಿ ನೀಡಬಹುದು.

೨೩. ಮಹಾಪ್ರಬಂಧದ ವಿನ್ಯಾಸ

ಅಧ್ಯಯನದ ಪ್ರಬಂಧವು ಎ೪ ಆಕಾರದಲ್ಲಿರಬೇಕು. ನುಡಿ ೧೪ ಪಾಯಿಂಟ್ ಅಕ್ಷರಗಳು ಮತ್ತು ಪ್ರತಿ ಪುಟಕ್ಕೆ ಕನಿಷ್ಠ ೩೦ ಸಾಲುಗಳು ಇರಬೇಕು. ೨೩ ಸೆಂ.ಮೀ. ಉದ್ದ, ೧೩ ಸೆಂ.ಮೀ ಅಗಲದಲ್ಲಿ ಡಿ.ಟಿ.ಪಿ. ಮಾಡಿರಬೇಕು. ಅನುಬಂಧವನ್ನು ಹೊರತುಪಡಿಸಿ ಕನಿಷ್ಠ ೨೦೦ ಪುಟಗಳು ಇರಲೇಬೇಕು ಮತ್ತು ಗರಿಷ್ಠ ೩೦೦ ಪುಟವನ್ನು ದಾಟಕೂಡದು. ಅರಿಕೆ, ಅರ್ಪಣೆ, ಕೃತಜ್ಞತೆ ಪುಟಗಳು ಇರಕೂಡದು. ಅಡಿಟಿಪ್ಪಣಿಗಳು, ಪರಾಮರ್ಶನ ಗ್ರಂಥಗಳು ಇತ್ಯಾದಿ ಅಧ್ಯಯನಕ್ಕೆ ಪೂರಕವಾದ ಅನುಬಂಧಗಳು ಇರಬೇಕು. ಅಭ್ಯರ್ಥಿ ಮತ್ತು ಮಾರ್ಗದರ್ಶಕರ ಪ್ರಮಾಣ ಪತ್ರಗಳ ನಂತರ ಪರಿವಿಡಿ ಇರಬೇಕು. ’ಕನ್ನಡ ವಿಶ್ವವಿದ್ಯಾಲಯಕ್ಕೆ ಪಿಎಚ್.ಡಿ ಪದವಿಗಾಗಿ ಸಲ್ಲಿಸಿದ ಮಹಾಪ್ರಬಂಧ’ ಎಂದು ನಮೂದಿಸಿರಬೇಕು. ಕೆಲವೊಂದು ವಿಷಯಗಳ ಸಂದರ್ಭದಲ್ಲಿ ಪುಟಗಳ ಮಿತಿಯನ್ನು ಸಕಾರಣವಾಗಿ ಆಯಾ ವಿಭಾಗದ ಪಿಎಚ್.ಡಿ. ಸಮಿತಿ ನಿರ್ಣಯಿಸಬಹುದಾಗಿದೆ.

೨೪. ಪಿಎಚ್.ಡಿ. ಮಹಾಪ್ರಬಂಧದ ಭಾಷೆ

ಅಭ್ಯರ್ಥಿಯು ಪಿಎಚ್.ಡಿ. ಮಹಾಪ್ರಬಂಧವನ್ನು ಕನ್ನಡದಲ್ಲಿಯೇ ಬರೆಯಬೇಕು. ಅನಿವಾರ್ಯ ಪ್ರಸಂಗಗಳಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧವನ್ನು ಬರೆಯಬೇಕಾದಲ್ಲಿ ಖಾಯಂ ನೋಂದಣಿ ಪೂರ್ವದಲ್ಲಿ ವಿಭಾಗದ ಅಧ್ಯಯನ ಮಂಡಳಿಯ ಒಪ್ಪಿಗೆಯನ್ನು ಪಡೆಯುವುದು ಅಗತ್ಯ. ನಂತರ ಅಧ್ಯಯನಾಂಗದ ಮೂಲಕ ಕುಲಪತಿಗಳ ಒಪ್ಪಿಗೆಯನ್ನು ಪಡೆಯಬೇಕು. ಹೀಗೆ ಒಪ್ಪಿಗೆ ಪಡೆದು ಸಲ್ಲಿಸಿದ ಮಹಾಪ್ರಬಂಧದ ಕನ್ನಡ ಅನುವಾದದ ಪ್ರತಿ ಒಂದನ್ನು ಹಾಗೂ ಸಿ.ಡಿ.ಗಳನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸುವುದು ಕಡ್ಡಾಯ.

೨೫. ಮಹಾಪ್ರಬಂಧ ಸಲ್ಲಿಕೆ

ಪ್ರತಿಯೊಬ್ಬ ವಿದ್ಯಾರ್ಥಿಯು ಮಹಾಪ್ರಬಂಧ ಸಲ್ಲಿಕೆಯ ಉದ್ದೇಶಿತ ದಿನಾಂಕಕ್ಕೆ ಆರು ತಿಂಗಳ ಮೊದಲು ಮಹಾಪ್ರಬಂಧದ ಸಲ್ಲಿಕೆಗೆ ಅನುಮತಿ ಕೋರಿ ಮಹಾಪ್ರಬಂಧದ ಎರಡು ಕರಡುಪ್ರತಿಗಳನ್ನು ಹಾಗೂ ಅಂತಿಮ ಸಾರಲೇಖದ ೧೦ ಪ್ರತಿಗಳೊಂದಿಗೆ ಅರ್ಜಿಯನ್ನು ಮಾರ್ಗದರ್ಶಕರ ಮೂಲಕ ವಿಭಾಗದ ಮುಖ್ಯಸ್ಥರಿಗೆ ಸಲ್ಲಿಸಬೇಕು. ವಿಭಾಗದ ಮುಖ್ಯಸ್ಥರು, ಡೀನ್ ಅವರೊಡನೆ ಸಮಾಲೋಚಿಸಿ ನೋಂದಣಿಪೂರ್ವ ಸಂವಾದಗೋಷ್ಠಿ (ಕಲೋಕ್ವಿಯಂ)ಯನ್ನು ಏರ್ಪಡಿಸಬೇಕು.

ವಿದ್ಯಾರ್ಥಿಯು ಪ್ರಕಟಿಸಿದ ಕನಿಷ್ಠ ಎರಡು ಸಂಶೋಧನ ಲೇಖನಗಳನ್ನು (ಅಥವಾ ಲೇಖನಗಳನ್ನು ಪ್ರಕಟಣೆಗೆ ಸಂಬಂಧಿಸಿದ ನಿಯತಕಾಲಿಕೆಯು ಅನುಮತಿ ನೀಡಿದ ಪತ್ರವನ್ನು ಅನುಲಕ್ಷಿಸಿ) ವಿದ್ಯಾರ್ಥಿಯ ಅರ್ಜಿ ಹಾಗೂ ಅಂತಿಮ ಸಾರಲೇಖವನ್ನು ವಿಭಾಗದ ಮುಖ್ಯಸ್ಥರು ಪಿಎಚ್.ಡಿ. ಸಮಿತಿಯ ಅನುಮೋದನೆಗಾಗಿ ಇಡಬೇಕು. ಅನುಮೋದನೆ ಪಡೆದ ಬಳಿಕ ನಡಾವಳಿ ಸಹಿತ ಕಡತದ ಮೂಲಕ ಅಧ್ಯಯನಾಂಗದ ನಿರ್ದೇಶಕರ ಅವಗಾಹನೆಗೆ ಮಂಡಿಸಬೇಕು. ಲೇಖನದ ಆಫ್‌ಪ್ರಿಂಟ್ ಅಥವಾ ಲೇಖನವು ಪ್ರಕಟಗೊಳ್ಳುವ ನಿರೀಕ್ಷೆಯ ಪತ್ರದ ಪ್ರತಿಗಳನ್ನು ಈ ಸಂದರ್ಭದಲ್ಲಿ ನೀಡಬೇಕು.

ಮಹಾಪ್ರಬಂಧ ಸಲ್ಲಿಕೆಯ ಅನುಮತಿಗಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಯು ಪಿಎಚ್.ಡಿ. ಸಮಿತಿಯ ಉಪಸ್ಥಿತಿಯಲ್ಲಿ ಕಲೋಕ್ವಿಯಂನಲ್ಲಿ ಮಹಾಪ್ರಬಂಧದ ಮುಖ್ಯ ಶೋಧವನ್ನು ಮಂಡಿಸಬೇಕು.

ಅಸಾಧಾರಣ ಸಂದರ್ಭವನ್ನು ಹೊರತುಪಡಿಸಿ ಕಲೋಕ್ವಿಯಂ ಸಾಮಾನ್ಯವಾಗಿ ವಿದ್ಯಾರ್ಥಿಯ ನೋಂದಣಿ ಅವಧಿ, ಮುಕ್ತಾಯದ ಮೊದಲಿನ ಆರು ತಿಂಗಳೊಳಗಾಗಿ ಕಡ್ಡಾಯವಾಗಿ ಮುಗಿಯಬೇಕು.

ಮಹಾಪ್ರಬಂಧದ ಪೂರ್ಣ ಬರವಣಿಗೆಯ ಕರಡುಪ್ರತಿಯನ್ನು ಮಾತ್ರ ಕಲೋಕ್ವಿಯಂಗೆ ಸಲ್ಲಿಸಬೇಕು. ಪ್ರಬಂಧ ಸಲ್ಲಿಕೆಯ ಪ್ರಕ್ರಿಯೆ ಇಲ್ಲಿಂದಲೇ ಆರಂಭವಾಗುತ್ತದೆ. ವಿದ್ಯಾರ್ಥಿಯು ತಾಂತ್ರಿಕ ಅಗತ್ಯಗಳನ್ನು ನಿಯಮಾನುಸಾರ ಪೂರೈಸಿದ ಬಗೆಗೆ ಮುಖ್ಯಸ್ಥರು ದೃಢೀಕರಿಸಿದ ಬಳಕವೇ ಕಲೋಕ್ವಿಯಂ ನಡೆಸುವುದು. ಯಾವುದೇ ನಿಯಮಪಾಲನೆ ಅಪೂರ್ಣವೆಂದು ಕಂಡುಬಂದಲ್ಲಿ ವಿಭಾಗದ ಮುಖ್ಯಸ್ಥರೆ ಹೊಣೆಗಾರರಾಗುತ್ತಾರೆ. ತಾಂತ್ರಿಕವಾಗಿ ಅಪೂರ್ಣವಾಗಿದ್ದಲ್ಲಿ (ಪ್ರಬಂಧ ವಿನ್ಯಾಸ ಸಹಿತ) ಅಧ್ಯಯನಾಂಗವು ಕಡತವನ್ನು ಸ್ವೀಕರಿಸಬಾರದು. ಇದಕ್ಕೆ ಅನುಗುಣವಾಗಿ ಮಹಾಪ್ರಬಂಧ ಮತ್ತು ಸಾರಲೇಖಗಳನ್ನು ಸಲ್ಲಿಸದಿದ್ದಲ್ಲಿ ನೋಂದಣಿ ರದ್ದಾಗುತ್ತದೆ.  ಹಾಗೆಯೇ ಕಲೋಕ್ವಿಯಂ ನಡೆಸಲು ಸಾಧ್ಯವಾಗದಿದ್ದಲ್ಲಿ ವಿಭಾಗದ ಮುಖ್ಯಸ್ಥರು ಅದರ ದಿನಾಂಕವನ್ನು ಮುಂದೂಡುವ ಬಗೆಗೆ ಒಂದು ತಿಂಗಳ ಮುಂಚಿತವಾಗಿ ಅಧ್ಯಯನಾಂಗದ ನಿರ್ದೇಶಕರ ಮೂಲಕ ಮಾನ್ಯ ಕುಲಪತಿಗಳಿಂದ ಅನುಮತಿ ಪಡೆಯಬೇಕು. ಮುಂದೂಡುವ ವಿಷಯವು ಪಿಎಚ್.ಡಿ. ಸಮಿತಿಯಿಂದ ಅನುಮೋದನೆ ಪಡೆದಿರಬೇಕು.

ವಿದ್ಯಾರ್ಥಿಯು ಕೈಗೊಂಡಿರುವ ಸಂಶೋಧನೆ, ಪಿಎಚ್.ಡಿ. ಸಮಿತಿಯ ಉಪಸ್ಥಿತಿಯಲ್ಲಿ ನಡೆಯುವ ಕಲೋಕ್ವಿಯಂ ಮುಂದೆ ಮಂಡಿಸಿದ/ಪ್ರಸ್ತುತ ಪಡಿಸಿದ ಅಂತಿಮ ಸಾರಲೇಖದ ವಿವರ ಹಾಗೂ ಪ್ರಕಟಣೆಗಳು ಮತ್ತು ಇನ್ನಿತರೆ ತಾಂತ್ರಿಕ ಅಂಶಗಳನ್ನು ಪರಿಗಣಿಸಿ ಪಿಎಚ್.ಡಿ. ಸಮಿತಿಯು ವಿದ್ಯಾರ್ಥಿಗೆ ಮಹಾಪ್ರಬಂಧ ಸಲ್ಲಿಸಲು ಅನುಮತಿ ನೀಡಬಹುದು.

ವಿದ್ಯಾರ್ಥಿಯ ಸಂಶೋಧನೆಯು ತೃಪ್ತಿಕರವಾಗಿಲ್ಲವೆಂದು ಪಿಎಚ್.ಡಿ. ಸಮಿತಿ ತೀರ್ಮಾನಿಸಿದರೆ ಸಂಬಂಧಿಸಿದ ಮಾರ್ಗದರ್ಶಕರೊಂದಿಗೆ ಸಮಾಲೋಚಿಸಿ ಮಹಾಪ್ರಬಂಧದ ಪರಿಷ್ಕಾರಕ್ಕೆ ಶಿಫಾರಸ್ಸು ಮಾಡಬಹುದು. ಇಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಯು ಮೂರು ತಿಂಗಳ ಒಳಗೆ ಮತ್ತೆ ಬರವಣಿಗೆಯನ್ನು ಕಲೋಕ್ವಿಯಂನಲ್ಲಿ ಮರುಮಂಡಿಸಬೇಕು.

ಪ್ರತಿಯೊಬ್ಬ ವಿದ್ಯಾರ್ಥಿಯು ಮಹಾಪ್ರಬಂಧ ಸಲ್ಲಿಕೆಗೆ ಪಿಎಚ್.ಡಿ. ಸಮಿತಿಯು ಅನುಮತಿ ನೀಡಿದ ನಂತರ ನಿಗದಿತ ಅವಧಿಯೊಳಗೆ ಮಹಾಪ್ರಬಂಧದ ಆರು ಪ್ರತಿಗಳನ್ನು ಮಾರ್ಗದರ್ಶಕರು ಹಾಗೂ ಸಂಬಂಧಿಸಿದ ವಿಭಾಗದ ಮುಖ್ಯಸ್ಥರ ಮೂಲಕ ನಿಗದಿತ ಶುಲ್ಕವನ್ನು ಪಾವತಿಸಿ ಅಧ್ಯಯನಾಂಗದ ನಿರ್ದೇಶಕರಿಗೆ ಸಲ್ಲಿಸಬೇಕು. (ವಿದ್ಯಾರ್ಥಿಯು ಈ ಸಂಬಂಧ ವಿಭಾಗದ ಮುಖ್ಯಸ್ಥರು, ಸಂಬಂಧಿಸಿದ ಸಂಸ್ಥೆಯ ಮುಖ್ಯಸ್ಥರು, ಪ್ರಸಾರಾಂಗದ ನಿರ್ದೇಶಕರು, ವಿಶ್ವವಿದ್ಯಾಲಯದ ಮುಖ್ಯ ಗ್ರಂಥಪಾಲಕರು ಹಾಗೂ ನಿಲಯಪಾಲಕರಿಂದ ಬೇಬಾಕಿ ಪ್ರಮಾಣಪತ್ರ ಪಡೆದು ಅಧ್ಯಯನಾಂಗಕ್ಕೆ ಸಲ್ಲಿಸುವುದು ಕಡ್ಡಾಯ)

೨೬. ಪಿಎಚ್.ಡಿ. ಮಹಾಪ್ರಬಂಧದ ಮೌಲ್ಯಮಾಪನ

ಪಿಎಚ್.ಡಿ. ಸಮಿತಿಯಿಂದ ಅಂತಿಮ ಸಾರಲೇಖ ಅನುಮೋದನೆಗೊಂಡ ಮೇಲೆ ಡೀನ್ ಅವರು ಅನುಮೋದಿಸಿದ ಒಟ್ಟು ಹತ್ತು ಜನ ಬಾಹ್ಯ ಮೌಲ್ಯಮಾಪಕ ವಿದ್ವಾಂಸರ ಹೆಸರನ್ನು ಸೂಚಿಸಬೇಕು. ಇವರಲ್ಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರುಗಳು ಇರಬಾರದು. ಪಟ್ಟಿಯನ್ನು ವಿಭಾಗದ ಮುಖ್ಯಸ್ಥರು ಅಧ್ಯಯನಾಂಗ ನಿರ್ದೇಶಕರಿಗೆ ಕಳುಹಿಸಬೇಕು. ನಿರ್ದೇಶಕರು ಡೀನ್ ಅವರ ಶಿಫಾರಸ್ಸಿನೊಂದಿಗೆ ಮಾನ್ಯ ಕುಲಪತಿಗಳಿಗೆ ಕಳುಹಿಸಬೇಕು.

ಈ ಪಟ್ಟಿಯಿಂದ ಆದ್ಯತಾನುಸಾರ ಮೂರು ಜನ ಮೌಲ್ಯಮಾಪಕರನ್ನು ಮಾನ್ಯ ಕುಲಪತಿಗಳು ಆಯ್ಕೆ ಮಾಡುತ್ತಾರೆ. ಇವರಲ್ಲಿನ ಮೊದಲಿಬ್ಬರಿಂದ ಮೌಲ್ಯಮಾಪನ ಮಾಡಿಸಬೇಕು. ಇವರಲ್ಲಿ ಯಾರಾದರೊಬ್ಬರು ಒಪ್ಪದಿದ್ದಲ್ಲಿ ಮೂರನೆಯವರಿಂದ ಮೌಲ್ಯಮಾಪನ ಮಾಡಿಸಬೇಕು.

ಡೀನ್ ಅವರು ಅನುಮೋದಿಸಿದ ಮೌಲ್ಯಮಾಪಕರ ಯಾದಿಯಲ್ಲಿ ಸಂಬಂಧಿಸಿದ ಕ್ಷೇತ್ರದಲ್ಲಿ ತಜ್ಞತೆಯನ್ನು ಹೊಂದಿದ, ಸಹ ಪ್ರಾಧ್ಯಾಪಕ ದರ್ಜೆಗಿಂತ ಕಡಿಮೆಯಿಲ್ಲದ ಅಥವಾ ಹಿರಿಯ ವಿಜ್ಞಾನಿಗಳು/ಶಿಕ್ಷಣ ತಜ್ಞರು ಮಾತ್ರ ಇರಬೇಕು. ಇದರ ಜೊತೆಗೆ ಸದರಿ ಮೌಲ್ಯಮಾಪಕರು ಸಂಬಂಧಿಸಿದ ವಿಷಯದಲ್ಲಿ ಪಿಎಚ್.ಡಿ. ಪದವಿಯನ್ನು ಹೊಂದಿರಬೇಕು ಹಾಗೂ ಸಂಬಂಧಿಸಿದ ಕ್ಷೇತ್ರದಲ್ಲಿ ಅಪಾರವಾದ ಸಂಶೋಧನ ಅನುಭವವನ್ನು ಪಡೆದಿರಬೇಕು.

ಮೌಲ್ಯಮಾಪಕರಾಗಿ ನಿಯೋಜನೆಗೊಂಡ ಪ್ರತಿಯೊಬ್ಬ ಮೌಲ್ಯಮಾಪಕರು ಮಹಾಪ್ರಬಂಧ ತಲುಪಿದ ಎರಡು ತಿಂಗಳ ಒಳಗಾಗಿ ಮೌಲ್ಯಮಾಪನ ವರದಿಯನ್ನು ನಿರ್ದೇಶಕರು, ಅಧ್ಯಯನಾಂಗ ಇವರಿಗೆ ಕಳುಹಿಸಿಕೊಡಬೇಕು.

ಪ್ರತಿಯೊಬ್ಬ ಮೌಲ್ಯಮಾಪಕರು ಕಳುಹಿಸುವ ವರದಿ ಈ ಕೆಳಕಂಡ ಅಂಶಗಳನ್ನು ಒಳಗೊಂಡಿರಬೇಕು.

ಮಹಾಪ್ರಬಂಧದಲ್ಲಿ ಸೇರ್ಪಡೆಯಾಗಿರುವ ವಿಶ್ಲೇಷಣಾತ್ಮಕ ಅಂಶಗಳನ್ನು ದಾಖಲಿಸಬೇಕು ಹಾಗೂ ಜ್ಞಾನವೃದ್ಧಿಗೆ ಈ ಸಂಶೋಧನೆ ನೀಡುವ ಕೊಡುಗೆಯನ್ನು ನಮೂದಿಸಬೇಕು.

ಮುಕ್ತ ಮೌಖಿಕ ಪರೀಕ್ಷೆಯಲ್ಲಿ ಸ್ಪಷ್ಟೀಕರಣ ಬಯಸುವಂತಹ ಅಂಶಗಳನ್ನು ಅಥವಾ ವಿದ್ಯಾರ್ಥಿಗೆ ಕೇಳಬಹುದಾದ ಪ್ರಶ್ನೆಗಳನ್ನು ನಮೂದಿಸಬೇಕು.

ಪಿಎಚ್.ಡಿ. ಪದವಿಯನ್ನು ಪ್ರದಾನ ಮಾಡಬೇಕೆ ಅಥವಾ ಬೇಡವೆ ಎಂಬುದನ್ನು ಸ್ಪಷ್ಟವಾಗಿ ಶಿಫಾರಸ್ಸು ಮಾಡಬೇಕು.

ಮೌಲ್ಯಮಾಪಕರು ಈ ಕೆಳಕಂಡ ಅಂಶಗಳಿಗೆ ನಿರ್ದಿಷ್ಟವಾಗಿ ಉತ್ತರಗಳನ್ನು ದಾಖಲಿಸುವುದು ಅಗತ್ಯ :

ಅ. ಮಹಾಪ್ರಬಂಪಧವನ್ನು ಯಥಾಸ್ಥಿತಿಯಲ್ಲಿ ಪಿಎಚ್.ಡಿ. ಪದವಿ ಪ್ರದಾನ    ಮಾಡಲು ಒಪ್ಪಿಕೊಳ್ಳಬಹುದೇ?

ಆ. ಇದಕ್ಕೆ ಉತ್ತರ ’ಇಲ್ಲ’ ಎಂದಾದರೆ, ಮಹಾಪ್ರಬಂಧವನ್ನು ಪರಿಷ್ಕರಿಸಿ/ತಿದ್ದುಪಡಿ ಮಾಡಿ ಸಲ್ಲಿಸಬೇಕೆ? ಅಥವಾ ಪಿಎಚ್.ಡಿ. ಪ್ರದಾನ ಮಾಡುವುದಕ್ಕೆ ಯೋಗ್ಯವಲ್ಲವೆಂದು ವ್ಯತಿರಿಕ್ತವಾದ ಅಭಿಪ್ರಾಯ ಹೊಂದಿದ್ದರೆ           ಸ್ಪಷ್ಟವಾಗಿ ದಾಖಲಿಸಬೇಕು.

ಇ. ಮಹಾಪ್ರಬಂಧವನ್ನು ಪರಿಷ್ಕರಿಸಿ ಅಥವಾ ಯಾವುದೇ ಪರಿಷ್ಕಾರವಿಲ್ಲದೇ ನೇರವಾಗಿ ಪ್ರಕಟಿಸಬಹುದೇ? ಎಂಬುದನ್ನು ಖಚಿತವಾಗಿ ತಿಳಿಸಬೇಕು.

ಎಲ್ಲಾ ಮೌಲ್ಯಮಾಪನ ವರದಿಗಳು ಇತ್ಯಾತ್ಮಕವಾಗಿ ಬಂದಿದ್ದರೆ, ನಿರ್ದೇಶಕರು, ಅಧ್ಯಯನಾಂಗ ಇವರು ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಹಾಗೂ ಈ ಸಂಬಂಧ ಪರೀಕ್ಷಾ ಮಂಡಳಿಯ ಅಧ್ಯಕ್ಷರಿಗೆ ಮಹಾಪ್ರಬಂಧವನ್ನು ಕುರಿತಾದ ವರದಿಯನ್ನು ಸಿದ್ಧಪಡಿಸಿ ಸಲ್ಲಿಸಲು ಹಾಗೂ ಮಾನ್ಯ ಕುಲಪತಿಗಳು ಅನುಮೋದಿಸಿದ ಬಾಹ್ಯ ತಜ್ಞರೊಬ್ಬರನ್ನು ಅಥವಾ ವಿಶ್ವವಿದ್ಯಾಲಯದ ಒಳಗಿನ ಒಬ್ಬ ತಜ್ಞರನ್ನು ಆಹ್ವಾನಿಸಿ ಮುಕ್ತ ಮೌಖಿಕ ಪರೀಕ್ಷೆಗೆ ವ್ಯವಸ್ಥೆ ಮಾಡಲು ಕ್ರಮವಹಿಸಬೇಕು.

ಮೌಲ್ಯಮಾಪಕರಲ್ಲಿ ಒಬ್ಬರು ಸಮರ್ಥನೀಯ ಕಾರಣಗಳನ್ನು ನೀಡಿ ಮಹಾಪ್ರಬಂಧವನ್ನು ಮಾರ್ಪಾಡುಗಳ ಸಹಿತ ಮರುಸಲ್ಲಿಸಬೇಕೆಂದು ಸ್ಪಷ್ಟವಾಗಿ ಶಿಫಾರಸ್ಸು ಮಾಡಿದಲ್ಲಿ ಅಧ್ಯಯನಾಂಗದ ನಿರ್ದೇಶಕರು ಸದರಿ ಮಾಹಿತಿಯನ್ನು ಸಂಬಂಧಿಸಿದ ಮಾರ್ಗದರ್ಶಕರ ಮೂಲಕ ವಿದ್ಯಾರ್ಥಿಯ ಗಮನಕ್ಕೆ ತರಬೇಕು ಹಾಗೂ ಮಾಹಿತಿ ತಲುಪಿದ ದಿನಾಂಕದಿಂದ ಆರು ತಿಂಗಳ ಒಳಗೆ ಸೂಕ್ತ ಮಾರ್ಪಾಡುಗಳನ್ನು ಮಾಡಿ ಮಹಾಪ್ರಬಂಧವನ್ನು ಅಧ್ಯಯನಾಂಗಕ್ಕೆ ಕಡ್ಡಾಯವಾಗಿ ಮರುಸಲ್ಲಿಸಬೇಕು. ಇಂತಹ ಪ್ರಕರಣಗಳಲ್ಲಿ ಮಾರ್ಪಾಡುಗಳನ್ನು ಮಾಡಿ ಮರುಸಲ್ಲಿಸಿದ ಮಹಾಪ್ರಬಂಧವನ್ನು ಸಂಬಂಧಿಸಿದ ಮೌಲ್ಯಮಾಪಕರಿಗೆ ಮೌಲ್ಯಮಾಪನಕ್ಕಾಗಿ ಕಳುಹಿಸಿಕೊಡಬೇಕು.

ಯಾವುದೇ ವಿದ್ಯಾರ್ಥಿಗೆ ಮಹಾಪ್ರಬಂಧದ ಮರುಸಲ್ಲಿಕೆಗೆ ಒಂದು ಬಾರಿ ಮಾತ್ರ ಅವಕಾಶವಿರುತ್ತದೆ.

ಮೌಲ್ಯಮಾಪಕರಲ್ಲಿ ಒಬ್ಬರು ಪಿಎಚ್.ಡಿ. ಪದವಿ ನೀಡಲು ಮಹಾಪ್ರಬಂಧವು ಯೋಗ್ಯವಾದುದಲ್ಲ ಎಂದು ವ್ಯತಿರಿಕ್ತವಾದ ಅಭಿಪ್ರಾಯವನ್ನು ಸ್ಪಷ್ಟವಾಗಿ ದಾಖಲಿಸಿದ್ದರೆ ಅಂತಹ ಸಂದರ್ಭಗಳಲ್ಲಿ ಮತ್ತೊಬ್ಬ ಬಾಹ್ಯ ಮೌಲ್ಯಮಾಪಕರಿಗೆ ಮಹಾಪ್ರಬಂಧವನ್ನು ಮೌಲ್ಯಮಾಪನಕ್ಕಾಗಿ ಕಳುಹಿಸಿಕೊಡಬಹುದು. ಮೂರನೆಯ ಮೌಲ್ಯಮಾಪಕರ ವರದಿ ಇತ್ಯಾತ್ಮಕವಾಗಿದ್ದಲ್ಲಿ ವಿದ್ಯಾರ್ಥಿಗೆ ಮೌಖಿಕ ಪರೀಕ್ಷೆ ನಡೆಸಬಹುದು. ಇಲ್ಲವಾದ ಪಕ್ಷದಲ್ಲಿ (ಅಂದರೆ, ಮೂರನೆಯ ಮೌಲ್ಯಮಾಪಕರು ಪಿಎಚ್.ಡಿ. ಪ್ರದಾನ ಮಾಡಲು ಸದರಿ ಮಹಾಪ್ರಬಂಧ ಯೋಗ್ಯವಲ್ಲ ಎಂದು ವ್ಯತಿರಿಕ್ತ ಅಭಿಪ್ರಾಯವನ್ನು ದಾಖಲಿಸಿದ್ದರೆ) ಮಹಾಪ್ರಬಂಧವನ್ನು ತಿರಸ್ಕರಿಸಬೇಕು. ಆದರೆ, ಮೌಲ್ಯಮಾಪಕರು ನೀಡಿದ ವರದಿಗಳನ್ನು ವಿದ್ಯಾರ್ಥಿಗಳು ಪಡೆಯುವುದಕ್ಕೆ ಅವಕಾಶವಿರುತ್ತದೆ.

ಮಹಾಪ್ರಬಂಧವು ಪದವಿ ಪಡೆಯಲು ಯೋಗ್ಯವಾದುದಲ್ಲ ಎಂದು ಇಬ್ಬರೂ ಮೌಲ್ಯಮಾಪಕರು ವ್ಯತಿರಿಕ್ತವಾದ ಸ್ಪಷ್ಟ ಅಭಿಪ್ರಾಯವನ್ನು ದಾಖಲಿಸಿದ್ದರೆ ಅಂತಹ ಮಹಾಪ್ರಬಂಧವನ್ನು ತಿರಸ್ಕರಿಸಬೇಕು.

೨೭. ಮೌಖಿಕ ಪರೀಕ್ಷೆ

ಪಿಎಚ್.ಡಿ. ಮೌಖಿಕ ಪರೀಕ್ಷೆಯನ್ನು ಸಂಬಂಧಪಟ್ಟ ವಿಭಾಗಗಳಲ್ಲಿ ನಡೆಸಬೇಕು. ಮಾರ್ಗದರ್ಶಕರನ್ನೊಳಗೊಂಡಂತೆ ಮೂವರು ಮೌಲ್ಯಮಾಪಕರಿಂದ ಬಂದ ತೃಪ್ತಿಕರವಾದ ವರದಿಗಳನ್ನು ಅಧ್ಯಯನಾಗದ ನಿರ್ದೇಶಕರು ಸಂಬಂಧಿಸಿದ ಅಧ್ಯಯನ ವಿಭಾಗಗಳ ಮುಖ್ಯಸ್ಥರಿಗೆ ಕಳುಹಿಸಿಕೊಡಬೇಕು. ನಂತರ ವಿಭಾಗದ ಮುಖ್ಯಸ್ಥರು ಪಿಎಚ್.ಡಿ. ಪರೀಕ್ಷಾ ಮಂಡಳಿಯ ಸಮ್ಮುಖದಲ್ಲಿ ಯಾವುದಾದರೂ ಕೆಲಸದ ದಿನ ಮೌಖಿಕ ಪರೀಕ್ಷೆಯನ್ನು ಆಯೋಜಿಸಬೇಕು.

ಮಾನ್ಯ ಕುಲಪತಿಗಳು ನಿಯೋಜಿಸಿದ ಬಾಹ್ಯ/ಆಂತರಿಕ ಮೌಲ್ಯಮಾಪಕರ ಲ್ಲೊಬ್ಬರನ್ನು ಮೌಖಿಕ ಪರೀಕ್ಷೆಗೆ ಆಹ್ವಾನಿಸಬೇಕು. ಇವರನ್ನೊಳಗೊಂಡಂತೆ ಪಿಎಚ್.ಡಿ. ಸಮಿತಿಯ ಎಲ್ಲಾ ಸದಸ್ಯರು ಪರೀಕ್ಷಾ ಮಂಡಳಿಗೂ ಸದಸ್ಯರಾಗಿರುತ್ತಾರೆ. ಮೌಖಿಕ ಪರೀಕ್ಷಾ ಮಂಡಳಿಗೆ ಆಯಾ ನಿಕಾಯದ ಡೀನರು ಅಧ್ಯಕ್ಷರಾಗಿರುತ್ತಾರೆ. ನಿಕಾಯದ ಡೀನ್‌ರು ಅನಿವಾರ್ಯ ಕಾರಣಗಳಿಂದ ಹಾಜರಾಗದಿದ್ದಾಗ ಅವರ ಅನುಮತಿ ಪಡೆದು ವಿಭಾಗದ ಹಿರಿಯ ಪ್ರಾಧ್ಯಾಪಕರು ಮೌಖಿಕ ಪರೀಕ್ಷಾ ಮಂಡಳಿಯ ಅಧ್ಯಕ್ಷತೆಯನ್ನು ನಿರ್ವಹಿಸಬಹುದು. ಇಂತಹ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥರು ಅಧ್ಯಯನಾಂಗದ ಮೂಲಕ ಮಾನ್ಯ  ಕುಲಪತಿಗಳಿಂದ ಲಿಖಿತ ಅನುಮೋದನೆ ಪಡೆಯಬೇಕು. ಮೌಖಿಕ ಪರೀಕ್ಷೆಯ ಬಳಿಕ ಅಧ್ಯಕ್ಷರು ಡೀನ್ ಅವರಿಗೆ ವರದಿಮಾಡಬೇಕು. ಡೀನ್ ಅವರು ಮಾನ್ಯ ಕುಲಪತಿಗಳಿಗೆ ಶಿಫಾರಸ್ಸು ಮಾಡುವುದು.

ಒಂದು ವೇಳೆ ಇಬ್ಬರೂ ಬಾಹ್ಯ ಮೌಲ್ಯಮಾಪಕರು ಲಭ್ಯವಿಲ್ಲದಿದ್ದ ಸಂದರ್ಭದಲ್ಲಿ ವಿಶ್ವವಿದ್ಯಾಲಯದೊಳಗಿನ ವಿದ್ವಾಂಸರೊಬ್ಬರನ್ನು ಕುಲಪತಿಗಳು ನಾಮಕರಣ ಮಾಡಬಹುದು.

ಮೌಖಿಕ ಪರೀಕ್ಷೆಯ ಅಧ್ಯಕ್ಷರು ಹಾಗೂ ಸದಸ್ಯರನ್ನು ಮೌಖಿಕ ಪರೀಕ್ಷೆಗೆ ಆಹ್ವಾನಿಸಬೇಕು. ಮೌಖಿಕ ಪರೀಕ್ಷೆಯಲ್ಲಿ ಭಾಗವಹಿಸಲು ಆಸಕ್ತಿಯಿರುವ ಎಲ್ಲ ಅಧ್ಯಯನ ವಿಭಾಗಗಳ ಅಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳಿಗೆ (ವಿಭಾಗದ ಸದಸ್ಯರನ್ನು ಒಳಗೊಂಡಂತೆ) ಸುತ್ತೋಲೆ  ಮೂಲಕ ಅಧ್ಯಯನ ವಿಭಾಗದ ಮುಖ್ಯಸ್ಥರು ಆಹ್ವಾನಿಸಬೇಕು.

ವಿದ್ಯಾರ್ಥಿಯು ಮಹಾಪ್ರಬಂಧದ ವಿಷಯವನ್ನು ಅರ್ಥ ಮಾಡಿಕೊಂಡಿರುವ ರೀತಿ, ಅಳವಡಿಸಿಕೊಂಡಿರುವ ಸಂಶೋಧನ ವಿಧಿವಿಧಾನ ಹಾಗೂ ಆ ಕ್ಷೇತ್ರದಲ್ಲಿ ವಿದ್ಯಾರ್ಥಿ ಗಳಿಸಿರುವ ತಜ್ಞತೆಯನ್ನು ಪರೀಕ್ಷಿಸುವ ಉದ್ದೇಶಕ್ಕೆ ಅನುಗುಣವಾಗಿ ಮೌಖಿಕ ಪರೀಕ್ಷೆಯನ್ನು ಮುಖ್ಯವಾಗಿ ವಿನ್ಯಾಸಗೊಳಿಸಬೇಕು. ಮೌಲ್ಯಮಾಪಕರು ಎತ್ತಿರುವ ಯಾವುದಾದರೂ ಆಕ್ಷೇಪಗಳಿದ್ದರೆ ವಿದ್ಯಾರ್ಥಿಯಿಂದ ಸ್ಪಷ್ಟೀಕರಣವನ್ನು ಮೌಖಿಕ ಪರೀಕ್ಷೆಯಲ್ಲಿ ಪಡೆಯಬೇಕು. ಮೌಖಿಕ ಪರೀಕ್ಷಾ ಮಂಡಳಿಯ ಸದಸ್ಯರೆಲ್ಲರಿಗೂ ಮೌಲ್ಯಮಾಪಕರ ವರದಿಗಳನ್ನು ಒದಗಿಸಬೇಕು.

ಒಂದು ವೇಳೆ ವಿದ್ಯಾರ್ಥಿ ವಿದೇಶದಲ್ಲಿದ್ದು ಮೌಖಿಕ ಪರೀಕ್ಷೆಗೆ ಭೌತಿಕವಾಗಿ ಹಾಜರಾಗಲು ಸಾಧ್ಯವಾಗದಿದ್ದಲ್ಲಿ ಮೇಲೆ ವಿವರಿಸಿದ ಕ್ರಮದಲ್ಲಿ (ಮುಕ್ತ ಮೌಖಿಕ ಪರೀಕ್ಷೆ) ವೀಡಿಯೋ ಕಾನ್ಫೆರೆನ್ಸ್ ಮೂಲಕ ಮೌಖಿಕ ಪರೀಕ್ಷೆಯನ್ನು ನಡೆಸಬೇಕು. ಇದಕ್ಕೆ ವಿಶ್ವವಿದ್ಯಾಲಯ ಕಾಲಕಾಲಕ್ಕೆ ನಿಗದಿಪಡಿಸುವ ಹೆಚ್ಚುವರಿ ಶುಲ್ಕವನ್ನು ವಿದ್ಯಾರ್ಥಿಯು ಪಾವತಿಸಬೇಕು.

ಮೌಲ್ಯಮಾಪಕರ ಧನಾತ್ಮಕ ವರದಿಯ ಹೊರತಾಗಿಯೂ ಮೌಖಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಯು ತೋರುವ ಪಾಂಡಿತ್ಯವು ಕಳಪೆ ಎಂದು ಕಂಡುಬಂದಲ್ಲಿ ಪರೀಕ್ಷಾ ಮಂಡಳಿಯ ಅಧ್ಯಕ್ಷರು ಮಹಾಪ್ರಬಂಧವನ್ನು ಮೂರು ತಿಂಗಳ ಒಳಗೆ ಪರಿಷ್ಕರಿಸಿ ಪುನರ್ ಸಲ್ಲಿಸಲು ಸೂಚಿಸುವ ಅಧಿಕಾರ ಹೊಂದಿರುತ್ತಾರೆ.

ಮೌಖಿಕ ಪರೀಕ್ಷೆಯಲ್ಲಿ ನೀಡಿದ ಹಾಗೂ ಪರೀಕ್ಷಕರು ನೀಡಿದ ಸಲಹೆಗಳನ್ನು ಮತ್ತು ಮೌಖಿಕ ಪರೀಕ್ಷೆಯ ಸಂಕ್ಷಿಪ್ತ ವರದಿಯನ್ನು ಮಹಾಪ್ರಬಂಧದಲ್ಲಿ ಸೇರ್ಪಡೆ ಮಾಡಿ ಮತ್ತೆರಡು ಪ್ರತಿಗಳನ್ನು ಹಾಗೂ ಸಾಫ್ಟ್ ಪ್ರತಿಯನ್ನು ನಿರ್ದೇಶಕರು ಅಧ್ಯಯನಾಂಗ ಇವರಿಗೆ ಸಲ್ಲಿಸಬೇಕು. ಸಲ್ಲಿಕೆಯಾದ ನಂತರವೇ ಪಿಎಚ್.ಡಿ. ಪದವಿಯ ಅಧಿಸೂಚನೆ ಹೊರಡಿಸಲಾಗುವುದು. ಅವುಗಳಲ್ಲಿ ಒಂದು ಪ್ರತಿಯನ್ನು (ಹಾರ್ಡ್ ಮತ್ತು ಸಾಫ್ಟ್) ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೂ ಹಾಗೂ ಸರ್ಕಾರದ ಸಂಬಂಧಿಸಿದ ಪ್ರಾಧಿಕಾರಕ್ಕೆ (ಕೇವಲ ಹಾರ್ಡ್‌ಪ್ರತಿ) ಅಧ್ಯಯನಾಂಗದ ನಿರ್ದೇಶಕರು ಕಳುಹಿಸಬೇಕು.

ಮೌಖಿಕ ಪರೀಕ್ಷೆಯ ವರದಿಗೆ ಮಾರ್ಗದರ್ಶಕರು ಹಾಗೂ ಬಾಹ್ಯ ಮೌಲ್ಯಮಾಪಕರು ಸಹಿ ಮಾಡಬೇಕು. ಮೌಖಿಕ ಪರೀಕ್ಷೆಯ ಫಲಿತಾಂಶವನ್ನು ಅದೇ ದಿನ ಕಡತದೊಂದಿಗೆ ಅಧ್ಯಯನಾಂಗದ ನಿರ್ದೇಶಕರಿಗೆ ಸಂಬಂಧಿಸಿದ ಮುಖ್ಯಸ್ಥರು ಕಳುಹಿಸಬೇಕು. ಮುಂದಿನ ಪ್ರಕ್ರಿಯೆಯನ್ನು  ಅಧ್ಯಯನಾಂಗದ ನಿರ್ದೇಶಕರು ನಿರ್ವಹಿಸುವುದು.

ಪಿಎಚ್.ಡಿ. ಅಧಿಸೂಚನೆ ಸಿದ್ಧವಾದ ತಕ್ಷಣ ಪ್ರತಿಗಳನ್ನು ವಿದ್ಯಾರ್ಥಿ, ಮಾರ್ಗದರ್ಶಕರು, ನಿಕಾಯದ ಡೀನ್, ಮೌಲ್ಯಮಾಪಕರಿಗೆ ಇವರಿಗೆ ತಕ್ಷಣ ಕಳುಹಿಸುವುದು. ಉಳಿದಂತೆ ನಿಯಮಾನುಸಾರ ಕ್ರಮವಾಗಿ ಎಲ್ಲರಿಗೂ ಕಳುಹಿಸಬೇಕು.

ಪಿಎಚ್.ಡಿ.ಗೆ ಸಂಬಂಧಿಸಿದ ಎಲ್ಲಾ ಕಡತಗಳು ನಿಕಾಯದ ಡೀನ್ ಅವರ ಶಿಫಾರಸ್ಸಿನ ಮೂಲಕವೇ ಮಾನ್ಯ ಕುಲಪತಿಗಳಿಗೆ ಮಂಡನೆಯಾಗಬೇಕು.

೨೮. ಪಿಎಚ್.ಡಿ. ಪದವಿ ಪ್ರದಾನ

ವಿದ್ಯಾರ್ಥಿಯು ಮೌಖಿಕ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ ಮೌಖಿಕ ಪರೀಕ್ಷಾ ಮಂಡಳಿಯ ಸದಸ್ಯ ಸಂಚಾಲಕರು ನಡಾವಳಿಯನ್ನು ಸಿದ್ಧಪಡಿಸಬೇಕು. ಸದರಿ ಮೌಖಿಕ ಪರೀಕ್ಷೆಯ ನಡಾವಳಿಗೆ ಅಧ್ಯಕ್ಷರು ಹಾಗೂ ಬಾಹ್ಯ ವಿದ್ವಾಂಸರು ಸಹಿ ಮಾಡಿರಬೇಕು. ವಿದ್ಯಾರ್ಥಿಯ ಮಹಾಪ್ರಬಂಧಕ್ಕೆ / ಅಧ್ಯಯನಕ್ಕೆ ಪಿಎಚ್.ಡಿ. ಪದವಿಗಾಗಿ ಪರೀಕ್ಷಾ ಮಂಡಳಿ ಪರವಾಗಿ ಅಧ್ಯಕ್ಷರು ಅಗತ್ಯ ಶಿಫಾರಸ್ಸು ಮಾಡಬೇಕು. ಹಾಗೂ ಅಧ್ಯಯನಾಂಗದ ನಿರ್ದೇಶಕರಿಗೆ ಕಳುಹಿಸಬೇಕು.

ವಿಶ್ವವಿದ್ಯಾಲಯವು ಪಿಎಚ್.ಡಿ. ಪದವಿಯನ್ನು ೨೦೦೯ರ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ನಿಯಮಗಳನ್ವಯ ಪದವಿ ಪ್ರದಾನ ಮಾಡಲಾಗಿದೆ ಎಂಬ ತಾತ್ಕಾಲಿಕ ಪ್ರಮಾಣಪತ್ರವನ್ನು ನೀಡಬೇಕು.

೨೯.  ಯುಜಿಸಿ ಕಣಜ

ಮೌಲ್ಯಮಾಪನ ಪ್ರಕ್ರಿಯೆ ಯಶಸ್ವಿಯಾಗಿ ಮುಗಿದು ಪಿಎಚ್.ಡಿ. ಪದವಿ ಪ್ರದಾನವಾದ ಮೇಲೆ ಎಲ್ಲ ಸಂಸ್ಥೆಗಳು/ ವಿಶ್ವವಿದ್ಯಾಲಯಗಳು ಸದರಿ ಮಹಾಪ್ರಬಂಧವನ್ನು ಅವಲೋಕಿಸಲು ಅನುಕೂಲವಾಗುವಂತೆ ಇನ್‌ಫ್ಲಿಬ್‌ನೆಟ್ ಜಾಲದಲ್ಲಿ ಸೇರಿಸುವ ಸಲುವಾಗಿ ಪಿಎಚ್.ಡಿ. ಮಹಾಪ್ರಬಂಧದ ಸಾಫ್ಟ್ ಪ್ರತಿಯನ್ನು ಮೂವತ್ತು ದಿನಗಳ ಒಳಗೆ ಯು.ಜಿ.ಸಿ. ಕಣಜಕ್ಕೆ ಕಳುಹಿಸಿಕೊಡಬೇಕು. ವಿಶ್ವವಿದ್ಯಾಲಯದ ವೆಬ್‌ಸೈಟ್‌ಗಳಲ್ಲಿ ಇವು ಲಭ್ಯವಿರುವಂತಿರಬೇಕು.

 ೩೦. ಮಹಾಪ್ರಬಂಧದ ಪ್ರಕಟಣೆ

ಪಿಎಚ್.ಡಿ. ಪದವಿ ಪ್ರದಾನವಾದ ಮೇಲೆ ಮಹಾಪ್ರಬಂಧವನ್ನು ಇಡಿಯಾಗಿ ಅಥವಾ ಆಂಶಿಕವಾಗಿ ವಿಶ್ವವಿದ್ಯಾಲಯದ ಪೂರ್ವಾನುಮತಿ ಪಡೆದು ಪ್ರಕಟಿಸಬಹುದು. ಅದರಲ್ಲಿ ಮಾರ್ಗದರ್ಶಕರ ಹೆಸರನ್ನು ಸ್ಪಷ್ಟವಾಗಿ ದಾಖಲಿಸಬೇಕು.

ಪಿಎಚ್.ಡಿ. ಮಹಾಪ್ರಬಂಧ ಪ್ರಕಟಿಸುವ ವಿದ್ಯಾರ್ಥಿಗಳು ಕೃತಿಯ ಅನುಬಂಧದಲ್ಲಿ ಮೌಲ್ಯಮಾಪಕರು ನೀಡಿದ ಮೌಲ್ಯಮಾಪನ ವರದಿಯನ್ನು ಪೂರ್ಣವಾಗಿ ಯಥಾಸ್ಥಿತಿಯಲ್ಲಿಯೇ ಮುದ್ರಿಸುವುದು ಕಡ್ಡಾಯ.

ಮೌಲ್ಯಮಾಪಕರು ಸೂಚಿಸಿರುವ ಎಲ್ಲ ತಿದ್ದುಪಡಿಗಳನ್ನು ಪ್ರಬಂಧದಲ್ಲಿ ಅಳವಡಿಸಿಕೊಂಡಿರುವ ಬಗ್ಗೆ ಮಾರ್ಗದರ್ಶಕರು/ಮುಖ್ಯಸ್ಥರು ವಿವರವಾದ ವರದಿಯನ್ನು ನೀಡಿ ಅನುಮತಿಗೆ ಶಿಫಾರಸ್ಸು ಮಾಡುವುದು ಕಡ್ಡಾಯ.

ಮಹಾಪ್ರಬಂಧದ ಪ್ರಕಟಿತ ವರದಿಗಳನ್ನು ಹಾಗೂ ಮೌಲ್ಯಮಾಪಕರ ಶಿಫಾರಸ್ಸು ಪತ್ರವನ್ನು ’ಶೋಧಗಂಗಾ’ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.

ಕನ್ನಡ ವಿಶ್ವವಿದ್ಯಾಲಯದ ಪಿಎಚ್.ಡಿ. ಪದವಿಗಾಗಿ ಸಲ್ಲಿಸಲಾದ ಮಹಾಪ್ರಬಂಧ ಎಂದು ಪ್ರಕಟಣೆಯ ಶೀರ್ಷಿಕೆಯ ಒಳಪುಟದಲ್ಲಿ ನಮೂದಿಸಬೇಕು.

ಪ್ರಕಟಿಸಿದ ಹತ್ತು ಪ್ರತಿಗಳನ್ನು ಅಧ್ಯಯನಾಂಗಕ್ಕೆ ಸಲ್ಲಿಸಬೇಕು.

ಪಿಎಚ್.ಡಿ. ಪದವಿ ಪ್ರದಾನವಾದ ಮೇಲೆ ಮಹಾಪ್ರಬಂಧ ಅಥವಾ ಅದರಿಂದ ಗಳಿಸಿದ ಫಲಿತಾಂಶಗಳು, ಪ್ರಕಟಣೆಗಳು ವಿಶ್ವವಿದ್ಯಾಲಯದ ಆಸ್ತಿಯಾಗಿರುತ್ತದೆ. ವಿಶ್ವವಿದ್ಯಾಲಯವು ವಿದ್ಯಾರ್ಥಿ, ಮಾರ್ಗದರ್ಶಕರೊಂದಿಗೆ ಪ್ರಕಟಣೆಯ ಸ್ವಾಮ್ಯ ಪೇಟೆಂಟ್ ಅಥವಾ ಮಾನ್ಯತೆಯನ್ನು ಹಂಚಿಕೊಳ್ಳುವ ಹಕ್ಕನ್ನು ಹೊಂದಿರುತ್ತದೆ.

ಒಂದು ವೇಳೆ ಮಹಾಪ್ರಬಂಧ ಯಾವುದೇ ಕೃತಿಯ ನಕಲು/ಕೃತಿ ಚೌರ್ಯ/ ಶೈಕ್ಷಣಿಕ ಅಂಶಗಳ ತಪ್ಪು ಪ್ರಕಟಣೆ ಎಂಬುದು ದೃಢಪಟ್ಟಲ್ಲಿ ಪದವಿಯನ್ನು ಹಿಂಪಡೆಯುವ ಅಧಿಕಾರ ವಿಶ್ವವಿದ್ಯಾಲಯಕ್ಕಿರುತ್ತದೆ.

೩೧. ಪದವಿ ಹಿಂತೆಗೆದುಕೊಳ್ಳುವಿಕೆ ಹಾಗೂ ವಿನಾಯಿತಿ

ಚಾಲ್ತಿಯಲ್ಲಿರುವ ಈ ಎಲ್ಲ ನಿಯಮ, ಮಾರ್ಗಸೂಚಿ, ಆದೇಶ, ಆದ್ಯಾದೇಶಗಳನ್ನು ಒಂದು ವೇಳೆ ಯಾವುದೇ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಪಾಲಿಸದಿದ್ದರೆ ಪಿಎಚ್.ಡಿ. ಪದವಿಯನ್ನು ಹಿಂತೆಗೆದುಕೊಳ್ಳಲಾಗುವುದು.

ಈ ನಿಯಮಗಳ ಅನುಷ್ಠಾನಕ್ಕೆ ಸೂಕ್ತವೆನಿಸುವ ಯಾವುದೇ ಆದೇಶ, ಮಾರ್ಗದರ್ಶಿ ಸೂಚನೆ, ಹಾಗೂ ಸೂಕ್ತ ನಮೂನೆ, ಪ್ರಕ್ರಿಯೆ ಇತ್ಯಾದಿಗಳನ್ನು ವಿಶ್ವವಿದ್ಯಾಲಯವು ಕಾಲಕಾಲಕ್ಕೆ ಹೊರಡಿಸುತ್ತದೆ.

ಈ ನಿಯಮಗಳ ಅನುಷ್ಠಾನದ ಸಂದರ್ಭದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರಾದಲ್ಲಿ ಸಂಬಂಧಿಸಿದ ನಿಕಾಯಗಳ ಡೀನ್‌ರೊಂದಿಗೆ ಸಮಾಲೋಚಿಸಿ ಅಗತ್ಯ ಕ್ರಮವನ್ನು ಕೈಗೊಳ್ಳುವ ಸ್ಪಷ್ಟೀಕರಣವನ್ನು ನೀಡುವ ಅಧಿಕಾರ ಕುಲಪತಿ ಅವರಿಗಿರುತ್ತದೆ. ಅಂತಹ ಸಂದರ್ಭದಲ್ಲಿ ಕುಲಪತಿಗಳು ಕೈಗೊಂಡ ಕ್ರಮಗಳ ವರದಿಯನ್ನು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಬೇಕು.

ಒಟ್ಟಾರೆಯಾಗಿ ವಿಶ್ವವಿದ್ಯಾಲಯಕ್ಕೆ ಈ ನಿಯಮಗಳ ಅನುಷ್ಠಾನದ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸಿದಲ್ಲಿ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವಂತಹ ಅಧಿಕಾರ ಕುಲಪತಿ ಅವರಿಗೆ ಇರುತ್ತದೆ.

೩೨. ವಿಶೇಷ ಸೂಚನೆಗಳು

ಪಿಎಚ್.ಡಿ. ಅಧ್ಯಯನಕ್ಕೆ ಸಂಬಂಧಿಸಿದಂತೆ ಪ್ರವೇಶ ಪರೀಕ್ಷೆಯ ದಿನಾಂಕ, ಪರೀಕ್ಷೆಗೆ ಬೇಕಾದ ಅರ್ಹತೆಗಳು ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿದಂತೆ ನೇರವಾಗಿ ಅಂಚೆ ವ್ಯವಹಾರವಿರುವುದಿಲ್ಲ. ಈ ಎಲ್ಲ ಮಾಹಿತಿಗಳನ್ನು www.kannadauniversity.org ನಿಂದ ಪಡೆದುಕೊಳ್ಳುವುದು

ಕಾರಣಾಂತರಗಳಿಂದ ಬದಲಾವಣೆಗೊಂಡ ದಿನಾಂಕಗಳನ್ನು ಕೂಡ www.kannadauniversity.org ನಲ್ಲಿ ಗಮನಿಸುವುದು.

ಅಂಗೀಕಾರಗೊಂಡ ಅಧ್ಯಯನ ಕೇಂದ್ರಗಳ ವಿದ್ಯಾರ್ಥಿಗಳು ತಮ್ಮ ಅರ್ಜಿಯನ್ನು ನಿರ್ದೇಶಕರು ಅಧ್ಯಯನಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ-೫೮೩ ೨೭೬ ಇವರಿಗೆ ಕಳುಹಿಸುವುದು.

ಪಿಎಚ್.ಡಿ. ವಿದ್ಯಾರ್ಥಿಗಳು ಯು.ಜಿ.ಸಿ. ನಿಯಮದಡಿ ನಿಗದಿಪಡಿಸಿರುವ ರಜೆಗಳನ್ನು ಮಾತ್ರ ಪಡೆಯಲು ಅರ್ಹರಾಗಿರುತ್ತಾರೆ.

ಕಾಲಕಾಲಕ್ಕೆ ಬದಲಾಗುವ ಪಿಎಚ್.ಡಿ. ನಿಯಮಗಳು ಅಧ್ಯಯನ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತವೆ.

ಎಲ್ಲ ಪತ್ರ ವ್ಯವಹಾರವನ್ನು ಈ ಕೆಳಕಂಡ ವಿಳಾಸದೊಂದಿಗೆ ನಡೆಸುವುದು.

 

ನಿರ್ದೇಶಕರು

ಅಧ್ಯಯನಾಂಗ

ಕನ್ನಡ ವಿಶ್ವವಿದ್ಯಾಲಯ, ಹಂಪಿ

ವಿದ್ಯಾರಣ್ಯ – ೫೮೩ ೨೭೬

ಹೊಸಪೇಟೆ ತಾಲ್ಲೂಕು, ಬಳ್ಳಾರಿ ಜಿಲ್ಲೆ

ವೆಬ್‌ಸೈಟ್ : www.kannadauniversity.org

ಇ-ಮೇಲ್ : director.studieskuh@gmail.com

* * *