೧. ಪ್ರವೇಶಾರ್ಹತೆ

 1. ಕರ್ನಾಟಕ ನಾಡು, ಸಂಸ್ಕೃತಿ, ಭಾಷೆ, ಕಲೆ, ವಿಜ್ಞಾನ, ಅಭಿವೃದ್ಧಿ, ಸಮಾಜ, ಚರಿತ್ರೆ ಕುರಿತಂತೆ ಅಧ್ಯಯನಗಳನ್ನು ಕನ್ನಡ ವಿಶ್ವವಿದ್ಯಾಲಯವು ಪ್ರೋತ್ಸಾಹಿಸುತ್ತದೆ. ಔಪಚಾರಿಕ ಶೈಕ್ಷಣಿಕ ಪದವಿಗಳನ್ನು ಪಡೆಯದಿದ್ದರೂ, ಸಂಬಂಧಿಸಿದ ಕ್ಷೇತ್ರದಲ್ಲಿ ವಿಶೇಷ ತಿಳುವಳಿಕೆ/ಅನುಭವವುಳ್ಳವರಿಗೆ ವಿಶ್ವವಿದ್ಯಾಲಯವು ಡಿ.ಲಿಟ್. ಅಧ್ಯಯನಕ್ಕೆ ಪ್ರವೇಶ ನೀಡುತ್ತದೆ.
 2. ೪೫ ವರ್ಷಕ್ಕಿಂತ ಮೇಲ್ಪಟ್ಟವರು ಡಿ.ಲಿಟ್. ಅಧ್ಯಯನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
 3. ಆದರೆ ಸಂಬಂಧಿಸಿದ ನಿರ್ದಿಷ್ಟ ಕ್ಷೇತ್ರದಲ್ಲಿ ಹೊಂದಿದ ತಿಳುವಳಿಕೆ ಹಾಗೂ ನೀಡಿದ ಕೊಡುಗೆಯನ್ನು ವಿಶ್ವವಿದ್ಯಾಲಯಕ್ಕೆ ಪ್ರಸ್ತಾವ ಸಲ್ಲಿಸುವ ಸಂದರ್ಭದಲ್ಲಿ ಮನವರಿಕೆ ಮಾಡಿಕೊಡಬೇಕು. ಅಧ್ಯಯನಕಾರರು ಸ್ವತಂತ್ರವಾಗಿ ಅಧ್ಯಯನ ಮಾಡಲು ಸಮರ್ಥರು ಮತ್ತು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಈಗಾಗಲೇ ಗಣನೀಯ ಸಾಧನೆಗಳನ್ನು ಮಾಡಿದ್ದಾರೆ ಎಂಬ ಬಗೆಗೂ ಪೂರ್ವಭಾವಿ ಪರಿಶೀಲನೆಯ ಲಿಖಿತ ಹಾಗೂ ಪ್ರಯೋಗ ರೂಪದ ವರದಿಗಳು ಇರುವುದು ಸೂಕ್ತ.
 4. ಮೇಲಿನ ಅಗ್ಯತಗಳನ್ನು ತೃಪ್ತಿಕರವಾಗಿ ಪೂರೈಸಬಲ್ಲವರು ವಿಶ್ವವಿದ್ಯಾಲಯದಿಂದ ಪ್ರತಿವರ್ಷ ಜೂನ್ ತಿಂಗಳಲ್ಲಿ ಡಿ.ಲಿಟ್. ಅರ್ಜಿಗಳನ್ನು ಪಡೆಯಬೇಕು. ಅರ್ಜಿ ಪಡೆದ ಎರಡು ತಿಂಗಳ ಒಳಗಾಗಿ ಅರ್ಜಿಯೊಂದಿಗೆ ಅಧ್ಯಯನ ವಿಷಯಕ್ಕೆ ಸಂಬಂಧಿಸಿದ ಸೂಕ್ತ ಪ್ರಸ್ತಾವವನ್ನು ಅಧ್ಯಯನಾಂಗದ ನಿರ್ದೇಶಕರಿಗೆ ಸಲ್ಲಿಸಬೇಕು.

೨. ನೋಂದಣಿ ವಿಧಾನ

 1. ಪ್ರಸ್ತಾವವು ಅಧ್ಯಯನದ ಉದ್ದೇಶ, ವ್ಯಾಪ್ತಿ ಹಾಗೂ ಮಹತ್ವಗಳ ಕುರಿತು ಸ್ಪಷ್ಟ ವಿವರಗಳಿಂದ ಕೂಡಿರಬೇಕು. ಅಧ್ಯಯನಕಾರರಿಗೆ ಅಗತ್ಯವಾದ ಅರ್ಹತೆ ಹಾಗೂ ಆಳವಾದ ಸಿದ್ಧತೆ ಇದೆ ಎಂಬುದನ್ನು ಖಚಿತವಾಗಿ ಆ ಪ್ರಸ್ತಾವದಿಂದ ಮನವರಿಕೆಯಾಗಬೇಕು. ಅಂಥ ಪ್ರಸ್ತಾವದ ಎಂಟು ಪ್ರತಿಗಳನ್ನು ಅಧ್ಯಯನಾಂಗಕ್ಕೆ ಸಲ್ಲಿಸಬೇಕು.
 2. ಅಧ್ಯಯನಾಂಗದ ನಿರ್ದೇಶಕರು, ಮಾನ್ಯ ಕುಲಪತಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಡೀನ್ ಸಮಿತಿ ಸಭೆಯಲ್ಲಿ  ಸಂಬಂಧಿಸಿದ ಅಧ್ಯಯನಕಾರರಿಯ ಪ್ರಸ್ತಾವವನ್ನು ಮಂಡಿಸಬೇಕು. ಸಮಿತಿ ಶಿಫಾರಸ್ಸು ಮಾಡಿದ ಪ್ರಸ್ತಾವವನ್ನು ಸಲಹಾ ಸಮಿತಿಯು ಸೂಚಿಸುವ ಇಬ್ಬರು ಬಾಹ್ಯ ತಜ್ಞರಿಗೆ ಕಳುಹಿಸಿ ಅಧ್ಯಯನಾಂಗವು ಮೌಲ್ಯಮಾಪನ ಮಾಡಿಸುತ್ತದೆ. ಅಧ್ಯಯನಾಂಗದ ಸಲಹಾ ಸಮಿತಿ ಈ ಕೆಳಗಿನಂತಿರುತ್ತದೆ.

೧. ಮಾನ್ಯ ಕುಲಪತಿಗಳು                   :         ಅಧ್ಯಕ್ಷರು

೨. ಎಲ್ಲ ನಿಕಾಯಗಳ ಡೀನ್‌ರು              :         ಸದಸ್ಯರು

೩. ಅಧ್ಯಯನಾಂಗದ ನಿರ್ದೇಶಕರು         :         ಸದಸ್ಯ ಸಂಚಾಲಕರು

 1. ಪ್ರಸ್ತಾವವು ಮೌಲ್ಯಮಾಪಕರ ಒಪ್ಪಿಗೆ ಪಡೆದ ಮೇಲೆ ತಜ್ಞ ಸಮಿತಿಯ ಮುಂದೆ ಸದರಿ ಅಧ್ಯಯನಕಾರರು ವಿಶ್ವವಿದ್ಯಾಲಯ ನಿಗದಿಪಡಿಸಿದ ದಿನಾಂಕದಂದು ಅಧ್ಯಯನದ ಅಗತ್ಯವನ್ನು ಮಂಡಿಸಬೇಕಾಗುತ್ತದೆ. ಅಗತ್ಯವಿದ್ದಲ್ಲಿ ಸಲಹಾ ಸಮಿತಿಯು ಬಾಹ್ಯ ವಿಷಯ ತಜ್ಞರನ್ನು ಆಹ್ವಾನಿಸಬಹುದು. ಈ ಸಮಿತಿಯು ಒಪ್ಪಿಗೆ ನೀಡಿದ ಮೇಲೆ ಡಿ.ಲಿಟ್ ಅಧ್ಯಯನಕ್ಕೆ ನೋಂದಣಿ ನೀಡಲು ಅಧ್ಯಯನಾಂಗವು ಕುಲಪತಿಯವರ ಅನುಮೋದನೆಯೊಂದಿಗೆ ಕ್ರಮವಹಿಸುತ್ತದೆ.
 2. ನೋಂದಣಿಯನ್ನು ನೀಡುವ ಅಥವಾ ನೀಡದಿರುವ ಅಧಿಕಾರವು ವಿಶ್ವವಿದ್ಯಾಲಯಕ್ಕೆ ಇರುತ್ತದೆ. ವಿಶ್ವವಿದ್ಯಾಲಯದಲ್ಲಿ ಒಂದು ಬಾರಿಗೆ ಪ್ರತಿ ನಿಕಾಯದಲ್ಲಿ ಐದಕ್ಕಿಂತ ಹೆಚ್ಚು ಡಿ.ಲಿಟ್ ನೋಂದಣಿ ನೀಡುವಂತಿಲ್ಲ. ಐದರಲ್ಲಿ ಸ್ಥಾನ ತೆರವಾದಂತೆ ಕ್ರಮವಾಗಿ ಅದನ್ನು ತುಂಬಿಕೊಂಡು ಹೋಗಬೇಕು.

೩. ಅಧ್ಯಯನದ ಅವಧಿ

ಡಿ.ಲಿಟ್ ಅಧ್ಯಯನಕ್ಕಾಗಿ ನೋಂದಣಿಯಾದ ದಿನಾಂಕದಿಂದ ಕನಿಷ್ಠ ಒಂದು ವರ್ಷದ ಗರಿಷ್ಠ ಎರಡು ವರ್ಷದ ಒಳಗಾಗಿ ಮಹಾಪ್ರಬಂಧದ ಆರು ಪ್ರತಿಗಳನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಬೇಕು. ಎರಡು ವರ್ಷದ ಒಳಗೆ ಮಹಾಪ್ರಬಂಧ ಸಲ್ಲಿಸದಿದ್ದರೆ ಅವರ ನೋಂದಾವಣೆ ಸಹಜವಾಗಿ ರದ್ದಾಗುತ್ತದೆ. ಪ್ರತಿ ಆರು ತಿಂಗಳಿಗೊಮ್ಮೆ ಅಧ್ಯಯನದ ಪ್ರಗತಿ ವರದಿಯನ್ನು ಅಧ್ಯಯನಾಂಗದ ತಜ್ಞ ಸಲಹಾ ಸಮಿತಿ ಮುಂದೆ ಮಂಡಿಸುವುದು ಕಡ್ಡಾಯ. ಅಧ್ಯಯನವು ಕ್ರಮಬದ್ಧ ಹಾಗೂ ತೃಪ್ತಿಕರ ಎಂದು ಕಂಡುಬರದಿದ್ದಲ್ಲಿ, ಈ ಸಮಿತಿಗೆ ನೋಂದಣಿಯನ್ನು ರದ್ದುಗೊಳಿಸುವ ಹಕ್ಕು ಇರುತ್ತದೆ. ಅಧ್ಯಯನಾಂಗದ ತಜ್ಞ ಸಮಿತಿ ಈ ಕೆಳಗಿನಂತಿರುತ್ತದೆ.

೧. ಎಲ್ಲ ನಿಕಾಯಗಳ ಡೀನ್‌ರು                       :         ಅಧ್ಯಕ್ಷರು

೨. ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರು            :         ಸದಸ್ಯರು

೩. ಬಾಹ್ಯ ವಿದ್ವಾಂಸರು/ಮೌಲ್ಯಮಾಪಕರು          :         ಸದಸ್ಯರು

೪. ಅಧ್ಯಯನಾಂಗದ ನಿರ್ದೇಶಕರು                    :         ಸದಸ್ಯ ಸಂಚಾಲಕರು

೪.  ಡಿ.ಲಿಟ್. ಅಧ್ಯಯನ ಪ್ರಬಂಧ ಸಲ್ಲಿಕೆ

ಡಿ.ಲಿಟ್. ಅಧ್ಯಯನ ಪ್ರಬಂಧ ಸಲ್ಲಿಕೆಗೆ ಕನಿಷ್ಠ ಒಂದು ತಿಂಗಳ ಮೊದಲು ಅಂತಿಮ ಸಾರಲೇಖದ ಹತ್ತು ಪ್ರತಿಗಳನ್ನು ಅಧ್ಯಯನಾಂಗದ ನಿರ್ದೇಶಕರಿಗೆ ಸಲ್ಲಿಸಬೇಕು ಮತ್ತು ಸಾರಲೇಖ ಸಲ್ಲಿಸುವ ನಾಲ್ಕು ತಿಂಗಳ ಮೊದಲು ಅಧ್ಯಯನಾಂಗದ ತಜ್ಞ ಸಲಹಾ ಸಮಿತಿ ಮುಂದೆ ಪ್ರಬಂಧದ ಕರಡನ್ನು ಮಂಡಿಸಬೇಕು. ಇಲ್ಲಿ ವ್ಯಕ್ತವಾಗುವ ಸಲಹೆ ಸೂಚನೆಗಳನ್ನು ಅಧ್ಯಯನಕಾರರು ತಮ್ಮ ಮಹಾಪ್ರಬಂಧದಲ್ಲಿ ಅಳವಡಿಸಿಕೊಂಡು ಸಮಿತಿ ಸೂಚಿಸಿದ ಅವಧಿಯೊಳಗೆ  ಅಂತಿಮ ಮಹಾಪ್ರಬಂಧವನ್ನು ಸಲ್ಲಿಸಬೇಕು.

೫. ಮಹಾಪ್ರಬಂಧದ ಮೌಲ್ಯಮಾಪನ

 1. ವಿಶ್ವವಿದ್ಯಾಲಯದ ಸಂಬಂಧಪಟ್ಟ ನಿಕಾಯದ ಡೀನ್/ವಿಭಾಗ ತಜ್ಞರಿಂದ ಆಯಾ ವಿಷಯಗಳಲ್ಲಿ ಮೌಲ್ಯಮಾಪನ ಮಾಡಬಹುದಾದ ಹತ್ತು ಜನ ಅರ್ಹ ತಜ್ಞರ ಪಟ್ಟಿಯೊಂದನ್ನು ಅಧ್ಯಯನಾಂಗ ತರಿಸಿಕೊಳ್ಳಬೇಕು. ವಿಶ್ವವಿದ್ಯಾಲಯದ ಆಂತರಿಕ ತಜ್ಞರು ಐದು ಜನ ವಿದ್ವಾಂಸರ ಹೆಸರೂ ಆ ಪಟ್ಟಿಯಲ್ಲಿ ಇರಬೇಕು. ಈ ತಜ್ಞರ ಹೆಸರಿನ ಮುಂದೆ ಅವರ ಕ್ಷೇತ್ರದ ತಜ್ಞತೆ ಬಗ್ಗೆ ವಿವರ ನೀಡಬೇಕು. ಅನಂತರ ಮಾನ್ಯ ಕುಲಪತಿಗಳು ಆ ಪಟ್ಟಿಯಿಂದ ಒಬ್ಬ ಆಂತರಿಕ ತಜ್ಞ ವಿದ್ವಾಂಸರನ್ನು ಒಳಗೊಂಡು ಮೂವರು ಮೌಲ್ಯಮಾಪಕರನ್ನು ಆಯ್ಕೆ ಮಾಡುತ್ತಾರೆ. ಕುಲಪತಿಗಳು ಆದ್ಯತಾನುಸಾರ ಆಯ್ಕೆ ಮಾಡಿದ ಇಬ್ಬರು ಮೌಲ್ಯಮಾಪಕರಿಗೆ ಅಧ್ಯಯನಾಂಗವು ಅಧ್ಯಯನಕಾರರ ಸಾರಲೇಖವನ್ನು ಕಳುಹಿಸಿ ಮೌಲ್ಯಮಾಪನಕ್ಕೆ ಅವರ ಒಪ್ಪಿಗೆ ಪಡೆಯಬೇಕು. ಮೌಲ್ಯಮಾಪಕರ ಒಪ್ಪಿಗೆ ಬಂದ ನಂತರ ಮಹಾಪ್ರಬಂಧವನ್ನು ಮೌಲ್ಯಮಾಪನಕ್ಕೆ ಅಧ್ಯಯನಾಂಗವು ಕಳುಹಿಸಬೇಕು. ಮೌಲ್ಯಮಾಪನ ಮಾಡುವ ಮೌಲ್ಯಮಾಪಕರಿಗೆ ಕನಿಷ್ಠ ೧ ತಿಂಗಳಿಂದ ಗರಿಷ್ಠ ೨ ತಿಂಗಳ ಕಾಲಾವಧಿಯನ್ನು ನೀಡಬೇಕು. ಮೂರು ತಿಂಗಳಲ್ಲಿ ಮೌಲ್ಯಮಾಪಕರು ವರದಿ ಕಳಿಸದೆ ಇದ್ದರೆ ಅವರ ಆಯ್ಕೆ ರದ್ದು ಮಾಡಿ ಕಾಯ್ದಿರಿಸಿದ ವಿದ್ವಾಂಸರಿಗೆ ಕಳುಹಿಸಬೇಕು. ಒಟ್ಟಾರೆಯಾಗಿ ಮೌಲ್ಯಮಾಪನ ಪ್ರಕ್ರಿಯೆ ೩ ತಿಂಗಳ ಕಾಲಾವಧಿಯಲ್ಲಿ ಮುಗಿಯಬೇಕು.
 2. ಇಬ್ಬರು ತಜ್ಞರಲ್ಲಿ ಯಾರಾದರೂ ಒಬ್ಬರು ಮಹಾಪ್ರಬಂಧಕ್ಕೆ ಡಿ.ಲಿಟ್. ಪದವಿಯನ್ನು ಶಿಫಾರಸ್ಸು ಮಾಡದಿದ್ದರೆ ಅದಕ್ಕೆ ಡಿ.ಲಿಟ್ ಪದವಿ ದೊರೆಯುವುದಿಲ್ಲ. ಮೌಖಿಕ ಪರೀಕ್ಷೆಗೆ ಇಬ್ಬರು ಮೌಲ್ಯಮಾಪಕರಲ್ಲಿ ಒಬ್ಬರು ಅಗತ್ಯವಾಗಿ ಆಹ್ವಾನಿಸಬೇಕು.

೬. ಮೌಖಿಕ ಪರೀಕ್ಷಾ ಮಂಡಳಿ

 1. ಡಿ.ಲಿಟ್. ಪದವಿಯ ಮೌಖಿಕ ಪರೀಕ್ಷಾ ಮಂಡಳಿಯನ್ನು ಕುಲಪತಿಯವರು ನೇಮಕ ಮಾಡುತ್ತಾರೆ. ನಿಕಾಯದ ಡೀನ್ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿರುತ್ತಾರೆ. ಆ ನಿಕಾಯದ ಎಲ್ಲಾ ವಿಭಾಗದ ಮುಖ್ಯಸ್ಥರು, ಆ ನಿಕಾಯದ ಮಂಡಳಿಯ ಸದಸ್ಯರಾಗಿರುತ್ತಾರೆ. (ಕ್ರ.ಸಂ. ೩ರ ತಜ್ಞ ಸಮಿತಿಯೇ ಮೌಖಿಕ ಪರೀಕ್ಷಾ ಮಂಡಳಿ ಆಗಿರುತ್ತದೆ)
 2. ಈ ಹಂತದಲ್ಲಿ ಕಾರ್ಯಕಾರಿ ಸಮಿತಿಯ ಪರವಾಗಿ ಕುಲಪತಿಗಳು ಕಾರ್ಯನಿರ್ವಹಿಸುತ್ತಾರೆ. ಡಿ.ಲಿಟ್. ಪದವಿಯನ್ನು ಕುಲಪತಿಗಳು ಮೌಖಿಕ ಪರೀಕ್ಷಾ ಮಂಡಳಿಯ ಶಿಫಾರಸ್ಸಿನ ಮೇರೆಗೆ ಘೋಷಿಸುತ್ತಾರೆ.

೭. ಪ್ರಬಂಧದ ವಿನ್ಯಾಸ

 1. ೧. ಪ್ರಬಂಧವು ಎ೪ ಆಕಾರದಲ್ಲಿರಬೇಕು. ನುಡಿ ೧೪ ಪಾಯಿಂಟ್ ಅಕ್ಷರಗಳು ಮತ್ತು ಪ್ರತಿಪುಟಕ್ಕೆ ಕನಿಷ್ಟ ೩೦ ಸಾಲುಗಳು ಇರಬೇಕು. ೨೩ ಸೆಂ.ಮೀ. ಉದ್ದ, ೧೩ ಸೆಂ.ಮೀ ಅಗಲದಲ್ಲಿ ಡಿ.ಟಿ.ಪಿ. ಮಾಡಿರಬೇಕು. ಕನಿಷ್ಟ ೨೦೦ ಪುಟಗಳು ಇರಲೇಬೇಕು ಮತ್ತು ಗರಿಷ್ಠ ೩೦೦ ಪುಟವನ್ನು ದಾಟಕೂಡದು. ಅರಿಕೆ, ಅರ್ಪಣೆ, ಕೃತಜ್ಞತೆ ಪುಟಗಳು ಇರಕೂಡದು. ಅಡಿಟಿಪ್ಪಣಿಗಳು, ಪರಾಮರ್ಶನ ಗ್ರಂಥಗಳು ಇತ್ಯಾದಿ ಅಧ್ಯಯನಕ್ಕೆ ಪೂರಕವಾದ ಅನುಬಂಧಗಳು ಇರಬೇಕು. ಅಧ್ಯಯನಕಾರರ ಪ್ರಮಾಣಪತ್ರದ ನಂತರ ಪರಿವಿಡಿ ಇರಬೇಕು. ಕನ್ನಡ ವಿಶ್ವವಿದ್ಯಾಲಯಕ್ಕೆ ಡಿ.ಲಿಟ್. ಪದವಿಗಾಗಿ ಸಲ್ಲಿಸಿದ ಮಹಾಪ್ರಬಂಧ ಎಂದು ನಮೂದಿಸಿರಬೇಕು.

೮. ಇತರೆ ನಿಯಮಗಳು

 1. ಅಧ್ಯಯನಕಾರರಿಯು ಪ್ರಸ್ತಾವಗಳನ್ನು ವರ್ಷದ ಯಾವುದೇ ಸಂದರ್ಭದಲ್ಲಾದರೂ ಅಧ್ಯಯನಾಂಗಕ್ಕೆ ಸಲ್ಲಿಸಬಹುದು.
 2. ಅಧ್ಯಯನ ಪ್ರಬಂಧವನ್ನು ಕನ್ನಡದಲ್ಲಿಯೇ ಬರೆಯಬೇಕು.
 3. ಪ್ರಕಟಿತ ಕೃತಿಗಳನ್ನು ಡಿ.ಲಿಟ್. ಪದವಿಗಾಗಿ ಸಲ್ಲಿಸಲು ಅವಕಾಶವಿಲ್ಲ.
 4. ಅಧ್ಯಯನಕಾರರ ಅರ್ಹತೆ ಮತ್ತು ಅಧ್ಯಯನದ ಪ್ರಸ್ತಾವವನ್ನು ಹಾಗೂ ವಯಸ್ಸಿನ ಅರ್ಹತೆಗಳನ್ನು ಗಮನಿಸಿ ಅಧ್ಯಯನಾಂಗದ ಆಂತರಿಕ ಸಲಹಾ ಸಮಿತಿಯು ಅವರನ್ನು ಪಿಎಚ್.ಡಿ ಮಾಡಲು ಸೂಚಿಸಬಹುದು. ಈಗಾಗಲೇ ಪಿಎಚ್.ಡಿ. ಪ್ರವೇಶಕ್ಕೆ ಅರ್ಹರಿದ್ದಲ್ಲಿ ಮತ್ತು ಪಿಎಚ್.ಡಿ. ಪಡೆದವರಿಗೆ ಡಿ.ಲಿಟ್. ಅಧ್ಯಯನಕ್ಕೆ ಅವಕಾಶವಿಲ್ಲ. ಈ ಬಗೆಗೆ ಸಮಿತಿಯ ತೀರ್ಮಾನವೇ ಅಂತಿಮವಾದದ್ದು.
 5. ಅಧ್ಯಯನ ಪ್ರಬಂಧವನ್ನು ಸಲ್ಲಿಸುವ ಅಧ್ಯಯನಕಾರರನ್ನು ವಿಶ್ವವಿದ್ಯಾಲಯ ಆಹ್ವಾನಿಸಿದಾಗ ಬಂದು ತಮ್ಮ ಅಧ್ಯಯನ ಪ್ರಬಂಧದ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಬಹುದು. ಆದರೆ ಇದು ಮೌಲ್ಯಮಾಪನದ ಭಾಗವಾಗಿರುವುದಿಲ್ಲ. ಯಾವುದೇ ಇತರೆ ಸಂಭಾವನೆ ನೀಡಲಾಗುವುದಿಲ್ಲ.
 6. ವಿಶೇಷ ಸಂದರ್ಭದಲ್ಲಿ ಮರುಮೌಲ್ಯಮಾಪನ ಮಾಡುವ, ಪರಿಷ್ಕರಿಸುವ ಅಧಿಕಾರ ಕುಲಪತಿಯವರಿಗಿರುತ್ತದೆ.
 7. ಅಧ್ಯಯನ ಪ್ರಬಂಧದ ಮೇಲಿನ ಪೂರ್ಣ ಹಕ್ಕು ಕನ್ನಡ ವಿಶ್ವವಿದ್ಯಾಲಯಕ್ಕೆ ಸೇರಿರುತ್ತದೆ. ವಿಶ್ವವಿದ್ಯಾಲಯದಿಂದ ಲಿಖಿತ ಒಪ್ಪಿಗೆ ಪಡೆದು ಅಧ್ಯಯನಕಾರರು ಮೌಲ್ಯಮಾಪಕರು ಸೂಚಿಸಿದ ಸಲಹೆ ಸೂಚನೆಗಳನ್ನು ಅಳವಡಿಸಿಕೊಂಡ ಬಗ್ಗೆ ಸಂಬಂಧಿಸಿದ ಡೀನ್ ಅವರ ಶಿಫಾರಸ್ಸಿನ ನಂತರ ಮಾನ್ಯ ಕುಲಪತಿಗಳ ಅನುಮೋದನೆಯ ಹಿನ್ನೆಲೆಯಲ್ಲಿ ಅದನ್ನು ಪ್ರಕಟಿಸಲು ಅವಕಾಶವಿರುತ್ತದೆ.
 8. ಕನ್ನಡ ವಿಶ್ವವಿದ್ಯಾಲಯದ ಈ ಪದವಿಯು ಪಿಎಚ್.ಡಿ. ಪದವಿಗೆ ಸಮಾನವಾದುದ್ದಲ್ಲ.
 9. ನೋಂದಣಿಯ ಸಂದರ್ಭದಲ್ಲಿ ಈ ನಿಯಮಗಳಿಗೆ ಅಧ್ಯಯನಕಾರರು ತಾವು ಬದ್ಧರೆಂದು ಕರಾರು ಪತ್ರ ಬರೆದು ಕೊಡಬೇಕು.