publication-wing-front

 

ಕನ್ನಡ ವಿಶ್ವವಿದ್ಯಾಲಯ ಮುಖ್ಯವಾಗಿ ಸಂಶೋಧನೆಗೆ ಒತ್ತು ಕೊಡುವುದರಿಂದ ಇದರ ಪ್ರಸಾರಾಂಗದ ಕಾರ್ಯ ವಿಧಾನವು ಬೇರೆ ವಿಶ್ವವಿದ್ಯಾಲಯಗಳ ಪ್ರಸಾರಾಂಗಕ್ಕಿಂತ ವಿಭಿನ್ನವಾಗಿದೆ. ಈ ಹಿನ್ನೆಲೆಯಲ್ಲಿ 1992ರಲ್ಲಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಸಾರಾಂಗವು ಸ್ಥಾಪನೆಯಾಯಿತು. ಕನ್ನಡ ಸಂಸ್ಕೃತಿ ಎಲ್ಲಾ ಮುಖಗಳ ಸಂಶೋಧನೆ, ಕನ್ನಡ ಬಲ್ಲವರಿಗೆ ಮತ್ತು ಕನ್ನಡ ಬಾರದವರಿಗೆ ಕರ್ನಾಟಕ ಸಂಸ್ಕೃತಿ ಬಗ್ಗೆ ಅಧಿಕೃತವಾದ ಮಾಹಿತಿ ತಲುಪಿಸುವುದು. ವೈಜ್ಞಾನಿಕ ದೃಷ್ಟಿಕೋನದೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನು ಸಮುದಾಯದಲ್ಲಿ ನಿರಂತರವಾಗಿ ಹರಡಲು ನಿಯೋಜಿಸಿತ ಯೋಜನೆಗಳೊಂದಿಗೆ ಕೆಲಸ ನಿರ್ವಹಿಸುವುದು, ಜನತೆಯ ಅಭಿರುಚಿ, ಅರಿವನ್ನು ಹೆಚ್ಚಿಸುವುದು ದಿನನಿತ್ಯದ ಅಗತ್ಯಗಳನ್ನು ಯೋಚಿಸಿ ಸರಳವಾದ ರೀತಿಯಲ್ಲಿ ಪುಸ್ತಕಗಳನ್ನು ಪ್ರಕಟಿಸಿ ಜನಸಾಮಾನ್ಯರಿಗೆ ತಲುಪಿಸುವುದು. ನಮ್ಮ ನಾಡು, ನುಡಿ, ಸಂಸ್ಕೃತಿ, ಕಲೆ, ಸಾಹಿತ್ಯ ಮತ್ತು ಪರಂಪರೆಗಳನ್ನು ಸಂರಕ್ಷಿಸುವುದು ಜೊತೆಗೆ ಪ್ರೋತ್ಸಾಹ ನೀಡಿ ಬೆಳೆಸುವುದು. ಹೀಗೆ ಒಟ್ಟು ಕನ್ನಡನಾಡಿನ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡುವುದು, ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಕೈಗೊಂಡ ಪ್ರತಿಜ್ಞೆ. ಈಗಾಗಲೇ ಹದಿನಾಲ್ಕು ವರುಷಗಳಿಂದ ಕಲೆ, ಸಾಹಿತ್ಯ, ವಿಜ್ಞಾನ, ಇತಿಹಾಸ, ಜಾನಪದ, ಬುಡಕಟ್ಟು, ಸಂಗೀತ, ಶಾಸನ, ಮಾನವಿಕ, ಸಾಮಾಜಿಕ ವಿಜ್ಞಾನ, ವೈದ್ಯವಿಜ್ಞಾನ, ನವಸಾಕ್ಷರತೆ, ಸಮುದಾಯ, ವಿಶ್ವಕೋಶ ಹೀಗೆ ಹಲವು ಜ್ಞಾನ ಶಾಖೆಗಳನ್ನು ಕುರಿತಂತೆ ಮೌಲಿಕ ಗ್ರಂಥಗಳನ್ನು ಪ್ರಸಾರಾಂಗ ಪ್ರಕಟಿಸಿದೆ. ಇವುಗಳ ಸಂಖ್ಯೆ ಸುಮಾರು 850ಕ್ಕಿಂತ ಹೆಚ್ಚಿದೆ.

ಅರಿವಿನ ತೇರಿನಂತಿರುವ ಪ್ರಸಾರಾಂಗವು ವಿಜ್ಞಾನ ಸಂಗಾತಿ, ಪುಸ್ತಕ ಮಾಹಿತಿ, ಚೆಲುವ ಕನ್ನಡ, ಕನ್ನಡ ಅಧ್ಯಯನ, ಮಹಿಳಾ ಅಧ್ಯಯನ, ಬುಡಕಟ್ಟು ಅಧ್ಯಯನ, ಜಾನಪದ ಕರ್ನಾಟಕ, ಹಸ್ತಪ್ರತಿ ಅಧ್ಯಯನ, ದ್ರಾವಿಡ ಅಧ್ಯಯನ, ಶಾಸನ ಅಧ್ಯಯನ, ಚರಿತ್ರೆ ಅಧ್ಯಯನ ಮತ್ತು ಜರ್ನಲ್ ಆಫ್ ಕರ್ನಾಟಕ ಸ್ಟಡೀಸ್ ಎಂಬ ನಿಯತಕಾಲಿಕೆಗಳನ್ನು ನಿಯತವಾಗಿ ಪ್ರಕಟಿಸುತ್ತಿದೆ. ಈ ಮೂಲಕ ಸಾಮಾಜಿಕ ಜವಾಬ್ದಾರಿಯನ್ನೂ ಹೊತ್ತು ನಿಂತಿದೆ. ವರ್ತಮಾನದ ಸಂಗತಿಗಳ ಬಗೆಗೆ ಹಲವು ನೆಲೆಯಲ್ಲಿ ಮಂಥನಶೀಲವಾಗಿದೆ. ವಿಜ್ಞಾನ ಸಂಗಾತಿ ಪತ್ರಿಕೆ ವೈಜ್ಞಾನಿಕ ರಂಗದಲ್ಲಿನ ನಿತ್ಯನೂತನ ಜಗತ್ತಿನ ಆವಿಷ್ಕಾರಗಳನ್ನು ಜನತೆಗೆ ಪರಿಚಯಿಸುತ್ತಿದೆ. ಮಹಿಳಾ ಅಧ್ಯಯನ ಪತ್ರಿಕೆ ಇಂದಿನ ಸಮಾಜದಲ್ಲಿನ ಮಹಿಳೆಯರ ಸ್ಥಾನ-ಮಾನಗಳ ಅಳತೆಗೋಲಾಗಿದೆ. ನಾಡಿನ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಕನ್ನಡ ಅಧ್ಯಯನ ಪತ್ರಿಕೆ ಮನನ ಮಾಡುತ್ತದೆ. ಪುಸ್ತಕ ಮಾಹಿತಿ ಪತ್ರಿಕೆ, ಕನ್ನಡ ಸಾಹಿತ್ಯಲೋಕದ ಸೃಜನಶೀಲತೆಯನ್ನು ತೋರ್ಪಡಿಸುತ್ತಿದೆ. ವಿಶ್ವವಿದ್ಯಾಲಯದ ನಿರಂತರ ಚಟುವಟಿಕೆಗಳನ್ನು ಚೆಲುವ ಕನ್ನಡ ಪತ್ರಿಕೆ ಪ್ರತಿಬಿಂಬಿಸುತ್ತಿದೆ.

ಪುಸ್ತಕದ ಬೆಳೆಯನ್ನು ಹುಲುಸಾಗಿ ಬೆಳೆಸುತ್ತಿರುವ ಪ್ರಸಾರಾಂಗ ಈ ಬೆಳೆಯನ್ನು ಜನತೆಗೆ ತಲುಪಿಸುವಲ್ಲಿ ಸೃಜನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತದೆ. ಸಂಶೋಧನೆ-ಪುಸ್ತಕ ರೂಪದಲ್ಲಿ ಜನತೆಗೆ ತಲುಪಿದಾಗಲೇ ಅದು ಪರಿಪೂರ್ಣ. ಪ್ರಸಾರಾಂಗವು ಪುಸ್ತಕ ಸಂಸ್ಕೃತಿ ನಿಯೋಜಿತ ಯೋಜನೆಯೊಂದಿಗೆ ವರ್ಷದುದ್ದಕ್ಕೂ ನಾಡಿನಾದ್ಯಂತ ಯಾತ್ರೆ ಕೈಗೊಂಡು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಪುಸ್ತಕ ಮಾರಾಟ ಮಾಡುತ್ತಿದೆ.

ಮನೆ ಮುಂಬಾಗಿಲಿಗೆ ಪ್ರಸಾರಾಂಗದ ಪ್ರಕಟಣೆಗಳ ತಲುಪಿಸಬೇಕು ಎಂಬ ಸದಾಶಯದೊಂದಿಗೆ ಮನೆಮನೆಗೆ ಸರಸ್ವತಿ ಯೋಜನೆ ಹಮ್ಮಿಕೊಂಡಿದೆ. ಒಂದು ರೀತಿಯಲ್ಲಿ ಸಂಚಾರಿ ವಿಶ್ವವಿದ್ಯಾಲಯದಂತೆ ಕಾರ್ಯ ನಿರ್ವಹಿಸುತ್ತಿದೆ. ಹೊಸ ಹೊಸ ಆಲೋಚನೆ, ಯೋಜನೆಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಪ್ರಸಾರಾಂಗ ವಿಭಾಗಕ್ಕೆ ನಾಡು-ನುಡಿಯಿಂದ ಮನ್ನಣೆ ಸಿಕ್ಕಿದೆ. ಪ್ರಮುಖ ಸಂಸ್ಥೆಗಳು ಕರ್ನಾಟಕದ ವಿವಿಧ ಅಕಾಡೆಮಿಗಳು, ಪ್ರಾಧಿಕಾರಗಳು ಗೌರವ ಪ್ರಶಸ್ತಿಗಳನ್ನು ನೀಡಿವೆ. ಕನ್ನಡಿಗರಂತೂ ನಿರಂತರವಾದ ಪ್ರೋತ್ಸಾಹ ನೀಡುತ್ತಿದ್ದಾರೆ. ಹೊಸ ಆಶಯ ಹೊಂದಿ ಸಾಧಿಸುವ ಸಂಕಲ್ಪ ಪ್ರಸಾರಾಂಗಕ್ಕಿದೆ.

ಪ್ರಸಾರಾಂಗವು ಕನ್ನಡ ವಿಶ್ವವಿದ್ಯಾಲಯದಲ್ಲಿ ಆರಂಭದ (1992) ದಿನಗಳಿಂದಲೇ ಕಾರ್ಯ ನಿರ್ವಹಿಸುತ್ತಾ ಬಂದಿದೆ. ವಿಶ್ವವಿದ್ಯಾಲಯದ ಹಾಗೂ ನಾಡಿನ ವಿದ್ವಾಂಸರ ಸಂಶೋಧನ ಯೋಜನೆಗಳನ್ನು ಓದುಗರಿಗೆ ತಲುಪಿಸುವ ಮಹತ್ವದ ಜವಾಬ್ದಾರಿಯನ್ನು ಪ್ರಸಾರಾಂಗ ಕೈಗೆತ್ತಿಕೊಂಡಿದೆ. ಹಂಪಿಯ ಮಂಟಪವನ್ನೇ ಅನುಭವ ಮಂಟಪವಾಗಿಸಿ ಅಲ್ಲಿಂದಲೇ ಜ್ಞಾನಪ್ರಸಾರವನ್ನು ವಿಶ್ವವಿದ್ಯಾಲಯ ಆರಂಭಿಸಿತ್ತು. ನಾಡಿನ ಜನರೊಡನೆ ಅನುಭವಗಳನ್ನು ಅಕ್ಷರಗಳ ಮೂಲಕ ಹಂಚಿಕೊಳ್ಳುವ ಅಗಾಧವಾದ ಕೈಂಕರ್ಯದಲ್ಲಿ ಅನೇಕ ಪುಸ್ತಕಗಳನ್ನು ಪ್ರಸಾರಾಂಗ ಪ್ರಕಟಿಸಿದೆ. ಅಲ್ಲದೇ ಅನೇಕ ಲೇಖಕರ ಶೋಧನೆಯ ಫಲಶ್ರುತಿಗಳನ್ನು ಪ್ರಸಾರಾಂಗ ನಾಡಿಗೆ ತಲುಪಿಸಿದೆ. ಅದಕ್ಕೆ ಪೂರಕವಾಗಿ ವಿವಿಧ ಮಾಲೆಗಳ ಹೆಸರಲ್ಲಿ ಪುಸ್ತಕಗಳನ್ನು ಪ್ರಕಟಿಸಿದ್ದಲ್ಲದೆ ಪ್ರಚಾರೋಪನ್ಯಾಸಗಳನ್ನು ಏರ್ಪಡಿಸಿ ಆ ಮೂಲಕ ವಿಶ್ವವಿದ್ಯಾಲಯದ ಆವರಣದ ಹೊರಗೂ ಕ್ರಿಯಾಶೀಲವಾಗಿದೆ. ವಿಭಿನ್ನ ವಿಭಾಗಗಳ ಅಧ್ಯಯನಶಿಸ್ತುಗಳಿಗೆ ಅನುಗುಣವಾಗಿ ನಿಯತಕಾಲಿಕೆಗಳನ್ನು ಪ್ರಕಟಿಸಿದೆ. ಪ್ರಕಟಣೆಗಳನ್ನು ನಾಡಿನ ವಿವಿಧ ಸ್ಥಳಗಳಲ್ಲಿ ಬಿಡುಗಡೆ ಮಾಡುವುದರ ಮೂಲಕ ಹಾಗೂ ಪುಸ್ತಕಸಂಸ್ಕøತಿ ಯಾತ್ರೆಯ ಮೂಲಕ ಜನರಿಗೆ ನೇರವಾಗಿ ಪುಸ್ತಕ ತಲುಪಿಸುವಲ್ಲಿ ಯಶಸ್ವಿಯಾಗಿದೆ.

ಕನ್ನಡ ವಿಶ್ವವಿದ್ಯಾಲಯ ಮುಖ್ಯವಾಗಿ ಸಂಶೋಧನೆಗೆ ಒತ್ತುಕೊಡುವುದರಿಂದ ಪ್ರಸಾರಾಂಗದ ಕಾರ್ಯವಿಧಾನವು ಬೇರೆ ವಿಶ್ವವಿದ್ಯಾಲಯಗಳ ಪ್ರಸಾರಾಂಗಕ್ಕಿಂತ ಭಿನ್ನವಾಗಿದೆ. ಕನ್ನಡ ಸಂಸ್ಕ್ರತಿಯ ಎಲ್ಲಾ ಮುಖಗಳ ಸಂಶೋಧನೆ, ಕನ್ನಡ ಬಲ್ಲವರಿಗೆ ಮತ್ತು ಕನ್ನಡ ಬಾರದವರಿಗೆ ಕರ್ನಾಟಕ ಸಂಸ್ಕ್ರತಿ ಬಗ್ಗೆ ಅಧಿಕೃತವಾದ ಮಾಹಿತಿ ತಲುಪಿಸುವುದು, ವೈಜ್ಞಾನಿಕ ಯೋಜನೆಗಳೊಂದಿಗೆ ಕೆಲಸ ನಿರ್ವಹಿಸುವುದು, ಜನತೆಯ ಅಭಿರುಚಿ ಹಾಗೂ ಅರಿವನ್ನು ಹೆಚ್ಚಿಸುವುದು, ದಿನನಿತ್ಯದ ಅಗತ್ಯಗಳನ್ನು ಯೋಚಿಸಿ ಸರಳವಾದ ರೀತಿಯಲ್ಲಿ ಪುಸ್ತಕಗಳನ್ನು ಪ್ರಕಟಿಸಿ ಜನರಿಗೆ ತಲುಪಿಸುವುದು, ಕನ್ನಡ ನಾಡು, ನುಡಿ, ಸಂಸ್ಕøತಿ, ಕಲೆ, ಸಾಹಿತ್ಯ ಮತ್ತು ಪರಂಪರೆಗಳನ್ನು ಸಂರಕ್ಷಿಸುವುದು, ಜೊತೆಗೆ ಪ್ರೋತ್ಸಾಹ ನೀಡಿ ಬೆಳೆಸುವುದು, ಹೀಗೆ ಒಟ್ಟು ಕನ್ನಡನಾಡಿನ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡುವುದು, ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ಮುಖ್ಯ ಗುರಿ. ಈಗಾಗಲೇ ಕಲೆ, ಸಾಹಿತ್ಯ, ವಿಜ್ಞಾನ, ಇತಿಹಾಸ, ಜಾನಪದ, ಬುಡಕಟ್ಟು, ಸಂಗೀತ, ಶಾಸನ, ಮಾನವಿಕ, ಸಾಮಾಜಿಕ ವಿಜ್ಞಾನ, ವೈದ್ಯವಿಜ್ಞಾನ, ನವಸಾಕ್ಷರತೆ, ಸಮುದಾಯ, ವಿಶ್ವಕೋಶ ಹೀಗೆ ಹಲವು ಜ್ಞಾನಶಾಖೆಗಳನ್ನು ಕುರಿತಂತೆ ಮೌಲಿಕ ಗ್ರಂಥಗಳನ್ನು ಪ್ರಸಾರಾಂಗ ಪ್ರಕಟಿಸಿದೆ.

ಪ್ರಸಾರಾಂಗವು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಸುಮಾರು 1,207 ಪ್ರಕಟಣೆಗಳನ್ನು ಹೊರತಂದಿದೆ. ಇವುಗಳಲ್ಲಿ ಮಂಟಪಮಾಲೆ 283, ನವಸಾಕ್ಷರಮಾಲೆ 110, ಹೊನ್ನಾರುಮಾಲೆ 29, ನಮ್ಮವರು ಮಾಲೆ 23, ವಿಶ್ವಕೋಶಗಳು 9, ಕರ್ನಾಟಕ ರಾಜ್ಯಕೋಶಗಳು 3, ಕನ್ನಡ ಭಾಷಾಭಿವೃದ್ಧಿ ಯೋಜನೆ 18, ಕರ್ನಾಟಕ ಚರಿತ್ರೆ ಸಂಪುಟಗಳು 7, ಕನ್ನಡ ವಿಶ್ವವಿದ್ಯಾಲಯ ಚರಿತ್ರೆ ಸಂಪುಟಗಳು 8, ಶಾಸನ ಸಂಪುಟಗಳು 10, ಬುಡಕಟ್ಟು ಮಹಾಕಾವ್ಯಮಾಲೆ 10, ಬುಡಕಟ್ಟು ಅಧ್ಯಯನಮಾಲೆ 9, ಕರ್ನಾಟಕ ಜಾನಪದ ಕಾವ್ಯಮಾಲೆ 3, ಏಕಪ್ರಕರಣ ಗ್ರಂಥಮಾಲೆ 8, ಸಮಗ್ರ ಜೈನಸಾಹಿತ್ಯಮಾಲೆ 19, ಪಿಯುಸಿ ಪಠ್ಯಪುಸ್ತಕಗಳು 16, ನಾಡೋಜಮಾಲೆ 6, ಚಿಂತನಮಾಲೆ 6, ಮಹಿಳಾ ಅಧ್ಯಯನ ಕೇಂದ್ರ  ಪ್ರಕಟಣೆಗಳು 7, ದೂರಶಿಕ್ಷಣ ನಿರ್ದೇಶನಾಲಯದ ಪ್ರಕಟಣೆ 1 ಒಳಗೊಂಡಿವೆ.

 1. ಪ್ರಸಾರಾಂಗವು ವಿಶ್ವವಿದ್ಯಾಲಯದ ವಿದ್ವಾಂಸರಿಂದ ಮತ್ತು ಬಾಹ್ಯವಿದ್ವಾಂಸರಿಂದ ಬಂದ ಹಸ್ತಪ್ರತಿಗಳನ್ನು ಪ್ರಕಟಣೆಗೆ ಸ್ವೀಕರಿಸುತ್ತದೆ. ವಿಶ್ವವಿದ್ಯಾಲಯದ ವಿವಿಧ ಅಧ್ಯಯನ ವಿಭಾಗಗಳು ಕೈಗೊಂಡ ಸಾಂಸ್ಥಿಕ ಮತ್ತು ವೈಯಕ್ತಿಕ ಯೋಜನೆಗಳು ಮತ್ತು ಸಂಪಾದಿತ ಕೃತಿಗಳ ಹಸ್ತಪ್ರತಿಗಳು ಮಾನ್ಯ ಕುಲಪತಿ ಅವರಿಂದ ಅನುಮೋದನೆಗೊಂಡು ಪ್ರಸಾರಾಂಗದ ನಿರ್ದೇಶಕರಿಗೆ ಬರುತ್ತದೆ. ಇವುಗಳನ್ನು ಪ್ರಸಾರಾಂಗ ಸಲಹಾ ಸಮಿತಿ ಸಭೆಯ ಗಮನಕ್ಕೆ ತಂದು ಪ್ರಕಟಣೆಗೆ ಕ್ರಮವಹಿಸ ಲಾಗುವುದು.
 2. ವಿಶ್ವವಿದ್ಯಾಲಯದ ಬಾಹ್ಯವಿದ್ವಾಂಸರು ಪ್ರಕಟಣೆಗೆ ಸಲ್ಲಿಸುವ ಹಸ್ತಪ್ರತಿಗಳನ್ನು ವಿಷಯಾ ಧಾರಿತವಾಗಿ ಸಂಬಂದಿsಸಿದ ವಿಭಾಗಗಳಿಗೆ ಕುಲಪತಿ ಅವರು ಪರಿಶೀಲನೆಗೆ ಕಳುಹಿಸುತ್ತಾರೆ. ಅಧ್ಯಯನ ಮಂಡಳಿಯನ್ನು ಒಳಗೊಂಡ ವಿಭಾಗದ ಸಮಿತಿಯಲ್ಲಿ ಹಸ್ತಪ್ರತಿಯನ್ನು ಪರಿಶೀಲಿಸಿ ವಿಮರ್ಶಾತ್ಮಕ ಟಿಪ್ಪಣಿಯನ್ನು ಮಂಡಿಸುವುದು. ಪ್ರಕಟಣೆಗೆ ಯೋಗ್ಯವಾಗಿದ್ದಲ್ಲಿ ಸಮಿತಿ ಪ್ರಕಟಣೆಗೆ ಶಿಫಾರಸ್ಸು ಮಾಡಿದ್ದಲ್ಲಿ ಮಾತ್ರ ಅಂಥ ಹಸ್ತಪ್ರತಿಗಳನ್ನು ಪ್ರಸಾರಾಂಗದ ಪ್ರಕಟಣೆಗೆ ಸ್ವೀಕರಿಸುತ್ತದೆ.
 3. ವಿಶ್ವವಿದ್ಯಾಲಯದಲ್ಲಿರುವ ವಿಭಾಗಗಳ ವಿಷಯಗಳನ್ನು ಹೊರತುಪಡಿಸಿ ಇತರೆ ವಿಷಯಗಳ ಹಸ್ತಪ್ರತಿಗಳನ್ನು ನಿಕಾಯದ ಡೀನ್ ಮತ್ತು ಮಾನ್ಯ ಕುಲಪತಿ ಅವರು ಆಯ್ಕೆ ಮಾಡುವ ಇಬ್ಬರು ವಿದ್ವಾಂಸರಿಂದ ಈ ಹಸ್ತಪ್ರತಿಗಳ ಪ್ರಕಟಣೆಯ ಅಗತ್ಯ ಕುರಿತು ವಿಮರ್ಶಾತ್ಮಕ ಶಿಫಾರಸ್ಸು ಟಿಪ್ಪಣಿ ಪಡೆದು ಸಂಬಂದಿsಸಿದ ನಿಕಾಯದ ಡೀನ್ ಅವರು ಮಾನ್ಯ ಕುಲಪತಿಗಳ ಮೂಲಕ ಪ್ರಸಾರಾಂಗಕ್ಕೆ ಕಳುಹಿಸುತ್ತಾರೆ. ಈ ಮಾರ್ಗದಲ್ಲಿ ಬಂದ ಬಾಹ್ಯ ವಿದ್ವಾಂಸರ ಹಸ್ತಪ್ರತಿಗಳನ್ನು ಮಾತ್ರ ಪ್ರಕಟಣೆಗೆ ಪ್ರಸಾರಾಂಗ ಸ್ವೀಕರಿಸುತ್ತದೆ. ಇಂಥ ಕೃತಿಗಳಲ್ಲಿ ಅಂದರೆ ವಿಚಾರ ಸಂಕಿರಣದ ಸಂಕಲನಗಳ ಕೃತಿಗೆ ಸಂಬಂಧಿಸಿದಂತೆ ಪ್ರಬಂಧ ಮಂಡನೆಯ, ವಿಚಾರ ಸಂಕಿರಣಗಳ ಪೂರ್ಣವಿವರಗಳನ್ನು ಪ್ರಕಟಣೆಗೆ ಕಳುಹಿಸುವ ಕಡತದಲ್ಲಿ ದಾಖಲಿಸುತ್ತದೆ.
 4. ಪ್ರಕಟಣೆಗೆಂದು ನಿಯಮಾನುಸಾರ ಪ್ರಸಾರಾಂಗಕ್ಕೆ ಬರುವ ಹಸ್ತಪ್ರತಿಗಳನ್ನು ಸ್ವೀಕರಿಸುವಾಗ ಪ್ರತಿ ಹಸ್ತಪ್ರತಿಗೂ ನಿಗದಿತ ಕ್ರಮಾಂಕ ನೀಡಿ ದಾಖಲು ಪುಸ್ತಕದಲ್ಲಿ ದಾಖಲಿಸಿ ಪ್ರಕಟಣಾ ಕಾರ್ಯ ಗಳನ್ನು ನಿರ್ವಹಿಸಲಾಗುತ್ತದೆ.
 5. ಮುದ್ರಣ ಆಗಿ ದಾಸ್ತಾನು ವಿಭಾಗಕ್ಕೆ ಬರುವ ಪುಸ್ತಕಗಳನ್ನು ದಾಖಲಾತಿ ಪುಸ್ತಕದಲ್ಲಿ ಶೀರ್ಷಿಕೆ ಮತ್ತು ಪ್ರಕಟಣಾ ವರ್ಷ ಮತ್ತು ಲೇಖಕರ ವಿವರದೊಂದಿಗೆ ದಾಖಲಿಸಲಾಗುತ್ತದೆ. ಮಾರಾಟಕ್ಕೆ ಕಳುಹಿಸಿದ ಪುಸ್ತಕದ ವಿವರ, ಗೌರವಪ್ರತಿಗಳನ್ನು ವಿತರಿಸಿದ ವಿವರ ಮತ್ತು ಉಳಿದ ಪುಸ್ತಕದ ವಿವರಗಳನ್ನು ದಾಖಲಾತಿ ಪುಸ್ತಕದಲ್ಲಿ ನಮೂದಿಸಲಾಗುತ್ತದೆ. ದೋಷಯುಕ್ತ, ಹರಿದ ಪುಸ್ತಕಗಳ ದಾಖಲಾತಿ ಕೂಡ ಅದೇ ವಹಿಯಲ್ಲಿ ದಾಖಲಿಸಲಾಗುತ್ತದೆ.
 6. ಪ್ರತಿ ವರ್ಷ ಕಡ್ಡಾಯವಾಗಿ ದಾಸ್ತಾನಿನ ಪರಿಶೀಲನೆ (ಸ್ಟಾಕ್ ವೆರಿಫಿಕೇಷನ್) ಮಾಡಲಾಗುತ್ತದೆ. ಅದನ್ನು ಪ್ರಸಾರಾಂಗ ಸಲಹಾ ಸಮಿತಿಯ ಗಮನಕ್ಕೆ ತಂದು ಆಡಳಿತಾಂಗಕ್ಕೆ ಸಲ್ಲಿಸಲಾಗುತ್ತದೆ.
 7. ವಿಶ್ವವಿದ್ಯಾಲಯದ ದಾಸ್ತಾನು ಪುಸ್ತಕಗಳಿಗೆ ವಿಮೆ ಮಾಡಿಸಲಾಗಿದೆ.
 8. ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ತಾನು ಪ್ರಕಟಿಸಿದ ಪುಸ್ತಕಗಳು ಕರ್ನಾಟಕದಾದ್ಯಂತ ಎಲ್ಲ ಪ್ರದೇಶದಲ್ಲಿ ಸುಲಭವಾಗಿ ದೊರಕುವಂತೆ ವ್ಯವಸ್ಥಿತವಾದ ಜಾಲವೊಂದನ್ನು ಹೊಂದಿದೆ.
 9. ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಗಳು, ಪುಸ್ತಕೋತ್ಸವ ಸಮಾರಂಭ ಗಳು, ಸಾಹಿತ್ಯ ಜಾತ್ರೆ ಮುಂತಾದ ಸಮಾರಂಭಗಳಲ್ಲಿ ಪ್ರಸಾರಾಂಗದ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗುತ್ತದೆ. ರಾಜ್ಯದ ವಿವಿಧ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಪುಸ್ತಕ ಮಾರಾಟ ಮಾಡುವ ಯೋಜನೆಯನ್ನು ರೂಪಿಸಿಕೊಂಡಿದೆ.
 10. ಪ್ರಸಾರಾಂಗ ಪ್ರಕಟಿಸುವ ಎಲ್ಲ ಪ್ರಕಟಣೆಗಳನ್ನು ನಿಗದಿಪಡಿಸಿದ ಮುಖಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ. ಮಾರಾಟವು ಪ್ರಸಾರಾಂಗದ ಅಧಿಕೃತ ರಸೀದಿಯ ಮೂಲಕವೇ ಆಗುತ್ತದೆ. ಮಾರಾಟದ ರಸೀದಿಯನ್ನು ದ್ವಿಪತಿಯಲ್ಲಿ ನಿರ್ವಹಿಸಿ ಸೂಕ್ತ ದಾಖಲೆಗಳನ್ನು ಇಡಲಾಗುತ್ತದೆ. ರಸೀದಿ ಪುಸ್ತಕಗಳನ್ನು ಪ್ರಕಟಿಸುವ ಪೂರ್ವದಲ್ಲಿ ಎಷ್ಟು ಪುಸ್ತಕಗಳನ್ನು ಪ್ರಕಟಿಸಲಾಗುತ್ತಿದೆ ಮತ್ತು ಅವುಗಳಲ್ಲಿ ಇರುವ ರಸೀದಿಗಳ ಸಂಖ್ಯೆ, ಪ್ರಕಟಣಾ ವರ್ಷ ಇತ್ಯಾದಿ ವಿವರಗಳಿಗೆ ಆಡಳಿತಾಂಗದಿಂದ ಅನುಮತಿ ಪಡೆಯಲಾಗುತ್ತದೆ. ಅವುಗಳನ್ನು ವಾರ್ಷಿಕ ಲೆಕ್ಕಪರಿಶೋಧನೆ ಸಂದರ್ಭದಲ್ಲಿ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಈ ಎಲ್ಲ ವ್ಯವಹಾರಗಳನ್ನು ವ್ಯವಸ್ಥಿತವಾಗಿ ನಿರ್ವಹಿಸ ಲಾಗುತ್ತದೆ.
 11. ಪ್ರಸಾರಾಂಗ ಪ್ರಕಟಿಸುವ ಪುಸ್ತಕಗಳಿಗೆ ವಿಶ್ವವಿದ್ಯಾಲಯದ ಸಿಬ್ಬಂದಿಗೆ ಮತ್ತು ವಿದ್ಯಾರ್ಥಿಗಳಿಗೆ ಒಂದು ಪ್ರತಿಯನ್ನು ಒಮ್ಮೆ ಮಾತ್ರ ಶೇಕಡಾ 50 ದರದಲ್ಲಿ ನೀಡಲಾಗುತ್ತದೆ. ಖಾಸಗಿ ಮಾರಾಟ ಗಾರರಿಗೆ ಗರಿಷವಿ ಶೇಕಡಾ 35 ರಿಯಾಯಿತಿಯಲ್ಲಿ ಪುಸ್ತಕಗಳನ್ನು ನೀಡಲಾಗುತ್ತದೆ. ವಿಶೇಷ ಸಂದರ್ಭದಲ್ಲಿ (ರಾಜ್ಯೋತ್ಸವ ತಿಂಗಳು, ನುಡಿಹಬ್ಬದ ಸಂದರ್ಭ ಇತ್ಯಾದಿ) ಆಡಳಿತಾಂಗದ ಒಪ್ಪಿಗೆ ಪಡೆದು ಶೇಕಡಾ 50 ರಿಯಾಯಿತಿ ದರದಲ್ಲಿ ನೀಡುವ ಪುಸ್ತಕಗಳನ್ನು ಒಬ್ಬರಿಗೆ ಒಂದು ಪುಸ್ತಕದಂತೆ ಮಾತ್ರ ನೀಡಲಾಗುತ್ತದೆ. ಪ್ರಕಟವಾಗಿ ಐದು ವರ್ಷ ಕಳೆದು ಉಳಿದ ಮೊದಲ ಮುದ್ರಣದ ಪ್ರತಿಗಳನ್ನು ಶೇಕಡಾ 50 ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆಯನ್ನು ರೂಪಿಸಿಕೊಂಡಿದೆ.

 

ಪ್ರಸಾರಾಂಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದವರು

 1. ಪ್ರೋ. ಚಿ. ಶ್ರೀನಿವಾಸರಾಜು 1.6.1992 ರಿಂದ 30.5.1993
 2. ಪ್ರೋ. ಓ.ಎಲ್. ನಾಗಭೂಷಣಸ್ವಾಮಿ 31.5.1993 ರಿಂದ 21.12.1993
 3. ಡಾ. ಪುರುಷೋತ್ತಮ ಬಿಳಿಮಲೆ 1.1.1994 ರಿಂದ 20.9.1994
 4. ಡಾ. ಕರೀಗೌಡ ಬೀಚನಹಳ್ಳಿ 21.9.1994 ರಿಂದ 26.6.1996
 5. ಪ್ರೋ. ಎ.ವಿ. ನಾವಡ 4.10.1996 ರಿಂದ. 8.6.2001
 6. ಡಾ. ಹಿ.ಚಿ. ಬೋರಲಿಂಗಯ್ಯ 17.2.2003 ರಿಂದ 6.11.2005
 7. ಪ್ರೋ. ಮಲ್ಲೇಪುರಂ ಜಿ. ವೆಂಕಟೇಶ 16.11.2005 ರಿಂದ 24.6.2008
 8. ಡಾ. ಮೋಹನಕುಂಟಾರ್ 1.12.2008 ರಿಂದ 30.11.2010
 9. ಡಾ. ಮಂಜುನಾಥ ಬೇವಿನಕಟ್ಟಿ 1.12.2010 ರಿಂದ 26.1.2011
 10. ಡಾ. ಎ. ಸುಬ್ಬಣ್ಣ ರೈ 27.1.2011 ರಿಂದ 9.7.2013
 11. ಡಾ. ಮೊಗಳ್ಳಿ ಗಣೇಶ್ 10.7.2013 ರಿಂದ 17.2.2014
 12. ಡಾ. ಸಿ. ಮಹದೇವ 18.2.2014 ರಿಂದ 5.2.2015
 13. ಡಾ. ವಿಜಯ್‍ಪೂಣಚ್ಚ ತಂಬಂಡ 5.2.2015 ರಿಂದ 14.7.2015
 14. ಡಾ. ಸ.ಚಿ. ರಮೇಶ 15.7.2015 ರಿಂದ