history-social
[/

ಸಂಶೋಧನೆಯ ದೃಷ್ಟಿಕೋನ

ವಿಶ್ವವಿದ್ಯಾಲಯದ ಸಮಾಜವಿಜ್ಞಾನಗಳ ನಿಕಾಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಚರಿತ್ರೆ ವಿಭಾಗವು ತನ್ನದೇ ಆದ ಚರಿತ್ರೆಯನ್ನು ಹೊಂದಿದೆ. ಕಳೆದ ೨೩ (೧೯೯೨ ರಿಂದ ೨೦೧೫) ವರ್ಷಗಳಲ್ಲಿ  ಚರಿತ್ರೆ ಜ್ಞಾನಶಾಖೆಯು ತನ್ನ ಎಲ್ಲ ಬಗೆಯ ಸಮಗ್ರ ದೃಷ್ಟಿಕೋನವನ್ನು  ಮೂಡಿಸಲು ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಅಲ್ಲದೇ ಸಮಾಜಮುಖಿ ಅಧ್ಯಯನ ನೆಲೆಗಳಲ್ಲಿಯೂ ತನ್ನದೇ ಆದ ಕಳಕಳಿಯ ಛಾಪನ್ನು ಮೂಡಿಸಿರುವುದು ಗಮನಾರ್ಹ. ಆ ಮೂಲಕ ಸಾಂಸ್ಕೃತಿಕವಾಗಿ ಹೆಚ್ಚಿನ ಒಳನೋಟಗಳನ್ನು ರುಜುವಾತು ಪಡಿಸುತ್ತಾ ಹೋಗುವುದು ವಿಭಾಗದ ಎಲ್ಲ ಅಧ್ಯಯನಗಳ ಆಶಯವೂ ಆಗಿದೆ.

ವಿಭಾಗವು ಸಂಶೋಧನೆ, ಬೋಧನೆ ಹಾಗೂ ಸಮಕಾಲೀನ ಶೈಕ್ಷಣಿಕ ಸಂವಾದಗಳಿಗೆ ಮುಖಾಮುಖಿಯಾಗುತ್ತಾ ಚರಿತ್ರೆಯ ಬದಲಾದ ವೈಧಾನಿಕತೆ ಹಾಗೂ ಸೈದ್ಧಾಂತಿಕಗಳನ್ನು ಅಳವಡಿಸಿಕೊಂಡು ಮುಂದೆ ಸಾಗುತ್ತಿದೆ. ಚರಿತ್ರೆಯನ್ನು ಅಂತರ್ಶಿಸ್ತೀಯ ಹಾಗೂ ಬಹುಶಿಸ್ತೀಯ ನೆಲೆಗಳಲ್ಲಿ ವ್ಯಾಖ್ಯಾನಿಸುತ್ತಾ ಸಾಮಾಜಿಕ ಚರಿತ್ರೆಯನ್ನು ನಿರ್ಮಿಸುವ ಪ್ರಯತ್ನ ವಿಭಾಗದ್ದಾಗಿದೆ. ಚರಿತ್ರೆಯ ಜನಮುಖಿ ನೆಲೆಯಲ್ಲಿ ಸಂಶೋಧನೆ ನಡೆಸುವ ಹಾಗೂ ಆ ಮೂಲಕ ಪರ್ಯಾಯ ಚರಿತ್ರೆಯೊಂದನ್ನು ಹೊಸ ಮಾದರಿಗಳ ಮೂಲಕ ಕಟ್ಟುವ ಪ್ರಯತ್ನವನ್ನು ವಿಭಾಗವು ಆರಂಭದಿಂದಲೂ ನಡೆಸಿಕೊಂಡು ಬಂದಿದೆ. ಜನಮುಖಿ ಚರಿತ್ರೆ ನಿರ್ಮಾಣ, ಅಲಕ್ಷಿತ ಸಮುದಾಯಗಳ ಚರಿತ್ರೆ ರಚನೆ, ಹೊಸ ಅಧ್ಯಯನ ಮಾದರಿಗಳ ಹುಡುಕಾಟ, ಅಂತರ್‌ಶಿಸ್ತೀಯ ಅಧ್ಯಯನಕ್ಕೆ ಒತ್ತು ಹಾಗೂ ಚರಿತ್ರೆಯನ್ನು ಅನ್ವಯಿಕ ನೆಲೆಯಲ್ಲಿ ನೋಡುವುದು ಚರಿತ್ರೆ ವಿಭಾಗದ  ಉದ್ದೇಶವಾಗಿದೆ.

ಗತವನ್ನು ಕೇವಲ ಸಂಭ್ರಮದಿಂದ ಸ್ವೀಕರಿಸುವ, ವೈಭವಿಕರಿಸುವ, ಕೆಲವು ತೀರ್ಮಾನಗಳನ್ನು ನೀಡಿ ಮುಗಿಸುವ ಮಿತಿಗಳಿಗೆ ಪ್ರಸ್ತುತ ವಿಭಾಗವು ನೆಲೆ ನಿಂತಿಲ್ಲ. ಬದಲಾಗಿ ಗತದೊಂದಿಗೆ ಪ್ರಶ್ನೆಗಳ ಮುಖೇನ ಮುಖಾಮುಖಿ ಆಗುವುದರ ಜೊತೆಗೆ ಪ್ರಸ್ತುತ ಸನ್ನಿವೇಶದ ಬಗೆಗೆ ಎಚ್ಚರ ವಹಿಸುವುದು ಪ್ರಧಾನ ಆಶಯವಾಗಿದೆ. ಈ ದಿಸೆಯಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳಿಗೆ  ಪರ್ಯಾಯವಾಗಿ ಹೊಸ ಆಯಾಮಗಳನ್ನು ಸಹ ಕಂಡುಕೊಳ್ಳಲಾಗುತ್ತಿದೆ. ಚರಿತ್ರೆ ವಿಭಾಗದ ಅಧ್ಯಯನ ಸ್ವರೂಪಿ  ಪ್ರಕ್ರಿಯೆಗಳು ಸಮಕಾಲೀನತೆಗೆ ಸ್ಪಂದಿಸುವ ಚರಿತ್ರೆಯ ಪುನರ್ರಚನೆ, ಪುನರ್‌ವ್ಯಾಖ್ಯಾನ, ಪುನರ್‌ವಿಶ್ಲೇಷಣೆಗಳ ಕಡೆಗೂ ಗಮನ ಹರಿಸಿದೆ. ಉದಾಹರಣೆಗೆ ಸಾಮ್ರಾಜ್ಯಶಾಹಿತ್ವ, ಊಳಿಗಮಾನ್ಯ ವ್ಯವಸ್ಥೆ, ವಸಾಹತುಶಾಹಿತ್ವ, ರಾಷ್ಟ್ರೀಯತೆ, ಕೋಮುವಾದ ಇತ್ಯಾದಿ ಪರಿಕಲ್ಪನೆಗಳನ್ನು ಆಯಾ ಚಾರಿತ್ರಿಕ ಘಟ್ಟದ ವಿಭಿನ್ನ ರೂಪಾಂತರಗಳ  ಮುಖೇನ ಪರಿಶೀಲನೆ ನಡೆಸುತ್ತಿರುವುದು.

‘ಚರಿತ್ರೆ’ ಎನ್ನುವುದು ಇಂದು ಮಾನವನ ಅನುಭವ-ಅನುಭೂತಿಗಳ ಆಗರವೆಂದು ವಿದ್ವಾಂಸರಲ್ಲಿ ರುಜುವಾತು ಆಗಿದೆ. ಹೀಗಾಗಿ ಚರಿತ್ರೆ ವಿಭಾಗವು ಸಹ ತನ್ನ ಅಧ್ಯಯನ ಯೋಜನೆಗಳನ್ನು ಪ್ರಸ್ತುತ ಪಡಿಸುವ ಪ್ರಕ್ರಿಯೆಯಲ್ಲಿ ಈ ಶಿಸ್ತನ್ನು ‘ವಾಸ್ತವಿಕತೆಗಳ ವಿಜ್ಞಾನ’ವೆಂದೇ ಗ್ರಹಿಸುತ್ತದೆ.  ಅಲ್ಲದೆ ಮಾನವನ ಅನುಭವಜನ್ಯ ಗ್ರಹಿಕೆ, ಸ್ವೀಕರಣೆ , ಪ್ರತಿಭಟನೆ , ಪ್ರತಿರೋಧಗಳ ಆಶಯಗಳನ್ನು ಪರಿಶೀಲಿಸುವ ದಿಸೆಯಲ್ಲೂ ಮುಂದುವರೆದಿದೆ.

ಇದುವರೆಗಿನ ಕಾರ್ಯಚಟುವಟಿಕೆಗಳ ಹಿನ್ನೆಲೆಯಲ್ಲಿ ವಿಭಾಗದ ಸದಸ್ಯರು ಸಮಾಜದೊಂದಿಗೆ ಅನುಸಂಧಾನಗೊಳ್ಳುವ ಎಲ್ಲ ಬಗೆಯ ವಸ್ತುವಿಷಯಗಳನ್ನು ಪರಿಶೀಲಿಸುತ್ತಾ ಬಂದಿದ್ದಾರೆ. ಈ ದಿಸೆಯಲ್ಲಿ ಅಧಿಕಾರ, ಭಾಷೆ, ಗುರುತಿನ ಪ್ರಶ್ನೆ, ದಲಿತ ಮತ್ತು ಹಿಂದುಳಿದ ವರ್ಗಗಳ ಅಧ್ಯಯನ ಬುಡಕಟ್ಟು ಚರಿತ್ರೆ, ನಗರ ಚರಿತ್ರೆ ಮೊದಲಾದ ಸ್ತರಗಳಲ್ಲಿನ ಸಾಮಾಜಿಕ ಚಳುವಳಿಗಳನ್ನು ಅಧ್ಯಯನ ಯೋಜನೆಯಲ್ಲಿ ಅಳವಡಿಸಿಕೊಂಡಿದ್ದಾರೆ. ಇಲ್ಲಿ ಅಧ್ಯಯನದ ತಾತ್ವಿಕತೆ, ವಿಧಿ-ವಿದಾನ, ಕಾರ್ಯಶೀಲತೆಗಳೆಲ್ಲವುದರ ದೃಷ್ಟಿ ‘ಸಮಾಜಮುಖಿ’ಯಾದುದೆ ಆಗಿದೆ. ಆ ಮೂಲಕ ಸಂಸ್ಕೃತಿಯ ವಿಭಿನ್ನ ಸ್ತರಗಳನ್ನು ವಸ್ತುನಿಷ್ಟವಾಗಿ ಪರಿಶೀಲಿಸಿ ವಿಶ್ಲೇಷಿಸುವ ಪ್ರಯತ್ನ ವಿಭಾಗದ್ದು, ಸಮಾಜದಲ್ಲಿನ ‘ಅಲಕ್ಷಿತ’ ವಿಚಾರಗಳ ಕುರಿತಂತೆ ಗಮನ ಹರಿಸಲಾಗುತ್ತಿದೆ.

ಸ್ಥಳೀಯ, ಮೌಖಿಕ ಚರಿತ್ರೆಗಳು, ನಾಡು-ನುಡಿ-ಸಂಸ್ಕೃತಿ ನೆಲೆಗಳಲ್ಲಿ ಸಮಗ್ರ ಕರ್ನಾಟಕದ ಚರಿತ್ರೆಯನ್ನು ಪುನರ್ರಚಿಸುವ ಪ್ರಯತ್ನಗಳು, ಜಾಗತಿಕ ನೆಲೆಯ ಚರಿತ್ರೆಯ ಕೋಶದ ಜರೂರು, ಕರ್ನಾಟಕದ ಚರಿತ್ರೆಯ  ವಿಭಿನ್ನ  ಕಾಲಘಟ್ಟಗಳ ಸಾಂಸ್ಕೃತಿಕ ಹರವುಗಳ ಪರಿಶೀಲನೆ ಇತ್ಯಾದಿಗಳು ವಿಭಾಗದಿಂದಲೇ ಸಾಕಾರಗೊಂಡಿವೆ. ನಾಡಿನಾದ್ಯಂತ ಹಾಗೂ ರಾಷ್ಟ್ರಮಟ್ಟದಲ್ಲಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗವು ತನ್ನದೇ ಆದ ಪ್ರಯೋಗ-ಪ್ರಯತ್ನಗಳೆಂಬಂತೆ ಜರೂರಿನ ಕಾರ್ಯಯೋಜನೆಗಳನ್ನು ರೂಪಿಸಿ ವಿದ್ವಾಂಸರ, ವಿದ್ಯಾರ್ಥಿಗಳ ಹಾಗೂ ಸಮಾಜದ ಗಮನ ಸೆಳೆಯುವಂತೆ ಮಾಡಿರುವುದು ಈ ವಿಭಾಗದ ಹೆಗ್ಗಳಿಕೆ.

shadeವಿಭಾಗದ ಬೋಧಕರ ವಿವರಗಳು

ಹುದ್ದೆ

ಪ್ರಾಧ್ಯಾಪಕರು

ಪ್ರಾಧ್ಯಾಪಕರು

ಪ್ರಾಧ್ಯಾಪಕರು

ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು

ವಿದ್ಯಾರ್ಹತೆ

ಪಿಎಚ್.ಡಿ

ಪಿಎಚ್.ಡಿ

ಪಿಎಚ್.ಡಿ

ಪಿಎಚ್.ಡಿ

ಹೆಚ್ಚಿನ ವಿವರ .

ಹೆಚ್ಚಿನ ವಿವರ …

ಹೆಚ್ಚಿನ ವಿವರ .

ಹೆಚ್ಚಿನ ವಿವರ ..

ಹೆಚ್ಚಿನ ವಿವರ ..