language-wing

ಸಾಹಿತ್ಯ ವಿಭಾಗದಲ್ಲಿ ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಸಾಹಿತ್ಯಗಳ ವಿವಿಧ ಪ್ರಕಾರಗಳ ಅಧ್ಯಯನ ನಡೆಯುತ್ತಿದೆ. ಜೊತೆಗೆ ಸಮಾಜದ ವಿವಿಧ ಸಮುದಾಯಗಳು ಹಾಗೂ ವಿವಿಧ ವಲಯಗಳೊಂದಿಗೆ ಸಾಹಿತ್ಯದ ಸಂಬಂಧವು ಯಾವ ಸ್ವರೂಪದಲ್ಲಿ ಸಾಗುತ್ತಿದೆ ಎಂಬುದೂ ಮುಖ್ಯವಾದ ಸಂಗತಿ. ಸಾಹಿತ್ಯವು ಸಮಾಜದ ವಿವಿಧ ಸಮುದಾಯಗಳು ಹಾಗೂ ವಿವಿಧ ವಲಯಗಳನ್ನು ಪ್ರಭಾವಿಸುತ್ತಿರುವುದರ ಸ್ವರೂಪ ಮತ್ತು ಸಮಾಜದ ವಿವಿಧ ಸಮುದಾಯಗಳು ಹಾಗೂ ವಿವಿಧ ವಲಯಗಳು ಸಾಹಿತ್ಯವನ್ನು ಪರಿಭಾವಿಸುತ್ತಿರುವುದರ ಸ್ವರೂಪ ಇವುಗಳನ್ನು ಕುರಿತು ಅಧ್ಯಯನ ಮಾಡಲಾಗುತ್ತಿದೆ.

ಸಾಹಿತ್ಯ ಹಾಗೂ ಸಾಂಸ್ಕೃತಿಕ ವಿದ್ಯಮಾನಗಳನ್ನು ಒಟ್ಟೊಟ್ಟಿಗೆ ಪರಿಶೀಲಿಸಿ ವಿಮರ್ಶೆ ಮಾಡುವುದು ಮತ್ತು ಸಂಶೋಧನೆ ಮಾಡುವುದು ನಮ್ಮ ವಿಭಾಗದ ಸಾಮಾನ್ಯ ಉದ್ದೇಶ. ಸಾಹಿತ್ಯವನ್ನು ಕೇವಲ ಉತ್ಪಾದನೆ ಎಂದು ಸರಳೀಕರಿಸಿ ಅದನ್ನು ಚಾರಿತ್ರಿಕ ಅಧ್ಯಯನದ ಚೌಕಟ್ಟಿಗೆ ಮಾತ್ರ ಸೀಮಿತಗೊಳಿಸದೆ, ಸಾಹಿತ್ಯವನ್ನು ಇಡಿಯಾಗಿ ನಿರಂತರ ಪ್ರಕ್ರಿಯೆ ಎಂದು ವಿವರಿಸುವ ವಿಧಾನ ನಮಗೆ ಮುಖ್ಯ. ಹಾಗಾಗಿ ಅಧ್ಯಯನದ ಸಂದರ್ಭದಲ್ಲಿ ಸಾಹಿತ್ಯವನ್ನು ಕೇವಲ ದಾಖಲೆಯೆಂದು ಪರಿಗಣಿಸದೆ ಅದನ್ನು ನಿರೂಪಣೆ ಎಂದು ಪರಿಗಣಿಸುವುದು ಇಂದಿನ ತುರ್ತಾಗಿದೆ.

ಸಾಹಿತ್ಯ ಹಾಗೂ ಸಾಂಸ್ಕೃತಿಕ ಅಧ್ಯಯನಗಳ ಹಳೆಯ ಚೌಕಟ್ಟುಗಳನ್ನು ನಿರಂತರವಾಗಿ ಪ್ರಶ್ನೆ ಮಾಡುತ್ತ, ವರ್ತಮಾನದ ಒತ್ತಡಗಳಿಗೆ ಅನುಗುಣವಾಗಿ ಸಾಹಿತ್ಯವನ್ನು ಅರಿಯುವ ವಿಧಾನಗಳನ್ನು ನಿರ್ಮಾಣ ಮಾಡುವುದು ನಮಗೆ ಮುಖ್ಯವಾದ ಸಂಗತಿ. ಈ ನಿಟ್ಟಿನಲ್ಲಿ ಸಾಹಿತ್ಯದ ನಿರೂಪಣೆ, ಸಾಹಿತ್ಯ ಸಂಶೋಧನೆಯ ವೈಧಾನಿಕತೆ, ಸಾಹಿತ್ಯ ಸಂಶೋಧನೆಯ ತಾತ್ವಿಕತೆ, ಸಾಹಿತ್ಯ ಮೀಮಾಂಸೆಯನ್ನು ಕಟ್ಟುವ ಬಗೆ, ಪ್ರಾಚೀನ ಸಾಹಿತ್ಯ ಪಠ್ಯಗಳ ಆಧುನಿಕ ಓದು, ಸಾಹಿತ್ಯ ಪಠ್ಯಗಳ ಸಾಂಸ್ಕೃತಿಕ ಓದು ಇವೇ ಮುಂತಾದ ಹಲವು ಹೊಸ ಪರಿಕಲ್ಪನೆಗಳನ್ನು ನಮ್ಮ ವಿಭಾಗವು ಕನ್ನಡದ ವಿದ್ವತ್ ವಲಯದಲ್ಲಿ ನಿರ್ಮಾಣ ಮಾಡಿದೆ. ಈ ಮೂಲಕ ಕನ್ನಡ ಸಾಹಿತ್ಯದ ಓದಿಗೆ ಹೊಸ ದಾರಿಗಳನ್ನು ಸೃಷ್ಟಿ ಮಾಡುವ ಕೆಲಸದಲ್ಲಿ ತೊಡಗಿದೆ.

ಮುಖ್ಯವಾಹಿನಿಯ ಪಠ್ಯಗಳನ್ನು ಮಾತ್ರವಲ್ಲದೆ ಅಲಕ್ಷಿತ ಪಠ್ಯಗಳು ಹಾಗೂ ಅಲಕ್ಷಿತ ಸಮುದಾಯಗಳ ಭಾಷಿಕ ರಚನೆಗಳನ್ನು ಕೇಂದ್ರ ಚರ್ಚೆಗೆ ತರುವ ಪ್ರಯತ್ನವನ್ನು ನಿರಂತರವಾಗಿ ನಡೆಸಲಾಗಿದೆ. ಆ ಮೂಲಕ ಅಲಕ್ಷಿತ ನೆಲೆಯಲ್ಲಿ ನಿಂತು ಸಾಹಿತ್ಯ ಹಾಗೂ ಸಾಮಾಜಿಕ ಸಂಬಂಧಗಳ ಹೊಸ ಸಾಧ್ಯತೆಗಳನ್ನು ಗುರುತಿಸಲು ನಮಗೆ ಸಾಧ್ಯವಾಗಿದೆ. ಈ ಬಗೆಯ ಅಧ್ಯಯನ ನಮಗೆ ಹೊಸ ದಾರಿಗಳನ್ನೂ ಮತ್ತು ಶೈಕ್ಷಣಿಕ ಉತ್ಸಾಹವನ್ನೂ ಹೆಚ್ಚಿಸಿದೆ.

ಸಾಹಿತ್ಯವನ್ನು ಅಧ್ಯಯನ ಮಾಡುವುದರ ಮೂಲಕ ಚರಿತ್ರೆ ಹಾಗೂ ಪರಂಪರೆಗಳನ್ನು ಅರಿಯುವ ಹೊಸ ವಿಧಾನಗಳನ್ನು ನಿರ್ಮಿಸುವ ಕೆಲಸವೂ ನಡೆದಿದೆ. ಹಾಗಾಗಿ ಕರ್ನಾಟಕದ ವಿವಿಧ ಪರಂಪರೆಗಳ ಬೆಳಕಿನಲ್ಲಿ ಸಾಹಿತ್ಯವನ್ನು ಅರಿಯುವ ಪ್ರಯತ್ನ ಸಾಗಿದೆ.

ಜಾಗತೀಕರಣ, ಉದಾರೀಕರಣ ಮತ್ತು ಆಧುನೀಕರಣದಂತಹ ನೀತಿಗಳು ಕೇವಲ ಆಕ ಕಾರ್ಯಕ್ರಮಗಳಲ್ಲ ಎಂಬುದು ನಮ್ಮ ಸಾಮಾನ್ಯ ತಿಳುವಳಿಕೆ. ಹಾಗಾಗಿ ಇವುಗಳ ಸಾಮಾನ್ಯ ಪರಿಣಾಮಗಳು ಸಾಹಿತ್ಯ ರಚನೆಯ ಉದ್ದೇಶ ಹಾಗೂ ಅದರ ನಿರೂಪಣೆಯ ಸ್ವರೂಪವನ್ನು ಹೇಗೆ ಪ್ರಭಾವಿಸುತ್ತಿವೆ ಮತ್ತು ನಿಯಂತ್ರಿಸುತ್ತಿವೆ ಎಂಬ ರಾಜಕೀಯ ಗ್ರಹಿಕೆಯ ಕಡೆಗೆ ನಮ್ಮ ಅಧ್ಯಯನಗಳಿಗೆ ಪ್ರಧಾನ ಆಸಕ್ತಿ ಇದೆ.

ಸಾಹಿತ್ಯ ಅಧ್ಯಯನಗಳು ಸಮಾಜದ ಸಮಸ್ಯೆಗಳಿಗೆ ನೇರವಾಗಿ ಪರಿಹಾರ ಸೂಚಿಸುವಂತಿರಬೇಕು ಎಂಬ ಅಪೇಕ್ಷೆಯ ಅಧ್ಯಯನ ವಿಧಾನಗಳಿವೆ. ನಮಗೆ ಈ ಬಗೆಯ ಅಧ್ಯಯನಗಳಿಗಿಂತಲೂ ಹೆಚ್ಚಾಗಿ ಸಾಹಿತ್ಯವು ಸಾಮಾಜಿಕ ಚಲನಶೀಲತೆಯನ್ನು, ಅದರ ಸೂಕ್ಷ್ಮಾತಿಸೂಕ್ಷ್ಮ ದ್ವಂದ್ವಗಳನ್ನು ಭಾಷಿಕವಾಗಿ ನಿರೂಪಿಸುವ ವಿಧಾನ ಮುಖ್ಯ. ಈ ನಿಟ್ಟಿನಲ್ಲಿ ಸಾಹಿತ್ಯವು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತದೆ ಎನ್ನುವುದಕ್ಕಿಂತಲೂ ಸಮಸ್ಯೆಯ ಹಲವು ಮುಖಗಳನ್ನು ಅರಿಯುವ ಕೆಲಸ ಮುಖ್ಯವಾಗುತ್ತದೆ.

shade

ವಿಭಾಗದ ಬೋಧಕರ ವಿವರಗಳು

ಹೆಸರು

ಹುದ್ದೆ

ವಿದ್ಯಾರ್ಹತೆ

ಡಾ. ರಹಮತ್ ತರೀಕೆರೆ

ಪ್ರಾಧ್ಯಾಪಕರು

ಪಿಎಚ್.ಡಿ
ಹೆಚ್ಚಿನ ವಿವರ …

ಡಾ ಎನ್. ಅಮರೇಶ

ಪ್ರಾಧ್ಯಾಪಕರು

ಪಿಎಚ್.ಡಿ
 ಹೆಚ್ಚಿನ ವಿವರ …

ಡಾ. ಆರ್. ವೆಂಕಟೇಶ ಇಂದ್ವಾಡಿ

ಸಹ ಪ್ರಾಧ್ಯಾಪಕರು

ಪಿಎಚ್.ಡಿ
ಹೆಚ್ಚಿನ ವಿವರ …

ಡಾ.ಬಿ.ಎಂ. ಪುಟ್ಟಯ್ಯ

ಪ್ರಾಧ್ಯಾಪಕರು

ಪಿಎಚ್.ಡಿ
ಹೆಚ್ಚಿನ ವಿವರ

ಡಾ. ಮಲ್ಲಿಕಾರ್ಜುನಗೌಡ

ಸಹಾಯಕ ಪ್ರಾಧ್ಯಾಪಕರು

ಪಿಎಚ್.ಡಿ