11

   ದೂರಶಿಕ್ಷಣ ನಿರ್ದೇಶನಾಲಯ  

  

 

icon icon=icon-fast-forward size=15px color=#004060 float=left]

ಕನ್ನಡ ವಿಶ್ವವಿದ್ಯಾಲಯವು ವಿದ್ಯೆಯನ್ನು ನಿರ್ಮಿಸುವ ಮತ್ತು ಅದನ್ನು ಸಮಗ್ರ ನೆಲೆಯಿಂದ ಕಲಿಯಲು ಅನುವು ಮಾಡಿಕೊಡುವ ಒಂದು ಸಂಸ್ಥೆ. ಹೊಸ ತಿಳಿವಳಿಕೆಗಳ ಪರಿಜ್ಞಾನಕ್ಕೆ ವಿವೇಕಯುತವಾದ ಹಲವಾರು ನಿಟ್ಟಿನ ದಾರಿಗಳು ನಮ್ಮ ಮುಂದಿವೆ. ಈ ಹಿನ್ನೆಲೆಯಲ್ಲಿ ನಮ್ಮ ವಿಶಿಷ್ಟ ಸಂಶೋಧನಾತ್ಮಕ ಅರಿವನ್ನು ಎಲ್ಲರಿಗೂ ತಲುಪಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡ ವಿಶ್ವವಿದ್ಯಾಲಯದ ಪ್ರಥಮ ಗುರಿ ಕರ್ನಾಟಕ ಮತ್ತು ಕನ್ನಡ ಸಂಸ್ಕೃತಿಯ (ನಾಡು, ನುಡಿ) ಬಗ್ಗೆ ಸಂಶೋಧನೆ, ವಿಮರ್ಶೆ ಮತ್ತು ಪ್ರಸಾರ. ಈ ಹಿನ್ನೆಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಅಧ್ಯಯನಾಸಕ್ತರಿಗೆ ದೂರಶಿಕ್ಷಣ ಕಾರ್ಯಕ್ರಮಗಳ ಮೂಲಕ ಜ್ಞಾನ ಪ್ರಸಾರ ಮಾಡುವ ಮಹತ್ವದ ಯೋಜನೆಯನ್ನು ೨೫.೦೮.೨೦೦೧ರಿಂದಲೂ ನಡೆಸಿಕೊಂಡು ಬರುತ್ತಲಿದೆ.

ದೂರಶಿಕ್ಷಣದ ಮೂಲಕ ವ್ಯಕ್ತಿಯ ಜ್ಞಾನ, ಪ್ರತಿಭೆ ಹಾಗೂ ಪ್ರವೃತ್ತಿಗಳನ್ನು ಹೆಚ್ಚಿಸುವ ಕಾರ್ಯವನ್ನು ಗಂಭೀರವಾಗಿ ನಿರ್ವಹಿಸಲಾಗುತ್ತಿದೆ. ಅದಕ್ಕಾಗಿ ಹಂತಹಂತವಾಗಿ ಉನ್ನತ ಶಿಕ್ಷಣವನ್ನು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ರೂಪಿಸಲಾಗುತ್ತಿದೆ. ಇಂತಹ ಶಿಕ್ಷಣದಲ್ಲಿ ಸಾಮಾನ್ಯವಾಗಿ ಪುಸ್ತಕದ ಜ್ಞಾನವು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪರಸ್ಪರ ಮುಖಾಮುಖಿ ಆಗುವುದರ ಮೂಲಕ ಪ್ರಸಾರವಾಗುತ್ತಿರುತ್ತದೆ. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಮುಖಾಮುಖಿಯಾಗಿ ಪರಸ್ಪರ ಕೇಳಿ ಅರಿತುಕೊಳ್ಳುವ ಶಿಕ್ಷಣ ವ್ಯವಸ್ಥೆಯಲ್ಲಿಯೇ ಅನೇಕ ಕಾರಣಗಳಿಂದ ಈ ವ್ಯಾಪ್ತಿಗೆ ಒಳಪಡದ ವಿದ್ಯಾರ್ಥಿಗಳಿಗಾಗಿ ದೂರಶಿಕ್ಷಣವನ್ನು ನೂರಾರು ವರ್ಷಗಳ ಹಿಂದೆ ಪಾಶ್ಚಾತ್ಯ ದೇಶಗಳಲ್ಲಿ ಆರಂಭಿಸಲಾಯಿತು. ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದಲ್ಲಿಯೂ ಅನೇಕ ವಿಶ್ವವಿದ್ಯಾಲಯಗಳು ದೂರಶಿಕ್ಷಣದ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಂಡು ಜ್ಞಾನ ಪ್ರಸಾರದಲ್ಲಿ ತೊಡಗಿವೆ.
ಆಧುನಿಕ ದಿನಗಳಲ್ಲಿ ಜ್ಞಾನವನ್ನು ಸಂಪಾದಿಸಲು ಅನೇಕ ದಾರಿಗಳಿವೆ. ವಿಶ್ವವಿದ್ಯಾಲಯದಂತಹ ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಿಕ್ಷಣವನ್ನು ತರಗತಿಯ ಕೋಣೆಗಳಲ್ಲಿ ನೇರವಾಗಿ ಪಾಲ್ಗೊಂಡು ಕಲಿಯುವುದಕ್ಕೆ ಅವಕಾಶವಿಲ್ಲದ ಹಲವರಿಗಾಗಿ ರೂಪಿಸಿರುವ ವ್ಯವಸ್ಥೆಯಿದು. ಅಂದರೆ ವಿಶ್ವವಿದ್ಯಾಲಯದಿಂದ ಸಾವಿರಾರು ಮೈಲು ದೂರವಿದ್ದರೂ ತಮ್ಮ ಆಸಕ್ತಿಗೆ ಅನುಗುಣವಾಗಿ ಶಿಕ್ಷಣವನ್ನು ಪಡೆಯುವ ವ್ಯವಸ್ಥೆಯೇ ದೂರಶಿಕ್ಷಣ. ಅಂಚೆಯಲ್ಲಿ ಪಾಠಗಳನ್ನು ವಿದ್ಯಾರ್ಥಿಗಳಿಗೆ ನಿಗದಿತವಾಗಿ ರವಾನಿಸುವುದರ ಮೂಲಕ ಶಿಕ್ಷಣದ ಪ್ರಸಾರವಿರುತ್ತದೆ. ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ, ಗೃಹಿಣಿಯರಿಗೆ ಶಿಕ್ಷಣದಲ್ಲಿ ಆಸಕ್ತರಾಗಿರುವವರಿಗೆ ತಾವಿದ್ದ ಸ್ಥಳದಲ್ಲಿಯೇ ಅಧ್ಯಯನ ಮಾಡಲು ಅನುಕೂಲವಾಗುವಂತೆ ಒಟ್ಟಾರೆ ಇಂತಹ ಶಿಕ್ಷಣ ಕ್ರಮಗಳನ್ನು ರೂಪಿಸಲಾಗುತ್ತದೆ. ತರಗತಿಗಳಲ್ಲಿ ಅಧ್ಯಾಪಕರ ಮುಂದೆ ಕುಳಿತು ಪಾಠ ಕೇಳುವ ವಿದ್ಯಾರ್ಥಿಗಳು ರೂಢಿಸಿಕೊಳ್ಳುವಂತೆ ತಮ್ಮ ಕಲಿಕೆ ಹಾಗೂ ನಡೆನುಡಿಗಳಲ್ಲಿ ಜ್ಞಾನ, ತಿಳಿವಳಿಕೆಗಳನ್ನು ಸ್ವೀಕರಿಸುವಲ್ಲಿ ರೂಪಿಸಿಕೊಳ್ಳುವ ಶಿಸ್ತುಬದ್ಧ ಸಂವಹನ ಸಾಮರ್ಥ್ಯವನ್ನು ದೂರಶಿಕ್ಷಣದ ಮೂಲಕವೂ ವಿದ್ಯಾರ್ಥಿಗಳು ರೂಢಿಸಿಕೊಳ್ಳಬಲ್ಲರು ಎಂಬುದನ್ನು ಈಗಾಗಲೇ ದೂರಶಿಕ್ಷಣ ವ್ಯವಸ್ಥೆ ಸಾಧಿಸಿ ತೋರಿಸಿದೆ. ಪ್ರಾಯೋಗಿಕ ಹಾಗೂ ಪರಿಣಾಮಕಾರಿಯಾದ ವಿಧಾನಗಳ ಮೂಲಕ ದೂರಶಿಕ್ಷಣದಲ್ಲಿಯೂ ಜ್ಞಾನ  ಪಡೆಯಬಹುದು ಎಂಬುದನ್ನು ಈಗಾಗಲೇ ಅನೇಕ ವಿಶ್ವವಿದ್ಯಾಲಯಗಳು ಸಿದ್ಧಪಡಿಸಿ ತೋರಿಸಿವೆ.

ಕನ್ನಡ ವಿಶ್ವವಿದ್ಯಾಲಯದಲ್ಲಿ ದೂರಶಿಕ್ಷಣದ ಮೂಲಕ ಕನ್ನಡ, ಚರಿತ್ರೆ, ಸಮಾಜಶಾಸ್ತ್ರ ಹಾಗೂ ಪತ್ರಿಕೋದ್ಯಮ ಮತ್ತು ಮಾಧ್ಯಮ ಅಧ್ಯಯನಗಳ ಸ್ನಾತಕೋತ್ತರ ಪದವಿಗಳ ಜೊತೆಗೆ ವಿವಿಧ ಡಿಪ್ಲೊಮ ಮತ್ತು ಸ್ನಾತಕೋತ್ತರ ಡಿಪ್ಲೊಮಗಳನ್ನು ವಿಶಿಷ್ಟ ದೃಷ್ಟಿಧೋರಣೆಗಳಿಂದ ಆರಂಭಿಸಲಾಗಿದೆ. ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲಯವು ಈ ಕಾರ್ಯಕ್ರಮಗಳನ್ನು ಕನ್ನಡದಲ್ಲಿ ನೀಡುವುದರ ಮೂಲಕವೇ ಆಸಕ್ತರೆಲ್ಲರನ್ನು ಜ್ಞಾನ ಪ್ರಸಾರ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದೆ. ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಸಾಂಪ್ರದಾಯಿಕ ಅಧ್ಯಯನ ಕ್ರಮಗಳೇ ಪ್ರಧಾನವಾದರೆ, ನಮ್ಮಲ್ಲಿ ಸಾಂಪ್ರದಾಯಿಕ ವಿಷಯಗಳನ್ನು ಅಂತರಶಿಸ್ತೀಯ ವೈಚಾರಿಕ ದೃಷ್ಟಿಕೋನದಿಂದ ಬೋಧಿಸಲಾಗುತ್ತಿದೆ. ಅಲ್ಲದೆ ಇದರ ಜೊತೆ ಜೊತೆಗೆ ‘ಪುರಾತತ್ವ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ, ಶಾಸನಶಾಸ್ತ್ರ ಅಧ್ಯಯನ, ಪತ್ರಿಕೋದ್ಯಮ ಅಧ್ಯಯನ, ಕನ್ನಡ ಸಾಹಿತ್ಯ, ನಾಟಕ ಕಲೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಭಾಷಾಂತರ ಅಧ್ಯಯನ ಡಿಪ್ಲೊಮಗಳನ್ನು ಆರಂಭಿಸಿದೆ. ಈ ಬಗೆಯ ಕೋರ್ಸ್‌ಗಳಿಗೆ ಪ್ರಸ್ತುತ ಸಂದರ್ಭದಲ್ಲಿ ಹೆಚ್ಚಿನ ಬೇಡಿಕೆಯಿದ್ದರೂ ಇವುಗಳು ಮಾರುಕಟ್ಟೆಗೆ ಮಾತ್ರ ಮೀಸಲಾಗಿರುವ ಕೋರ್ಸ್‌ಗಳಲ್ಲ. ಇವುಗಳು ಕನ್ನಡ ಮತ್ತು ಕರ್ನಾಟಕ(ನಾಡು-ನುಡಿ)ಕ್ಕೆ ಸಂಬಂಧಪಟ್ಟವುಗಳಾಗಿವೆ. ಈ ಹಿನ್ನೆಲೆಯಲ್ಲಿ ನಮ್ಮಲ್ಲಿನ ಅಧ್ಯಯನಗಳನ್ನು ಸಾಂಪ್ರದಾಯಿಕ ಅಧ್ಯಯನ ಕ್ರಮಗಳಿಗಿಂತ ಭಿನ್ನವಾಗಿ ರೂಪಿಸಲಾಗಿದೆ. ಇತ್ತೀಚಿನ ಸಂಶೋಧನೆಗಳಾಧಾರಿತ ವಿಷಯಗಳನ್ನು ಗಮನದಲ್ಲಿಟ್ಟು ಕೊಂಡು ಪಠ್ಯಕ್ರಮಗಳನ್ನು ರೂಪಿಸಲಾಗಿದೆ. ಪತ್ರಿಕೋದ್ಯಮ ಮತ್ತು ಮಾಧ್ಯಮ ಅಧ್ಯಯನದಂತಹ ಪಠ್ಯಗಳು ಸಾಮಾನ್ಯವಾಗಿ ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಾದರೂ ದೇಶೀ ಭಾಷೆಗಳಲ್ಲಿ ಅವುಗಳ ಬಗ್ಗೆ ಪಠ್ಯಗಳು ಇರುವುದಿಲ್ಲ. ನಮ್ಮ ಮಾಹಿತಿ ಪ್ರಕಾರ ಕನಿಷ್ಟ ದಕ್ಷಿಣ ಭಾರತದಲ್ಲೇ ಇದೊಂದು ವಿನೂತನ ಹೆಜ್ಜೆ. ಕನ್ನಡದಲ್ಲಿ ಇದರ ಪ್ರಕಟಣೆ ಮಾಡಿದ್ದೇವೆ. ಈ ಎಲ್ಲಾ ವಿಷಯಗಳಿಗೆ ಕರ್ನಾಟಕದಾದ್ಯಂತ ಬಹಳ ಬೇಡಿಕೆಯಿರುವುದು ಗಮನಾರ್ಹ ಸಂಗತಿ.

ಇತ್ತೀಚಿನವರೆಗೂ ಶ್ರೀಮಂತರ ಹಾಗೂ ಮೇಲ್ವರ್ಗಗಳ ಕೈಗೆ ಮಾತ್ರವೇ ಎಟಕುತ್ತಿದ್ದ ಈ ಉನ್ನತ ಶಿಕ್ಷಣ, ಜನಸಾಮಾನ್ಯರಿಗೂ ಅದರಲ್ಲೂ ಬಹಳ ಮುಖ್ಯವಾಗಿ ನಗರ ಕೇಂದ್ರಗಳಲ್ಲಿರುವ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಲ್ಲಿನ ಉನ್ನತ ಶಿಕ್ಷಣವನ್ನು ಪಡೆಯಲಾಗದ ಜನ ಸಮುದಾಯಗಳಿಗೆ ತಲುಪಿಸುವ ಮಹತ್ತರವಾದ ಉದ್ದೇಶವನ್ನು ನಾವು ಹೊಂದಿದ್ದೇವೆ.

ಜಾಗತೀಕರಣದಿಂದಾಗಿ ಕೆಲಸದ ಒತ್ತಡದಲ್ಲಿದ್ದವರು ಅರ್ಧಕ್ಕೆ ನಿಲ್ಲಿಸಿದ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ ಪೂರ್ಣಗೊಳಿಸುವುದಕ್ಕೆ ಹಾಗೂ ಹೆಚ್ಚಿನ ಪದವಿ ಪಡೆಯಲು ಇಚ್ಫೆ ಇದ್ದರೂ ಅದು ನಿಯಮಿತವಾಗಿ ಸಾಕಾರಗೊಳ್ಳುತ್ತಿಲ್ಲ. ಇಂಥವರ ಮುಂದುವರಿಕೆಯ ಅಧ್ಯಯನಕ್ಕಾಗಿ ದೃಶ್ಯ-ಶ್ರವ್ಯ (ವೀಡಿಯೋ ಮತ್ತು ಆಡಿಯೋ) ಮಾಧ್ಯಮಗಳ ಮತ್ತು ಅಂತರಜಾಲದ ಮೂಲಕ ಪಠ್ಯಗಳನ್ನು ಬೋಧಿಸುವ, ವಿತರಿಸುವ ಹಾಗೂ ಪ್ರವೇಶಗಳನ್ನು ಪಡೆಯುವ ಕಾರ್ಯಕ್ರಮಗಳನ್ನು ಯೋಜಿಸಲಾಗುತ್ತಿದೆ. ತೀರಾ ನಿರ್ಲಕ್ಷಿತರಾದ ಜನವರ್ಗಗಳಿಗೂ ಉನ್ನತ ಶಿಕ್ಷಣದ ಜ್ಞಾನಾರ್ಜನೆಗೆ ಅವಕಾಶ ಮಾಡಿಕೊಡುವ ಉದ್ದೇಶವನ್ನು ಈಡೇರಿಸುವ ದೃಷ್ಟಿಯಿಂದ ನಾಡಿನಾದ್ಯಂತ ನಮ್ಮ ಅಧ್ಯಯನ ಕೇಂದ್ರಗಳನ್ನು ಆರಂಬಿsಸಿದ್ದೇವೆ. ಕರ್ನಾಟಕದಲ್ಲಿ ಅತ್ಯಂತ ಹಿಂದುಳಿದ ಪ್ರದೇಶಗಳಾದ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ನಮ್ಮ ವ್ಯಾಪ್ತಿಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ನಾವು ದಾಪುಗಾಲನ್ನಿಟ್ಟಿದ್ದೇವೆ. ಪರಿಣಾಮವಾಗಿ ನಮ್ಮ ದೂರಶಿಕ್ಷಣದಿಂದ ಪದವಿ ಪಡೆದ ನೂರಾರು ವಿದ್ಯಾರ್ಥಿಗಳು ನಾಡಿನಾದ್ಯಂತ ಅಧ್ಯಾಪಕರಾಗಿದ್ದಾರೆ, ಪಿಎಚ್.ಡಿ. ಪದವೀಧರರಾಗಿದ್ದಾರೆ ಹಾಗೂ ಸಾರ್ವಜನಿಕ ಉನ್ನತ ವಲಯದಲ್ಲಿ ಸೇವಾನಿರತರಾಗಿದ್ದಾರೆ. ಇನ್ನೂ ಹೆಚ್ಚಿನ ಆಸ್ಥೆಗೆ ದೂರಶಿಕ್ಷಣದ ಆಶಯಕ್ಕೆ ತಮ್ಮೆಲ್ಲರ ಶುಭಾಶಯಗಳನ್ನು ಕೋರುತ್ತೇವೆ.

 

 

ಕನ್ನಡ ವಿಶ್ವವಿದ್ಯಾಲಯವು ನಮ್ಮ ರಾಜ್ಯದ ಶೈಕ್ಷಣಿಕ ಅಗತ್ಯವನ್ನು ಗಮನದಲ್ಲಿರಿಸಿಕೊಂಡು ಜೂನ್ ೧೫, ೨೦೦೧ ರಂದು ಅಂದಿನ ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಮತ್ತು ಜೂನ್ ೩೦, ೨೦೦೧ರಂದಿನ ಆಡಳಿತ ಮಂಡಳಿಯ ನಿರ್ಣಯದ ಹಿನ್ನೆಲೆಯಲ್ಲಿ ೨೫.೦೮.೨೦೦೧ ರಿಂದ ವಿಶ್ವವಿಖ್ಯಾತ ಹಂಪಿ ಪರಿಸರದಲ್ಲಿ ದೂರಶಿಕ್ಷಣದ ಕಾರ್ಯಕ್ರಮಗಳನ್ನು ಆರಂಭಿಸಿದೆ. ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿಯು ಆಗಸ್ಟ್ ೭, ೨೦೧೦ರ ತನ್ನ ೧೨೫ನೇ ಸಭೆಯಲ್ಲಿ ದೂರಶಿಕ್ಷಣ ಕೇಂದ್ರವು ದೂರಶಿಕ್ಷಣ ನಿರ್ದೇಶನಾಲಯವಾಗಿ ಕಾರ್ಯನಿರ್ವಹಿಸಲು ಅನುಮೋದನೆಯನ್ನು ನೀಡಿದೆ. ಈ ಪರಿನಿಯಮಕ್ಕೆ ಘನತೆವೆತ್ತ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. ನವದೆಹಲಿಯ ದೂರಶಿಕ್ಷಣ ಪರಿಷತ್ತು (Distance Education Council) ದಿನಾಂಕ ೩.೯.೨೦೦೭ರಂದು ತಾತ್ಕಾಲಿಕ ಮಾನ್ಯತೆ (Provisional Recognition) ನೀಡಿದೆ ಮತ್ತು ದಿನಾಂಕ ೧೭.೧೨.೨೦೦೯ ರಂದು ಮಾನ್ಯತೆ ಮುಂದುವರಿಕೆ (Continuation of Recognition) ಕುರಿತು ಪತ್ರಗಳನ್ನು ನೀಡಿದೆ.  ಯುಜಿಸಿ ಪತ್ರಸಂಖ್ಯೆ UGC/DEB/KU/HAMPI/KTK/2014 Dt. 28.05.2014 ಮೂಲಕ ೨೦೧೪-೧೫ನೇ ಸಾಲಿನಲ್ಲಿ ಕೋರ್ಸ್‌ಗಳನ್ನು ನಡೆಸಲು ಅನುಮತಿ ನೀಡಿದೆ. ದೂರಶಿಕ್ಷಣ ನಿರ್ದೇಶನಾಲಯದ ಅಭಿವೃದ್ಧಿಗಾಗಿ ಪ್ರತಿವರ್ಷ ಅನುದಾನವನ್ನು ನೀಡುತ್ತಲಿದೆ. ಈ ಹಿನ್ನೆಲೆಯಲ್ಲಿ ದೂರಶಿಕ್ಷಣ ನಿರ್ದೇಶನಾಲಯವು ಕನ್ನಡ ವಿಶ್ವವಿದ್ಯಾಲಯದ ವಿದ್ಯಾರಣ್ಯ ಆವರಣದ ಕಾಯಕದ ಮನೆಯಲ್ಲಿ ಕಾರ್ಯನಿರ್ವಹಿಸುತ್ತಲಿದೆ. ಇದು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕು ಕೇಂದ್ರದಿಂದ ೧೫ ಕಿಲೋಮೀಟರ್ ದೂರದಲ್ಲಿದೆ. ವಿದ್ಯಾರಣ್ಯ ಆವರಣವು ಶೈಕ್ಷಣಿಕ ಚಟುವಟಿಕೆಗಳ ಮುಂದುವರಿಕೆಗೆ ಅನುಗುಣವಾದ ಪ್ರಶಾಂತ ಮತ್ತು ಸೂಕ್ತ ಅಭಯಾರಣ್ಯವನ್ನು ಹೊಂದಿದೆ. ಆಡಳಿತ ವಿಭಾಗ, ಶಿಕ್ಷಣ ವಿಭಾಗ ಹಾಗೂ ಉತ್ತಮ ಉಪನ್ಯಾಸ ಮಂದಿರಗಳನ್ನು ವಿಶ್ವವಿದ್ಯಾಲಯ ಹೊಂದಿದೆ. ಸುಸಜ್ಜಿತವಾದ ಗ್ರಂಥಾಲಯವಿದೆ. ಉಪಾಹಾರ ಗೃಹವಿದೆ.ಮುಕ್ತ ಕಲಿಕೆ ವ್ಯವಸ್ಥೆಯು ವಿಶ್ವವಿದ್ಯಾಲಯ ಮಟ್ಟದಲ್ಲಿ ನೀಡುತ್ತಿರುವ ಅತ್ಯಂತ ವಿಶಿಷ್ಟವಾದ ಮತ್ತು ಸವಾಲುಗಳಿಂದ ಕೂಡಿದ ಶಿಕ್ಷಣಕ್ರಮವಾಗಿದೆ. ತಾವು ಕಾರ್ಯನಿರತರಾಗಿರುವ ಅಥವಾ ವಾಸಿಸುತ್ತಿರುವ ಸ್ಥಳದಲ್ಲಿಯೇ ಶಿಕ್ಷಣವನ್ನು ಮುಂದುವರೆಸುವ ಅಪೇಕ್ಷೆಯುಳ್ಳವರಿಗೆ ಈ ಶಿಕ್ಷಣ ವ್ಯವಸ್ಥೆ ವಿಪುಲ ಅವಕಾಶಗಳನ್ನು ಒದಗಿಸುತ್ತಿದೆ. ಈ ವಿಧಾನವೇ ದೂರಶಿಕ್ಷಣ ಎಂದು ಜನಪ್ರಿಯವಾಗಿದೆ. ಅಭಿವೃದ್ಧಿಶೀಲ ರಾಷ್ಟ್ರವಾದ ಭಾರತದಲ್ಲಿ ದೂರಶಿಕ್ಷಣ ಮಾತ್ರವೇ ಉನ್ನತ ಶಿಕ್ಷಣಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಬಲ್ಲದು. ದೂರಶಿಕ್ಷಣದ ಕ್ರಮಗಳನ್ನು ಈ ಕೆಳಕಂಡ ವಿದ್ಯಾರ್ಥಿ ವರ್ಗಗಳಿಗೆಂದೇ ವಿಶೇಷವಾಗಿ ರೂಪಿಸಲಾಗಿದೆ.

ವಿಶಿಷ್ಟ ಲಕ್ಷಣಗಳು

  • ಆರ್ಥಿಕ ತೊಂದರೆ ಹಾಗೂ ಇತರ ಪರಿಸ್ಥಿತಿಗಳಿಂದಾಗಿ ತಮ್ಮ ಶಾಲಾ ಕಾಲೇಜುಗಳ ನಿಯತ ಶಿಕ್ಷಣವನ್ನು ಅನಿವಾರ್ಯವಾಗಿ ಸ್ಥಗಿತಗೊಳಿಸಿದ ವಿದ್ಯಾರ್ಥಿಗಳು.
  • ಭೌಗೋಳಿಕವಾಗಿ ತುಂಬ ದೂರ ಪ್ರದೇಶದಲ್ಲಿ ವಾಸಮಾಡುತ್ತಿರುವ ವಿದ್ಯಾರ್ಥಿಗಳು.
  • ನಿಯತವಾಗಿ ಕಾಲೇಜು/ವಿಶ್ವವಿದ್ಯಾಲಯದ ವಿಭಾಗಗಳಲ್ಲಿ ಪ್ರವೇಶ ದೊರಕದ ವಿದ್ಯಾರ್ಥಿಗಳು.
  • ಪೂರ್ಣಕಾಲಿಕ ವಿದ್ಯಾರ್ಥಿಗಳಂತೆ ಅಧ್ಯಯನ ಮುಂದುವರೆಸಲು ಸಾಧ್ಯವಾಗದ ಆಸಕ್ತ ಉದ್ಯೋಗಸ್ಥರು.
  • ಜ್ಞಾನದ ಸಲುವಾಗಿಯೇ ವಿದ್ಯಾರ್ಥಿಗಳಂತೆ ಅಧ್ಯಯನ ಮಾಡಲಿಚ್ಛಿಸುವ ವ್ಯಕ್ತಿಗಳು.
  • ಜ್ಞಾನ ಮತ್ತು ಕೌಶಲಗಳನ್ನು ಉನ್ನತೀಕರಿಸಿಕೊಳ್ಳಲು ಇಚ್ಛಿಸುವ ಅಭ್ಯರ್ಥಿಗಳು. ಮತ್ತು
  • ಕನ್ನಡ ಮಾಧ್ಯಮದಲ್ಲಿಯೇ ಅಧ್ಯಯನ ಮಾಡಬಯಸುವ ಆಸಕ್ತರು.

ಧ್ಯೇಯಗಳು

ಜನಸಾಮಾನ್ಯರಿಗೆ ಉನ್ನತ ಶಿಕ್ಷಣ ಎನ್ನುವ ಧ್ಯೇಯದೊಂದಿಗೆ ಕಲಿಯುವವರ ಮನೆ ಬಾಗಿಲಿಗೆ ಉನ್ನತ ಶಿಕ್ಷಣವನ್ನು ಕೊಂಡೊಯ್ಯುವುದರ ಮೂಲಕ ಉನ್ನತ ಶಿಕ್ಷಣವನ್ನು ಸಾರ್ವತ್ರಿಕಗೊಳಿಸುವುದು.

ವಯೋಮಾನ, ವಾಸಸ್ಥಳ ಹಾಗೂ ವಿದ್ಯಾರ್ಹತೆಗಳು ಏನೇ ಇರಲಿ ಉನ್ನತ ಶಿಕ್ಷಣ ಬಯಸುವವರಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು.

ವೃತ್ತಿಪರತೆ ಮತ್ತು ವೃತ್ತಿ ನೈಪುಣ್ಯತೆ ತಂದುಕೊಡುವ ರೀತಿಯಲ್ಲಿ ಅಗತ್ಯವಾದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವುದು

ಶೈಕ್ಷಣಿಕ ಚಟುವಟಿಕೆಗಳ ದಿನಸೂಚಿ

ಸ್ನಾತಕೋತ್ತರ, ಸ್ನಾತಕೋತ್ತರ ಡಿಪ್ಲೊಮ ಮತ್ತು ಡಿಪ್ಲೊಮ ಶಿಕ್ಷಣ ಕಾರ್ಯಕ್ರಮಗಳ ಶಿಕ್ಷಣಕ್ರಮಗಳಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳು ತಮ್ಮ ಬೋಧನಾ/ಪ್ರವೇಶಾತಿ ಶುಲ್ಕದ ಚಲನ್/ಡಿಡಿ ಸಂಖ್ಯೆ ಮತ್ತು ದಿನಾಂಕ ಇವುಗಳನ್ನು ಅರ್ಜಿಯಲ್ಲಿ ನಮೂದಿಸಬೇಕು. ಪ್ರವೇಶ ಸಂದರ್ಭದಲ್ಲಿ ಮೂಲ ಪ್ರಮಾಣ ಪತ್ರಗಳನ್ನು ಸಂಯೋಜಕರಿಗೆ ಸಾದರಪಡಿಸಿ ನೆರಳಚ್ಚು ಪ್ರಮಾಣ ಪತ್ರಗಳಿಗೆ ದೃಢೀಕರಿಸಿಕೊಂಡು ಅರ್ಜಿಯೊಂದಿಗೆ ಸಲ್ಲಿಸುವುದು.

ಕರ್ನಾಟಕ ರಾಜ್ಯದಲ್ಲಿಯ ಬ್ಯಾಂಕ್ ಆಫ್ ಇಂಡಿಯ ಅಥವಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಈ ಬ್ಯಾಂಕುಗಳ ಯಾವುದೇ ಶಾಖೆಯಲ್ಲಿ ಯಾವುದೇ ಶುಲ್ಕವನ್ನು ಪಾವತಿಯಾಗುವಂತೆ ಚಲನ್/ಡಿಡಿ ರೂಪದಲ್ಲಿ ಪಾವತಿಸಬಹುದು. ಡಿಡಿ ಯನ್ನು ಹಣಕಾಸು ಅಧಿಕಾರಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ ಇವರ ಹೆಸರಿಗೆ ಪಡೆಯತಕ್ಕದ್ದು. ಡಿಡಿ ಜೊತೆಗೆ ಅಭ್ಯರ್ಥಿಯು ತನ್ನ ಹೆಸರು, ಆಯ್ದುಕೊಂಡಿರುವ ಶಿಕ್ಷಣಕ್ರಮ, ಅಧ್ಯಯನ ಕೇಂದ್ರ ಮತ್ತು ನೋಂದಣಿ ಸಂಖ್ಯೆ ಇವುಗಳನ್ನು ತಪ್ಪದೇ ನಮೂದಿಸಿ, ಭರ್ತಿ ಮಾಡಿದ ಅರ್ಜಿಯೊಂದಿಗೆ ಲಗತ್ತಿಸಿ ಕಳುಹಿಸಬೇಕು.

ಭರ್ತಿ ಮಾಡಿದ ಅರ್ಜಿಯ ಜೊತೆಗೆ ಶುಲ್ಕ ಪಾವತಿಸಿದ ಚಲನ್/ಡಿಡಿ, ಸಂಬಂಧಿಸಿದ ನೆರಳಚ್ಚು ಪ್ರತಿಗಳು (ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಿರಬೇಕು), ಸ್ಟ್ಯಾಂಪ್ ಅಳತೆಯ ಮೂರು ಭಾವಚಿತ್ರಗಳನ್ನು ಅವುಗಳಲ್ಲಿ ಒಂದು ಭಾವಚಿತ್ರವನ್ನು ಪ್ರವೇಶ ಅರ್ಜಿಯ ಮೇಲೆ ಅಂಟಿಸಬೇಕು. ಉಳಿದ ಎರಡು ಭಾವಚಿತ್ರಗಳ ಹಿಂದುಗಡೆ ಅಭ್ಯರ್ಥಿಯ ಹೆಸರು, ಅರ್ಜಿ ಸಂಖ್ಯೆ, ಶಿಕ್ಷಣಕ್ರಮ ಇವುಗಳನ್ನು ಬರೆದು ಲಕೋಟೆಯೊಂದಕ್ಕೆ ಹಾಕಿ ಅರ್ಜಿಯ ಜೊತೆ ನಿರ್ದೇಶಕರು, ದೂರಶಿಕ್ಷಣ ನಿರ್ದೇಶನಾಲಯ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೫೮೩ ೨೭೬ ಈ ವಿಳಾಸಕ್ಕೆ ನೋಂದಾಯಿತ ಅಂಚೆ/ಕೊರಿಯರ್/ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬೇಕು ಅಥವಾ ಖುದ್ದಾಗಿ ಸಲ್ಲಿಸಬೇಕು. ಅಧ್ಯಯನ ಕೇಂದ್ರಗಳಲ್ಲಿ ಪ್ರವೇಶ ಪಡೆಯುವ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ದ್ವಿಪ್ರತಿಯಲ್ಲಿ ಸಂಬಂಧಪಟ್ಟ ಅಧ್ಯಯನ ಕೇಂದ್ರದ ಸಂಯೋಜಕರಿಗೆ ಸಲ್ಲಿಸಬೇಕು.

ಶೈಕ್ಷಣಿಕ ಚಟುವಟಿಕೆಗಳ ದಿನಸೂಚಿ

ವಿವರಗಳು                                                                  ತಿಂಗಳು ಮತ್ತು ದಿನಾಂಕ

ಎಲ್ಲ ಶಿಕ್ಷಣಕ್ರಮಗಳಿಗೆ ಪ್ರವೇಶ

ದಂಡಶುಲ್ಕವಿಲ್ಲದೆ                                                     ಸೆಪ್ಟಂಬರ್ 15, ೨೦೧6 ರಿಂದ ಜನವರಿ 31, 2017

೨೦೦/- ರೂ. ದಂಡಶುಲ್ಕ ಸಹಿತ                                   ಫೆಬ್ರವರಿ 10, ೨೦೧7

ಸ್ನಾತಕೋತ್ತರ ಪ್ರವೇಶ ಪೂರ್ವಸಿದ್ಧತಾ ಪರೀಕ್ಷೆ

(ನಿಯಮ-೧ರ ವಿದ್ಯಾರ್ಥಿಗಳಿಗೆ ಮಾತ್ರ)                         ಫೆಬ್ರವರಿ / ಮಾಚ್್ ೨೦೧7

ಸಂಪರ್ಕ ಕಾರ್ಯಕ್ರಮ                                              ಮಾಚ್್ / ಏಪ್ರಿಲ್ ೨೦೧7

ನಿಯೋಜಿತ ಸಂಪ್ರಬಂಧ, ಗೃಹಲೇಖನ,

ವರದಿ ಸಲ್ಲಿಕೆ (ದಂಡಶುಲ್ಕವಿಲ್ಲದೆ)                                  ಏಪ್ರಿಲ್ 20, 2017

೩೦೦/- ರೂ. ದಂಡಶುಲ್ಕದೊಂದಿಗೆ                              ಏಪ್ರಿಲ್ 31, 2017

ಒಂದು ವರ್ಷ ಹಿಂದಿನವರಿಗೆ                                        ರೂ. ೬೦೦/-

ಅದಕ್ಕಿಂತ ಹಿಂದಿನವರಿಗೆ                                           ರೂ. ೧೦೦೦/-

ಪರೀಕ್ಷಾ ಶುಲ್ಕ ಪಾವತಿ

ಪರೀಕ್ಷಾ ಅರ್ಜಿಯೊಂದಿಗೆ ಒಂದು ಪಾಸ್‌ಫೋರ್ಟ್ ಅಳತೆಯ ಭಾವಚಿತ್ರ ಹಾಗೂ ಶುಲ್ಕ ಪಾವತಿ ಮಾಡಿದ ಎಲ್ಲ್ಲಾ ರಸೀದಿಗಳ ಜೆರಾಕ್ಸ್ ಪ್ರತಿಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು.

ದಂಡ ಶುಲ್ಕವಿಲ್ಲದೆ                                                     ಏಪ್ರಿಲ್ ೩೦, ೨೦೧7

೩೦೦/- ರೂ. ದಂಡಶುಲ್ಕದೊಂದಿಗೆ                                 ಮೇ 15, 2017

ವಾರ್ಷಿಕ ಪರೀಕ್ಷೆ                                                         ಜೂನ್/ಜುಲ್ 2017

ಪರೀಕ್ಷೆಗಳ ಫಲಿತಾಂಶ ಪ್ರಕಟಣೆ                                      ಆಗಸ್ಟ ೨೦೧7

ಮೇಲಿನ ಕೊನೆಯ ದಿನಾಂಕ ಮುಗಿದ ನಂತರ ಸಲ್ಲಿಕೆಯಾಗುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಕೇಂದ್ರ ಕಚೇರಿಯ ಪ್ರವೇಶಾತಿ ವಿಭಾಗ ಮತ್ತು ಅಧ್ಯಯನ ಕೇಂದ್ರಗಳಲ್ಲದೆ ಇದೇ ವಿಶ್ವವಿದ್ಯಾಲಯದ ಬೇರೆ ವಿಳಾಸಕ್ಕೆ/ವಿಭಾಗಗಳಿಗೆ ಅರ್ಜಿ ಸಲ್ಲಿಸಿದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ಸ್ವೀಕೃತ ಅರ್ಜಿಗಳು ಮೇಲೆ ತಿಳಿಸಿದ ವಿಧಾನಗಳಲ್ಲಿ ಭರ್ತಿ ಮಾಡಿಲ್ಲದಿದ್ದರೆ ಅವು ನಿರಾಕರಣೆಗೆ ಒಳಗಾಗುತ್ತವೆ.