ನುಡಿಹಬ್ಬ 3 – ೧೫ನೇ ಫೆಬ್ರವರಿ ೧೯೯೫

ನಾಡೋಜರ ಪರಿಚಯ

1. ಕುವೆಂಪು ಅವರಿಗೆ ನಾಡೋಜ ಗೌರವ ಪದವಿ ಪ್ರದಾನ

Kuvempu stands as a great name is Kannada literature.

ಕನ್ನಡ ನಾಡಿನಲ್ಲಿ ಕನ್ನಡ ತಾಯಿ ಭುವನೇಶ್ವರಿಗೆ ಪರಂಪರೆಯಿಂದಲೂ ನಿತ್ಯೋತ್ಸವ ನಡೆಯುತ್ತಲೇ ಬಂದಿದೆ. ಜೋಗದ ಸಿರಿ ಬೆಳಕಿನಿಂದ, ತುಂಗೆಯ ಬಳುಕಿನಿಂದ, ಸಹ್ಯಾದ್ರಿಯ ಉತ್ತುಂಗದ ಶಿಖರಗಳಿಂದ ಪ್ರಕೃತಿ ಸಹಜವಾಗಿ ನಡೆಯುವ ನಿತ್ಯೋತ್ಸವದ ಕಳೆಯೊಂದು. ನಾಡವರಾದ ಕಲಾವಿದ, ಗಾಯಕ, ಕವಿಗಳೇ ಮೊದಲಾದ ಚದುರರಿಂದ ನೆರವೇರುವ ಸಹೃದಯ ಸಡಗರ ಮತ್ತೊಂದು. ವಿಶೇಷವಾಗಿ ಕವಿವರ್ಯರು ಕಾಲಕಾಲಕ್ಕೆ ಕನ್ನಡ ಮಾತೆಗೆ ನುಡಿ ನಮನವನ್ನರ್ಪಿಸುತ್ತಲೇ ಬಂದಿದ್ದಾರೆ. ವಾಗ್ದೇವಿಯ ಭಂಡಾರದ ಮುದ್ರೆಯನ್ನೊಡೆದು ಭುವನದ ಭಾಗ್ಯರಾಗಿದ್ದಾರೆ. ರಾಷ್ಟ್ರಕವಿ ಕುವೆಂಪು ಇಂತಹ ಪರಂಪರೆಯವರು.

ಕನ್ನಡದಷ್ಟೇ ಇನಿದಾದ ಕುವೆಂಪು  ಕಾವ್ಯನಾಮದಿಂದ ನಾಡಿನ ಮೂಲೆ ಮೂಲೆಯಲ್ಲೂ ಮಾತಾಗಿರುವ ಕವಿಯ ಪೂರ್ಣ ಹೆಸರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ. ಪ್ರಕೃತಿಯ ಮಡಿಲಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ಹಿರಿಕೂಡಿಗೆಯಲ್ಲಿ ಡಿಸೆಂಬರ ೨೯,೧೯೦೪ ರಂದು ಈ ‘ಕನ್ನಡ ಕಂದನ’ ಜನನವಾಯಿತು. ವೆಂಕಟಪ್ಪ ಮತ್ತು ಸೀತಮ್ಮ ದಂಪತಿಗಳು ಇವರ ತಂದೆ ತಾಯಿಯರು. ಶ್ರೀಮತಿ ಹೇಮಾವತಿ, ಕುವೆಂಪು ಅವರ ಧರ್ಮಪತ್ನಿ. ಈ ದಂಪತಿಗಳಗೆ ಇಬ್ಬರು ಗಂಡುಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು. ಮೈಸೂರಿನಲ್ಲಿರುವ ಕುವೆಂಪು ಅವರ ಮನೆ ಹಾಗೂ ಅವರ ಪ್ರಕಾಶನದ ಹೆಸರು ಒಂದೇ, ಅದು ‘ಉದಯರವಿ’.

ಮಲೆನಾಡಿನ ಕಗ್ಗಾಡಿನಿಂದ ಪ್ರಾರಂಭವಾದ ಇವರ ವಿದ್ಯಾಭ್ಯಾಸ ಕೊನೆಗೆ ಮುಗಿದದ್ದು ಮೈಸೂರಿನಲ್ಲಿ. ಕುವೆಂಪು ೧೯೨೯ರಲ್ಲಿ ಬಿ.ಎ ಪದವಿಯನ್ನೂ ಎಂ.ಎ ಪದವಿನ್ನೂ ಪಡೆದರು. ಮುಂದೆ ಅಧ್ಯಾಪನ ವೃತ್ತಿಯಲ್ಲಿ ತೊಡಗಿಸಿಕೊಂಡು ೧೯೪೬ರಲ್ಲಿ ಕನ್ನಡ ಪ್ರಾಧ್ಯಾಪಕರಾದರು. ೧೯೫೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ನೇಮಕಗೊಂಡರು. ಪ್ರತಿಷ್ಠಿತವಿಶ್ವವಿದ್ಯಾನಿಲಯವೊಂದರಲ್ಲಿ ಕುಲಪತಿಗಳಾಗಿ ನೇಮಕವಾದ ಮೊದಲ ಕನ್ನಡ ಪ್ರಾಧ್ಯಾಪಕರೆಂಬ ಕೀರ್ತಿಗೆ ಕುವೆಂಪು ಪಾತ್ರರಾದರು.

ನಮ್ಮ ಪೂರ್ವಸೂರಿಗಳಲ್ಲಿ ಕವಿ ಪಂಪ ಹೇಗೆ ಸೀಮಾತೀತನೋ ಹಾಗೆಯೇ ಹೊಸಗನ್ನಡ ಪರಂಪರೆಯಲ್ಲಿ ಕುವೆಂಪು ಕೂಡ ಸೀಮಾತೀತರೇ. ಕನ್ನಡ ನವೋದಯ ಪರಂಪರೆಯ ಮುಂಗೋಳಿ ಎಂಬುದಷ್ಟೇ ಅವರ ಹೆಗ್ಗಳಿಕೆಯಲ್ಲ. ಕನ್ನಡ ಅರುಣೋದಯದ ಕೋಗಿಲೆ ಎಂಬುದೂ ಅವರಿಗೆ ಅನ್ವರ್ಥಕವಾಗುತ್ತದೆ. ಅವರ ‘ಶ್ರೀರಾಮಾಯಣ ದರ್ಶನಂ’ ಕಾವ್ಯದ ಮೂಲಕ ಮತ್ತೊಮ್ಮೆ ನಮ್ಮ ಕಾವ್ಯಪರಂಪರೆಯ ವಾಹಿನಿ ಭೋರ್ಗರೆಯಿತು. ಅವರ ‘ಕಾನೂರು ಹೆಗ್ಗಡಿತಿ’, ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಗಳು ನಿಜವಾಗಿಯೂ ಭುವನದ ಭಾಗ್ಯಗಳಾಗಿ ಪಡಿಮೂಡಿದವು.

ಕುವೆಂಪು ಈ ಶತಮಾನದ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಮಹಾನ್ ಸಂಕೇತ. ಕನ್ನಡ ಮತ್ತು ಕರ್ನಾಟಕ ಎಂಬ ಕಲ್ಪನೆಗಳ ಲಕ್ಷಣವನ್ನು ನಿರೂಪಿಸಿ, ಕರ್ನಾಟಕ ಮುಂದೆ ಸಾದಿsಸಬೇಕಾದ ಆದರ್ಶವನ್ನು ಮಂಡಿಸಿದ ದಾರ್ಶನಿಕ. ವಿಶ್ವಸಾಹಿತ್ಯದ ಗಣ್ಯಲೇಖಕರಾಗಿ ಮೆರೆದ ಅವರ ಸಾಧನೆಯೇ ಆಗಿದೆ. ಅವರು ಕನ್ನಡ ನಾಡು, ನುಡಿಯ ಏಳಿಗೆಗಾಗಿ ಶ್ರಮಿಸಿದ ಕಾರಣ ಪುರುಷರಲ್ಲಿ ಅಗ್ರಗಣ್ಯರು.

ಮಲೆನಾಡಿನ ಮೂಲೆಯೂಂದರಿಂದ ಕನ್ನಡದ ಕಣ್ಣಾಗಿ ಜನಿಸಿ ವಿಶ್ವಪಥದೆತ್ತರಕ್ಕೆ ಮನುಜಮತದ ಚಿಂತನೆಯನ್ನು ಒಯ್ದರು. ಅವರು ಸೃಷ್ಟಿಸಿದ ಕಾದಂಬರಿಲೋಕ, ಬೆಳೆಸಿದ ವೈಚಾರಿಕತೆ, ನಿರೂಪಿಸಿದ ದಾರ್ಶನಿಕತೆ ಕನ್ನಡಿಗರಿಗೆಲ್ಲರ ಆಸ್ತಿ. ಎದೆಯ ದನಿಯಾದ ಮನುಜಮತದ ಸರಳ ವಿಶ್ವಪಥವನ್ನು ಅವರು ತೋರಿದರು. ಮೃಣ್ಮಯದಿಂದ ಚಿನ್ಮಯವಾಗುವ ಅಮೃತತ್ತ್ವವನ್ನು  ನೀಡಿದರು. ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ, ಮನುಜಮತ, ವಿಶ್ವಪಥ, ಈ ಪಂಚತತ್ತ್ವಗಳು ಕನ್ನಡಕ್ಕೆ ಪ್ರಕೃತಿ ನೀಡಿದ ಮೇರುಶಿಖರ. ಸಹ್ಯಾದ್ರಿಗೆ ಸರಿಮಿಗಿಲಾಗಿ ಬೆಳೆದು ನಿಂತ ಸೃಜನಶೀಲ ಸಹ್ಯಾದ್ರಿ ಕವಿ ಕುವೆಂಪು.

ಕುವೆಂಪುರವರ ಪ್ರತಿಭೆಗೆ ಸಂದ ಗೌರವ, ಪ್ರಶಸ್ತಿಗಳು ಅಪಾರ. ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯಕ್ಕೆ ೧೯೫೫ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ೧೯೬೭ರಲ್ಲಿ ಅತ್ಯುನ್ನತವಾದ ಜ್ಞಾನಪೀಠ ಪ್ರಶಸ್ತಿಯೂ ದೊರೆತವು. ೧೯೫೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ, ೧೯೬೬ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ಮತ್ತು ೧೯೬೯ರಲ್ಲಿ ಬೆಂಗಳೂರು  ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ ಪದವಿಯನ್ನಿತ್ತು ಗೌರವಿಸಿದುವು. ಈ ಪದವಿ ಅವರಿಗೆ ಕಾನ್ಪುರ, ಗುಲ್ಬರ್ಗಾ, ಮಂಗಳೂರು ವಿಶ್ವವಿದ್ಯಾನಿಲಯಗಳಿಂದಲೂ ಸಂದಿವೆ. ೧೯೬೪ರಲ್ಲಿ ಕರ್ನಾಟಕ ಸರ್ಕಾರ ರಾಷ್ಟ್ರಕವಿ ಪ್ರಶಸ್ತಿಯನ್ನು ನೀಡಿತು. ಕೇಂದ್ರ್ರ ಸರ್ಕಾರ ೧೯೫೮ ರಲ್ಲಿ ‘ಪದ್ಮಭೂಷಣ’ ಪ್ರಶಸ್ತಿಯನ್ನೂ   ೧೯೮೮ ರಲ್ಲಿ ‘ಪದ್ಮವಿಭೂಷಣ’ ಪ್ರಶಸ್ತಿಯನ್ನೂ ಕೊಟ್ಟು ಗೌರವಿಸಿತು. ಕನ್ನಡ ಜನತೆ ೧೦೫೭ರಲ್ಲಿ ಧಾರವಾಡದಲ್ಲಿ ನಡೆದ ೩೯ ನೆಯ ಕನ್ನಡ ಸಾಹಿತ್ಯ ಸಮ್ಮೆಳನದ ಅಧ್ಯಕ್ಷರನ್ನಾಗಿ ಆಯ್ದು ಪುರಸ್ಕರಿಸಿತು. ಕೇಂದ್ರ ಸಾಹಿತ್ಯ ಅಕಾಡೆಮಿಯು ೧೯೭೯ ರಲ್ಲಿ ಫೆಲೋಶಿಪ್ ನೀಡಿ ಗೌರವಿಸಿತು. ಅವರಿಗೆ ಕನ್ನಡ  ಸಾಹಿತ್ಯ ಗೌರವ ಸದಸ್ಯತ್ವವೂ, ೧೯೭೯ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯೂ ಸಂದಿವೆ. ೧೯೮೮ರಲ್ಲಿ ಕರ್ನಾಟಕ ಸರ್ಕಾರ ‘ಪಂಪ’ ಪ್ರಶಸ್ತಿಯನ್ನೂ ೧೯೯೨ರಲ್ಲಿ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನೂ ಈ ಮಹಾಕವಿಗೆ ನೀಡಿದೆ. ಮಹಾಚೇತನಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ‘ನಾಡೋಜ’ ಪ್ರಶಸ್ತಿಯನ್ನಿತ್ತು ಕವಿಸ್ಮರಣೆಗೈದಿದೆ.

 

2. ಶ್ರೀ ಸಿದ್ದವನಹಳ್ಳಿ ನಿಜಲಿಂಗಪ್ಪ ಅವರಿಗೆ ನಾಡೋಜ ಗೌರವ ಪದವಿ ಪ್ರದಾನ

s nijalingappa, former Chief Minister

‘ಎಸ್ಸೆನ್’ ಎಂದೇ ಖ್ಯಾತರಾಗಿರುವ ಸಿದ್ದವನಹಳ್ಳಿ ನಿಜಲಿಂಗಪ್ಪನವರು ಅಖಂಡ ಕರ್ನಾಟಕದ ಸಾಕಾರರೂಪ. ಭಾರತ ಸ್ವಾತಂತ್ರ್ಯ ಸಂಗ್ರಾಮದ ದಿsರ ಯೋಧ. ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ. ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಕರ್ನಾಟಕಕ್ಕೆ ಗೌರವದ ನೆಲೆ ಕಟ್ಟಿಕೊಟ್ಟ ಮುತ್ಸದ್ದಿ. ಬಸವಣ್ಣ, ಗಾಂದಿsಜಿಯವರ ಆದರ್ಶವನ್ನು ತಮ್ಮ ನಿತ್ಯಶುದ್ಧ ಕಾಯಕವಾಗಿಸಿಕೊಂಡವರು.

ಸಿದ್ದವನಹಳ್ಳಿ ನಿಜಲಿಂಗಪ್ಪ ಅವರು ಬಳ್ಳಾರಿ ಜಿಲ್ಲೆಯ ಹಲುವಾಗಲು ಗ್ರಾಮದಲ್ಲಿ ಜನವರಿ ೧೦, ೧೯೦೨ರಂದು ಜನಿಸಿದರು. ತಂದೆ ಅಬ್ಬಲೂರು ಅಡವೆಪ್ಪ, ತಾಯಿ ನೀಲಮ್ಮ, ಎಳೆಯ ವಯಸ್ಸಿನಲ್ಲಿಯೇ ತಂದೆಯ ಪ್ರೀತಿಯ   ಸೌಭಾಗ್ಯವನ್ನು ಕಳೆದುಕೊಂಡು ನಂತರ ಬಂಧು ಬಾಂಧವರ ಕೃಪಾಪೋಷಣೆಯಲ್ಲೇ ಬೆಳೆದರು. ಬಾಲಕ ನಿಜಲಿಂಗಪ್ಪ ಅಕ್ಷರಭ್ಯಾಸ ಕೂಲಿಮಠದಲ್ಲಿ ಪ್ರಾರಂಭವಾಗಿ ಮುಂದೆ ಅದು ದಾವಣಗೆರೆ, ಚಿತ್ರದುರ್ಗಗಳಲ್ಲಿ ಮುಂದುವರಿದು ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಮುಗಿಯಿತು. ಸೆಂಟ್ರಲ್ ಕಾಲೇಜಿನಲ್ಲಿ ಅವರು ವಿದ್ಯಾರ್ಥಿಯಾಗಿದ್ದಾಗಲೇ ಬಾಲಗಂಗಾಧರ ತಿಲಕ, ಲಾಲ ಲಜಪತರಾಯ ಅವರ ಕರೆಯಂತೆ ತರಗತಿಗಳಿಗೆ ಬಹಿಷ್ಕಾರ ಹಾಕಿ ವಿದೇಶಿಯರ ಕಿಸುರುಗಣ್ಣುಗಳಿಗೆ ತುತ್ತಾದರು. ಆದರೆ ಈ ಘಟನೆ ಅವರಿಗೆ ಅರಿವಿಲ್ಲದಂತೆಯೇ ಅವರ ಬಾಳಿಗೊಂದು ಹೊಸ ತಿರುವು ನೀಡಿತು. ಮಹಾತ್ಮಾಗಾಂದಿsಜಿಯವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ಯಂಗ್ ಇಂಡಿಯಾ ಪತ್ರಿಕೆಯ ಅಧ್ಯಯನ ಅವರ ಬಾಳಿಗೊಂದು ಬೆಳಕು ಒದಗಿಸಿತು. ೧೯೧೯ರಲ್ಲಿ ಬೆಂಗಳೂರಿಗೆ ಬಂದಿದ್ದ ಗಾಂದಿsಜಿಯವರ ಮಾತಿನ ಮೋಡಿಯಿಂದ ಪ್ರಭಾವರಾದ ನಿಜಲಿಂಗಪ್ಪನವರು ಖಾದಿ ಹೊರತು, ವಿದೇಶಿ ವಸ್ತ್ರವನ್ನುಡುವುದಿಲ್ಲವೆಂದು ಸಂಕಲ್ಪ ಮಾಡಿದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ೧೯೨೬ರಲ್ಲಿ ಕಾನೂನು ಪದವಿಯನ್ನು ಪಡೆದರು. ವಿದ್ಯಾಭ್ಯಾಸ ಹಾಗೂ ಹೋರಾಟ ಅವರ ಬದುಕಿನಲ್ಲಿ ಒಟ್ಟೊಟ್ಟಿಗೆ ರೂಪಿತಗೊಂಡರೆ, ಮದುವೆಯಲ್ಲೂ ಅವರದು ವಿಶಿಷ್ಟ ಗುಣ. ದಾವಣಗೆರೆಯ ಮಧ್ಯಮ ವರ್ಗದ ಮರಿಗಮ್ಮನವರ ಜೊತೆ ಸರಳ ವಿವಾಹ ಮಾಡಿಕೊಂಡರು.

ಮುಂದೆ ಚಿತ್ರದುರ್ಗದಲ್ಲಿ ವಕೀಲರಾದ ನಿಜಲಿಂಗಪ್ಪನವರು. ೧೯೩೬ರಲ್ಲಿ ವೃತ್ತಿ ಸಂಬಂಧವಾದ ಕರ್ತವ್ಯಗಳನ್ನು ಮೊಟಕುಗೊಳಿಸಿ ಗಾಂದಿsಜಿಯವರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಸಮರಕ್ಕೆ ಧುಮುಕಿದರು. ಕಾಂಗ್ರೆಸ್ ಪಕ್ಷ  ಸೇರಿದರು. ಶ್ರೀ ನಿಜಲಿಂಗಪ್ಪನವರ ರಾಜಕೀಯ ಜೀವನದಲ್ಲಿ ನಿರ್ಣಾಯಕ ತಿರುವು ನೀಡಿದ. ಅವರ ಸಂಕಲ್ಪಕ್ಕೆ ಸಾಕಾರ ರೂಪವನ್ನು ಒದಗಿಸಿ, ನೆಲದ ನಿಷ್ಠೆ ಮತ್ತು ಮನಸ್ಥೈರ್ಯಗಳಿಗೆ ಒರೆಗಲ್ಲಾಗಿ ಅವರನ್ನು ಸಮರ್ಥ ನಾಯಕನನ್ನಾಗಿ ಡಂಗುರಿಸಿದ ಘಟನೆ ೧೯೩೯ರಲ್ಲಿ ಚಿತ್ರದುರ್ಗದ ತರುವಮಾರಿನಲ್ಲಿ ನಡೆಯಿತು. ಅದು ಈಚಲು ಮರಗಳನ್ನು ಕಡಿವ ಚಳುವಳಿ. ತಾವೇ ಹೆಗಲ ಮೇಲೆ ಕೊಡಲಿ ಹೊತ್ತು ಈಚಲು ಮರಗಳನ್ನು ಕಡಿದರು. ಹೆಂಡದಂಗಡಿಗಳನ್ನು ಮುಚ್ಚಿಸಿದರು. ಈ ಘಟನೆಯ ಪರಿಣಾಮವಾಗಿ ಎಸ್ಸೆನ್ ಅವರು ಹದಿನೆಂಟು ತಿಂಗಳ ಕಾಲ ಕಾರಾಗೃಹ ವಾಸ ಅನುಭವಿಸಿದರು. ಬ್ರಿಟಿಷ್ ದೊರೆಗಳು ಇವರ ವಕೀಲಿ ವೃತ್ತಿಯ ಸನ್ನದನ್ನು ಕಸಿದುಕೊಂಡರೂ ವಿಚಲಿತರಾಗದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ  ತಮ್ಮನ್ನು ಪೂರ್ತಿಯಾಗಿ ತೊಡಗಿಸಿಕೊಂಡರು. ಮೈಸೂರು ಕಾಂಗ್ರೆಸ್ಸಿನ ಚಟುವಟಿಕೆಗಳನ್ನು ಸ್ವಾತಂತ್ರ್ಯೊಂದೋಲನಕ್ಕೆ ಬಳಸಿಕೊಳ್ಳುವ ಮೂಲಕ ಅಖಿಲಭಾರತದ ನಾಯಕರ ಗಮನವನ್ನು ಸೆಳೆದರು. ಅವರ ಶಕ್ತಿ ಸಾಮರ್ಥ್ಯ, ವ್ಯವಸ್ಥಾಪನ ಕೌಶಲ್ಯಗಳಿಗೆ ಒರೆಗಲ್ಲಾಯಿತು. ದಕ್ಷಿಣ ಹಾಗೂ ಉತ್ತರ ಕರ್ನಾಟಕದ ಜನತೆ ಅವರಲ್ಲಿ ಸೇತುಶಕ್ತಿಯನ್ನೂ, ಭವಿಷ್ಯದ ನೇತಾರತನವನ್ನೂ ಗುರುತಿಸಿತು. ಮೈಸೂರು ಕಾಂಗ್ರೆಸ್ ಅಸ್ತಿತ್ವಕ್ಕೆ ಬಂದಾಗಿನಿಂದ ಶ್ರೀ ನಿಜಲಿಂಗಪ್ಪನವರು ಅದರೊಂದಿಗೆ ನಿಕಟ ಸಂಬಂಧ ಇರಿಸಿಕೊಂಡಿದ್ದರು. ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯದಲ್ಲೆಲ್ಲಾ ಅಡ್ಡಾಡಿ ಜನಸಂಪರ್ಕ ಬೆಳೆಸಿಕೊಂಡು ಕಾಂಗ್ರೆಸ್ ನೀತಿಯನ್ನು ಗಾಂಧಿವಾದವನ್ನೂ ಹೋದ ಹೋದಲ್ಲೆಲ್ಲಾ ಬಿತ್ತಿದರು. ಮುಂದೆ ಅದರ ಅಧ್ಯಕ್ಷರಾಗಿ ಜನಸಂಘಟನೆಯಲ್ಲಿ ಅಪೂರ್ವ ಯಶಸ್ಸು ಗಳಿಸಿದರು. ಕರ್ನಾಟಕದ ಏಕೀಕರಣಕ್ಕೆ ದುಡಿದು ಏಕೀಕೃತಗೊಂಡ ಕರ್ನಾಟಕದ ಮುಖ್ಯಮಂತ್ರಿಯಾಗಿ, ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ನಿಜಲಿಂಗಪ್ಪನವರು ಕಾರ್ಯನಿರ್ವಹಿಸಿದ್ದಾರೆ.

ಎಸ್ಸೆನ್ ಅವರ ಬಾಳಿನುದ್ದಕ್ಕೂ ಎದ್ದುಕಾಣುವ ಪ್ರಧಾನ ಗುಣವೆಂದರೆ ಶಿಸ್ತು. ಅದು ಅವರ ಬದುಕಿನ ನೆಲೆಗಟ್ಟು, ಸಜ್ಜನಿಕೆ. ಸರಳತೆ, ನಿಷ್ಠುರತೆ, ಸಂಯಮ ಅವರ ನಡವಳಿಕೆಯ ಜೀವಾಳ. ನಿಂತ ನೆಲವನ್ನಾಗಲೀ, ಬದುಕನ್ನಾಗಲೀ, ಹಳಿಯದೆ ಅದನ್ನು ಪ್ರೀತಿಯಿಂದ ಶ್ರದ್ಧೆಯಿಂದ ಕಂಡವರು. ಬದುಕಿನ ಏರುಪೇರುಗಳಿಗೆ ದೇವರಾಗಲೀ, ವಿಧಿಯಾಗಲೀ, ಕರ್ಮವಾಗಲೀ, ಹೊಣೆ ಅಲ್ಲ ಎಂಬುದು ಅವರ ಗಾಢನಂಬಿಕೆ. ನಾಡಿನ ಪ್ರಗತಿಗೆ ಕೃಷಿ. ಕೈಗಾರಿಕೆ ಹಾಗೂ ನೀರಾವರಿ ಯೋಜನೆಗಳಿಗೆ ಮೊದಲ ಆದ್ಯತೆ ಅವಶ್ಯ ಎಂದು ಪ್ರತಿಪಾದಿಸಿದವರು. ಅವರ ಆಡಳಿತದ ಅವಧಿಯಲ್ಲಿ ಕರ್ನಾಟಕದ ಕೈಗಾರಿಕೆ, ಕೃಷಿ, ನೀರಾವರಿ ಯೋಜನೆ. ಆಸ್ಪತ್ರೆ ಮುಂತಾದ ಕ್ಷೇತ್ರಗಳು ಸಾಕಷ್ಟು ಅಭಿವೃದ್ಧಿ ಹೊಂದಿದವು. ರಾಜಕೀಯ ಸಂತ್ರಸ್ತರಿಗೆ ಇಡಿಯ ಭಾರತದಲ್ಲೇ ಮೊತ್ತಮೊದಲು ಪಿಂಚಣಿ ವ್ಯವಸ್ಥೆ ಕಲ್ಪಿಸಿದರು. ಗ್ರಾಮ, ನಗರಗಳಲ್ಲಿ ನಿವೇಶನಗಳನ್ನು ಹಂಚುವಾಗ ಹರಿಜನರನ್ನು ಪ್ರತ್ಯೇಕವಾಗಿ ಇರಿಸದೆ ಸವರ್ಣೀಯರ ನಡುವೆ ವಾಸಿಸುವಂತೆ ವ್ಯವಸ್ಥೆ ಮಾಡಬೇಕು. ಅಸ್ಪೃಶ್ಯತೆ ತೊಲಗಬೇಕು ಎಂದು ಸರ್ಕಾರಿ ನಿರೂಪ ಹೊರಡಿಸಿದವರು. ಸಾಹಿತಿ ಕಲಾವಿದರಿಗೆ ಮಾಸಾಶನ ನೀಡುವ ಅರ್ಥಪೂರ್ಣ ಸಂಪ್ರದಾಯ ಹಾಕಿಕೊಟ್ಟ ಶ್ರೇಯಸ್ಸು ಅವರದು. ಸ್ವತಂತ್ರ ಪ್ರವೃತ್ತಿಯಲ್ಲಿ. ವೈಚಾರಿಕ ಮನೋಧರ್ಮದಲ್ಲಿ. ಆತ್ಮಗೌರವದಲ್ಲಿ ಅರಳಿದ ಮಾಗಿದ ವ್ಯಕ್ತಿತ್ವ ಶ್ರೀ ನಿಜಲಿಂಗಪ್ಪನವರು.

ಸಿದ್ದವನಹಳ್ಳಿ ನಿಜಲಿಂಗಪ್ಪನವರು ಜವಾಬ್ದಾರಿಯ ಸ್ಥಾನಗಳಿಂದ ನಿವೃತ್ತರಾದರೂ ಕರ್ನಾಟಕದ ಅಭಿವೃದ್ಧಿಯ ಬಗೆಗಿನ ಕಾತರ ತೀವ್ರವಾಗಿದೆ. ನಾಡಿನ ರಕ್ಷಣೆ ಹಾಗೂ ಅಭಿವೃದ್ಧಿಗಾಗಿ ತಮ್ಮ ಜೀವನದುದ್ದಕ್ಕೂ ಶ್ರಮಿಸಿದ ಎಸ್ಸೆನ್ ಅವರಿಗೆ ಕರ್ನಾಟಕ ಸರ್ಕಾರ, ವಿಶ್ವವಿದ್ಯಾಲಯಗಳು, ಸಂಘಸಂಸ್ಥೆಗಳು ಪ್ರಶಸ್ತಿಗಳನ್ನು, ಗೌರವಗಳನ್ನು ಸಲ್ಲಿಸಿವೆ. ಸದಾ ಎಚ್ಚರದ ಕಣ್ಣುಗಳಿಂದ ಕರ್ನಾಟಕದ ಹಿತಕಾಯುತ್ತಿರುವ ಜ್ಞಾನವೃದ್ಧ ಹಾಗೂ ವಯೋವೃದ್ಧ ಸಿದ್ದವನಹಳ್ಳಿ ನಿಜಲಿಂಗಪ್ಪ ಅವರಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ತನ್ನ ‘ನಾಡೋಜ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

3. ಶ್ರೀಮತಿ ಗಂಗೂಬಾಯಿ ಹಾನಗಲ್ ಅವರಿಗೆ ನಾಡೋಜ ಗೌರವ ಪದವಿ ಪ್ರದಾನ

ಗಂಗೂಬಾಯಿ ಹಾನಗಲ್ ಅವರು ಧಾರವಾಡದಲ್ಲಿ ಮಾರ್ಚ್ ೫, ೧೯೧೩ರಂದು ಜನಿಸಿದರು. ಇವರ ತಾಯಿ ಅಂಬಾಬಾಯಿ. ಕರ್ನಾಟಕ ಸಂಗೀತದಲ್ಲಿ ಪರಿಣತರು. ಶ್ರೀಮತಿ ಗಂಗೂಬಾಯಿಯವರಿಗೆ ತಾಯಿಯೇ ಮೊದಲ ಗುರು. ತರುವಾಯ ಹುಲಗೂರ್ ಕೃಷ್ಣಾಚಾರ್ಯರಿಂದ ಒಂದು ವರ್ಷದ ಶಿಕ್ಷಣ. ಅನಂತರ ದತ್ತೋಪಂತ್ ದೇಸಾಯಿ ಮತ್ತು ಪ್ರಸಾಪ್ ಲಾಲ್ ಅವರುಗಳಿಂದ ಠುಮ್ರಿ ಬೋಧನೆ ಮತ್ತು ಸವಾಯ್ ಗಂಧರ್ವರ ಬಳಿ ಎಂಟು ವರ್ಷಗಳ ಕಾಲ ಸಂಗೀತದ ಅಭ್ಯಾಸ. ತಮ್ಮ ಶ್ರದ್ಧೆ ಹಾಗೂ ಅಭ್ಯಾಸದಿಂದ ಇವರು ಬಹುಬೇಗ ಸಂಗೀತ ದೇವತೆಯ್ನು ಒಲಿಸಿಕೊಂಡರು. ೧೯೩೩ರಲ್ಲಿ ಗ್ರಾಮಫೋನ್ ರೆಕಾರ್ಡ್ ಕೊಟ್ಟು, ೧೯೩೮ರಲ್ಲಿ ಕಲ್ಕತ್ತದಲ್ಲಿ ಹಾಡಿ ಪ್ರಖ್ಯಾತರಾದರು.

‘ಕಿರಾನಾ ಘರಾಣೆ’ಯ ಮಹಾನ್ ಗಾಯಕ ಅಬ್ದುಲ್ ಕರೀಂಖಾನ್ ಅವರಲ್ಲಿ ಶಿಷ್ಯವೃತ್ತಿಯನ್ನು ಕೈಗೊಂಡರು. ಗಂಗೂಬಾಯಿ ಹಾನಗಲ್ ಅವರು ಹಿಂದೂಸ್ತಾನಿ ಸಂಗೀತದ ‘ಕಿರಾನಾ ಘರಾಣೆ’ಯ ಪ್ರಸಿದ್ಧ ಗಾಯಕಿ. ಭಾರತದ ಸಂಗೀತ ಕ್ಷೇತ್ರಕ್ಕೆ ಇವರು ಸಲ್ಲಿಸಿರುವ ಕೊಡುಗೆ ಅಪಾರ. ೧೯೨೪ರಲ್ಲಿ ಬೆಳಗಾವಿಯ ಕಾಂಗ್ರೆಸ್ಸಿನಲ್ಲಿ ಮಹಾತ್ಮ ಗಾಂಧೀಜಿಯವರ ಎದುರಿನಲ್ಲಿ ‘ವಂದೇಮಾತರಂ’ ಗೀತೆಯನ್ನು ಹಾಡಿದ ಈ ಬಾಲಕಿ ಮುಂದೊಂದು ದಿನ ದೇಶದ ವಿಖ್ಯಾತ ಸಂಗೀತ ವಿದುಷಿಯಾಗಿ ಬೆಳೆದದ್ದು ಕುತೂಹಲ. ರಾಜ ಮಹಾರಾಜರುಗಳ, ಪ್ರಧಾನ ಮಂತ್ರಿಗಳ, ಪಂಡಿತ ಪಾಮರರ ಮುಂದೆ ಕೂತು ಹಾಡಿ ಅವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪುಟ್ಟ ಆಕೃತಿಯ ಅವರ ಕಂಠ, ಕಂಚಿನ ಕಂಠ; ತಮ್ಮ ಹಾಡುಗಾರಿಕೆಯ ಮೋಡಿ ಹಾಗೂ ಬಿಗುವಾದ ಗಮಕಗಳು, ಲಯಗಾರಿಕೆ ಹಾಗು ಆಲಾಪದ ವಿಸ್ತಾರತೆಯಿಂದ ಸಂಗೀತ ಕ್ಷೇತ್ರಕ್ಕೆ ಹಿರಿಮೆ ಗರಿಮೆಯನ್ನು ತಂದುಕೊಟ್ಟಿದ್ದಾರೆ. ಅವರು ಸಂಗೀತ ಲೋಕದ ಅಪೂರ್ವ ಗಾನ ಕೋಗಿಲೆ.

ಗಂಗೂಬಾಯಿ ಹಾನಗಲ್ ಅವರ ಕಚೇರಿಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮನ್ನಣೆ ಪಡೆದಿವೆ. ಭಾರತದ ಎಲ್ಲಾ ಪ್ರಾಂತ್ಯಗಳಲ್ಲಿಯೂ ಕಚೇರಿ ಮಾಡಿದ್ದಾರೆ. ನೇಪಾಳ, ಪಾಕಿಸ್ತಾನ, ಅಮೇರಿಕಾ, ಕೆನಡಾ, ಫ್ರಾನ್ಸ್, ಹಾಲೆಂಡ್, ಜರ್ಮನಿ, ಮುಂತಾದ ದೇಶಗಳಲ್ಲಿ ಪ್ರವಾಸ ಮಾಡಿದ್ದಾರೆ. ನೆರೆಯದೇಶಗಳಾದ ನೇಪಾಳ, ಪಾಕಿಸ್ತಾನಗಳಿಗೆ ಸಾಂಸ್ಕೃತಿಕ ನಿಯೋಗದ ಸದಸ್ಯೆಯಾಗಿ ಹೋಗಿ ಕಚೇರಿ ಮಾಡಿದ್ದಾರೆ. ಕರ್ನಾಟಕದ ಹಲವಾರು ಕಡೆ ಅವರು ಮಾಡಿರುವ ಕಚೇರಿಗಳು ಸಂಗೀತ ರಸಿಕರ ಹೃದಯವನ್ನು ಶ್ರೀಮಂತಗೊಳಿಸಿವೆ. ಆಕಾಶವಾಣಿ, ದೂರದರ್ಶನ ಕೇಂದ್ರಗಳ ಮೂಲಕ ಅವರ ಸಂಗೀತದ ಸುಧೆ ಪ್ರಸಾರವಾಗಿದೆ. ಅವರ ಕಂಠಮಾಧುರ್ಯ ನಿರಂತವಾಗಿ ಸಾಗಿದೆ. ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ ಗೌರವ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಭಾರತದ ಅನೇಕ ಶೈಕ್ಷಣಿಕ ಸಂಸ್ಥೆಗಳು ಮತ್ತು ಸಂಗೀತ ಸಂಘಟನೆಗಳ ಜೊತೆ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ.

ಇವರು ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ದೀರ್ಘ ಸೇವೆಗಾಗಿ ದೇಶದ ಅನೇಕ ಪ್ರತಿಷ್ಠಿತ ಪ್ರಶಸ್ತಿ ಸನ್ಮಾನ ಗೌರವಗಳು ದೊರಕಿವೆ. ೧೯೪೮ರಲ್ಲಿ ಬನಾರಸ್ ಹಿಂದೀ ನಾಗರೀಕ ಪ್ರಚಾರ ಸಭಾ ಇವರಿಂದ  ‘ಭಾರತೀಕಂಠ’ ಬಿರುದು. ೧೯೬೨ರಲ್ಲಿ ಮೈಸೂರು ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ. ೧೯೬೯ರಲ್ಲಿ ಪ್ರಯಾಗ ಸಂಗೀತ ಸಮಿತಿಯಿಂದ ‘ಸ್ವರಶಿರೋಮಣಿ’ ಬಿರುದು. ೧೯೭೦ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ. ೧೯೭೧ರಲ್ಲಿ ಭಾರತ ಸರ್ಕಾರದ ‘ಪದ್ಮಭೂಷಣ’ ಪ್ರಶಸ್ತಿ. ೧೯೭೩ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ. ೧೯೭೪ರಲ್ಲಿ ದೆಹಲಿಯ ಬೇಗಂ ಅಖ್ತಾರ್ ರೂಹೆ ‘ಘಜಲ್’ ಪ್ರಶಸ್ತಿ. ೧೯೭೭ರಲ್ಲಿ ಪ್ರಧಾನಿ ಮೊರಾರ್ಜಿ ಅವರಿಂದ ಆಕಾಶವಾಣಿ ಸ್ವರ್ಣ ಮಹೋತ್ಸವದ ಮಿಮೆಂಟೊ, ಕರ್ನಾಟಕ ವಿಶ್ವವಿದ್ಯಾನಿಲಯ ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ. ೧೯೭೮ರಲ್ಲಿ ಕರ್ನಾಟಕ ರಾಜ್ಯ ಸಂಗೀತ ಅಕಾಡೆಮಿ ಸದಸ್ಯತ್ವ, ೧೯೮೦ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಸದಸ್ಯತ್ವ, ೧೯೮೨-೮೪ರ ವರೆಗೆ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಸ್ಥಾನ, ಕುಸುಮಾಗ್ರಜ ಪ್ರತಿಷ್ಠಾನದ ಗೋದಾವರಿ ಪ್ರಶಸ್ತಿ. ಅಸ್ಸಾಂ ಸರ್ಕಾರದ ೧೯೯೪ರ ಶಂಕರದೇವ ಪ್ರಶಸ್ತಿ. ೧೯೮೪ರಲ್ಲಿ ಮಧ್ಯಪ್ರದೇಶ ಸರ್ಕಾರದ ತಾನ್ಸೇನ್ ಪ್ರಶಸ್ತಿ. ಕರ್ನಾಟಕ ವಿಧಾನ ಪರಿಷತ್ ಸದಸ್ಯತ್ವ, ೧೯೯೪ರಲ್ಲಿ ಕರ್ನಾಟಕ ಸರ್ಕಾರದ ಕನಕ ಪುರಂದರ ಪ್ರಶಸ್ತಿ, ಕನ್ನಡ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯತ್ವ, ೧೯೯೦ರಲ್ಲಿ ಹಫೀಜ್‌ಅಲಿ ಸಂಸ್ಮರಣೀಯ ಪ್ರಶಸ್ತಿ ಪ್ರಾಪ್ತವಾಗಿವೆ.

ಕರ್ನಾಟಕದ ನಾದಲೋಕಕ್ಕೆ ಅಪೂರ್ವ ಕೊಡುಗೆ ನೀಡಿರುವ ಶ್ರೀಮತಿ ಗಂಗೂಬಾಯಿ ಹಾನಗಲ್ ಅವರಿಗೆ  ಹಂಪಿಯ ಕನ್ನಡ ವಿಶ್ವವಿದ್ಯಾಲಯವು ‘ನಾಡೋಜ’ ಪ್ರಶಸ್ತಿಯನ್ನು ಪ್ರದಾನ ಮಾಡಿದೆ.