೧. ಎಂ.ಫಿಲ್ ಅಧ್ಯಯನಕ್ಕೆ ಅರ್ಹತೆ:

 1. ಯುಜಿಸಿಯಿಂದ ಅನುಮೋದನೆ ಪಡೆದ ವಿಶ್ವವಿದ್ಯಾಲಯಗಳಿಂದ ಎರಡು ವರ್ಷದ ಸ್ನಾತಕೋತ್ತರ ಪದವಿಯಲ್ಲಿ ವಿದ್ಯಾರ್ಥಿಗಳು ಶೇ.೫೫ ಅಂಕ ಪಡೆದಿರಬೇಕು. ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-೧ಕ್ಕೆ ಸೇರಿದ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ ಶೇ.೫೦ ಅಂಕ ಪಡೆದಿದ್ದರೆ ಅಧ್ಯಯನಕ್ಕೆ ಅರ್ಹರು.
 2. ದಿನಾಂಕ: ೩೧.೦೩.೧೯೯೨ಕ್ಕೆ ಮೊದಲು ಸರಕಾರಿ ಅನುದಾನಿತ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಾಗಿ ನೇಮಕಗೊಂಡ ಹಾಗೂ ನಿಯಮಿತ ಖಾಯಂ ಸೇವೆಯಲ್ಲಿರುವ ಅಧ್ಯಾಪಕರು ಸಂಬಂಧಿಸಿದ ವಿಷಯದ ಸ್ನಾತಕೋತ್ತರ ಪದವಿಯಲ್ಲಿ ಶೇ. ೫೦ ಅಂಕ ಪಡೆದಿದ್ದರೆ ಅವರು ಎಂ.ಫಿಲ್ ಅಧ್ಯಯನಕ್ಕೆ ಅರ್ಹರು. ಯುಜಿಸಿ ನಿಯಮದ ಪ್ರಕಾರ ವಿಶ್ವವಿದ್ಯಾಲಯದಲ್ಲಿ ನಡೆಯುವ ಕನಿಷ್ಠ ಒಂದು ವರ್ಷದ ಅವಧಿಯ ಸಂಶೋಧನಾ ತರಗತಿಗಳಲ್ಲಿ ನಿರಂತರವಾಗಿ ಭಾಗವಹಿಸುವುದು ಕಡ್ಡಾಯ.
 3. ಯುಜಿಸಿ/ಸಿಎಸ್‌ಐಆರ್/ಎನ್‌ಇಟಿ/ಎಸ್‌ಎಲ್‌ಇಟಿ/ಜಿಎಟಿಇ/ಜೆಆರ್‌ಎಫ್/ ಅಥವಾ ಎಫ್‌ಐಪಿ/ಕ್ಯೂಐಪಿ ಪ್ರವೇಶ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಯ ಅಗತ್ಯವಿಲ್ಲ. ಇದಲ್ಲದೆ ವಿಶೇಷ ಅನುದಾನಿತ ಯೋಜನೆಗಳಲ್ಲಿ ಆಯ್ಕೆಯಾಗಿ ಕೆಲಸ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಸರ್ಕಾರವು ಪ್ರಾಯೋಜಿಸುವ ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಯಿಂದ ಮಾತ್ರ ವಿನಾಯಿತಿ ಇರುತ್ತದೆ. ವಿಭಾಗ ಸಮಿತಿಯು ಇಂತಹ ವಿದ್ಯಾರ್ಥಿಗಳಿಗೆ ಮೌಖಿಕ ಪರೀಕ್ಷೆ ನಡೆಸಿ ದಾಖಲೆಗಳನ್ನು ಪರಿಶೀಲಿಸಿ ಇವರಿಗೆ ನೋಂದಣಿ ನೀಡುವ ಬಗ್ಗೆ ಶಿಫಾರಸ್ಸು ಮಾಡಬಹುದು.
 4. ಮೇಲೆ ತಿಳಿಸಿರುವ ಅ ಮತ್ತು ಆ ನಿಯಮಗಳ ಪ್ರಕಾರ ಅರ್ಹತೆ ಪಡೆದವರು ವಿಶ್ವವಿದ್ಯಾಲಯ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಭಾಗವಹಿಸಿ ಆಯ್ಕೆಯಾಗಬೇಕು.
 5. ಸರ್ಕಾರಿ ಅಥವಾ ಬೇರಾವುದೇ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಸಂಬಂಧಿಸಿದ ಸಂಸ್ಥೆಯ ಅನುಮತಿ ಪಡೆದು ನಿರಾಕ್ಷೇಪಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ.

೨. ಅರ್ಜಿ ಆಹ್ವಾನ:

 1. ಎಂ.ಫಿಲ್ ಅಧ್ಯಯನದ ಪ್ರಕಟಣೆಯ ಬಗ್ಗೆ ವ್ಯವಸ್ಥಿತ ಪೂರ್ವ ಸಿದ್ಧತೆಯನ್ನು ನಡೆಸುವುದು, ಪ್ರವೇಶ ಪ್ರಕಟಣೆಯನ್ನು ಸುದ್ಧಿ ಮಾಧ್ಯಮಗಳಲ್ಲಿ ಜಾಹೀರಾತು ನೀಡುವುದು. ಯು.ಜಿ.ಸಿ. ಅಂತರ್ಜಾಲದಲ್ಲಿ ಪ್ರಕಟಿಸುವುದು. ಜೊತೆಗೆ ಪ್ರತಿ ವಿಭಾಗಗಳಲ್ಲಿ ಆಯಾ ವರ್ಷ ಅಧ್ಯಯನಕ್ಕೆ ಲಭ್ಯವಿರುವ ಸೀಟುಗಳನ್ನು ನಿಚ್ಚಳಗೊಳಿಸುವುದು.
 2. ಪ್ರತಿವರ್ಷವೂ ವಿದ್ಯಾರ್ಥಿಗಳು ಕನ್ನಡ ವಿಶ್ವವಿದ್ಯಾಲಯವು ನಿರ್ದಿಷ್ಟ ಪಡಿಸಿದ ಅರ್ಜಿ ನಮೂನೆಯನ್ನು ನಿಗದಿತ ಶುಲ್ಕದೊಂದಿಗೆ ಮಾತ್ರ ಖರೀದಿಸಬೇಕು. ಅರ್ಜಿ ಕನ್ನಡ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲೂ ಲಭ್ಯವಿರುತ್ತದೆ. ಡೌನ್‌ಲೋಡ್ ಮಾಡಿದ ಅರ್ಜಿಯನ್ನು ನಿಗದಿತ ಶುಲ್ಕದ ಡಿ.ಡಿಯೊಂದಿಗೆ ಸಲ್ಲಿಸಬಹುದು. ಇದು ಪ್ರವೇಶ ಪರೀಕ್ಷೆಯ ಅರ್ಜಿಯಾಗಿರುತ್ತದೆ.
 3. ಈ ಪರೀಕ್ಷೆಯು ವಿದ್ಯಾರ್ಥಿಗಳು ಎಂ.ಎ. ನಲ್ಲಿ ಸಂಬಂಧಿಸಿದ ವಿಷಯದಲ್ಲಿ ಓದಿದ ಹಾಗೂ ಎಂ.ಫಿಲ್‌ಗೆ  ಆಯ್ದುಕೊಂಡ ವಿಷಯಗಳ ಜ್ಞಾನ, ಭಾಷೆ, ಶೈಲಿ ಇತ್ಯಾದಿಗಳನ್ನು ಪರೀಕ್ಷಿಸುವ ರೀತಿಯದಾಗಿರುತ್ತದೆ. ಇದು ಒಟ್ಟು ೧೦೦ ಅಂಕಗಳ ಪರೀಕ್ಷೆಯಾಗಿರುತ್ತದೆ. ಇದು ಲಿಖಿತ (೮೦ ಅಂಕಗಳು) ಹಾಗೂ ಸಂದರ್ಶನ (೨೦ ಅಂಕಗಳು) ಸ್ವರೂಪದಲ್ಲಿ ಇರುತ್ತದೆ. ಅರ್ಹರ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸುವಾಗ ವಿದ್ಯಾರ್ಥಿಯು ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳಲ್ಲಿ ಶೇ. ೫೦ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಪಡೆದ ಅಂಕಗಳ ಶೇ. ೫೦ರ ಸರಾಸರಿಯನ್ನು ಪರಿಗಣಿಸಲಾಗುವುದು.
 4. ಉತ್ತರ ಪತ್ರಿಕೆಗಳ ಮೌಲ್ಯಮಾಪನ ವಿಭಾಗದಲ್ಲಿಯೇ ನಡೆಯುತ್ತದೆ. ಲಿಖಿತ ಪರೀಕ್ಷೆ ಮುಗಿದ ದಿನವೇ ಆಯಾ ವಿಭಾಗದ ಸಮಿತಿಯು ವಿದ್ಯಾರ್ಥಿಯ ಮೌಖಿಕ ಪರೀಕ್ಷೆಯನ್ನು (ಸಂದರ್ಶನ) ನಡೆಸುತ್ತದೆ. ಅನಂತರ ವಿಭಾಗ ಸಮಿತಿಯು ವಿದ್ಯಾರ್ಥಿಗಳ ಆಯ್ಕೆ ಪಟ್ಟಿಯನ್ನು ಅಧ್ಯಯನಾಂಗಕ್ಕೆ ಸಲ್ಲಿಸುತ್ತದೆ.
 5. ವಿದ್ಯಾರ್ಥಿಯು ಸ್ವಂತ ಖರ್ಚಿನಲ್ಲಿ ವಿದ್ಯಾರಣ್ಯ ಆವರಣಕ್ಕೆ ಬಂದು ಪ್ರವೇಶ ಪರೀಕ್ಷೆಗೆ ಹಾಜರಾಗಬೇಕು.
 6. ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ಹಾಗೂ ಸಂದರ್ಶನ ಕಡ್ಡಾಯ. ಯುಜಿಸಿ/ಸಿಎಸ್‌ಐಆರ್/ಎನ್‌ಇಟಿ/ ಎಸ್‌ಎಲ್‌ಇಟಿ/ಜಿಎಟಿಇ/ಜೆಆರ್‌ಎಫ್ ಅಥವಾ ಎಫ್‌ಐಪಿ/ಕ್ಯೂಐಪಿ ಪರೀಕ್ಷೆಗಳಲ್ಲಿ ತೇರ್ಗಡೆಯಾದವರಿಗೆ ಲಿಖಿತ ಪರೀಕ್ಷೆಯಿಂದ ವಿನಾಯಿತಿ ಇರುತ್ತದೆ. ಈ ಸಮಾನ ಶರತ್ತುಗಳು ಎಂ.ಫಿಲ್ ಪದವಿ ಪ್ರವೇಶ ಪರೀಕ್ಷೆಗಳಿಗೂ ಅನ್ವಯಿಸುತ್ತವೆ.
 7. ಎಂ.ಫಿಲ್ ಪದವಿ ಪ್ರವೇಶದ ಸಂದರ್ಭದಲ್ಲಿ ರಾಜ್ಯ ಸರಕಾರದ ಮೀಸಲಾತಿ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು.

೩. ಪ್ರವೇಶ ಪರೀಕ್ಷೆ/ಸಂದರ್ಶನ

 1. ಯು.ಜಿ.ಸಿ. ನಿಯಮಾನುಸಾರ ಎಂ.ಫಿಲ್. ಅಧ್ಯಯನಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
 2. ಮೀಸಲಾತಿ ನಿಯಮಗಳನ್ವಯ ಎಂ.ಫಿಲ್. ಪ್ರವೇಶ ಪರೀಕ್ಷೆಯ ಆಯ್ಕೆ ಪಟ್ಟಿ ಪ್ರಕಟವಾದ ನಂತರ ಯಾವುದೇ ಬಗೆಯ ಮರು ಮೌಲ್ಯಮಾಪನ, ಪುನರ್ ಪರಿಶೀಲನೆಗೆ ಅವಕಾಶವಿಲ್ಲ. ಪ್ರವೇಶ ಪರೀಕ್ಷೆಗೆ ಅರ್ಹರಾದವರ ಪಟ್ಟಿಯನ್ನು www.kannadauniversity.org ವೆಬ್‌ಸೈಟ್‌ನಲ್ಲೇ ಪ್ರಕಟಿಸಲಾಗುವುದು, ಪ್ರತ್ಯೇಕವಾಗಿ ಅಭ್ಯರ್ಥಿಗಳಿಗೆ ಪ್ರವೇಶ ಪತ್ರಗಳನ್ನು ಕಳುಹಿಸುವುದಿಲ್ಲ.
 3. ಮಾನ್ಯತಾ ಕೇಂದ್ರಗಳ ಅಭ್ಯರ್ಥಿಗಳು ಯಾವ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕೆಂಬುದನ್ನು ಅರ್ಹತಾ ಪಟ್ಟಿಯೊಂದಿಗೆ ಪ್ರಕಟಿಸಲಾಗುತ್ತದೆ.
 4. ಆಯ್ಕೆ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಅಗತ್ಯ ಶುಲ್ಕಗಳೊಂದಿಗೆ ನಿಗದಿಪಡಿಸಿದ ದಿನಾಂಕದೊಳಗಾಗಿ ವಿದ್ಯಾರಣ್ಯದಲ್ಲಿಯ ಕೋರ್ಸ್‌ಗಳಲ್ಲಿ ಪ್ರವೇಶ ಬಯಸುವ ಅಭ್ಯರ್ಥಿಗಳು ಅಧ್ಯಯನಾಂಗದಲ್ಲಿಯೂ, ಸಂಬಂಧಿಸಿದ ಮಾನ್ಯತಾ ಸಂಸ್ಥೆಯ ಅಭ್ಯರ್ಥಿಗಳು ಮಾನ್ಯತಾ ಸಂಸ್ಥೆಗಳಲ್ಲಿಯೂ, ವಿಸ್ತರಣಾ ಕೇಂದ್ರದ ಅಭ್ಯರ್ಥಿಗಳು ಸಂಬಂಧಿಸಿದ ವಿಸ್ತರಣಾ ಕೇಂದ್ರಗಳಲ್ಲಿಯೂ ಪ್ರವೇಶ ಪಡೆಯಬಹುದು.
 5. ಒಮ್ಮೆ ಸಲ್ಲಿಸಿದ ಅರ್ಜಿಯನ್ನು ಬೇರೆ ಯಾವುದೇ ವಿಭಾಗಕ್ಕೆ, ವಿಸ್ತರಣಾ ಕೇಂದ್ರಗಳಿಗೆ ಅಥವಾ ಮಾನ್ಯತಾ ಸಂಸ್ಥೆಗಳಿಗೆ ವರ್ಗಾಯಿಸಲು ಬರುವುದಿಲ್ಲ
 6. ಅಭ್ಯರ್ಥಿಯ ಸ್ನಾತಕೋತ್ತರ ಪದವಿಯ ವಿಷಯ ಯಾವುದೇ ಆಗಿದ್ದರೂ ಅಂಕಪಟ್ಟಿ, ಪ್ರಮಾಣ ಪತ್ರ, ಅಧಿಸೂಚನೆಗಳಲ್ಲಿ ಅಭ್ಯರ್ಥಿಯು ಅಧ್ಯಯನಕ್ಕೆ ಪ್ರವೇಶ ಪಡೆದಿರುವ ವಿಭಾಗದ ವಿಷಯವನ್ನು ಮಾತ್ರ ನಮೂದಿಸಲಾಗುವುದು. ಎಂ.ಫಿಲ್. ಪ್ರವೇಶ ಪರೀಕ್ಷೆಯ ಆಯ್ಕೆ ಪಟ್ಟಿ ಪ್ರಕಟವಾದ ನಂತರ ಯಾವುದೇ ಬಗೆಯ ಮರು ಮೌಲ್ಯಮಾಪನ, ಪುನರ್ ಪರಿಶೀಲನೆಗೆ ಅವಕಾಶವಿಲ್ಲ.

೪. ಅಧ್ಯಯನದ ವಿಷಯ:

 1. ವಿದ್ಯಾರ್ಥಿಯು ಸಂಶೋಧನೆಗೆ ಆರಿಸಿಕೊಳ್ಳುವ ವಿಷಯ ಕರ್ನಾಟಕದ ಕಲೆ, ಸಾಹಿತ್ಯ, ಚರಿತ್ರೆ, ಸಂಸ್ಕೃತಿ, ಭಾಷೆ, ಭಾಷಾಂತರ, ಸಮಾಜ, ಅಭಿವೃದ್ಧಿ ಇತ್ಯಾದಿಗಳಿಗೆ ಸಂಬಂಧಿಸಿರಬೇಕು. ಇದು ಕರ್ನಾಟಕಕ್ಕೆ ಸಂಬಂಧಿಸಿದ ವಿಷಯವಾಗಿರಬೇಕು ಮತ್ತು ಬೇರೊಂದು ವಿಷಯದ ಜೊತೆ ತೌಲನಿಕ ಅಧ್ಯಯನವೂ ಆಗಿರಬಹುದು.
 2. ವಿಶ್ವವಿದ್ಯಾಲಯದ ಪ್ರತಿಯೊಂದು ಅಧ್ಯಯನ ವಿಭಾಗಗಳು ಆಯಾ ಕ್ಷೇತ್ರಗಳ ಸಂಶೋಧನ ಸಾಧ್ಯತೆಯನ್ನು ಗುರುತಿಸಿಕೊಂಡು ಆದ್ಯತೆ ನೀಡಬಹುದಾದ ಪ್ರಧಾನ ವಿಷಯದ ವಲಯಗಳ ಪಟ್ಟಿಯೊಂದನ್ನು ಸಿದ್ಧಪಡಿಸುವುದು.
 3. ಎಂ.ಫಿಲ್ ಅಧ್ಯಯನ ಪದವಿಗಾಗಿ ಅರ್ಜಿಗಳನ್ನು ಕರೆಯುವ ಸಂದರ್ಭದಲ್ಲಿ ಆಯಾಯ ವಿಭಾಗಗಳ ಸೂಚನಾ ಫಲಕದಲ್ಲಿ ಹಾಗೂ ಕನ್ನಡ ವಿಶ್ವವಿದ್ಯಾಲಯದ ವೆಬ್‌ಸೈಟ್‌ಲ್ಲಿ ಈ ಆದ್ಯತೆಯ ವಿಷಯಗಳನ್ನು ಪ್ರದರ್ಶಿಸುವುದು. ಆದರೆ ಈ ಆದ್ಯತಾ ವಿಷಯಗಳೇ ಅಂತಿಮವೆಂದೇನೂ ಅಲ್ಲ.
 4. ಮಾರ್ಗದರ್ಶಕರು ಮತ್ತು ವಿದ್ಯಾರ್ಥಿಯು ಉತ್ತಮ ವಿಷಯವನ್ನು ಆಯ್ಕೆ ಮಾಡಿ ವಿಶ್ವವಿದ್ಯಾಲಯಕ್ಕೆ ಒಪ್ಪಿಸಿದಲ್ಲಿ ಅದು ಸೂಕ್ತವೆನಿಸಿದರೆ ಅಧ್ಯಯನಕ್ಕೆ ಅವಕಾಶ ನೀಡಲಾಗುವುದು. ವಿಶ್ವವಿದ್ಯಾಲಯದ ವಿಭಾಗಗಳು ವಿಷಯದ ಶೀರ್ಷಿಕೆಗಿಂತ ಆದ್ಯತೆಯ ಕ್ಷೇತ್ರವನ್ನು ಮಾತ್ರ ಸೂಚಿಸುತ್ತವೆ. ಸಂಶೋಧನೆ ಸಾಧ್ಯತೆ ಮತ್ತು ಆದ್ಯತೆ ನೀಡಬಹುದಾದ ಕ್ಷೇತ್ರಗಳ ಆಧಾರದ ಮೇಲೆ ಮೇಲ್ವಿಚಾರಕರು ಮತ್ತು ವಿದ್ಯಾರ್ಥಿಗಳು ಅಧ್ಯಯನವನ್ನು ವಿಸ್ತರಿಸಿಕೊಳ್ಳುವ ಅವಕಾಶಗಳಿರುತ್ತವೆ.


ಕನ್ನಡ ವಿಶ್ವವಿದ್ಯಾಲಯದ ವಿದ್ಯಾರಣ್ಯದಲ್ಲಿ ಎಂ.ಫಿಲ್. ಅಧ್ಯಯನ ಕೈಗೊಳ್ಳುವ ವಿಭಾಗಗಳು, ಪ್ರವೇಶಾರ್ಹತೆ ವಿಷಯ, ಸಹವರ್ತಿ ವಿಷಯಗಳು (Cognate Subjects) ಹಾಗೂ ಪದವಿ ನೀಡುವ ವಿಷಯಗಳು

 

ವಿಭಾಗಗಳು ಅರ್ಹತಾ ವಿಷಯಗಳು ಸಹವರ್ತಿ ವಿಷಯಗಳು ಪದವಿ ನೀಡುವ   ವಿಷಯಗಳು
ಭಾಷಾ ನಿಕಾಯ
ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ ಕನ್ನಡ ವಿಷಯದಲ್ಲಿ ೨ ವರ್ಷಗಳ ಸ್ನಾತಕೋತ್ತರ ಪದವಿ ಆಗಿರಬೇಕು. ಯಾವುದೇ ಭಾಷೆ, ಸಾಹಿತ್ಯ, ಜಾನಪದ, ಚರಿತ್ರೆ,  ಸಮಾಜಶಾಸ್ತ್ರ ಕನ್ನಡ ಸಾಹಿತ್ಯ
ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗ ಕನ್ನಡ ವಿಷಯದಲ್ಲಿ ೨ ವರ್ಷಗಳ ಸ್ನಾತಕೋತ್ತರ ಪದವಿ ಆಗಿರಬೇಕು. ಕನ್ನಡ ಜ್ಞಾನದೊಂದಿಗೆ ಇತರ ದ್ರಾವಿಡಭಾಷೆ ಮತ್ತು ಭಾಷಾವಿಜ್ಞಾನ ಕನ್ನಡ ಸಾಹಿತ್ಯ
ಹಸ್ತಪ್ರತಿಶಾಸ್ತ್ರ ಅಧ್ಯಯನ ವಿಭಾಗ ಕನ್ನಡ ವಿಷಯದಲ್ಲಿ ೨ ವರ್ಷಗಳ ಸ್ನಾತಕೋತ್ತರ ಪದವಿ ಆಗಿರಬೇಕು. ಕನ್ನಡ, ಇಂಗ್ಲೀಷ್, ಜಾನಪದ ಕನ್ನಡ ಸಾಹಿತ್ಯ/ ಹಸ್ತಪ್ರತಿಶಾಸ್ತ್ರ
ಕನ್ನಡ ಭಾಷಾಧ್ಯಯನ ವಿಭಾಗ ಭಾಷಾಶಾಸ್ತ್ರ, ಭಾಷಾವಿಜ್ಞಾನ ವಿಷಯಗಳಲ್ಲಿ ೨ ವರ್ಷಗಳ ಸ್ನಾತಕೋತ್ತರ ಪದವಿ  ಆಗಿರಬೇಕು. ಭಾಷಾಶಾಸ್ತ್ರ, ಭಾಷಾವಿಜ್ಞಾನ ಕನ್ನಡ ಕನ್ನಡ ಭಾಷಾಧ್ಯಯನ/ ಕನ್ನಡ ಸಾಹಿತ್ಯ
ಭಾಷಾಂತರ ಅಧ್ಯಯನ ಕನ್ನಡ, ಇಂಗ್ಲೀಷ್, ಹಿಂದಿ ಹಾಗೂ ಇತರೆ ಭಾಷಾ ವಿಷಯಗಳಲ್ಲಿ ೨ ವರ್ಷಗಳ ಸ್ನಾತಕೋತ್ತರ ಪದವಿ ಆಗಿರಬೇಕು. ಕನ್ನಡ, ಇಂಗ್ಲೀಷ್, ಹಿಂದಿ ಹಾಗೂ ಇತರೆ ಭಾಷಾ ವಿಷಯಗಳು ಕನ್ನಡ ಸಾಹಿತ್ಯ/ ಭಾಷಾಂತರ
ಮಹಿಳಾ ಅಧ್ಯಯನ ವಿಭಾಗ ಮಹಿಳಾ ಅಧ್ಯಯನ, ಕನ್ನಡ ಹಾಗೂ ಮಾನವಿಕ ವಿಷಯಗಳಲ್ಲಿ ೨ ವರ್ಷಗಳ ಸ್ನಾತಕೋತ್ತರ ಪದವಿ ಆಗಿರಬೇಕು. ಮಹಿಳಾ ಅಧ್ಯಯನ, ಕನ್ನಡ ಹಾಗೂ ಮಾನವಿಕ ವಿಷಯಗಳು ಕನ್ನಡ ಸಾಹಿತ್ಯ/ ಮಹಿಳಾ ಅಧ್ಯಯನ
ಕುವೆಂಪು ಕನ್ನಡ ಅಧ್ಯಯನ ಕೇಂದ್ರ ಕುಪ್ಪಳಿ ಕನ್ನಡ ವಿಷಯದಲ್ಲಿ ೨ ವರ್ಷಗಳ ಸ್ನಾತಕೋತ್ತರ ಪದವಿ ಆಗಿರಬೇಕು. ಕನ್ನಡ ಕನ್ನಡ ಸಾಹಿತ್ಯ
ಅಂತರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ ಕೂಡಲಸಂಗಮ ಕನ್ನಡ ವಿಷಯದಲ್ಲಿ ೨ ವರ್ಷಗಳ ಸ್ನಾತಕೋತ್ತರ ಪದವಿ ಆಗಿರಬೇಕು. ಕನ್ನಡ ಮತ್ತು ಇಂಗ್ಲೀಷ್ ಕನ್ನಡ ಸಾಹಿತ್ಯ
ಸಮಾಜವಿಜ್ಞಾನಗಳ ನಿಕಾಯ
ಚರಿತ್ರೆ ವಿಭಾಗ ಚರಿತ್ರೆ ಮತ್ತು ಪುರಾತತ್ವ ವಿಷಯಗಳಲ್ಲಿ ೨ ವರ್ಷಗಳ ಸ್ನಾತಕೋತ್ತರ ಪದವಿ  ಆಗಿರಬೇಕು. ಚರಿತ್ರೆ, ಪುರಾತತ್ವ, ಸಮಾಜಶಾಸ್ತ್ರ ಜಾನಪದ, ಕನ್ನಡ ಚರಿತ್ರೆ
ಬುಡಕಟ್ಟು ಅಧ್ಯಯನ ವಿಭಾಗ ಕನ್ನಡ, ಜಾನಪದ ಹಾಗೂ ಸಮಾಜಶಾಸ್ತ್ರದಲ್ಲಿ ೨ ವರ್ಷಗಳ ಸ್ನಾತಕೋತ್ತರ  ಪದವಿ ಆಗಿರಬೇಕು. ಕನ್ನಡ, ಜಾನಪದ, ಸಮಾಜಶಾಸ್ತ್ರ ಸಮಾಜಕಾರ್ಯ ಹಾಗೂ ಮಾನವಶಾಸ್ತ್ರ ಕನ್ನಡ/ಜಾನಪದ ಸಮಾಜಶಾಸ್ತ್ರ
ಪ್ರಾಚೀನ ಇತಿಹಾಸ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ ಚರಿತ್ರೆ ಹಾಗೂ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯಗಳಲ್ಲಿ ೨ ವರ್ಷಗಳ  ಸ್ನಾತಕೋತ್ತರ ಪದವಿ  ಆಗಿರಬೇಕು. ಚರಿತ್ರೆ ಹಾಗೂ ಪ್ರಾಚೀನ  ಇತಿಹಾಸ ಮತ್ತು ಪುರಾತತ್ವ ಪ್ರಾಚೀನ ಇತಿಹಾಸ   ಮತ್ತು ಪುರಾತತ್ವ
ಜಾನಪದ ಅಧ್ಯಯನ ವಿಭಾಗ ಜಾನಪದ ವಿಷಯದಲ್ಲಿ ೨ ವರ್ಷಗಳ ಸ್ನಾತಕೋತ್ತರ ಪದವಿ ಆಗಿರಬೇಕು. ಜಾನಪದ, ಕನ್ನಡ, ಸಮಾಜಶಾಸ್ತ್ರ ಮನಶಾಸ್ತ್ರ, ಅರ್ಥಶಾಸ್ತ್ರ ಜಾನಪದ/ಕನ್ನಡ
ಶಾಸನಶಾಸ್ತ್ರ ವಿಭಾಗ ಇತಿಹಾಸ ಕನ್ನಡ, ಚರಿತ್ರೆ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯಗಳಲ್ಲಿ ೨ ವರ್ಷಗಳ ಸ್ನಾತಕೋತ್ತರ ಪದವಿ  ಆಗಿರಬೇಕು. ಕನ್ನಡ, ಚರಿತ್ರೆ, ಪ್ರಾಚೀನ  ಮತ್ತು ಪುರಾತತ್ವ ಕನ್ನಡ/ಚರಿತ್ರೆ/ಪ್ರಾಚೀನ ಇತಿಹಾಸ ಮತ್ತು ಪುರಾತತ್ವ  ಅಧ್ಯಯನ/ಶಾಸನಶಾಸ್ತ್ರ
ಅಭಿವೃದ್ಧಿ ಅಧ್ಯಯನ ವಿಭಾಗ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಸಮಾಜಶಾಸ್ತ್ರ, ವಾಣಿಜ್ಯಶಾಸ್ತ್ರ ವಿಷಯಗಳಲ್ಲಿ ೨ ವರ್ಷಗಳ ಸ್ನಾತಕೋತ್ತರ ಪದವಿ  ಆಗಿರಬೇಕು. ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಸಮಾಜಶಾಸ್ತ್ರ, ಗ್ರಾಮೀಣಾಭಿವೃದ್ಧಿ, ವಾಣಿಜ್ಯಶಾಸ್ತ್ರ ಅರ್ಥಶಾಸ್ತ್ರ/ಸಮಾಜಶಾಸ್ತ್ರ ರಾಜ್ಯಶಾಸ್ತ್ರ/ವಾಣಿಜ್ಯಶಾಸ್ತ್ರ.
ಮಾನವಶಾಸ್ತ್ರ ವಿಭಾಗ ಮಾನವಶಾಸ್ತ್ರ, ಸಮಾಜಶಾಸ್ತ್ರ ವಿಷಯಗಳಲ್ಲಿ ೨ ವರ್ಷಗಳ ಸ್ನಾತಕೋತ್ತರ ಪದವಿ   ಆಗಿರಬೇಕು. ಜಾನಪದ, ಮಾನವಶಾಸ್ತ್ರ, ಸಮಾಜಶಾಸ್ತ್ರ ಮಾನವಶಾಸ್ತ್ರ/ ಸಮಾಜಶಾಸ್ತ್ರ
ಲಲಿತಕಲೆಗಳ ನಿಕಾಯ
ದೃಶ್ಯಕಲೆ ವಿಭಾಗ ಎಂ.ಎಫ್.ಎ. (ಮಾಸ್ಟರ್ ಆಫ್ ಫೈನ್ ಆರ್ಟ್ಸ್) ಎಂ.ವಿ.ಎ.   (ಮಾಸ್ಟರ್ ಆಫ್ ವಿಜ್ಯುವಲ್ ಆರ್ಟ್ಸ್) ಎಂ.ಎ. ಚಿತ್ರಕಲೆ ವಿಷಯಗಳಲ್ಲಿ  ೨ ವರ್ಷಗಳ ಸ್ನಾತಕೋತ್ತರ  ಪದವಿ ಆಗಿರಬೇಕು. ಇತಿಹಾಸ, ಚರಿತ್ರೆ, ಪುರಾತತ್ವ ಕನ್ನಡ ಸಾಹಿತ್ಯ, ಜಾನಪದ ದೃಶ್ಯಕಲೆ

 

ವಿದ್ಯಾರ್ಥಿಯು ತನ್ನ ಸ್ನಾತಕೋತ್ತರ ಪದವಿಯನ್ನು ಯಾವುದೇ ವಿಷಯದಲ್ಲಿ ಪಡೆದಿದ್ದರೂ, ಎಂ.ಫಿಲ್. ಅಂಕಪಟ್ಟಿ, ಪ್ರಮಾಣ ಪತ್ರ, ಅಧಿಸೂಚನೆಗಳಲ್ಲಿ ಮಾತ್ರ ವಿದ್ಯಾರ್ಥಿಯು ಎಂ.ಫಿಲ್. ಅಧ್ಯಯನಕ್ಕೆ ಪ್ರವೇಶ ಪಡೆದಿರುವ ವಿಭಾಗದ ವಿಷಯವನ್ನು ಮಾತ್ರ ನಮೂದಿಸಲಾಗುವುದು.

೫. ನೋಂದಣಿ

 1. ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾದ ಮೇಲೆ ವಿದ್ಯಾರ್ಥಿಯು ನೋಂದಣಿ ಶುಲ್ಕವನ್ನು ಪಾವತಿಸಿ ಪ್ರವೇಶವನ್ನು ಸ್ಥಿರೀಕರಿಸಿಕೊಳ್ಳಬೇಕು ಮತ್ತು ವಾರ್ಷಿಕ ಶಿಕ್ಷಣದ ಶುಲ್ಕವನ್ನು ವಿಶ್ವವಿದ್ಯಾಲಯಕ್ಕೆ ಪಾವತಿಸಬೇಕು.
 2. ಅಧ್ಯಯನಕ್ಕೆ ಆಯ್ಕೆಯಾದವರು ತಮ್ಮ ಮಾರ್ಗದರ್ಶಕರನ್ನು ಆಯ್ದುಕೊಂಡು ಎಂ.ಫಿಲ್ ಪ್ರಬಂಧದ ಶೀರ್ಷಿಕೆಯನ್ನು ಪ್ರಸ್ತಾವದೊಂದಿಗೆ ನೋಂದಣಿಗೆ ಸಲ್ಲಿಸಬೇಕು. ಎಂ.ಫಿಲ್ ಪ್ರಬಂಧದ ಪ್ರಕರಣಗಳನ್ನು ವಿಭಜಿಸಿ ವಿವರವಾದ ಸಾರಲೇಖವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.

೬. ಎಂ.ಫಿಲ್ ಅಧ್ಯಯನ ಸಮಿತಿ

 1. ಆಯಾ ನಿಕಾಯ/ವಿಭಾಗಗಳಿಗನುಗುಣವಾಗಿ ಎಂ.ಫಿಲ್. ಅಧ್ಯಯನ ಸಮಿತಿಯು ಕೆಳಕಂಡಂತೆ ಇರುತ್ತದೆ.

೧. ನಿಕಾಯದ ಡೀನ್                                              ಅಧ್ಯಕ್ಷರು

೨. ವಿಭಾಗದಲ್ಲಿರುವ ಎಲ್ಲ ಎಂ.ಫಿಲ್ ಮಾರ್ಗದರ್ಶಕರು           ಸದಸ್ಯರು

೩. ವಿಭಾಗದ ಮುಖ್ಯಸ್ಥರು                                         ಸದಸ್ಯ ಸಂಚಾಲಕರು

ಒಂದು ವೇಳೆ ನಿಕಾಯದ ಡೀನ್ ಇಲ್ಲದ ಸಂದರ್ಭದಲ್ಲಿ ಆ ವಿಭಾಗದ ಮುಖ್ಯಸ್ಥರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ.

 1. ಎಂ.ಫಿಲ್ ಅಧ್ಯಯನ ಸಮಿತಿಯ ಕಾರ್ಯಗಳು

೧. ಎಂ.ಫಿಲ್. ಪ್ರವೇಶ ಪರೀಕ್ಷೆ ಪ್ರಕ್ರಿಯೆಯಲ್ಲಿ ಭಾಗವಹಿಸುವುದು.

೨.  ಎಂ.ಫಿಲ್.ಗೆ ನೋಂದಣಿಯಾದ ಆರು ತಿಂಗಳ ಒಳಗೆ ನಿರ್ದಿಷ್ಟ ಶೀರ್ಷಿಕೆ ಮತ್ತು ಎಂ.ಫಿಲ್. ಅಧ್ಯಯನ ಪ್ರಬಂಧದ ವ್ಯಾಪ್ತಿ ಹಾಗೂ ಮೇಲ್ವಿಚಾರಕರ ಹೆಸರುಗಳನ್ನು ಖಚಿತಮಾಡಿಕೊಳ್ಳಬೇಕು.

ವಿಭಾಗದ ಸದಸ್ಯರನ್ನೊಳಗೊಂಡ ಸಮಿತಿಯು ಹಾಗೆ ನಿಚ್ಚಳಪಡಿಸಿಕೊಂಡ ವಿಷಯವನ್ನು ಮತ್ತೊಮ್ಮೆ ಪರಿಶೀಲಿಸಿ ಅಂತಿಮವಾಗಿ ಅಧಿಕೃತಗೊಳಿಸಬೇಕು.

೩. ಮೇಲ್ವಿಚಾರಕರ ಬದಲಾವಣೆಗೆ ಅಥವಾ ವಿಭಾಗಗಳ ಬದಲಾವಣೆಗೆ ಸಕಾರಣವಾಗಿದ್ದ ಪಕ್ಷದಲ್ಲಿ ಅನುಮತಿ ನೀಡುವುದು.

೪. ಮೇಲ್ವಿಚಾರಕರ ಮಾನ್ಯತೆಗೆ ಶಿಫಾರಸ್ಸು ಮಾಡುವುದು.

೫. ಮಾರ್ಗದರ್ಶಕರು ಶಿಫಾರಸ್ಸು ಮಾಡಿದರೆ ಶೀರ್ಷಿಕೆಯ ಬದಲಾವಣೆಗೆ ಪರಿಶೀಲಿಸಿ ಅನುಮತಿ ನೀಡುವುದು.

೬. ಎಂ.ಫಿಲ್ ಅಧ್ಯಯನಕ್ಕೆ ಸಂಬಂಧಿಸಿದಂತೆ ಕಾಲಕಾಲಕ್ಕೆ ವಿಶ್ವವಿದ್ಯಾಲಯವು ವಹಿಸುವ ಇತರೆ ಜವಾಬ್ದಾರಿಗಳನ್ನು ನಿರ್ವಹಿಸುವುದು.

೭. ಅಧ್ಯಯನದ ಅವಧಿ

 1. ಎಂ.ಫಿಲ್. ಅಧ್ಯಯನವು ಹತ್ತು ತಿಂಗಳ ಕೋರ್ಸ್ ಆಗಿರುತ್ತದೆ. ಇದರ ಮೊದಲ ನಾಲ್ಕು ತಿಂಗಳು ಬೋಧನಾ ಕಾರ್ಯಕ್ಕೆ ಮೀಸಲಾಗಿರುತ್ತದೆ. ನಂತರದ ಆರು ತಿಂಗಳು ಎಂ.ಫಿಲ್. ಅಧ್ಯಯನ ಪ್ರಬಂಧದ ಸಿದ್ಧತೆಗೆ ಮೀಸಲಾಗಿರುತ್ತದೆ. ಈ ಕೋರ್ಸ್‌ನ ಅವಧಿಯಲ್ಲಿ ವಿದ್ಯಾರ್ಥಿಯು ಕಂಪ್ಯೂಟರ್ ಜ್ಞಾನವನ್ನು ಪಡೆದುಕೊಳ್ಳುವುದು ಅವಶ್ಯ. ಪೂರ್ತಿ ಕೋರ್ಸ್ ಮುಗಿಯುವವರೆಗೆ ವಿದ್ಯಾರ್ಥಿಯು ಸಂಬಂಧಿಸಿದ ವಿಭಾಗದಲ್ಲಿ ಖಾಯಂ ಹಾಜರಾಗಿರುವುದು ಕಡ್ಡಾಯ. ಸಂಬಂಧಿಸಿದ ಪ್ರತಿ ವಿಷಯಕ್ಕೆ ಶೇ. ೮೦% ಹಾಜರಿ ಕಡ್ಡಾಯ. ಕ್ಷೇತ್ರಕಾರ್ಯಕ್ಕೆ ಗರಿಷ್ಠ ೩೦ ದಿನಗಳು ಮಾತ್ರ. ಲಿಖಿತ ಪರೀಕ್ಷೆಯ ನಂತರ ಪೂರ್ವಾನುಮತಿ ಪಡೆದು ಕ್ಷೇತ್ರಕಾರ್ಯಕ್ಕೆ ಹೋಗಬೇಕು.
 2. ಅಧ್ಯಯನ ಕ್ರಮ : ಪಠ್ಯಕ್ರಮದಲ್ಲಿ ಐದು ಪತ್ರಿಕೆಗಳಿರುತ್ತವೆ. ಪ್ರತಿ ಪತ್ರಿಕೆಗೂ ಗರಿಷ್ಠ ೧೦೦ ಅಂಕಗಳು. ಮೊದಲ ನಾಲ್ಕು ಪತ್ರಿಕೆಗಳಲ್ಲಿ ೮೦ ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ೨೦ ಅಂಕಗಳು ಆಂತರಿಕ ಮೌಲ್ಯಮಾಪನಕ್ಕಾಗಿ ಇರುತ್ತದೆ. ಐದನೇ ಪತ್ರಿಕೆಯು ಎಂ.ಫಿಲ್. ಅಧ್ಯಯನ ಪ್ರಬಂಧದ ರಚನೆಗೆ ಸಂಬಂಧಿಸಿರುತ್ತದೆ. ಈ ಅಧ್ಯಯನ ಪ್ರಬಂಧ ರಚನೆಗೆ ೧೦೦ ಅಂಕಗಳಿರುತ್ತವೆ.

ಉತ್ತರ ಪತ್ರಿಕೆಗಳನ್ನು ಒಳಗಿನ ಮತ್ತು ಹೊರಗಿನ ಇಬ್ಬರು ಮೌಲ್ಯಮಾಪಕರು ಮೌಲ್ಯಮಾಪನ ಮಾಡಬೇಕು. ಯಾವುದೇ ಸಿದ್ಧಾಂತ ಪತ್ರಿಕೆಯಲ್ಲಿ ಆಂತರಿಕ ಮತ್ತು ಬಾಹ್ಯ ಮೌಲ್ಯಮಾಪನದ ಕ್ರಮ ವ್ಯತ್ಯಾಸವಾಗಿ ೧೬ ಅಥವಾ ೧೬ ಅಂಕಗಳಿಗಿಂತ ಹೆಚ್ಚು ಬಂದಿದ್ದರೆ ಮೂರನೇ ಮೌಲ್ಯಮಾಪಕರಿಂದ ಮೌಲ್ಯಮಾಪನ ಮಾಡಿಸಬೇಕು. ಈ ಮೌಲ್ಯಮಾಪನವೇ ಅಂತಿಮವಾಗಿರುತ್ತದೆ.

ಪ್ರತಿ ಪತ್ರಿಕೆಯಲ್ಲಿ ಶೇ. ೫೦% ಅಂಕಗಳನ್ನು ಪಡೆಯಬೇಕು. ಒಟ್ಟಾರೆ ಸರಾಸರಿ ಕನಿಷ್ಠ ಶೇ.೫೫ ಅಂಕಗಳನ್ನು ಪಡೆಯಬೇಕು. ಅಧ್ಯಯನ ಪ್ರಬಂಧವು ಸೇರಿದಂತೆ ಸಂಬಂಧಿಸಿದ ಯಾವುದೇ ಒಂದು ಪತ್ರಿಕೆಯಲ್ಲಿ ಅನುತ್ತೀರ್ಣರಾಗಿದ್ದರೆ ಗರಿಷ್ಠ ಮೂರು ಅಂಕಗಳನ್ನು ಕೃಪಾಂಕವಾಗಿ ನೀಡಬಹುದಾಗಿದೆ. ಈ ಕೃಪಾಂಕವನ್ನು ಹೆಚ್ಚಾಗಿ ಅಂಕ ಬಂದಿರುವ ಯಾವುದೇ ಒಂದು ಪತ್ರಿಕೆಯಿಂದ ಮಾತ್ರ ಕಡಿತಗೊಳಿಸಬೇಕು. ಯಾವುದೇ ಪತ್ರಿಕೆಗಳಲ್ಲಿ ಹೆಚ್ಚುವರಿ ಅಂಕಗಳು ಬಂದಿಲ್ಲದಿದ್ದಲ್ಲಿ ಒಂದು ಅಂಕವನ್ನು ಮಾತ್ರ ಉತ್ತೀರ್ಣರಾಗಲು ಸಾಧ್ಯವಾಗುವಂತೆ ಕೃಪಾಂಕವಾಗಿ ನೀಡಬಹುದಾಗಿದೆ. ಕೃಪಾಂಕ ಸೌಲಭ್ಯವು ಮೊದಲ ಸಾರಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಹಾಗೂ ಮೊದಲ ಸಾರಿ ಪ್ರಬಂಧ ಸಲ್ಲಿಸುವವರಿಗೆ ಮಾತ್ರ ಅನ್ವಯಿಸುತ್ತದೆ. ಮರುಪರೀಕ್ಷೆ ಮತ್ತು ಪ್ರಬಂಧ ಮರುಸಲ್ಲಿಕೆಗೆ ಸಂಬಂಧಿಸಿದ ಸಂದರ್ಭದಲ್ಲಿ ಕೃಪಾಂಕಗಳ ಸೌಲಭ್ಯ ನೀಡಲು ಬರುವುದಿಲ್ಲ. ವಿದ್ಯಾರ್ಥಿ ಅನುತ್ತೀರ್ಣರಾದಲ್ಲಿ ಫಲಿತಾಂಶ ಘೋಷಿತವಾದ ಒಂದು ತಿಂಗಳೊಳಗೆ ಅನುತ್ತೀರ್ಣ ಪತ್ರಿಕೆಯಲ್ಲಿ ಮರುಪರೀಕ್ಷೆ ಬರೆಯಬೇಕು. ಮರುಪರೀಕ್ಷೆಯಲ್ಲಿಯೂ ವಿದ್ಯಾರ್ಥಿಯು ಅನುತ್ತೀರ್ಣವಾದರೆ ನಿಬಂಧ ರಚನೆಗೆ ಅವಕಾಶ ನೀಡುವುದಿಲ್ಲ. ಅವರು ಎಂ.ಫಿಲ್ ಅಧ್ಯಯನದಿಂದ ಹೊರಗುಳಿಯುತ್ತಾರೆ. ಪರೀಕ್ಷೆಯ ಶುಲ್ಕ ಕಟ್ಟಿ ಕಾರಣಾಂತರಗಳಿಂದ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಮರುಪರೀಕ್ಷೆಗೆ ಅವಕಾಶವಿಲ್ಲ.

೮.  ಎಂ.ಫಿಲ್ ಅಧ್ಯಯನದ ಮಾರ್ಗದರ್ಶಕರು

ಎಂ.ಫಿಲ್. ಅಧ್ಯಯನಕ್ಕೆ ಮಾರ್ಗದರ್ಶಕರನ್ನು ಮಾನ್ಯ ಮಾಡಲು ಕೆಲವು ಮಾನದಂಡಗಳನ್ನು ಯು.ಜಿ.ಸಿ ನಿಯಮಾನುಸಾರ ರೂಪಿಸಬೇಕು. ಆದಾಗ್ಯೂ ಆಯಾ ವಿಶ್ವವಿದ್ಯಾಲಯಗಳು ವಿಶೇಷ ಸಂದರ್ಭದಲ್ಲಿ ಕುಲಪತಿಗಳ ಅನುಮೋದನೆಯೊಂದಿಗೆ ಸೂಕ್ತ ರೀತಿಯಲ್ಲಿ ಮಾನದಂಡಗಳನ್ನು ಮಾರ್ಪಡಿಸಿಕೊಳ್ಳಬಹುದಾಗಿದೆ.

ಅರ್ಹತೆ

೧.   ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಪಿಎಚ್.ಡಿ. ಪಡೆದ ಪ್ರವಾಚಕರು ಮತ್ತು  ಪಿಎಚ್.ಡಿ. ಪಡೆದು ಐದು ವರ್ಷಗಳ ಕಾಲ ಬೋಧನ ಅನುಭವ ಪಡೆದ ಖಾಯಂ ಅಧ್ಯಾಪಕರು ಎಂ.ಫಿಲ್ ಅಧ್ಯಯನಕ್ಕೆ ಮೇಲ್ವಿಚಾರಕರಾಗಲು ಅರ್ಹರಾಗಿರುತ್ತಾರೆ. ಮಾರ್ಗದರ್ಶಕರಾಗುವ ವಿದ್ವಾಂಸರು ಪಿಎಚ್.ಡಿ. ನಂತರದ ಸಂಶೋಧನೆ, ಬೋಧನೆ ಮತ್ತು ಪ್ರಕಟಣೆಯಲ್ಲಿ ನಿರಂತರ ತೊಡಗಿರುವುದು ಅವಶ್ಯ. ವಿಶೇಷ ಸಂದರ್ಭದಲ್ಲಿ ಮಾರ್ಗದರ್ಶಕರನ್ನು ನಿರ್ಧರಿಸುವ ಅಧಿಕಾರ ಕುಲಪತಿಯವರಿಗಿರುತ್ತದೆ.

೨.  ಯಾವುದಾದರೂ ವಿಭಾಗಕ್ಕೆ ಎಂ.ಫಿಲ್ ಅಧ್ಯಯನಕ್ಕೆ ಅರ್ಜಿಗಳು ಹೆಚ್ಚಿಗೆ ಬಂದ ಸಂದರ್ಭದಲ್ಲಿ ಆ ವಿಭಾಗವು ಎಂ.ಫಿಲ್ ವಿದ್ಯಾರ್ಥಿ ಇಲ್ಲದೆ ಇರುವ ಬೇರೆ ವಿಭಾಗದ ಅಧ್ಯಾಪಕರನ್ನು ಹೆಚ್ಚುವರಿ ವಿದ್ಯಾರ್ಥಿಗಳಲ್ಲಿ ಆಯ್ಕೆಯಾದ ಎಂ.ಫಿಲ್ ವಿದ್ಯಾರ್ಥಿಗೆ ಮಾರ್ಗದರ್ಶಕರನ್ನಾಗಿ ಆಹ್ವಾನಿಸಬಹುದು. ಅಂದರೆ ಬೇರೆ ವಿಭಾಗದ ಅಧ್ಯಾಪಕರನ್ನು ತಮ್ಮ ವಿಭಾಗದ ಮಾರ್ಗದರ್ಶಕರನ್ನಾಗಿ ಪರಿಗಣಿಸಬಹುದು. ಆದರೆ ಇವರಿಗೆ ನಿಗದಿತ ಸೀಟುಗಳಿಗಿಂತ ಹೆಚ್ಚುವರಿ ಸೀಟುಗಳಿಗೆ ಅವಕಾಶವಿಲ್ಲ. ವಿಭಾಗದ ಮುಖ್ಯಸ್ಥರು ಮತ್ತು ನಿಕಾಯದ ಡೀನ್ ಸೇರಿ ಎಂ.ಫಿಲ್ ಅಧ್ಯಯನ ಪದವಿಯ ಮೀಸಲಾತಿ ನಿಯಮವನ್ನು ನಿರ್ಧರಿಸಬೇಕು. ಮಾರ್ಗದರ್ಶಕರ ಮತ್ತು ವಿದ್ಯಾರ್ಥಿಯ ವಿಷಯಗಳೆರಡನ್ನು ನಿಶ್ಚಯ ಮಾಡುವ ಸಂದರ್ಭದಲ್ಲಿ ನಿಕಾಯದ ಡೀನ್, ಅಧ್ಯಯನಾಂಗದ ನಿರ್ದೇಶಕರು ಮತ್ತು ವಿಭಾಗದ ಮುಖ್ಯಸ್ಥರು ಸಮಾಲೋಚಿಸಿ ನಿಗದಿಪಡಿಸಬೇಕು.

೯. ವಿಷಯ ಮತ್ತು ಅಭ್ಯರ್ಥಿಗಳ ಹಂಚಿಕೆ

 1. ಕನ್ನಡ ವಿಶ್ವವಿದ್ಯಾಲಯದ ಒಳಗಿನ ಯಾವ ಯಾವ ವಿಭಾಗಗಳಲ್ಲಿ ಯಾವ ಯಾವ ವಿಷಯಗಳಿಗೆ ಮೇಲ್ವಿಚಾರಕರಾಗಲು ಯಾವ ಅಧ್ಯಾಪಕರ ಲಭ್ಯತೆ ಇದೆಯೋ ಹಾಗೂ ಯಾರಲ್ಲಿ ವಿದ್ಯಾರ್ಥಿಗಳನ್ನು ತುಂಬಿಕೊಳ್ಳಲು ಸ್ಥಾನಗಳಿವೆಯೋ ಅಂಥ ಕಡೆ ಮಾತ್ರ ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ. ಸಂದರ್ಶನದಲ್ಲಿ ವಿದ್ಯಾರ್ಥಿಯು ವ್ಯಕ್ತಪಡಿಸಿದ ಆಸಕ್ತ ವಿಷಯಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ವಿಷಯ ಪರಿಣಿತರ ಮೇರೆಗೆ ಸೀಟು ಹಂಚಿಕೆಯಾಗಬೇಕು.
 2. ಕನ್ನಡ ವಿಶ್ವವಿದ್ಯಾಲಯದ ಮೇಲ್ವಿಚಾರಕರಿಗೆ ಯಾವುದೇ ಸಂದರ್ಭದಲ್ಲೂ ಎಂ.ಫಿಲ್‌ಗೆ ಗರಿಷ್ಠ ೫ ಜನ ವಿದ್ಯಾರ್ಥಿಗಳಿಗೆ ಮಾತ್ರ ಮಾರ್ಗದರ್ಶನ ಮಾಡಲು ಅವಕಾಶವಿರುತ್ತದೆ. ಇವರಲ್ಲಿ ಒಬ್ಬರು ಮಹಿಳೆ, ಒಬ್ಬರು ಪ.ಜಾ/ಪ.ಪಂ., ಒಬ್ಬರು ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಯಾಗಿರಬೇಕು. ಸಾಮಾನ್ಯ ವಿದ್ಯಾರ್ಥಿಗಳ ಸಂಖ್ಯೆ ಶೇ.೫೦ಕ್ಕಿಂತ ಹೆಚ್ಚಿರಬಾರದು.

೧೦. ಎಂ.ಫಿಲ್. ಅಧ್ಯಯನ ಪ್ರಬಂಧದ ಸಲ್ಲಿಕೆ

 1. ನಿರ್ದಿಷ್ಟ ಸಮಯದಲ್ಲಿ ವಿದ್ಯಾರ್ಥಿಯು ಎಂ.ಫಿಲ್. ಅಧ್ಯಯನದ ಮೇಲ್ವಿಚಾರಕರ ಮಾರ್ಗದರ್ಶನದಲ್ಲಿ ಪೂರ್ಣ ಪ್ರಮಾಣದ ಎಂ.ಫಿಲ್. ಅಧ್ಯಯನ ಪ್ರಬಂಧವನ್ನು ಸಲ್ಲಿಸುವುದು ಪ್ರಮುಖ ಶರತ್ತಾಗಿದೆ.
 2. ಆಯಾ ವಿದ್ಯಾರ್ಥಿಗಳು ತಮ್ಮ ಅಧ್ಯಯನ ಅವಧಿ ಮುಗಿಯುವ ಎರಡು ತಿಂಗಳು ಮೊದಲು ತಮ್ಮ ಎಂ.ಫಿಲ್ ಅಧ್ಯಯನ ವಿಷಯಕ್ಕೆ ಸಂಬಂಧಿಸಿದ ಪ್ರಬಂಧದ ಕರಡು ಪ್ರತಿಯೊಂದನ್ನು ತಯಾರಿಸಬೇಕು. ಅಂತ ಕರಡನ್ನು ಆಯಾ ವಿಭಾಗ ಸಮಿತಿ ಸದಸ್ಯರ ಎದುರಿಗೆ ಮಂಡಿಸಬೇಕು. ಅವರು ನೀಡುವ ಉಪಯುಕ್ತ ಸಲಹೆ ಸೂಚನೆಗಳನ್ನು ಪ್ರಬಂಧದಲ್ಲಿ ಅಳವಡಿಸಬೇಕು.
 3. ಅಧ್ಯಯನ ಪ್ರಬಂಧದ ಐದು ಪ್ರತಿಗಳನ್ನು ಡಿ.ಟಿ.ಪಿ. ರೂಪದಲ್ಲಿ ಮೇಲ್ವಿಚಾರಕರ ದೃಢೀಕರಣ ಪತ್ರದೊಂದಿಗೆ ಮುಖ್ಯಸ್ಥರ ಮೂಲಕ ಅಧ್ಯಯನಾಂಗಕ್ಕೆ ಸಲ್ಲಿಸಬೇಕು. ಜೊತೆಗೆ ಅಂತಿಮ ಸಾರಲೇಖ ಹಾಗೂ ಎಂ.ಫಿಲ್. ಅಧ್ಯಯನ ಪ್ರಬಂಧದ ಸಾಫ್ಟ್ ಕಾಪಿಯನ್ನು ಸಿ.ಡಿ.ರೂಪದಲ್ಲಿ ಕಡ್ಡಾಯವಾಗಿ ಅಧ್ಯಯನಾಂಗಕ್ಕೆ ಸಲ್ಲಿಸಬೇಕು. ಮೇಲ್ವಿಚಾರಕರು ಬೇರೆ ನಿಕಾಯದ ಬೇರೆ ವಿಭಾಗದವರಾಗಿದ್ದರೂ ಯಾವ ನಿಕಾಯದ ಯಾವ ವಿಭಾಗದಲ್ಲಿ ವಿದ್ಯಾರ್ಥಿಯ ನೋಂದಣಿಯಾಗಿರುತ್ತದೋ ಅಲ್ಲಿಗೇ ಆ ವಿದ್ಯಾರ್ಥಿಯು ತನ್ನ ಎಂ.ಫಿಲ್ ಪ್ರಬಂಧವನ್ನು ಸಲ್ಲಿಸಬೇಕು.
 4. ಅನಿವಾರ್ಯ ಕಾರಣಗಳಿಂದಾಗಿ ನಿಗದಿತ ವರ್ಷದಲ್ಲಿ ವಿದ್ಯಾರ್ಥಿಗೆ ಪ್ರಬಂಧ ಸಲ್ಲಿಸಲು ಆಗದಿದ್ದಲ್ಲಿ ಮುಂದಿನ ವರ್ಷ ಪ್ರಬಂಧ ಸಲ್ಲಿಕೆಗೆ ಒಂದು ಬಾರಿ ಮಾತ್ರ ಅವಕಾಶವಿರುತ್ತದೆ. ನಂತರ ಇದು ಅನ್ವಯಿಸುವುದಿಲ್ಲ. ವಿಳಂಬಕ್ಕೆ ಸರಿಯಾದ ಕಾರಣ ನೀಡುವುದು ಸೂಕ್ತ.
 5. ಅಧ್ಯಯನ ಪ್ರಬಂಧದ ವಿನ್ಯಾಸ: ಎಂ.ಫಿಲ್. ಅಧ್ಯಯನ ಪ್ರಬಂಧವು ಎ೪ ಆಕಾರದಲ್ಲಿರಬೇಕು. ನುಡಿ ೧೪ ಪಾಯಿಂಟ್ ಅಕ್ಷರಗಳು ಮತ್ತು ಪ್ರತಿ ಪುಟಕ್ಕೆ ಕನಿಷ್ಟ ೩೦ ಸಾಲುಗಳು ಇರಬೇಕು. ೨೩ ಸೆಂ.ಮೀ. ಉದ್ದ, ೧೩ ಸೆಂ.ಮೀ ಅಗಲದಲ್ಲಿ ಡಿ.ಟಿ.ಪಿ. ಮಾಡಿರಬೇಕು. ೬೦ ರಿಂದ ೮೦ ಪುಟಗಳು ಇರಬೇಕು. ಅರಿಕೆ, ಅರ್ಪಣೆ, ಕೃತಜ್ಞತೆ ಪುಟಗಳು ಇರಕೂಡದು. ಅಡಿಟಿಪ್ಪಣಿಗಳು, ಪರಾಮರ್ಶನ ಗ್ರಂಥಗಳು ಇತ್ಯಾದಿ ಅಧ್ಯಯನಕ್ಕೆ ಪೂರಕವಾದ ಅನುಬಂಧಗಳು ಇರಬೇಕು. ವಿದ್ಯಾರ್ಥಿ ಮತ್ತು ಮೇಲ್ವಿಚಾರಕರ ಪ್ರಮಾಣ ಪತ್ರಗಳ ನಂತರ ಪರಿವಿಡಿ ಇರಬೇಕು. ಕನ್ನಡ ವಿಶ್ವವಿದ್ಯಾಲಯದ ಇಂಥ ನಿಕಾಯದ ಇಂಥ ವಿಭಾಗಕ್ಕೆ ಎಂ.ಫಿಲ್ ಅಧ್ಯಯನಕ್ಕಾಗಿ ಸಲ್ಲಿಸಿದ ಪ್ರಬಂಧ ಎಂದು ನಮೂದಿಸಿರಬೇಕು

೧೧. ಎಂ.ಫಿಲ್. ಅಧ್ಯಯನ ಪ್ರಬಂಧದ ಭಾಷೆ

ವಿದ್ಯಾರ್ಥಿಯು ಎಂ.ಫಿಲ್ ನಿಬಂಧವನ್ನು ಕನ್ನಡದಲ್ಲಿಯೇ ಬರೆಯಬೇಕು.

೧೨. ಅಧ್ಯಯನ ಪ್ರಬಂಧದ ಮೌಲ್ಯಮಾಪನ

ಎಂ.ಫಿಲ್ ಮೌಲ್ಯಮಾಪನವನ್ನು ಕೇಂದ್ರ ಮೌಲ್ಯಮಾಪನ ಪದ್ಧತಿಯನ್ವಯ ನಡೆಸಲಾಗುತ್ತದೆ. ವಿಶ್ವವಿದ್ಯಾಲಯದ ಆವರಣದ ಒಳಗಿರುವ ವಿಭಾಗಗಳ ಅಧ್ಯಯನ ಪ್ರಬಂಧಗಳಿಗೆ ಸಂಬಂಧಿಸಿ ಆಯಾ ವಿಭಾಗಗಳ ಅಧ್ಯಾಪಕರು ಮತ್ತು ಪರೀಕ್ಷಾ ಮಂಡಳಿ ಸದಸ್ಯರೊಬ್ಬರಿಂದ ಒಂದು ನಿಬಂಧವನ್ನು ಎರಡು ಮೌಲ್ಯಮಾಪನ ಮಾಡಿಸಬೇಕು. ಪರೀಕ್ಷಾ ಮಂಡಳಿ ಅಧ್ಯಕ್ಷರಿಂದ ಎರಡೂ ಮೌಲ್ಯಮಾಪನದ ಅಂಕಗಳನ್ನು ಹಾಗೂ ಮಾರ್ಗದರ್ಶಕರ ಮೌಲ್ಯಮಾಪನ ಅಂಕಗಳನ್ನು ಕ್ರೋಢಿಕರಿಸಿ ಸರಾಸರಿ ತೆಗೆದು ಅಧ್ಯಯನಾಂಗಕ್ಕೆ ಸಲ್ಲಿಸುವುದು.

೧೩. ಅಧ್ಯಯನ ಪ್ರಬಂಧದ ಅಧೀನತೆ

 1. ಅಂಗೀಕೃತ ಎಂ.ಫಿಲ್ ಪದವಿಯ ಪುರಸ್ಕೃತ ಅಧ್ಯಯನ ಪ್ರಬಂಧಗಳ ಸಾಫ್ಟ್ ಕಾಪಿಯನ್ನು ಅಧ್ಯಯನಾಂಗವು ಯು.ಜಿ.ಸಿ.ಗೆ ಮೂವತ್ತು ದಿನದೊಳಗಾಗಿ ಕಳಿಸಬೇಕು. INFLEBNET ಮತ್ತು ಯು.ಜಿ.ಸಿ. ಅಂತರ್ಜಾಲದಲ್ಲಿ ಲಭಿಸುವಂತೆ ವ್ಯವಸ್ಥೆ ಮಾಡುವುದು.
 2. ಎಂ.ಫಿಲ್. ಅಧ್ಯಯನ ಪ್ರಬಂಧದ ಮೇಲಿನ ಸಂಪೂರ್ಣ ಹಕ್ಕು ಕನ್ನಡ ವಿಶ್ವವಿದ್ಯಾಲಯಕ್ಕೆ ಸೇರಿರುತ್ತದೆ. ಅದನ್ನು ವಿದ್ಯಾರ್ಥಿಯು ಪ್ರಕಟಿಸಿಕೊಳ್ಳುವ ಸಂದರ್ಭ ಬಂದಾಗ ವಿಶ್ವವಿದ್ಯಾಲಯದಿಂದ ಲಿಖಿತ ಅನುಮತಿ ಪಡೆಯಬೇಕು. ಹಾಗೆ ಪ್ರಕಟಿಸಿಕೊಳ್ಳುವ ಸಂದರ್ಭದಲ್ಲಿ ಮೌಲ್ಯಮಾಪಕರು ಸೂಚಿಸಿರುವ ಎಲ್ಲಾ ರೀತಿಯ ತಿದ್ದುಪಡಿಗಳನ್ನು ಅಳವಡಿಸಿ ಅಧ್ಯಯನಾಂಗಕ್ಕೆ ಸಲ್ಲಿಸಿ ಪ್ರಮಾಣ ಪತ್ರ ಪಡೆಯಬೇಕು. ವಿದ್ಯಾರ್ಥಿಯು ವಿಶ್ವವಿದ್ಯಾಲಯವನ್ನು ಸ್ಮರಿಸಬೇಕು. ಪ್ರಕಟವಾದ ಮೇಲೆ ಆರು ಪ್ರತಿಗಳನ್ನು ಅಧ್ಯಯನಾಂಗಕ್ಕೆ ಕೊಡಬೇಕು.