ಪ್ರಸಾರಾಂಗ


 

ಕನ್ನಡ ವಿಶ್ವವಿದ್ಯಾಲಯ ಮುಖ್ಯವಾಗಿ ಸಂಶೋಧನೆಗೆ ಒತ್ತು ಕೊಡುವುದರಿಂದ ಇದರ ಪ್ರಸಾರಾಂಗದ ಕಾರ್ಯ ವಿಧಾನವು ಬೇರೆ ವಿಶ್ವವಿದ್ಯಾಲಯಗಳ ಪ್ರಸಾರಾಂಗಕ್ಕಿಂತ ವಿಭಿನ್ನವಾಗಿದೆ. ಈ ಹಿನ್ನೆಲೆಯಲ್ಲಿ 1992ರಲ್ಲಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಸಾರಾಂಗವು ಸ್ಥಾಪನೆಯಾಯಿತು. ಕನ್ನಡ ಸಂಸ್ಕೃತಿ ಎಲ್ಲಾ ಮುಖಗಳ ಸಂಶೋಧನೆ, ಕನ್ನಡ ಬಲ್ಲವರಿಗೆ ಮತ್ತು ಕನ್ನಡ ಬಾರದವರಿಗೆ ಕರ್ನಾಟಕ ಸಂಸ್ಕೃತಿ ಬಗ್ಗೆ ಅಧಿಕೃತವಾದ ಮಾಹಿತಿ ತಲುಪಿಸುವುದು. ವೈಜ್ಞಾನಿಕ ದೃಷ್ಟಿಕೋನದೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನು ಸಮುದಾಯದಲ್ಲಿ ನಿರಂತರವಾಗಿ ಹರಡಲು ನಿಯೋಜಿಸಿತ ಯೋಜನೆಗಳೊಂದಿಗೆ ಕೆಲಸ ನಿರ್ವಹಿಸುವುದು, ಜನತೆಯ ಅಭಿರುಚಿ, ಅರಿವನ್ನು ಹೆಚ್ಚಿಸುವುದು ದಿನನಿತ್ಯದ ಅಗತ್ಯಗಳನ್ನು ಯೋಚಿಸಿ ಸರಳವಾದ ರೀತಿಯಲ್ಲಿ ಪುಸ್ತಕಗಳನ್ನು ಪ್ರಕಟಿಸಿ ಜನಸಾಮಾನ್ಯರಿಗೆ ತಲುಪಿಸುವುದು. ನಮ್ಮ ನಾಡು, ನುಡಿ, ಸಂಸ್ಕೃತಿ, ಕಲೆ, ಸಾಹಿತ್ಯ ಮತ್ತು ಪರಂಪರೆಗಳನ್ನು ಸಂರಕ್ಷಿಸುವುದು ಜೊತೆಗೆ ಪ್ರೋತ್ಸಾಹ ನೀಡಿ ಬೆಳೆಸುವುದು. ಹೀಗೆ ಒಟ್ಟು ಕನ್ನಡನಾಡಿನ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡುವುದು, ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಕೈಗೊಂಡ ಪ್ರತಿಜ್ಞೆ. ಈಗಾಗಲೇ ಹದಿನಾಲ್ಕು ವರುಷಗಳಿಂದ ಕಲೆ, ಸಾಹಿತ್ಯ, ವಿಜ್ಞಾನ, ಇತಿಹಾಸ, ಜಾನಪದ, ಬುಡಕಟ್ಟು, ಸಂಗೀತ, ಶಾಸನ, ಮಾನವಿಕ, ಸಾಮಾಜಿಕ ವಿಜ್ಞಾನ, ವೈದ್ಯವಿಜ್ಞಾನ, ನವಸಾಕ್ಷರತೆ, ಸಮುದಾಯ, ವಿಶ್ವಕೋಶ ಹೀಗೆ ಹಲವು ಜ್ಞಾನ ಶಾಖೆಗಳನ್ನು ಕುರಿತಂತೆ ಮೌಲಿಕ ಗ್ರಂಥಗಳನ್ನು ಪ್ರಸಾರಾಂಗ ಪ್ರಕಟಿಸಿದೆ. ಇವುಗಳ ಸಂಖ್ಯೆ ಸುಮಾರು 850ಕ್ಕಿಂತ ಹೆಚ್ಚಿದೆ.

ಅರಿವಿನ ತೇರಿನಂತಿರುವ ಪ್ರಸಾರಾಂಗವು ವಿಜ್ಞಾನ ಸಂಗಾತಿ, ಪುಸ್ತಕ ಮಾಹಿತಿ, ಚೆಲುವ ಕನ್ನಡ, ಕನ್ನಡ ಅಧ್ಯಯನ, ಮಹಿಳಾ ಅಧ್ಯಯನ, ಬುಡಕಟ್ಟು ಅಧ್ಯಯನ, ಜಾನಪದ ಕರ್ನಾಟಕ, ಹಸ್ತಪ್ರತಿ ಅಧ್ಯಯನ, ದ್ರಾವಿಡ ಅಧ್ಯಯನ, ಶಾಸನ ಅಧ್ಯಯನ, ಚರಿತ್ರೆ ಅಧ್ಯಯನ ಮತ್ತು ಜರ್ನಲ್ ಆಫ್ ಕರ್ನಾಟಕ ಸ್ಟಡೀಸ್ ಎಂಬ ನಿಯತಕಾಲಿಕೆಗಳನ್ನು ನಿಯತವಾಗಿ ಪ್ರಕಟಿಸುತ್ತಿದೆ. ಈ ಮೂಲಕ ಸಾಮಾಜಿಕ ಜವಾಬ್ದಾರಿಯನ್ನೂ ಹೊತ್ತು ನಿಂತಿದೆ. ವರ್ತಮಾನದ ಸಂಗತಿಗಳ ಬಗೆಗೆ ಹಲವು ನೆಲೆಯಲ್ಲಿ ಮಂಥನಶೀಲವಾಗಿದೆ. ವಿಜ್ಞಾನ ಸಂಗಾತಿ ಪತ್ರಿಕೆ ವೈಜ್ಞಾನಿಕ ರಂಗದಲ್ಲಿನ ನಿತ್ಯನೂತನ ಜಗತ್ತಿನ ಆವಿಷ್ಕಾರಗಳನ್ನು ಜನತೆಗೆ ಪರಿಚಯಿಸುತ್ತಿದೆ. ಮಹಿಳಾ ಅಧ್ಯಯನ ಪತ್ರಿಕೆ ಇಂದಿನ ಸಮಾಜದಲ್ಲಿನ ಮಹಿಳೆಯರ ಸ್ಥಾನ-ಮಾನಗಳ ಅಳತೆಗೋಲಾಗಿದೆ. ನಾಡಿನ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಕನ್ನಡ ಅಧ್ಯಯನ ಪತ್ರಿಕೆ ಮನನ ಮಾಡುತ್ತದೆ. ಪುಸ್ತಕ ಮಾಹಿತಿ ಪತ್ರಿಕೆ, ಕನ್ನಡ ಸಾಹಿತ್ಯಲೋಕದ ಸೃಜನಶೀಲತೆಯನ್ನು ತೋರ್ಪಡಿಸುತ್ತಿದೆ. ವಿಶ್ವವಿದ್ಯಾಲಯದ ನಿರಂತರ ಚಟುವಟಿಕೆಗಳನ್ನು ಚೆಲುವ ಕನ್ನಡ ಪತ್ರಿಕೆ ಪ್ರತಿಬಿಂಬಿಸುತ್ತಿದೆ.

ಪುಸ್ತಕದ ಬೆಳೆಯನ್ನು ಹುಲುಸಾಗಿ ಬೆಳೆಸುತ್ತಿರುವ ಪ್ರಸಾರಾಂಗ ಈ ಬೆಳೆಯನ್ನು ಜನತೆಗೆ ತಲುಪಿಸುವಲ್ಲಿ ಸೃಜನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತದೆ. ಸಂಶೋಧನೆ-ಪುಸ್ತಕ ರೂಪದಲ್ಲಿ ಜನತೆಗೆ ತಲುಪಿದಾಗಲೇ ಅದು ಪರಿಪೂರ್ಣ. ಪ್ರಸಾರಾಂಗವು ಪುಸ್ತಕ ಸಂಸ್ಕೃತಿ ನಿಯೋಜಿತ ಯೋಜನೆಯೊಂದಿಗೆ ವರ್ಷದುದ್ದಕ್ಕೂ ನಾಡಿನಾದ್ಯಂತ ಯಾತ್ರೆ ಕೈಗೊಂಡು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಪುಸ್ತಕ ಮಾರಾಟ ಮಾಡುತ್ತಿದೆ.

ಮನೆ ಮುಂಬಾಗಿಲಿಗೆ ಪ್ರಸಾರಾಂಗದ ಪ್ರಕಟಣೆಗಳ ತಲುಪಿಸಬೇಕು ಎಂಬ ಸದಾಶಯದೊಂದಿಗೆ ಮನೆಮನೆಗೆ ಸರಸ್ವತಿ ಯೋಜನೆ ಹಮ್ಮಿಕೊಂಡಿದೆ. ಒಂದು ರೀತಿಯಲ್ಲಿ ಸಂಚಾರಿ ವಿಶ್ವವಿದ್ಯಾಲಯದಂತೆ ಕಾರ್ಯ ನಿರ್ವಹಿಸುತ್ತಿದೆ. ಹೊಸ ಹೊಸ ಆಲೋಚನೆ, ಯೋಜನೆಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಪ್ರಸಾರಾಂಗ ವಿಭಾಗಕ್ಕೆ ನಾಡು-ನುಡಿಯಿಂದ ಮನ್ನಣೆ ಸಿಕ್ಕಿದೆ. ಪ್ರಮುಖ ಸಂಸ್ಥೆಗಳು ಕರ್ನಾಟಕದ ವಿವಿಧ ಅಕಾಡೆಮಿಗಳು, ಪ್ರಾಧಿಕಾರಗಳು ಗೌರವ ಪ್ರಶಸ್ತಿಗಳನ್ನು ನೀಡಿವೆ. ಕನ್ನಡಿಗರಂತೂ ನಿರಂತರವಾದ ಪ್ರೋತ್ಸಾಹ ನೀಡುತ್ತಿದ್ದಾರೆ. ಹೊಸ ಆಶಯ ಹೊಂದಿ ಸಾಧಿಸುವ ಸಂಕಲ್ಪ ಪ್ರಸಾರಾಂಗಕ್ಕಿದೆ.

 
   
   
   
 

 

2011 © ಕನ್ನಡ ವಿಶ್ವವಿದ್ಯಾಲಯ, ಹಂಪಿ | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ
Browser Support - Internet Explorer 7 and above | Best Viewed Resolution - 1024 X 768 Pixels